ಶನಿವಾರ, ಮೇ 8, 2021
25 °C

ಇತಿಹಾಸ ಮರೆತವರಿಗೆ ಭವಿಷ್ಯವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಪೆ, ಪಟ್ಟದಕಲ್ಲು, ಐಹೊಳೆ, ಬಾದಾಮಿ, ವಿಜಾಪುರ, ಚಿತ್ರದುರ್ಗ, ಶ್ರೀರಂಗಪಟ್ಟಣ ಮತ್ತಿತರ ಐತಿಹಾಸಿಕ ಸ್ಥಳಗಳಲ್ಲಿ ಇರುವ ಸ್ಮಾರಕಗಳ ಮೇಲುಸ್ತುವಾರಿಯನ್ನು ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ರಾಜ್ಯ ಪ್ರಾಚ್ಯವಸ್ತು ನಿರ್ದೇಶನಾಲಯಗಳು ನೋಡಿಕೊಳ್ಳುತ್ತವೆ.

ಸಾಂಸ್ಕೃತಿಕ ಪರಂಪರೆಯ ಈ ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಬರುವವರಿಗೆ ಮಾಹಿತಿ ನೀಡಲು ಪ್ರವಾಸಿ ಗೈಡ್ (ಮಾರ್ಗದರ್ಶಿ)ಗಳಿದ್ದಾರೆ.  ಪ್ರವಾಸೋದ್ಯಮ ಇಲಾಖೆಯಿಂದ ಈ ಗೈಡ್‌ಗಳನ್ನು ಆಯ್ಕೆಮಾಡಿ ಅವರಿಗೆ ಗುರುತಿನ ಚೀಟಿ ನೀಡಿದೆ. ಇವರು ಇಲಾಖೆಯ ಸಿಬ್ಬಂದಿ ಅಲ್ಲ. ಬಹಳಷ್ಟು ಗೈಡ್‌ಗಳಿಗೆ ಕನಿಷ್ಠ ವಿದ್ಯಾರ್ಹತೆಯೂ ಇಲ್ಲ. ಸೂಕ್ತ ತರಬೇತಿ, ಇತಿಹಾಸ ಪ್ರಜ್ಞೆಯೂ ಇಲ್ಲ. ಅನ್ನ ನೀಡುತ್ತಿರುವ ಸ್ಮಾರಕಗಳ ಬಗೆಗೆ ಅನೇಕರಿಗೆ ಕಾಳಜಿ ಇಲ್ಲ. ಬಾಯಿಯೇ ಅವರ ಬಂಡವಾಳ. ಅವರು ಹೇಳಿದ್ದೇ ಇತಿಹಾಸ. ಇತಿಹಾಸವನ್ನು ತಿರುಚಿ ಇಲ್ಲವೇ ಪ್ರವಾಸಿಗಳನ್ನು ಮೆಚ್ಚಿಸಲು ಅಂತೆ-ಕಂತೆಗಳನ್ನು ಸೇರಿಸಿ ಸ್ಥಳ ಪರಿಚಯ ಮಾಡಿಕೊಡುತ್ತಾರೆ. ಪ್ರವಾಸಿಗಳು ನೀಡುವ ಪುಡಿಗಾಸು ಅವರಿಗೆ ಜೀವನಾಧಾರ. ಕೆಲವೆಡೆ ಸಾಕಷ್ಟು ತಿಳುವಳಿಕೆ ಇರುವ ಗೈಡ್‌ಗಳೂ ಇದ್ದಾರೆ. ಆದರೆ ಅಂಥವರು ವಿರಳ. ನಮ್ಮ ಜನರು ಇತಿಹಾಸವನ್ನು ಮರೆತಿದ್ದಾರೆ. ಎಲ್ಲೋ ಕೆಲವರಿಗೆ ಸರಿಯಾದ ಇತಿಹಾಸ ತಿಳಿದುಕೊಳ್ಳುವ ಕುತೂಹಲವಿದೆ. ಅರೆ ತಿಳುವಳಿಕೆಯ ಗೈಡ್‌ಗಳು ಹೇಳಿದ್ದನ್ನೇ ಇತಿಹಾಸ ಎಂದು ನಂಬುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿಯೊಂದು ಚಾರಿತ್ರಿಕ ಸ್ಥಳ ವಿಶೇಷಗಳನ್ನು, ಕಲೆ, ಮತ್ತು ಇತಿಹಾಸದ ಸೂಕ್ಷ್ಮಗಳನ್ನು ತಿಳಿದುಕೊಳ್ಳುವ ಹಕ್ಕು ಎಲ್ಲರದು. ಆದರೆ ಅದಕ್ಕೆ ಅವಕಾಶವಿಲ್ಲ.

