ಸೋಮವಾರ, ಮೇ 17, 2021
31 °C

ಆಸ್ಪತ್ರೆಗಳಲ್ಲಿ ರೋಬೊ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಶ್ಚರ್ಯ ಬೇಡ. ಇನ್ನು ಕೆಲವೇ ವರ್ಷಗಳಲ್ಲಿ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ರೋಬೋಟ್ (ಯಂತ್ರ ಮಾನವ) ಸಾಮಾನ್ಯ ವೈದ್ಯರು, ದಾದಿಯರಂತೆ ಚಿರಪರಿಚಿತನಾಗಿ ಬಿಡಲಿದ್ದಾನೆ.ಈಗಾಗಲೇ ವಿಶ್ವದ ಹಲವೆಡೆ ರೋಬೊಟ್ ಸಹಾಯದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದ ಉದಾಹರಣೆಗಳೂ ಇವೆ. ಇನ್ನೇನು ಕೆಲವೇ ವರ್ಷಗಳಲ್ಲಿ `ರೋಬೋಟಿಕ್ ಶಸ್ತ್ರಚಿಕಿತ್ಸೆ~ ಎಂಬ ಪದ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಷ್ಟೇ ಸಾಧಾರಣವಾಗಿ ಜನರ ನಾಲಿಗೆಯ ತುದಿಯಲ್ಲಿ ಹರಿದಾಡಬಹುದು.ರೋಬೊಟ್ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆಸ್ಟ್ರೇಲಿಯಾದ ಆಸ್ಪತ್ರೆಗಳು ಮುಂದಾಗಿವೆ. ಮುಂದಿನ ವರ್ಷದ ಅಂತ್ಯದೊಳಗೆ ಅಲ್ಲಿನ ಆಸ್ಪತ್ರೆಗಳಲ್ಲಿ ಆಹಾರದ ಪಟ್ಟಿ  ಹಿಡಿದು ರೋಬೊಟ್ ರೋಗಿಗಳ ಮುಂದೆ ಬಂದು ನಿಲ್ಲುತ್ತಾನೆ.ರೋಗಿಗಳಿಗೆ ಬೇಕಾದ ಔಷಧಿಯನ್ನೂ ತಂದುಕೊಡುವ ಮೂಲಕ ಆಸ್ಪತ್ರೆಯ ಇತರ ಸಿಬ್ಬಂದಿಗಳಂತೆ ಈ ಯಂತ್ರಮಾನವನೂ ಆಸ್ಪತ್ರೆಯ ಅವಿಭಾಜ್ಯ ಅಂಗವಾಗಲಿದ್ದಾನೆ. ಕಂಪ್ಯೂಟರ್ ಚಾಲಿತ ಮಾರ್ಗಗಳಲ್ಲಿ ಸಂಚರಿಸುವ ಈ ರೋಬೊಟ್‌ಗಳು ಒಂದು ವೇಳೆ ರೋಗಿಗಳು ತಮಗೆ ಇಂಥ ಆಹಾರ ಬೇಡ ಎಂದಲ್ಲಿ ಮುಂದೆಂದೂ ಆ ಆಹಾರ ರೋಗಿಗಳ ಮುಂದೆ ಕಾಣಿಸಿಕೊಳ್ಳದಂತೆ ಮಾಡುವಷ್ಟು ಕರಾರುವಾಕ್ಕಾಗಿ  ಕಾರ್ಯನಿರ್ವಹಿಸುತ್ತವೆ.ಇವುಗಳ ನೇಮಕದಿಂದ ರೋಗಿಗಳಿಗೆ ಉತ್ತಮ ಗುಣಮಟ್ಟದ ಸೇವೆ ನೀಡಲು ಸಾಧ್ಯ. ಹೆರಿಗೆಯೇ ಆಗಲಿ, ಶಸ್ತ್ರಚಿಕಿತ್ಸೆಯೇ ಆಗಲಿ, ಔಷಧಗಳನ್ನು ನೀಡುವುದೇ ಆಗಲಿ, ರೋಗಿಗಳನ್ನು ಸಂದರ್ಶಿಸುವುದೇ ಆಗಲಿ ಎಲ್ಲದಕ್ಕೂ ಈ ರೋಬೋಟ್‌ಗಳು ಸೈ.