ಮಂಗಳವಾರ, ಮೇ 18, 2021
24 °C

ಇಂದಿನಿಂದ ಮಾಗಡಿ ರಂಗನಾಥ ಸ್ವಾಮಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಪಟ್ಟಣದ ತಿರುಮಲ ರಂಗನಾಥ ಸ್ವಾಮಿ ಜಾತ್ರೆಯ ಅಂಗವಾಗಿ ಗುರುವಾರ (ಏ.5)ಬೆಳಿಗ್ಗೆ11.30ರಿಂದ 12.30ರವರೆಗೆ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ತಹಶೀಲ್ದಾರ್ ಮತ್ತು ಮುಜರಾಯಿ ಅಧಿಕಾರಿ ನಿರಂಜನ ಬಾಬು ತಿಳಿಸಿದ್ದಾರೆ.ಬೆಂಗಳೂರಿನಿಂದ ಪಶ್ಚಿಮಕ್ಕೆ 50 ಕಿ.ಮೀ. ದೂರದಲ್ಲಿರುವ ಮಾಗಡಿ ಪಟ್ಟಣ ಐತಿಹಾಸಿಕವಾಗಿ ಮಹತ್ವ ಪಡೆದಿರುವ ತಾಲ್ಲೂಕು ಕೇಂದ್ರ. ಇದು ಕೋಟೆ ಕೊತ್ತಲ, ಅರಣ್ಯ, ಹಳ್ಳ, ಕೆರೆ-ತೊರೆಗಳಿಂದ ಕೂಡಿದ ಶಿವಶರಣರ ಮತ್ತು ಆದಿವಾಸಿ ಬುಡಕಟ್ಟು ಅಲೆಮಾರಿ ಜನಾಂಗಗಳ ತವರೂರು. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜನಪದ, ವಾಸ್ತುಶಿಲ್ಪ ವೈಭವಕ್ಕೂ ಸಾಕ್ಷಿ.ಸ್ಥಳ ಮಹಿಮೆ: ಮಾ-ಎಂದರೆ ಲಕ್ಷ್ಮೀ, ಗಡಿ-ಎಂದರೆ ನಿವಾಸ. ಒಂದು ಕಾಲದಲ್ಲಿ ಮಾಗಡಿ ಸಂಸ್ಕೃತ ವಿದ್ವಾಂಸರಿಂದ ಕೂಡಿದ್ದ ವಿದ್ವನ್ನಗರಿಯಾಗಿತ್ತು. ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿರುವ ಇದು ಪಕ್ಷಿನೋಟದಲ್ಲಿ ಬೋರಲು ಹಾಕಿದ ಬಂಗಾರದ ಬಟ್ಟಲಿನಂತೆ ಕಾಣುತ್ತದೆ. ವಿಜಯನಗರ ಸಾಮ್ರಾಜ್ಯದ ದಕ್ಷಿಣದ ಗಡಿಯು ಆಗಿದ್ದರಿಂದ ಇದು ಮಹಾಗಡಿ, ಮಾಗಡಿ ಆಯಿತೆಂದೂ ಐತಿಹಾಸಿಕ ಪುರಾವೆಗಳು ತಿಳಿಸುತ್ತವೆ. ಇಮ್ಮಡಿ ಕೆಂಪೇಗೌಡ 1638ರಿಂದ 1738ರವರೆಗೆ ಮಾಗಡಿಯನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡಿದ್ದ.ಪುರಾಣ: ಮಾಂಡವ್ಯ ಮಹರ್ಷಿ ತಿರುಪತಿಯ ತಿಮ್ಮಪ್ಪನನ್ನು ಪ್ರಾರ್ಥಿಸಿದ. ಆಗ ತಿಮ್ಮಪ್ಪನು ಪಶ್ಚಿಮದಲ್ಲಿ  ಸ್ವರ್ಣಾದ್ರಿ ಪರ್ವತಗಳ ಸಾಲಿನಲ್ಲಿ ತಪಗೈದರೆ ದರ್ಶನ ನೀಡುವುದಾಗಿ ತಿಳಿಸುತ್ತಾನೆ. ಕಡೆಗೆ ಮಹರ್ಷಿಯ ತಪಸ್ಸಿಗೆ ಒಲಿದು ಪಶ್ಚಿಮದಲ್ಲಿ ದರ್ಶನ ನೀಡಿದ್ದರಿಂದ ಇದನ್ನು ಪಶ್ಚಿಮ ವೆಂಕಟಾಚಲಪತಿ ಎಂದು ಕರೆಯಲಾಗುತ್ತದೆ. ಇದಕ್ಕೆ ಮಾಂಡವ್ಯಕುಟಿ, ಮಾಕುಟಿಪುರ ಎಂಬ ಹೆಸರುಗಳೂ ಇವೆ. ಇಂದಿಗೂ ದೇವಾಲಯದ ಗರ್ಭಗೃಹದಲ್ಲಿ ಮಾಂಡವ್ಯರ ಶಿಲೆ ಇದೆ. ಅನತಿ ದೂರದಲ್ಲೇ ಮಾಂಡವ್ಯ ಗುಹೆಯೂ ಇದೆ.