ಸರಿಯಾದ ಮಾರ್ಗದರ್ಶನವಿಲ್ಲದೆ ಹೋದಲ್ಲಿ ಐತಿಹಾಸಿಕ ಸ್ಥಳ ಮಹತ್ವ ಯಾರ ಗಮನಕ್ಕೂ ಬರುವುದಿಲ್ಲ. ನಿಜವಾದ ಇತಿಹಾಸ ಮರೆಯಾಗಿ ಉತ್ಪ್ರೇಕ್ಷೆಯ ಇತಿಹಾಸವನ್ನೇ ಜನರು ನಂಬಿಬಿಡುವ ಅಪಾಯಗಳಿವೆ. ಪ್ರವಾಸಿಗೆ ಸಿಗುವ ಸ್ವಲ್ಪ ಸಮಯದಲ್ಲಿ ಯಾವುದನ್ನು ನೋಡಬೇಕು ಎಂಬ ಕಾತರ ಇರುತ್ತದೆ. ಎಲ್ಲಿಂದ ಪ್ರಾರಂಭಿಸಿ ಎಲ್ಲಿ ಮುಕ್ತಾಯಗೊಳಿಸಬೇಕು; ಹೇಗೆ ಸುತ್ತಾಡಬೇಕು ಎಂಬ  ಗೊಂದಲಗಳು ಎಲ್ಲರಿಗೂ ಇರುತ್ತವೆ. ಸಮರ್ಥ ಮಾರ್ಗದರ್ಶಿ ಇದ್ದರೆ ಮಾತ್ರ ಎಲ್ಲವನ್ನೂ ಕ್ಲುಪ್ತ ಸಮಯದಲ್ಲಿ ನೋಡುವ ಅವಕಾಶ ಸಿಗುತ್ತದೆ.

ಉದಾಹರಣೆಗೆ, ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ವಿರೂಪಾಕ್ಷ ದೇವಸ್ಥಾನವಿದೆ. ಮುಖ್ಯ ದ್ವಾರಗೋಪುರ ದಾಟಿ ಒಳಹೋದರೆ ವಿಶಾಲ ಆವರಣವಿದೆ. ಅದರ ಎಡಭಾಗದಲ್ಲಿ ಪಾಕಶಾಲೆ ಇದೆ. ಅಲ್ಲಿಗೆ ತುಂಗಭದ್ರಾ ನದಿ ನೀರು ಸಹಜವಾಗಿಯೇ ಕಲ್ಲು ಕಾಲುವೆ ಮೂಲಕ  ನಿರಂತರ ಹರಿದು ಬರುವುವ ವ್ಯವಸ್ಥೆಯನ್ನು ಆಕಾಲದ ವಾಸ್ತು ತಂತ್ರಜ್ಞರು ಮಾಡಿದ್ದಾರೆ.

ಗರ್ಭಗುಡಿಯ ಹಿಂದೆ ಗೋಪುರದ ಛಾಯಾ ನೆರಳು ಬೀಳುವಲ್ಲಿ ಸ್ಥಳದಲ್ಲಿ ಗರ್ಭಗುಡಿಯ ಮಾಳಿಗೆ ಮೇಲೆ ಹತ್ತಲು ವ್ಯವಸ್ಥೆ ಇದೆ. ಅಲ್ಲಿಂದ ಹತ್ತಿ ಹೋದರೆ ಗರ್ಭಗುಡಿಯ ಮಾಳಿಗೆ ಮೇಲೂ ಕಾಲುವೆಯೊಂದರ ಮುಖಾಂತರ ತುಂಗಭದ್ರಾ  ನೀರು ನಿರಂತರ ಹರಿದು ಬರುವುದನ್ನು ನೋಡಬಹುದು. ಈಗ ಅಲ್ಲಿಗೆ ಮುಕ್ತಪ್ರವೇಶ ತಡೆಹಿಡಿಯಲಾಗಿದೆ.

