ಭಾನುವಾರ, ಏಪ್ರಿಲ್ 18, 2021
31 °C

ಇತಿಹಾಸ ಪುನರ್ ಸೃಷ್ಟಿಗೆ ಹೋರಾಟ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ಮಹಿಳೆ ಕಿತ್ತೂರ ಚನ್ನಮ್ಮ; ಪ್ರಥಮ ಪುರುಷ ಆಕೆಯ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ. ಆದರೆ ಇತಿಹಾಸದ ಪುಟಗಳಲ್ಲಿ ಪ್ರಥಮ ಮಹಿಳೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಎಂದು ತಪ್ಪು ದಾಖಲಾಗಿದೆ. ಇತಿಹಾಸವನ್ನು ಪುನರ್ ಸೃಷ್ಟಿಸುವ ನಿಟ್ಟಿನಲ್ಲಿ ಹೋರಾಟ ಆರಂಭವಾಗಬೇಕು~ ಎಂದು ಮೇಯರ್ ಡಾ. ಪಾಂಡುರಂಗ ಪಾಟೀಲ ಹೇಳಿದರು.ನಗರದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳು ಬುಧವಾರ ಹಮ್ಮಿಕೊಂಡ `ಸಂಗೊಳ್ಳಿ ರಾಯಣ್ಣ 218ನೇ ಜಯಂತ್ಯುತ್ಸವ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು.`ನಾವು ಇತಿಹಾಸವನ್ನು ಮರೆತಿದ್ದೇವೆ. ವಿಭಿನ್ನವಾಗಿ, ವಿಕೃತಿಯಾಗಿ ರಚಿತವಾಗಿದ್ದರೂ ಅದನ್ನು ಹೇಳಲು ಹಿಂಜರಿಯುತ್ತಿದ್ದೇವೆ. ಹೀಗಾಗಿ ಈ ನಿಟ್ಟಿನಲ್ಲಿ ಧ್ವನಿ ಎತ್ತುವ ಅಗತ್ಯವಿದೆ. ಝಾನ್ಸಿ ರಾಣಿಗಿಂತಲೂ 37 ವರ್ಷ ಹಿಂದೆಯೇ ಬ್ರಿಟಿಷರ ವಿರುದ್ಧ ಕಿತ್ತೂರ ಚನ್ನಮ್ಮ ಕೆಚ್ಚೆದೆಯಿಂದ ಹೋರಾಡಿದ್ದಾಳೆ. ಕಿತ್ತೂರ ಯುದ್ಧ ಸ್ವಾಭಿಮಾನ, ಸ್ವಾಮಿ ನಿಷ್ಠೆಯ ಸಂಕೇತ~ ಎಂದ ಅವರು, `ರಾಯಣ್ಣನ ಹೆಸರನ್ನು ನಾವ್ಯಾರು ಉಳಿಸುವ ಅಗತ್ಯವಿಲ್ಲ; ರಾಯಣ್ಣ ಎಂದೆಂದಿಗೂ ಸಮಾಜ ನಾಯಕ. ರಾಷ್ಟ್ರ ನಾಯಕ~ ಎಂದು ಬಣ್ಣಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿವಿ ಕುಲಪತಿ ಎಚ್.ಬಿ. ವಾಲಿಕಾರ, ಜಾತಿ ರಹಿತ ಸಮಾಜ ನಿರ್ಮಾಣ ಅಸಾಧ್ಯ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಆದರೆ ದ್ವೇಷರಹಿತ ಸಮಾಜ ನಿರ್ಮಾಣ ಸಾಧ್ಯವಿದೆ. ಹೀಗಾಗಿ ಜಾತಿಯನ್ನು ಮನೆಯಲ್ಲಿ ಇಟ್ಟುಕೊಂಡು, ದ್ವೇಷರಹಿತವಾಗಿ ಬದುಕುವ ಗುರಿ ಇರಬೇಕು. ವಿದ್ಯೆ, ಸಂಘಟನೆಯ ಮೂಲಕ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಬೇಕು~ ಎಂದು ಆಶಿಸಿದರು.`ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಬಲಗೊಳ್ಳುತ್ತಿದೆ. ಅದರ ಬದಲು `ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಯೋಧರ ಅಧ್ಯಯನ ಪೀಠ~ ಸ್ಥಾಪನೆಯಾದರೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದ ಹೆಚ್ಚು ಜನರ ಕುರಿತು ಅಧ್ಯಯನ ಕೈಗೊಳ್ಳಲು ಅನುಕೂಲ~ ಎಂದು ಅವರು ಸಲಹೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, `ಸಂಗೊಳ್ಳಿ ರಾಯಣ್ಣನ ಹುಟ್ಟೂರು, ಹುತಾತ್ಮ ಸ್ಥಳ ಮತ್ತು ಸಮಾಧಿ ಸ್ಥಳವನ್ನು ಸರ್ಕಾರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು~ ಎಂದು ಆಗ್ರಹಿಸಿದರು.  ಸಭೆಯಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮತ್ತು ಕೂಡಲ ಸಂಗಮದ ಪಂಚಮಸಾಲಿ ಪ್ರಥಮ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಪಸ್ಥಿತರಿದ್ದರು. ಗುತ್ತಿಗೆದಾರ ಅಶೋಕ ಸುರೇಬಾನ ಅಧ್ಯಕ್ಷತೆ ವಹಿಸಿದ್ದರು.ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಎಫ್.ದಂಡಿನ, ಶಾಸಕರಾದ ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ವಿಧಾನಪರಿಷತ್ತು ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಧಾರವಾಡ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷರಾದ ಯಲ್ಲಮ್ಮ ನಾಯ್ಕರ, ಹಿಂದುಳಿದ ನಿಗಮದ ಅಧ್ಯಕ್ಷ ಅಶೋಕ ಕಾಟವೆ, ಇಂಧನ ನಿಗಮದ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ,  ಪಾಲಿಕೆ ಸದಸ್ಯರಾದ ಶಾಂತಪ್ಪ ದೇವಕ್ಕಿ, ರಾಜಣ್ಣ ಕೊರವಿ, ಹೂವಪ್ಪ ದಾಯಗೋಡಿ, ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ ಮತ್ತಿತರರು ಇದ್ದರು. ಚಿತ್ರನಟ ಶಿವರಾಜ್ ಕುಮಾರ್ ದೇಣಿಗೆಯಾಗಿ ನೀಡಿದ ಒಂದು ಲಕ್ಷ ಸಹಿತ 1.25 ಲಕ್ಷದ ಚೆಕ್‌ನ್ನು ವೀರಾಪುರ ಓಣಿಯ ಸರ್ಕಾರಿ ಗಂಡುಮಕ್ಕಳ ಶಾಲೆ ನಂ. 4ಕ್ಕೆ  ಉಭಯ ಸ್ವಾಮೀಜಿಗಳು ಹಸ್ತಾಂತರಿಸಿದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರದ ಮೆರವಣಿಗೆ ನಡೆಯಿತು. ವೀರಾಪುರ ಓಣಿಯಲ್ಲಿರುವ ಮಹಾಬಳೇಶ್ವರ ದೇವಸ್ಥಾನದಿಂದ ಡೊಳ್ಳು, ಜಗ್ಗಲಿಗೆಯೊಂದಿಗೆ ಹೊರಟ ಮೆರವಣಿಗೆಗೆ ಶಾಸಕ ವೀರಭದ್ರಪ್ಪ ಹಾಲಹರವಿ ಚಾಲನೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.