ಗುರುವಾರ , ಮೇ 19, 2022
25 °C

ಆಸ್ಪತ್ರೆ ಆಪರೇಷನ್ ಥೇಟರ್ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ನಗರದ ಡಾ. ಸಾಲಿನ್ಸ್ ಆಸ್ಪತ್ರೆಯಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ್ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ನೂತನ ಆಪರೇಷನ್ ಥೇಟರ್‌ನ್ನು ಬುಧವಾರ ಉದ್ಘಾಟಿಸಿದರು.ಅಂಧತ್ವದ ಸಮಸ್ಯೆ ಎದುರಿಸುತ್ತಿರುವವರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಮರಳಿ ದೃಷ್ಟಿ ಭಾಗ್ಯ ಕಲ್ಪಿಸಿಕೊಡುತ್ತಿರುವ ಡಾ. ಸಿಬಿಲ್ ಸಾಲಿನ್ಸ್ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.ವೆಲ್‌ಮೆಗ್ನಾ ಗುಡ್ ನ್ಯೂಸ್ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಕುಷ್ಠರೋಗಿಗಳು, ಅನಾಥರು, ವಿಧವೆಯರು ಹಾಗೂ ಅಸಹಾಯಕರ ಸೇವೆಗೆ ಸಮರ್ಪಿಸಿಕೊಂಡಿದೆ ಎಂದು ಶಾಸಕರು ಬಣ್ಣಿಸಿದರು.ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವುದಕ್ಕಾಗಿ ಹೊಸ ಆಪರೇಷನ್ ಥೇಟರ್ ಆರಂಭಿಸಿರುವುದು ಸಂತಸ ಸಂಗತಿಯಾಗಿದೆ. ಸಂಸ್ಥೆ ಕೈಗೊಳ್ಳುತ್ತಿರುವ ಜನಪರ ಕಾರ್ಯಗಳಿಗೆ ತಮ್ಮ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.ಸಂಸ್ಥೆಯ ವತಿಯಿಂದ ಬೀದರ ತಾಲ್ಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ನಡೆಸುತ್ತಿರುವ ನವಜೀವನ ಕುಷ್ಠರೋಗಿಗಳ ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ತಮ್ಮ ಶಾಸಕ ನಿಧಿಯಿಂದ 3 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ. ಕೆಲವೇ ದಿನಗಳಲ್ಲಿ ಸಮುದಾಯ ಭವನ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.ಅಂಧರಿಗೆ ದೃಷ್ಟಿ ಒದಗಿಸಿಕೊಡುವುದು ಶ್ರೇಷ್ಠ ಕಾರ್ಯವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮೆಥೋಡಿಸ್ಟ್ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ನೆಲ್ಸನ್ ಸುಮಿತ್ರಾ ಹೇಳಿದರು.ರೋಗಿಗಳಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸೌಲಭ್ಯ ಕಲ್ಪಿಸುವುದಕ್ಕಾಗಿ ಹೊಸ ಆಪರೇಷನ್ ಥೇಟರ್ ಆರಂಭಿಸಲಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ವೆಲ್‌ಮೆಗ್ನಾ ಗುಡ್ ನ್ಯೂಸ್ ಸಂಸ್ಥೆಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ತಿಳಿಸಿದರು.ಹೊಸ ಆಪರೇಷನ್ ಥೇಟರ್‌ನಲ್ಲಿ ಎಲ್ಲ ರೀತಿಯ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ. ಇದರಿಂದ ಜಿಲ್ಲೆಯ ರೋಗಿಗಳಿಗೆ ಅನುಕೂಲ ಆಗಲಿದೆ. ಮುಂದಿನ ದಿನಗಳಲ್ಲಿ ಆಪರೇಷನ್ ಥೇಟರ್‌ಗೆ ಲಿಫ್ಟ್ ವ್ಯವಸ್ಥೆ ಹಾಗೂ ಹೊಸ ವಾರ್ಡ್‌ಗಳನ್ನು ನಿರ್ಮಿಸುವ ಉದ್ದೇಶ ತಮ್ಮದಾಗಿದೆ ಎಂದು ಹೇಳಿದರು.ನಗರಸಭೆ ಸದಸ್ಯ ಫಿಲೋಮನ್‌ರಾಜ ಪ್ರಸಾದ್ ಮಾತನಾಡಿದರು. ಪಾಸ್ಟರ್ ಸ್ಟ್ಯಾನಲಿಜಾನ್, ಪಾಸ್ಟರ್ ತುಕಾರಾಮ, ಕೆನಡಾದ ಐ ಸೈಟ್ ಉಪಾಧ್ಯಕ್ಷ ಲಿಂಡಾಚರಿ, ಕೆನಡಾದ ಐ ಸೈಟ್ ಯೋಜನಾ ನಿರ್ದೇಶಕ ಲ್ವಾರಿ, ಹಿರಿಯ ಕಾರ್ಯಕ್ರಮ ಅಧಿಕಾರಿ ಕಾಶಿನಾಥ, ಡಾ. ಸಂತೋಷ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.