ಮಂಗಳವಾರ, ಏಪ್ರಿಲ್ 13, 2021
29 °C

ಆ ಕಠಿಣ ನಾಲ್ಕು ವರ್ಷಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆ ಕಠಿಣ ನಾಲ್ಕು ವರ್ಷಗಳು...

ಸೋನೆಪತ್ (ಪಿಟಿಐ): `ಆ ನಾಲ್ಕು ವರ್ಷಗಳು ನನ್ನ ಪಾಲಿಗೆ ಮುಳ್ಳಿನ ಹಾಸಿಗೆಯಂತಿದ್ದವು. ಅದೆಷ್ಟೊ ರಾತ್ರಿಗಳು ನಿದ್ದೆ ಇಲ್ಲದೇ ಕಳೆದಿದ್ದೆ. ಏಕೆಂದರೆ 2008ರ ಬೀಜಿಂಗ್ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡಿದ್ದ ಕಹಿ ಕ್ಷಣ ಮತ್ತೆ ಮತ್ತೆ ನನ್ನನ್ನು ಕಾಡುತಿತ್ತು~-ಈ ಮಾತು ಹೇಳಿದ್ದು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಯೋಗೀಶ್ವರ್ ದತ್. `ಈ ಬಾರಿ ಕಂಚಿನ ಪದಕದ ಸಾಧನೆ ಮಾಡಲು ಸಾಧ್ಯವಾಗಿದ್ದು ನನಗೆ ಸಮಾಧಾನ ಉಂಟು ಮಾಡಿದೆ. ನಾಲ್ಕು ವರ್ಷಗಳ ಬಳಿಕ ಸರಿಯಾಗಿ ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿದೆ~ ಎಂದರು.`ಕೊನೆಗೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ನನಗೆ ಸಾಧ್ಯವಾಗಿದೆ. ಅದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು. ಈಗ ಖುಷಿಯಿಂದ ನಿದ್ದೆ ಮಾಡಬಹುದು~ ಎಂದು ದತ್ ನುಡಿದಿದ್ದಾರೆ. ಅವರು 60 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.`ಲಂಡನ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸವಿತ್ತು. ಆದರೆ ಈ ಬಾರಿ ನನಗೆ ಕಠಿಣ ಡ್ರಾ ಲಭಿಸಿತ್ತು. ಹಾಗಾಗಿ ಚಿನ್ನದ ಪದಕದೊಂದಿಗೆ ಹಿಂತಿರುಗುವ ಆಸೆ ಈಡೇರಲಿಲ್ಲ. ಆ ಸಾಧನೆ ಮಾಡಲು ಸಾಧ್ಯವಾಗದ್ದಕ್ಕೆ ಇದು ನಾನು ನೀಡುತ್ತಿರುವ ಕಾರಣವಲ್ಲ. ಆದರೆ ಯಾರು ಎದುರಾಳಿ ಎಂಬುದರ ಮೇಲೂ ಫಲಿತಾಂಶ ಅಡಗಿರುತ್ತದೆ~ ಎಂದು 29 ವರ್ಷ ವಯಸ್ಸಿನ ಯೋಗೀಶ್ವರ್ ಹೇಳಿದರು.`ನಾನು ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಬೆಸಿಕ್ ಕುಡುಖೋವ್ ಎದುರು ಪೈಪೋಟಿ ನಡೆಸಿದೆ. ಕುಡುಖೋವ್ ಈ ಬಾರಿ ಬೆಳ್ಳಿ ಪದಕ ಗೆದ್ದರು. ಜೊತೆಗೆ ಅವರು ನಾಲ್ಕು ಬಾರಿಯ ವಿಶ್ವ ಚಾಂಪಿಯನ್. ಬೀಜಿಂಗ್‌ನಲ್ಲಿ ಕಂಚು ಜಯಿಸಿದ್ದರು. ಅವರ ಎದುರು ಸೋತರೂ ಮತ್ತೊಂದು ಅವಕಾಶ ಸಿಗಲಿದೆ ಎಂಬುದು ನನಗೆ ಗೊತ್ತಿತ್ತು. ಏಕೆಂದರೆ ಕುಡುಖೋವ್ ಫೈನಲ್ ತಲುಪುವ ವಿಶ್ವಾಸ ನನಗಿತ್ತು~ ಎಂದು ಅವರು ವಿವರಿಸಿದರು. 2009ರಲ್ಲಿ ಮಂಡಿ ನೋವಿನಿಂದ ದತ್ ಒಂದು ವರ್ಷ ಕುಸ್ತಿಯಿಂದ ಹೊರ ಉಳಿದಿದ್ದರು. ಹಾಗಾಗಿ ಕುಸ್ತಿಯನ್ನೇ ತ್ಯಜಿಸುವ ಹಂತ ತಲುಪಿದ್ದರು. ಆದರೆ ಪದಕ ಗೆಲ್ಲಬೇಕೆಂಬ ಅವರ ಛಲ ಅದಕ್ಕೆ ಅವಕಾಶ ನೀಡಲಿಲ್ಲ.ಈ ಬಾರಿಯ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸಿಗಬಹುದೇ ಎಂಬುಕ್ಕೆ ಪ್ರತಿಕ್ರಿಯಿಸಿದ ದತ್, `ಆ ಪುರಸ್ಕಾರ ನನಗೆ ಲಭಿಸುತ್ತದೆಯೇ ಇಲ್ಲವೇ ನನಗೆ ಗೊತ್ತಿಲ್ಲ. ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷ ಸಿಗಬಹುದು. ಆದರೆ ಇಷ್ಟು ದಿನ ನನ್ನ ಹೃದಯ ಒಲಿಂಪಿಕ್ಸ್ ಪದಕಕ್ಕಾಗಿ ಮಿಡಿಯುತಿತ್ತು. ಅದರಲ್ಲಿ ನಾನು ಯಶಸ್ವಿಯಾಗಿದ್ದೇನೆ. ಆ ಖುಷಿಯಲ್ಲಿ ನಾನೀಗ ತೇಲುತ್ತಿದ್ದೇನೆ~ ಎಂದರು.2016ರಲ್ಲಿ ರಯೋ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. `ನನಗೀಗ 29 ವರ್ಷ. ಮುಂದಿನ ಒಲಿಂಪಿಕ್ಸ್ ಆಗಮನಕ್ಕೆ ಇನ್ನೂ 4 ವರ್ಷಗಳಿವೆ. ಫಿಟ್‌ನೆಸ್ ಕಾಯ್ದುಕೊಂಡರೆ ಆ ಕ್ರೀಡಾ ಮೇಳದಲ್ಲಿ ಸ್ಪರ್ಧಿಸಬಹುದು. ಅದಕ್ಕೂ ಮೊದಲು 2014ರ ಏಷ್ಯನ್ ಕೂಟದಲ್ಲಿ ಉತ್ತಮ ಸಾಧನೆ ತೋರಬೇಕು~ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.