ಆಸ್ಪತ್ರೆಯ್ಲ್ಲಲಿನ ಸಿಬ್ಬಂದಿಗಳ ಕೊರತೆಯನ್ನು ಈ ರೋಬೋಟ್‌ಗಳು ನೀಗಿಸುವುದರಿಂದ ಆಸ್ಪತ್ರೆಗಳ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಿಸಲು ರೋಬೊಟ್‌ಗಳಿಂದ ಸಾಧ್ಯ ಎನ್ನುವುದು ಆಸ್ಪತ್ರೆಯ ಮುಖ್ಯಸ್ಥರ ಅಭಿಪ್ರಾಯ.ಮ್ಯಾಕ್‌ಕೆಸ್ಸನ್ ರೋಬೋಟ್-ಆರ್‌ಎಕ್ಸ್: ಇದು ಇಡೀ ಅಸ್ಪತ್ರೆಗೆ ಬೇಕಾದ ಔಷಧಗಳನ್ನು ವಿತರಿಸುತ್ತದೆ. ವೈದ್ಯರು ಬರೆದುಕೊಟ್ಟ ಔಷಧವನ್ನು ಕಂಪ್ಯೂಟರ್‌ನಲ್ಲಿ ಫೀಡ್ ಮಾಡಿದಾಗ ರೋಬೋಟ್‌ಗಳು ಅದರಲ್ಲಿನ ಬಾರ್‌ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಡೋಸೇಜ್‌ಗಳನ್ನು ಸಂಗ್ರಹಿಸುತ್ತವೆ.ಸೂಕ್ತ ಔಷಧಿಗಳು ಸಮಯಕ್ಕೆ ಸರಿಯಾಗಿ ರೋಗಿಗೆ ತಲುಪುವಂತೆ ಮಾಡುವುದರ ಜತೆಗೆ ಆಸ್ಪತ್ರೆಯಲ್ಲಿನ ಔಷಧ ಸಂಗ್ರಹದ ಮೇಲೂ ಸಂಪೂರ್ಣ ನಿಗಾ ವಹಿಸುತ್ತದೆ.

ಅಮೆರಿಕದ ಮೂರನೇ ಒಂದರಷ್ಟು ಆಸ್ಪತ್ರೆಗಳ  ಔಷಧಾಲಯಗಳು ರೋಬೋಟ್ ಆರ್‌ಎಕ್ಸ್‌ಗಳನ್ನು ಹೊಂದಿವೆ.ದಿನವಿಡಿ  ಕಾರ್ಯ ನಿರ್ವಹಿಸುವ ಇವುಗಳು, ವೈದ್ಯಕೀಯ ತಪ್ಪುಗಳನ್ನು ಕಂಡು ಹುಡುಕುವುದರೊಂದಿಗೆ ಔಷಧಗಳನ್ನು ವರ್ಗೀಕರಿಸುತ್ತವೆ. ಜತೆಗೆ ಸಮಯ ಹಾಗೂ ಹಣ ಉಳಿತಾಯವೂ ಸಾಧ್ಯವಾಗುತ್ತದೆ.ರೋಬೊಟ್‌ಗಳು ಉತ್ತಮ ಸಂದೇಶವಾಹಕವೂ ಹೌದು.ಜತೆಗೆ ಕೊರಿಯರ್‌ಗಳಂತೆಯೂ ಕಾರ್ಯನಿರ್ವಹಿಸುತ್ತದೆ. ಆಸ್ಪತ್ರೆಯ ಪರಿಚಾರಕಿ ಕೆಲಸವನ್ನು  ರೋಬೋಟ್‌ಗಳು ಜಾಣತನದಿಂದ ನಿರ್ವಹಿಸುತ್ತದೆ.ಮೊಬೈಲ್ ರೋಬೋಟ್: ಮೊಬೈಲ್ ರೋಬೋಟ್ಸ್‌ಗಳಂತೂ (ಆರ್‌ಪಿ-6) ಮತ್ತು (ಆರ್‌ಪಿ-7)ವೇಗದ ಸೇವೆಯನ್ನು ನೀಡಬಲ್ಲದಲ್ಲದೆ ತಲೆಯ ಮೇಲೆ ಕಂಪ್ಯೂಟರ್ ಸ್ಕ್ರೀನ್‌ಗಳನ್ನು ಮತ್ತು ಕಿವಿ ಮತ್ತು ಕಣ್ಣುಗಳಲ್ಲಿ ವೀಡಿಯೊ ಕ್ಯಾಮೆರಾಗಳನ್ನು ಇವು ಹೊಂದಿವೆ. ವೈರ್‌ಲೆಸ್ ತಂತ್ರಜ್ಞಾನದ ಸಹಾಯದಿಂದ ವೈದ್ಯರು ಇವುಗಳನ್ನು ನಿಯಂತ್ರಿಸುತ್ತಾರೆ.