ಶನಿವಾರ, ಮಾರ್ಚ್ 6, 2021
24 °C
ಟೆನಿಸ್‌: ಕಂಚು ಗೆದ್ದ ಜಪಾನ್‌ನ ಕಿ ನಿಶಿಕೋರಿ; ಮಿಶ್ರ ಡಬಲ್ಸ್‌ನಲ್ಲಿ ವೀನಸ್‌–ರಾಜೀವ್‌ಗೆ ನಿರಾಸೆ

ಆ್ಯಂಡಿ ಮರ್ರೆಗೆ ದಾಖಲೆಯ ಎರಡನೇ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆ್ಯಂಡಿ ಮರ್ರೆಗೆ ದಾಖಲೆಯ ಎರಡನೇ ಚಿನ್ನ

ರಿಯೊ ಡಿ ಜನೈರೊ (ಎಎಫ್‌ಪಿ): ಬ್ರಿಟನ್‌ನ ಆ್ಯಂಡಿ ಮರ್ರೆ ಒಲಿಂಪಿಕ್ಸ್‌ ಟೆನಿಸ್‌ನ ಸಿಂಗಲ್ಸ್‌ ವಿಭಾಗದಲ್ಲಿ ಎರಡು ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದಾರೆ.ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಮರ್ರೆ    7–5, 4–6, 6–2, 7–5ರಲ್ಲಿ  ಅರ್ಜೆಂಟೀನಾದ ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಅವರನ್ನು ಮಣಿಸಿದರು.29 ವರ್ಷದ ಮರ್ರೆ 2012ರ ಲಂಡನ್‌ ಒಲಿಂಪಿಕ್ಸ್‌ನ ಸಿಂಗಲ್ಸ್‌ ನಲ್ಲೂ ಚಿನ್ನಕ್ಕೆ ಕೊರಳೊಡ್ಡಿದ್ದರು.ಪೊಟ್ರೊ ಹೋದ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿ ದ್ದರು. ಜೊತೆಗೆ ಈ ಬಾರಿಯ ಕೂಟದ ಮೊದಲ ಸುತ್ತಿನಲ್ಲಿ ಸರ್ಬಿಯಾದ ನೊವಾಕ್‌ ಜೊಕೊ ವಿಚ್‌ಗೆ ಆಘಾತ ನೀಡಿದ್ದರು. ಹೀಗಾಗಿ ಅವರ ಮೇಲೆ ಅಪಾರ ನಿರೀಕ್ಷೆ ಇತ್ತು.ಇಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಮರ್ರೆ ಮೊದಲ ಸೆಟ್‌ನ ಆರಂಭದಿಂದಲೇ ಚುರುಕಾಗಿ ಆಡಿದರು. ಅಂಗಳದಲ್ಲಿ ಪಾದರಸದಂತೆ ಓಡಾಡಿ ಎದುರಾಳಿ ಬಾರಿಸಿದ ಚೆಂಡನ್ನು ಹಿಂತಿರುಗಿಸುತ್ತಿದ್ದ ಅವರು ಶಕ್ತಿಯುತ ಸರ್ವ್‌ಗಳನ್ನು ಮಾಡಿ ಸುಲಭವಾಗಿ ಗೇಮ್‌ ಗೆದ್ದರು.ಇನ್ನೊಂದೆಡೆ ಪೊಟ್ರೊ ಕೂಡ ಛಲದ ಆಟ ಆಡಿದರು. ಹೀಗಾಗಿ ಒಂದು ಹಂತದಲ್ಲಿ ಇಬ್ಬರೂ  5–5ರಲ್ಲಿ ಸಮಬಲ ಮಾಡಿಕೊಂಡಿದ್ದರು. ಆ ಬಳಿಕ ಮರ್ರೆ  ಮಿಂಚಿದರು. ಮೂರು ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದ ಅವರು ನಂತರದ ಎರಡು ಗೇಮ್‌ಗಳಲ್ಲಿ ಸುಲಭವಾಗಿ ಎದುರಾಳಿಯ ಸವಾಲನ್ನು ಮೀರಿ ನಿಂತರು.ಎರಡನೇ ಸೆಟ್‌ನಲ್ಲಿ ಪೊಟ್ರೊ ಆಟ ಕಳೆಗಟ್ಟಿತು. ಆಕರ್ಷಕ ಹಿಂಗೈ ಮತ್ತು ಮುಂಗೈ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಪೊಟ್ರೊ ಸೆಟ್‌ ಗೆದ್ದು 1–1ರಲ್ಲಿ ಸಮಬಲ ಮಾಡಿಕೊಂಡರು.ಇದರಿಂದ ಮರ್ರೆ ವಿಶ್ವಾಸ ಕಳೆದುಕೊಳ್ಳಲಿಲ್ಲ. ಹಿಂದೆ ಹಲವು ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಆಡಿದ್ದ ಅನುಭವ ಹೊಂದಿದ್ದ ಅವರು ಮೂರು ಮತ್ತು ನಾಲ್ಕನೇ ಸೆಟ್‌ಗಳಲ್ಲಿ ಅದ್ಭುತ ಆಟ ಆಡಿ ಪಂದ್ಯ ಗೆದ್ದರು. ಫೈನಲ್‌ ಹೋರಾಟ ನಾಲ್ಕು ಗಂಟೆ ನಡೆದಿದ್ದು ವಿಶೇಷ.ನಿಶಿಕೋರಿಗೆ ಕಂಚು: ಜಪಾನ್‌ನ ಕಿ ನಿಶಿಕೋರಿ ಸಿಂಗಲ್ಸ್‌  ವಿಭಾಗದಲ್ಲಿ ಚೊಚ್ಚಲ ಕಂಚು ಗೆದ್ದರು. ಇದರೊಂದಿಗೆ ಒಲಿಂಪಿಕ್ಸ್‌   ಟೆನಿಸ್‌ನಲ್ಲಿ 96 ವರ್ಷಗಳ ಬಳಿಕ ತಮ್ಮ ದೇಶಕ್ಕೆ  ಪದಕ ಗೆದ್ದುಕೊಟ್ಟ ಶ್ರೇಯಕ್ಕೆ ಪಾತ್ರರಾದರು.1920ರ ಆ್ಯಂಟ್‌ವರ್ಪ್‌ ಕೂಟದಲ್ಲಿ ಜಪಾನ್‌ ಪುರುಷರ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಬೆಳ್ಳಿ ಜಯಿಸಿತ್ತು.ಕಂಚಿನ ಪದಕದ ಪೈಪೋಟಿಯಲ್ಲಿ ನಿಶಿಕೋರಿ 6–2, 6–7, 6–3ರಲ್ಲಿ  ಸ್ಪೇನ್‌ನ ರಫೆಲ್‌ ನಡಾಲ್‌ ಅವರನ್ನು ಮಣಿಸಿದರು. 30 ವರ್ಷದ ನಡಾಲ್‌ 2008ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.ವೀನಸ್‌–ರಾಜೀವ್‌ಗೆ ನಿರಾಸೆ: ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಅಮೆರಿಕದ ವೀನಸ್‌ ವಿಲಿಯಮ್ಸ್‌ ಮತ್ತು ರಾಜೀವ್‌ ರಾಮ್‌ ನಿರಾಸೆ ಕಂಡರು.

