ಶುಕ್ರವಾರ, ಏಪ್ರಿಲ್ 16, 2021
31 °C

ಇತಿಹಾಸ ತೆರೆದಿಡುವ ಗಚ್ಚಿನಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು ದೇವಾಲಯಗಳ ಪಟ್ಟಣ. ಇಲ್ಲಿರುವ ತೊಟ್ಟಿಲಮಠ, ಹಿರೆಮಠ, ಗಚ್ಚಿನಮಠ, ಮೂರ್ಕಲ್ ಮಠಗಳು ವೈಶಿಷ್ಟ್ಯಪೂರ್ಣ ಶಿಲ್ಪಕಲೆಗಳಿಂದ ಕೂಡಿವೆ. ಇಲ್ಲಿನ ಉಬ್ಬು ಶಿಲ್ಪಗಳು ರೋಮಾಂಚಕ ಇತಿಹಾಸ ಸಾರುತ್ತ ನಿಂತಿವೆ.

ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಜೀವಂತ ಸಮಾಧಿಯಾದ ಗಚ್ಚಿನ ಮಠದಲ್ಲಿನ ಕಲ್ಲುಕಂಬಗಳು ಏಳನೇ ಶತಮಾನದ ಇತಿಹಾಸ ಸಾರುತ್ತವೆ.

ಮಹೇಶ್ವರ ಕಾಳಾಮುಖ ಎಂಬ ಪದವು (ಏಳನೇ ಶತಮಾನ) ಆಂಧ್ರಪದೇಶ ರಾಜ್ಯದ ಕರ್ನೂಲು ಜಿಲ್ಲೆಯ ನಂದಿಕೊಟ್ಟೂರು ತಾಲ್ಲೂಕಿನ ಸಾತಾನಿಕೋಟದ ಶಾಸನದಲ್ಲಿ ಉಲ್ಲೇಖವಾಗಿದೆ.

ಕರ್ನಾಟಕದಲ್ಲಿ ಕಿ,ಶ. 810ರ ಗಂಗರ ಕಾಲದ ತಾಮ್ರಪಟವೊಂದರ ಉಲ್ಲೇಖವೇ ಕಾಳಾಮುಖರ ಪ್ರಾಚೀನ ಉಲ್ಲೇಖವಾಗಿದೆ.

ಕಾಶ್ಮೀರ ಶೈವಮತದ ಕಾಳಾಮುಖರು ಮೊದಲು ಆಂಧ್ರಪ್ರದೇಶದ ಶ್ರೀಶೈಲವನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು ಎಂಬುದು ಶಾಸನಗಳಿಂದ ತಿಳಿದು ಬರುವ ಸಂಗತಿ.

ಶ್ರೀಶೈಲವು ಕಾಳಾಮುಖರ ಕೇಂದ್ರವಾಗಿದ್ದು, ಇಲ್ಲಿನ ಒಂದು ಪಂಗಡದ ಶಾಖೆಯು ಕರ್ನಾಟಕದಲ್ಲಿ ಹರಡಿತ್ತು. ಕ್ರಿ.ಶ. 10-11ನೇ ಶತಮಾನದ ಅವಧಿಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕಾಳಾಮುಖರ ಯತಿಗಳ ಪ್ರಭಾವದಿಂದ ಸಾವಿರಾರು ಶಿವಾಲಯಗಳು ನಿರ್ಮಾಣಗೊಂಡವು.

ಇಂತಹ ಶಿವಾಲಯಗಳು ಕಾಳಾಮುಖ ಮಠಗಳನ್ನು ಹೊಂದಿತ್ತಲ್ಲದೇ, ನಂತರದಲ್ಲಿ ವಿದ್ಯಾಕೇಂದ್ರಗಳಾಗಿ ರೂಪಾಂತರಗೊಂಡವು. ಈ ವಿದ್ಯಾಕೇಂದ್ರಗಳಲ್ಲಿ ಶ್ರೇಷ್ಠ ವಿದ್ವಾಂಸರಿಂದ ಹಿಂದೂ ಧರ್ಮಕುರಿತು ಚರ್ಚೆ, ಸಂವಾದಗಳು ಜರುಗುತ್ತಿದ್ದವು.

ನಿಶ್ಚಿತವಾದ ಪಠ್ಯಗಳನ್ನು ಬೋಧಿಸುತ್ತಿದ್ದ ‘ಘಟಿಕಾ ಸ್ಥಾನ’ಗಳಲ್ಲಿ ಕೊಟ್ಟೂರಿಗೆ ಹತ್ತಿರವಿರುವ  ‘ಕೋಗಳಿ’ ಗ್ರಾಮವು ಕಾಳಾಮುಖ ಯತಿಗಳ ಒಂದು ವಿದ್ಯಾಕೇಂದ್ರವಾಗಿತ್ತು ಎಂಬುದು ತಿಳಿದುಬರುತ್ತದೆ.