ಶಸ್ತ್ರಚಿಕಿತ್ಸೆಯಲ್ಲಿ ಈ ರೋಬೋಟ್ ಹೆಚ್ಚಿನ ನೆರವನ್ನು ನೀಡುತ್ತದೆ. ವೈದ್ಯರು ತಾವೇ ನೇರವಾಗಿ ಉಪಕರಣಗಳನ್ನು ಬಳಸುವ ಬದಲು ರೋಬೋಟ್‌ಗಳು ಉಪಕರಣಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ನಡೆಸುತ್ತವೆ. ವೈದ್ಯರು ಒಂದೇ ಟೆಲಿಮ್ಯಾನಿಪ್ಯುಲೇಟರ್ ಅಥವಾ ಕಂಪ್ಯೂಟರ್ ಸಹಾಯದಿಂದ ರೋಬೋಟ್‌ನನ್ನು ನಿಯಂತ್ರಿಸುತ್ತಾರೆ. 1985ರಲ್ಲಿ ಮೊದಲ ಬಾರಿಗೆ ಮಿದುಳಿನ ಅಂಗಾಂಶ ಪರೀಕ್ಷೆಯ ವೇಳೆ ಸೂಜಿಯನ್ನು ಅಳವಡಿಸುವ ಸಲುವಾಗಿ `ಪ್ಯೂಮಾ 560~ ರೋಬೊಟ್ ಅನ್ನು ಬಳಸಲಾಯಿತು.ಸ್ಕಾಟ್‌ಲೆಂಡ್‌ನ ಆಸ್ಪತ್ರೆಯಲ್ಲಿ ದಿನಿತ್ಯದ ಕೆಲಸ ಕಾರ್ಯಗಳನ್ನು ನಡೆಸುವ ಸಲುವಾಗಿ ಮೊದಲ ಬಾರಿಗೆ ರೋಬೋಟ್‌ಗಳ ದೊಡ್ಡ ಪಡೆಯನ್ನೆ ಬಳಸಲಾಗುತ್ತಿದೆ.  ಈ ರೋಬೋಟ್‌ಗಳು ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿ, ಆಹಾರ ವಿತರಣೆ, ಶಸ್ತ್ರಚಿಕಿತಾ ಕೊಠಡಿಯ ಶುಚೀಕರಣದ ಜತೆಗೆ ಔಷಧಿ ವಿತರಣಾ ಕೆಲಸವನ್ನು ಮಾಡುತ್ತದೆ.ಈ ರೋಬೋಟ್‌ಗಳು ತಮಗೆಂದೇ ವಿನ್ಯಾಸಗೊಳಿಸಿದ ನಿರ್ದಿಷ್ಟ ಲೇಸರ್ ನಿಯಂತ್ರಿತ ಮಾರ್ಗಗಳಲ್ಲಿ ಸಂಚರಿಸುತ್ತವೆ ಎಂದು ಫೋರ್ತ್ ವ್ಯಾಲಿ ಆಸ್ಪತ್ರೆಯ ಅಧ್ಯಕ್ಷ ಇಯಾನ್ ಮುಲ್ಲನ್ ತಿಳಿಸುತ್ತಾರೆ.ಹಾಗೆಂದ ಮಾತ್ರಕ್ಕೆ, ರೋಬೊಟ್‌ಗಳಿಂದ ಎಲ್ಲವೂ ಸಾಧ್ಯ ಎನ್ನುವಂತಿಲ್ಲ. ರೋಬೋಟ್ ತಾಂತ್ರಿಕ ತೊಂದರೆಯಿಂದ ಕೈಕೊಟ್ಟರೆ, ಬದಲಿ ಸೇವೆಗೆ ಸಿಬ್ಬಂದಿಯೊಬ್ಬ ಬೇಕೇ ಬೇಕು.            

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.