ಅಮೆರಿಕದವರೇ ಆದ ಬೆಥನಿ ಮಟೆಕ್‌ ಸ್ಯಾಂಡ್ಸ್‌ ಮತ್ತು ಜ್ಯಾಕ್‌ ಸ್ಯಾಕ್‌  6–7, 6–1, 10–7ರಲ್ಲಿ ವೀನಸ್‌ ಮತ್ತು ರಾಜೀವ್‌ ಅವರನ್ನು ಸೋಲಿಸಿದರು.ವೀನಸ್‌ ಈ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದರೆ, ಒಲಿಂಪಿಕ್ಸ್‌ನಲ್ಲಿ ಐದು ಚಿನ್ನ ಗೆದ್ದ ಏಕೈಕ ಟೆನಿಸ್‌ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗುತ್ತಿದ್ದರು. ಫೈನಲ್‌ನಲ್ಲಿ ಸೋಲು ಕಂಡಿದ್ದರಿಂದ ಅವರ ಕನಸು ಕೈಗೂಡಲಿಲ್ಲ.ವೀನಸ್‌ 2000ರ ಒಲಿಂಪಿಕ್ಸ್‌ನ ಸಿಂಗಲ್ಸ್‌ ಹಾಗೂ 2000, 2008 ಮತ್ತು 2012ರ ಒಲಿಂಪಿಕ್ಸ್‌ನ ಡಬಲ್ಸ್‌ ವಿಭಾಗ ಗಳಲ್ಲಿ ಚಿನ್ನದ ಸಾಧನೆ ಮಾಡಿದ್ದರು.ಮಕರೋವ–ಎಲೆನಾಗೆ ಚಿನ್ನ: ಮಹಿಳೆಯರ ಡಬಲ್ಸ್‌ನಲ್ಲಿ ರಷ್ಯಾದ ಏಕ್ತರಿನಾ ಮಕರೋವಾ ಮತ್ತು ಎಲೆನಾ ವೆಸ್ನಿನಾ 6–4, 6–4ರ ನೇರ ಸೆಟ್‌ಗಳಿಂದ ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಮತ್ತು ಟೈಮಿ ಬ್ಯಾಕ್‌ಸಿಂಜಿಕಿ ಅವರನ್ನು ಮಣಿಸಿ ಚಿನ್ನ ಗೆದ್ದರು.ಮುಖ್ಯಾಂಶಗಳು

* ಮರ್ರೆ–ಪೊಟ್ರೊ ಹೋರಾಟ ನಾಲ್ಕು ಗಂಟೆ ನಡೆಯಿತು

* ಮಹಿಳೆಯರ ಡಬಲ್ಸ್‌ನಲ್ಲಿ ಮಕರೋವಾ–ವೆಸ್ನಿನಾಗೆ ಚಿನ್ನ

* ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನ ಗೆದ್ದ ಮೊದಲ ಆಟಗಾರ ಮರ್ರೆ

* ಪೊಟ್ರೊ ಅಮೋಘ ಆಟ ಆಡಿದರು. ಅವರ ಸವಾಲನ್ನು ಮೀರಿ ನಿಂತಿದ್ದು ಖುಷಿ ನೀಡಿದೆ. ಒಲಿಂಪಿಕ್ಸ್‌ನಂತಹ ಮಹಾಕೂಟದಲ್ಲಿ ಸತತ ಎರಡು ಚಿನ್ನ ಗೆದ್ದಿದ್ದಕ್ಕೆ ಹೆಮ್ಮೆಯಾಗುತ್ತಿದೆ

–ಆ್ಯಂಡಿ ಮರ್ರೆ ಬ್ರಿಟನ್‌ ಆಟಗಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.