25-30 ವರ್ಷಗಳ ಹಿಂದೆ ಅಲ್ಲಿಗೆ ಹತ್ತಿ ಹೋಗಿ ನೋಡಲು ಎಲ್ಲರಿಗೂ ಅವಕಾಶವಿತ್ತು. ಪ್ರವಾಸೋದ್ಯಮ  ಇಲಾಖೆಯ ಇಂದಿನ ಕೆಲವು ಸಿಬ್ಬಂದಿಗಳಿಗೂ ಅದರ ಪರಿಚಯ ಇಲ್ಲ. ದೇವಸ್ಥಾನದ ಮಗ್ಗುಲಲ್ಲೇ ಹರಿಯುವ ತುಂಗಭದ್ರಾ ನದಿಯು ಭೌಗೋಳಿಕವಾಗಿ ಗರ್ಭಗುಡಿಯ ತಳಪಾಯದಿಂದ ಸಾಕಷ್ಟು ಕೆಳಮಟ್ಟದಲ್ಲಿದೆ. ಆದರೂ ಗರ್ಭಗುಡಿಯ ಮಾಳಿಗೆ ಮೇಲೆ ತುಂಗಭದ್ರೆಯ ನೀರು ಸಹಜವಾಗಿ ಹರಿಯುವಂತೆ ಮಾಡಿದ್ದು ಐದಾರು ಶತಮಾನಗಳ ಹಿಂದಿನ ತಾಂತ್ರಿಕ ನಿಪುಣತೆಗೆ ಸಾಕ್ಷಿಯಾಗಿದೆ.

ಗರ್ಭಗುಡಿಯು ಇರುವ ಎತ್ತರಕ್ಕಿಂತ ಹೆಚ್ಚಿನ ಎತ್ತರದಲ್ಲಿ ನದಿ ನೀರು ಹರಿದುಬರುತ್ತಿರುವ ಸ್ಥಳ ಗುರುತಿಸಿ, ಅಲ್ಲಿ ತುಂಗಭದ್ರೆಗೆ ಅಡ್ಡಲಾಗಿ ವಿಜಯನಗರ ಕಾಲದಲ್ಲಿ ಅಣೆಕಟ್ಟೆಯೊಂದನ್ನು ಕಟ್ಟಿಸಲಾಯಿತು. (ಈಗಿನ ಹೊಸಪೇಟೆಯ ಅಣೆಕಟ್ಟೆ ಅಲ್ಲ) ಅಲ್ಲಿಂದ ನೀರನ್ನು ದೇವಸ್ಥಾನದ ಹಿಂದೆ ಸ್ವಲ್ಪ ದೂರದಲ್ಲಿ ಕಾಣುವ ಚೌಕಾಕಾರದ ಕೆರೆಗೆ ಹರಿಯುವಂತೆ ಮಾಡಲಾಗಿದೆ.

ಆ ಕೆರೆಯಿಂದ ನೀರು, ಕಲ್ಲಿನ ಕಾಲುವೆ ಮೂಲಕ ಪಾಕಶಾಲೆ ಮತ್ತು ಎರಡಾಳೆತ್ತರದ ಮಾಳಿಗೆಯ ಮೇಲೆ ಹರಿದು ಬರುವ ವ್ಯವಸ್ಥೆ ಇದೆ. ಇಂತಹ ನೀರಾವರಿ ವ್ಯವಸ್ಥೆಯ ಹಾಳುಗೆಡವಿದ ಸಾಕಷ್ಟು ಕುರುಹುಗಳನ್ನು ಹಂಪಿಯಲ್ಲಿ ಅಲ್ಲಲ್ಲಿ ಇಂದಿಗೂ ಕಾಣಬಹುದು. ಅತ್ಯುನ್ನತ ತಾಂತ್ರಿಕ ಪರಿಪಕ್ವತೆ ವಿಜಯನಗರ ಆರಸರ ಕಾಲದ ವಾಸ್ತು ತಜ್ಞರಿಗೆ ಇತ್ತು ಎಂಬುದು  ಅಚ್ಚರಿ ವಿಷಯ. ಆದರೆ ಪ್ರವಾಸಿಗಳಿಗೆ ಈ ಮಾಹಿತಿ ಹೇಳುವವರಿಲ್ಲ.

