ಸೋಮವಾರ, ಜನವರಿ 20, 2020
27 °C

ಇಚ್ಛಾಶಕ್ತಿ ಪ್ರದರ್ಶಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟರ ವಿರುದ್ಧ ಕಠೋರ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ  ಯಾವ ಸರ್ಕಾರಕ್ಕೂ ಇಲ್ಲ. ‘ಭ್ರಷ್ಟರನ್ನು ಬಲಿ ಹಾಕುತ್ತೇವೆ’ ಎಂಬ ಗರ್ಜನೆಗಳೆಲ್ಲ ಬರೀ ತೋರಿಕೆಯದು ಎಂಬುದು ರಾಜ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯೋತ್ಸವ ಪುರಸ್ಕೃತರಿಗೆ ನೀಡಬೇಕಾದ ಚಿನ್ನದ ಪದಕಗಳ ನಾಪತ್ತೆ ಮತ್ತು ಅನುದಾನ ದುರ್ಬಳಕೆ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಹಿರಿಯ ಅಧಿಕಾರಿಯೊಬ್ಬರಿಗೆ ಕನ್ನಡ, ಸಂಸ್ಕೃತಿ ನಿರ್ದೇಶನಾಲಯದ ಉಸ್ತುವಾರಿ ನೀಡಿರುವುದು ಮತ್ತು ಭ್ರಷ್ಟರ ವಿರುದ್ಧದ ಕಾನೂನು ಕ್ರಮಕ್ಕಾಗಿ  ಅನುಮತಿ ನೀಡಲು ವಿಳಂಬ ಮಾಡುತ್ತಿರುವುದು ಇದಕ್ಕೆ ನಿದರ್ಶನಗಳು ಎನ್ನಬಹುದು.ಸ್ವತಃ ಆರೋಪ ಎದುರಿಸುತ್ತಿರುವ ಅಧಿಕಾರಿಗೆ ಇಲಾಖೆಯ ಪರಮಾಧಿಕಾರ ನೀಡಬಾರದು ಎಂಬ ಸಾಮಾನ್ಯ ತಿಳಿವಳಿಕೆಯೂ ಸರ್ಕಾರದಲ್ಲಿ ಇರುವವರಿಗೆ ಇಲ್ಲ ಎಂಬುದೇ ಸೋಜಿಗದ ಸಂಗತಿ. ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪಗಳನ್ನು ಎದುರಿಸುತ್ತಿರುವ ಐವರು ಐಎಎಸ್‌ (ಇವರಲ್ಲಿ ಇಬ್ಬರು ಈಗಾಗಲೇ ನಿವೃತ್ತಿ ಹೊಂದಿದ್ದಾರೆ), ಒಬ್ಬ ಐಪಿಎಸ್‌ ಮತ್ತು ಇಬ್ಬರು ಐಎಫ್ಎಸ್‌ ಅಧಿಕಾರಿ­ಗಳೂ ಸೇರಿದಂತೆ ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳ ವಿರುದ್ಧ ಸಂದರ್ಭಾನುಸಾರ ವಿಚಾರಣೆ, ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೊಡದೆ ಸತಾಯಿಸುತ್ತಿರುವ ಸರ್ಕಾರದ ವರ್ತನೆ  ಲೋಕಾಯುಕ್ತ ನ್ಯಾಯ­ಮೂರ್ತಿ ವೈ. ಭಾಸ್ಕರರಾವ್‌ ಅವರಿಗೆ ತೀವ್ರ ಅಸಮಾಧಾನ ಉಂಟುಮಾಡಿ­ದೆ.ಅದಕ್ಕಾಗಿಯೇ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ.   ಲಭ್ಯ ಮಾಹಿತಿ­­ಗಳ ಪ್ರಕಾರ ಇಂಥ ಒಟ್ಟು 93 ಪ್ರಕರಣಗಳು ಸರ್ಕಾರದ ಅನುಮತಿಗೆ ಕಾಯುತ್ತಿವೆ. ಅನುಮತಿ ವಿಳಂಬದ ಬಗ್ಗೆ ಲೋಕಾಯುಕ್ತರು ಐದು ತಿಂಗಳ ಹಿಂದೆ ಬಹಿರಂಗ­ವಾಗಿಯೇ ತಮ್ಮ ಅಸಮಾಧಾನ ಹೊರ­ಹಾಕಿದ್ದರು. ಆಗ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಥ ಎಲ್ಲ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದಾಗಿ ಪ್ರಕಟಿಸಿದ್ದರು.  ಆಗ 70 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ಸಿಕ್ಕಿತ್ತು. ಅಲ್ಲಿಂದೀಚೆಗೆ ಮತ್ತೆ ಅನುಮತಿ ಕೋರಿಕೆ ಕಡತಗಳು ದೂಳು ತಿನ್ನುತ್ತಿವೆ. ಇವೆಲ್ಲ ಶುದ್ಧ ಆಡಳಿತ ನೀಡುವ ಲಕ್ಷಣವೂ ಅಲ್ಲ, ಅಂಥ ಭರವಸೆಯನ್ನು ಮೂಡಿಸುವುದೂ ಇಲ್ಲ. ಕೈ ಕೆಡಿಸಿಕೊಂಡ ದೊಡ್ಡ  ಅಧಿಕಾರಿಗಳು, ಪ್ರಭಾವಿ ಜನಪ್ರತಿನಿಧಿಗಳಿಗೆ ಸರ್ಕಾರ ಹೆದರಿಕೊಳ್ಳುತ್ತಿದೆಯೇ ಎಂಬ ಭಾವನೆ ಜನ­ಸಾಮಾನ್ಯರಲ್ಲಿ ಮೂಡುವಂತಾಗಿದೆ.ಭ್ರಷ್ಟ ನೌಕರರ  ವಿರುದ್ಧದ ಪ್ರಕರಣ­ಗಳಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಅನುಮತಿ ಕೋರಿ ತನಿಖಾ ಸಂಸ್ಥೆಗಳಿಂದ ಬರುವ ಪ್ರಸ್ತಾವಗಳ ಬಗ್ಗೆ ಮೂರು ತಿಂಗಳೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಅನೇಕ ಸಲ ಸರ್ಕಾರಗಳಿಗೆ ತಾಕೀತು ಮಾಡಿದೆ. ಆದರೂ ಪ್ರಯೋಜನವಾಗಿಲ್ಲ. ಈಗಂತೂ ಎಲ್ಲೆಡೆ  ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡುತ್ತಿದೆ. ಲೋಕಪಾಲ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕಿದೆ. ಇದರ ಕೀರ್ತಿಯಲ್ಲಿ ದೊಡ್ಡಪಾಲು ಪಡೆಯಲು ಕಾಂಗ್ರೆಸ್‌ ಪಕ್ಷ ಹವಣಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರದ ‘ವಿಳಂಬ ನೀತಿ’ಯಿಂದ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಅದಕ್ಕೆ ಮುಖ್ಯಮಂತ್ರಿಯವರು ಅವಕಾಶ ಕೊಡಬಾರದು.

ಪ್ರತಿಕ್ರಿಯಿಸಿ (+)