ಚಾರಿತ್ರಿಕ ಹಿನ್ನೆಲೆ: ಮಾಗಡಿಯನ್ನು ಕೇಂದ್ರವನ್ನಾಗಿಸಿಕೊಂಡು ಆಡಳಿತ ನಡೆಸಿದ್ದ  ರಾಜ ರಾಜೇಂದ್ರ ಚೋಳ ಕ್ರಿ.ಶ.1139ರಲ್ಲಿ ಇಲ್ಲಿನ ರಂಗನಾಥ ಸ್ವಾಮಿ ದೇವಾಲಯವನ್ನು ಕಟ್ಟಿಸಿದ ಬಗ್ಗೆ ಚಾರಿತ್ರಿಕ ದಾಖಲೆಗಳಿವೆ.ಸ್ಥಳೀಯರು ಇದನ್ನು `ಮಾಗಡಿ ರಂಗ, ಮಕ್ಕಳ ರಂಗ, ಅನ್ನದ ರಂಗ~ ಎಂಬ ಪ್ರೀತಿಯ ಹೆಸರುಗಳಿಂದ ಪೂಜಿಸಿಕೊಂಡು ಬಂದಿದ್ದಾರೆ. ವಿಜಯನಗರದ ಶ್ರೀಕೃಷ್ಣ ದೇವರಾಯ ಕ್ರಿ.ಶ.1524ರಲ್ಲಿ ತಿರುಮಲದ ತಿರುವೆಂಗಳ ನಾಥ ದೇವರಿಗೆ ಪೂಜೆ ಸಲ್ಲಿಸಿ, ಚಿನ್ನದ ಕಿರೀಟ ಮತ್ತು ಬಂಗಾರದ ಕುದುರೆಯ ಕೋಟನ್ನು ಸಮರ್ಪಿಸಿದನೆಂದು ದೇಗುಲದ ಮುಂದಿರುವ ಗರುಡಗಂಬದ ಶಾಸನ ತಿಳಿಸುತ್ತದೆ.ದಾನ-ದತ್ತಿ: ಮೈಸೂರಿನ ಯದುವಂಶೀಯ ದೊರೆಗಳಲ್ಲಿ ನವಕೋಟಿ ನಾರಾಯಣ ಎಂಬ ಬಿರುದು ಗಳಿಸಿದ್ದ ಚಿಕ್ಕದೇವರಾಜ ಒಡೆಯರು ತಿರುಮಲ ರಂಗನಾಥಸ್ವಾಮಿ ದೇವಾಲಯಕ್ಕೆ ಚಿನ್ನದ ಕಿರೀಟ ನೀಡಿದ್ದಾರೆ. ಅದರ ಮೇಲೆ ಗಂಡಭೇರುಂಡದ ಚಿತ್ರವನ್ನು ನಯನ ಮನೋಹರವಾಗಿ ಕೆತ್ತಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರು ಬೆಳ್ಳಿಯ ನಾಣ್ಯಗಳಲ್ಲಿ ವಿಷ್ಣುವಿನ ದಶಾವತಾರದ ಚಿತ್ರಗಳುಳ್ಳ ಹಾರವನ್ನು ಅರ್ಪಿಸಿದ್ದು, ಭೂಮಿಯನ್ನು ದಾನ ಮಾಡಿದ್ದಾರೆ. ಹೊಯ್ಸಳರ ದೊರೆಗಳು ಮತ್ತು ಟಿಪ್ಪು ಸುಲ್ತಾನ್ ತಿರುಮಲೆಯ ಮಾಗಡಿ ರಂಗಯ್ಯನ ದೇಗುಲಕ್ಕೆ ಭಕ್ತಿ ಸಮರ್ಪಿಸಿದ್ದಾರೆ. ಸ್ಥಳೀಯ ಪಾಳೇಗಾರರಾದ ಗುಡೇಮಾರನ ಹಳ್ಳಿಯ ತಳಾರಿ ಗಂಗಪ್ಪನಾಯಕ, ಕೆಂಪೇಗೌಡರ ವಂಶಸ್ಥರು ಹಾಗೂ ಇತರೆ ಪಾಳೇಗಾರಂತೂ ತಮ್ಮ ಕಾಲದಲ್ಲಿ ದೇಗುಲಕ್ಕೆ ಸಮೃದ್ಧ ದಾನ, ದತ್ತಿ ನೀಡಿದ್ದಾರೆ.ಕೊಡುಗೆ: ಬಿಜಾಪುರದ ದಂಡನಾಯಕ ರಣದುಲ್ಲಾಖಾನ್ ಪೂರ್ವದ್ವಾರದ ಮೇಲಿನ ಇಂಡೊ ಸಾರ್ಸೆನಿಕ್ ಶೈಲಿಯ ರಾಜಗೋಪುರವನ್ನು ನಿರ್ಮಿಸಿದ್ದಾನೆ.