 ತದನಂತರ ಕಾಳಾಮುಖ ಪಂಥವು ವೀರಶೈವ ಪಂಥದಲ್ಲಿ ಲೀನವಾಗಿ ವೀರಶೈವ ಮತವೆಂದು ಪ್ರಚಾರವಾಯಿತು. ಇಂತಹ ಸುದೀರ್ಘ ಇತಿಹಾಸವುಳ್ಳ ಕೆಲವು ಕಾಳಾಮುಖ ಯತಿಗಳ ಶಿಲ್ಪಗಳು ಹಾಗೂ ಅವರ ವಾಸ್ತುಶಿಲ್ಪಗಳನ್ನು ಗಚ್ಚಿನಮಠದಲ್ಲಿರುವ ಶಿಲ್ಪಗಳಲ್ಲಿ ಇಂದಿಗೂ ಕಾಣಬಹುದು.

ಈ ಕಾಳಾಮುಖ ಯತಿಗಳ ಶಿಲ್ಪಗಳು ಹಾಗೂ ವಾಸ್ತುಶಿಲ್ಪಗಳು ವಿಜಯನಗರ ಸಾಮ್ರಾಜ್ಯ ಪೂರ್ವದಲ್ಲಿಯೇ (ಸಂಗಮ ವಂಶದ 1ನೇ ದೇವರಾಯ ಹಾಗೂ 2ನೇ ದೇವರಾಯ ಆಡಳಿತ ಕಾಲ) ಪ್ರಚಲಿತವಿದ್ದವೆಂಬುದು ಸ್ಪಷ್ಟವಾಗುತ್ತದೆ.

ಗಚ್ಚಿನಮಠದಲ್ಲಿರುವ ಶಿಲ್ಪಗಳಲ್ಲಿ ಕಂಡು ಬರುವ ಮಹೇಶ್ವರ ‘ಕಾಳಾಮುಖ’ ಯತಿಗಳ ಚಿತ್ರಗಳು ಹಾಗೂ ಅವರ ವಾಸ್ತುಶಿಲ್ಪ ಕೃತಿಗಳು ಈ ಕೆಳಗಿನಂತಿವೆ. ಈ ಕಾಳಾಮುಖ ಯತಿಗಳ ಹೆಸರುಗಳನ್ನು ತಿಳಿಯಲು ನಮಗೆ ಸರಿಯಾದ ಅಧಾರ ಗ್ರಂಥಗಳಾಗಿಲಿ, ಶಾಸನಗಳಾಗಲಿ ಲಭ್ಯವಾಗಿಲ್ಲ.

ಲಭ್ಯವಿರುವ ನೊಳಂಬರ ಕಾಲದ (ಕ್ರಿ.ಶ.8ನೇ ಶತಮಾನದಿಂದ 11ನೇ ಶತಮಾನದವರೆಗೆ ಆಡಳಿತ ನಡೆಸಿದ) ಕೆಲವು ಕಾಳಾಮುಖ ಯತಿಗಳ ಹೆಸರುಗಳುಳ್ಳ ಪಟ್ಟಿಯನ್ನು ಡಾ. ಎಚ್. ಜಯಮ್ಮ ಕರಿಯಣ್ಣ ಅವರು ರಚಿಸಿರುವ ‘ನೊಳಂಬರ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಇದರಲ್ಲಿ ಹೆಸರಿಸಿರುವ ಕೆಲವು ಕಾಳಾಮುಖ ಯತಿಗಳ ಚಿತ್ರಗಳು ಗಚ್ಚಿನಮಠದಲ್ಲಿ ಇವೆ. ನೊಂಳಬರ ಕಾಲದ ಅನೇಕ ಕಾಳಾಮುಖ ಯತಿಗಳ ಹೆಸರುಗಳಿರುವ ಶಾಸನಗಳು, ಬಾಗುಳಿ, ಉಚ್ಚಂಗಿದುರ್ಗ, ಕೋಗಳಿ, ಹಿರೇಹಡಗಲಿ, ಬಳ್ಳಾರಿ, ಸೋಗಿ, ಮೋರಿಗೇರಿ, ಚಿಮ್ಮನಹಳ್ಳಿ, ಸಿರಸ್ದಹಳ್ಳಿ, ಮಾನ್ಯರ ಮಸಲವಾಡ, ಹಿರೇಮ್ಯಾಗಳಗೇರಿ, ನಂದಿಬೇವೂರು ಗ್ರಾಮಗಳಲ್ಲಿ ಕಾಣಬಹುದು.

ಗಚ್ಚಿನಮಠದಲ್ಲಿ ಮಹೇಶ್ವರ ಕಾಳಾಮುಖ ಯತಿಗಳ ಚಿತ್ರಗಳು ಹಾಗೂ ಅವರ ವಾಸ್ತು ಶಿಲ್ಪಗಳನ್ನು ಮತ್ತು ವಿಜಯನಗರ ಸಾಮ್ರಾಜ್ಯ ಪೂರ್ವದ ಸ್ತಂಭಗಳನ್ನು ಶಿಲ್ಪಗಳಲ್ಲಿ ಚಿತ್ರಿಸಿರುವುದನ್ನು ಗಮನಿಸಬಹುದು. ಈ ದೇವಾಲಯ ನಿರ್ಮಾಣದ ಕಾಲವನ್ನು ನಿರ್ಧರಿಸಲು ಸಂಶೋಧಕರಿಗೆ ಸಹಾಯವಾಗಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.