ನಮ್ಮ ಕಲೆಗಳು, ಅದ್ಭುತವಾದ ಕಟ್ಟಡಗಳು, ಹಾಗೂ ದೇವಸ್ಥಾನಗಳು, ತಾಂತ್ರಿಕ ಹಿರಿಮೆಯನ್ನು ಸಾರುವ ಸಂಗತಿಗಳನ್ನು ದೇಶ ವಿದೇಶಿಯರಿಗೆ ವಿವರಿಸಿ ಹೆಮ್ಮೆ ಪಡಬೇಕಾದ ವಾವು ಅಂತಹ ವ್ಯವಸ್ಥೆಯನ್ನು ಮಾಡುವಲ್ಲಿ ಸೋತಿದ್ದೇವೆ. ರಕ್ಷಣೆಯ ನೆಪದಲ್ಲಿ ಅವುಗಳನ್ನು ವೀಕ್ಷಿಸುವ ಅವಕಾಶವೂ ಈಗ ಕಡಿಮೆಯಾಗುತ್ತಿದೆ. ನಮ್ಮ ಸಾಂಸ್ಕೃತಿಕ ಇತಿಹಾಸ ಇಂದಿನ ತಲೆಮಾರಿನ ಜನರಿಗೆ ಮುಖ್ಯವಾಗಬೇಕು. ಅದರಿಂದ ಅವರು ಸದಾ ಸ್ಫೂರ್ತಿ ಪಡೆಯಬೇಕು.

ಹಂಪಿಯ ಕೆಲ ಸ್ಮಾರಕಗಳಿಗೆ ಪೊಲೀಸರ ರಕ್ಷಣೆ ಇದೆ. ಬೆದರು ಬೊಂಬೆಗಳಂತೆ ಕಾಣುವ ಪ್ರಾಚ್ಯ ವಸ್ತು ಇಲಾಖೆಯ ನೀಲಿ ಬಣ್ಣದ ಫಲಕಗಳಿವೆ. ಅವುಗಳಲ್ಲಿ ಸ್ಮಾರಕಗಳನ್ನು ವಿರೂಪಗೊಳಿಸುವವರಿಗೆ ನೀಡುವ ಶಿಕ್ಷೆ ಉಲ್ಲೇಖವಿದೆ. ಆದರೂ ಹಂಪಿಯ ಸ್ಮಾರಕಗಳು ಹಾಳಾಗುತ್ತಿವೆ, ವಿರೂಪಗೊಳ್ಳುತ್ತಿವೆ. ಸ್ಮಾರಕಗಳನ್ನು ಹಾಳು ಮಾಡುವವರ ಮೇಲೆ ನಿಗಾ ಇಡಲು  ಸಿ.ಸಿ. ಕ್ಯಾಮರಾ ಅಳವಡಿಸುವ ಅಗತ್ಯವಿದೆ. ಸ್ಮಾರಕಗಳನ್ನು ಅಂದಗೆಡಿಸುವ, ಅಲ್ಲಿ ಕೀಟಲೆ, ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಜನರನ್ನು ಪತ್ತೆ ಹಚ್ಚಿ ಶಿಕ್ಷಿಸದಿದ್ದರೆ ಸ್ಮಾರಕಗಳು ಉಳಿಯುವುದಿಲ್ಲ. ನಮ್ಮ ಇತಿಹಾಸ ಮುಂದಿನ ಪೀಳಿಗೆಗಾಗಿ ಉಳಿಯಬೇಕು. ಇತಿಹಾಸ ಮರೆತವರಿಗೆ ಭವಿಷ್ಯವೂ ಇರುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.