ಸಮುಚ್ಚಯ: ತಿರುಮಲ ರಂಗನಾಥಸ್ವಾಮಿ ದೇವಾಲಯ ಪಶ್ಚಿಮಾಭಿಮುಖವಾಗಿದೆ. ಗರ್ಭಗೃಹದಲ್ಲಿ ಆರು ಅಡಿ ಎತ್ತರದ ಕಪ್ಪು ಶಿಲೆಯಿಂದ ಕೂಡಿರುವ ಮಂದಸ್ಮಿತ ರಂಗನಾಥ ಸ್ವಾಮಿಯ ಮೂಲ ವಿಗ್ರಹವಿದೆ. ದೇಗುಲದ ಬಲಭಾಗದಲ್ಲಿ ಪದ್ಮಾವತಿ ಪೂರ್ವಾಭಿಮುಖವಾಗಿದ್ದರೆ ಎದುರಿಗೆ ರಂಗನಾಥ ಸ್ವಾಮಿ ಪವಡಿಸಿದ್ದಾನೆ.ವೇಣುಗೋಪಾಲ, ಬೆಳೆಯೋರಂಗ, ಕಾಮಾಕ್ಷಿ, ಅನ್ನಪೂರ್ಣೇಶ್ವರಿ, ಸೂರ್ಯಶಿಲ್ಪ, ಕಾಳಿಂಗ ಮರ್ದನ, ಆಂಜನೇಯ, ರಾಮಾನುಜಾಚಾರ್ಯರು ಮತ್ತು ಆಳ್ವಾರರ ಪುತ್ಥಳಿಗಳೂ ಇಲ್ಲಿವೆ.ಬೃಹತ್ ಗರುಡ ಶಿಲ್ಪಗಳ ಜೊತೆಗೆ  ಹಲವು ದೇವತೆಗಳ ಸಮುಚ್ಚಯವಿದೆ. ಗರ್ಭಗೃಹದ ಹಿಂಬದಿಯಲ್ಲಿ ಪೂರ್ವ ದಿಕ್ಕಿನೆಡೆಗೆ ಮುಖ ಮಾಡಿ ಎಡಗಾಲು ಮಡಚಿ, ಬಲಗಾಲನ್ನು ಚಾಚಿ ಮಲಗಿರುವ ಶಿಲ್ಪವಿದ್ದು, ಸ್ಥಳೀಯರು ಇದನ್ನು ಬೆಳೆಯುವ ರಂಗಪ್ಪನೆಂದೇ ಕರೆಯುತ್ತಾರೆ.ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿಸಿರುವ ಈ ದೇಗುಲಕ್ಕೆ ಎರಡೂ ದ್ವಾರಗಳ ಮೇಲೆ ಬೃಹತ್ ರಾಯಗೋಪುರ ಹಾಗೂ ಕಂಗೊಳಿಸುವ ವಿಮಾನ ಗೋಪುರವಿದೆ. ಪಶ್ಚಿಮ ದಿಕ್ಕಿನಲ್ಲಿ ಮಾಂಡವ್ಯ ತೀರ್ಥ, ಎದುರಿನಲ್ಲಿ ಬಿಸಿಲು ಮಾರಮ್ಮದೇವಿ, ಬಲಭಾಗದಲ್ಲಿ ತೀರ್ಥದ ಕಟ್ಟೆ, ದೇವ ಮೂಲೆಯಲ್ಲಿ ಇರುವ ಬೆಟ್ಟದ ಮೇಲೆ ನರಸಿಂಹ ದೇವರನ್ನು ಕೆತ್ತಿಸಲಾಗಿದೆ. ರಥಬೀದಿಯ ಸುತ್ತಲೂ ವಿವಿಧ ಕುಶಲ ಕರ್ಮಿ ಸಮುದಾಯದವರು ಪೂರ್ವದಿಂದಲೂ ನಡೆಸಿಕೊಂಡು ಬರುತ್ತಿರುವ ಅರವಟ್ಟಿಗೆಗಳಿವೆ.ಮಾರ್ಗ: ಮಾಗಡಿಯನ್ನು ಬೆಂಗಳೂರಿನಿಂದ ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ತಲುಪಬಹುದು. ಕುಣಿಗಲ್-ಬೆಂಗಳೂರು ರಾ.ಹೆ.48ರ ಮಧ್ಯೆ ಗುಡೇಮಾರನಹಳ್ಳಿ ಕೈಮರ ಬಳಿಯ ದಕ್ಷಿಣ ದಿಕ್ಕಿನಿಂದಲೂ ಬರಬಹುದು.ಜಾತ್ರೆಯು ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಹದಿನೈದು ದಿನಗಳ ಕಾಲ ಸಡಗರದಿಂದ ನಡೆಯುತ್ತದೆ. ತಿಂಗಳು ಕಳೆದ ಮೇಲೆ, ವಿಶೇಷವಾಗಿ ತಿಂಗಳ ತೇರು ನಡೆಯುತ್ತದೆ. ಬ್ರಹ್ಮರಥೋತ್ಸವದಂದು ನಾಡಿನ ನಾನಾ ಮೂಲೆಗಳಿಂದ ಲಕ್ಷಾಂತರ ಜನ ಸೇರಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.