ಭಾನುವಾರ, ಜೂನ್ 13, 2021
25 °C

ಇದು ಪರೀಕ್ಷೆ ಸಮಯ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕ ಬೇಕಾದರೆ ಹೀಗೆ ಬರೆದು ನೋಡಿ

ಇನ್ನೇನು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗೆ ಉಳಿದಿರೋದು ಬೆರಳೆಣಿಕೆಯಷ್ಟು ದಿನ ಮಾತ್ರ. ಪರೀಕ್ಷೆ ಹತ್ತಿರ ಬಂದಂತೆ ಆತಂಕ, ಭಯ ಎಲ್ಲವೂ ಮನದೊಳಗೆ ಕೂತು ಕಾಡುತ್ತವೆ. ಯಾವ ಪ್ರಶ್ನೆಗಳು ಬರುತ್ತವೆ, ಅವುಗಳಿಗೆ ಹೇಗೆ ಉತ್ತರ ಬರೆಯಬೇಕು ಎಂಬ ಗೊಂದಲದಲ್ಲಿ ಸಮಯ ವ್ಯರ್ಥ ಮಾಡುವುದು ಸಾಮಾನ್ಯ.

 

ಭಯ ಪಡೋದ್ರಿಂದ, ಚಿಂತೆ ಮಾಡೋದ್ರಿಂದ ಸ್ಕೋರ್ ಮಾಡಲಿಕ್ಕೆ ಸಾಧ್ಯ ಆಗುವುದೇ ಇಲ್ಲ. ಅಂಕಗಳಿಗೆ ತಕ್ಕ ಹಾಗೇ ಉತ್ತರ ಬರೆಯುವ ಮೂಲಕ ಮಾತ್ರ ನೀವು ಅಂದುಕೊಂಡಷ್ಟು ಅಂಕಗಳನ್ನು ಪಡೆಯಲು ಸಾಧ್ಯ.ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವುದು ಹೇಗೆ?

ಎಸ್‌ಎಸ್‌ಎಲ್‌ಸಿ, ಪಿಯುಸಿಗೆ ಒಂದರಿಂದ 10 ಅಂಕದ ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯ. ಅಲ್ಲದೆ ಅಂಕಗಳಿಗೆ ಅನುಸಾರವಾಗಿ ಉತ್ತರ ಪತ್ರಿಕೆಯಲ್ಲಿ ಜಾಗವನ್ನು ಸಹ ನೀಡಲಾಗುತ್ತದೆ. ಹಾಗಾಗಿ ಕೊಟ್ಟಿರುವ ಜಾಗವನ್ನು ಸಮರ್ಥವಾಗಿ ಬಳಸಿಕೊಂಡರೆ ಯಾರೇ ಬೇಕಾದರೂ ಹೆಚ್ಚಿನ ಅಂಕ ಗಳಿಸಿ ಉನ್ನತ ಸಾಧನೆ ಮಾಡಲು ಸಾಧ್ಯ.ಸಾಮಾನ್ಯವಾಗಿ ಒಂದು ಅಂಕದ ಪ್ರಶ್ನೆಗಳಿಗೆ ಹೆಚ್ಚಿನ ಶ್ರಮ ಇಲ್ಲದೆ ಒಂದು ಸಾಲು ಅಥವಾ ಒಂದು ಶಬ್ದ ಬರೆಯುವ ಮೂಲಕ ಉತ್ತರ ಬರೆಯುತ್ತೇವೆ. ಆದರೆ ಎರಡು, ಮೂರು, ನಾಲ್ಕು, ಐದು ಮತ್ತು ಹತ್ತು ಅಂಕದ ಪ್ರಶ್ನೆಗಳನ್ನು ಕೇಳಿದಾಗ ತುಂಬಾ ಅಚ್ಚುಕಟ್ಟಾಗಿ ಉತ್ತರ ಬರೆಯುವುದನ್ನು ರೂಢಿ ಮಾಡಿಕೊಳ್ಳಬೇಕು.ನಾಲ್ಕು, ಐದು ಮತ್ತು 10 ಅಂಕಗಳಿಗೆ ಪ್ರಶ್ನೆಗಳಿಗೆ ಉತ್ತರ ಬರೆಯುವಾಗ ಪ್ರತಿಯೊಂದು ವಿಷಯದ ಮೇಲೆ ಚಿಕ್ಕ, ಚಿಕ್ಕ ಅಂಶಗಳನ್ನು ಅಂದರೆ ಪಾಯಿಂಟ್‌ಗಳನ್ನು ಮಾಡಿಕೊಂಡು ಸಿದ್ಧತೆ ನಡೆಸಬೇಕು. ಇದರಿಂದ ಮೌಲ್ಯಮಾಪಕರು ನಿರೀಕ್ಷೆ ಮಾಡುವಂತಹ ಉತ್ತರವನ್ನು ಬರೆಯುವುದು ಸುಲಭ.ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಗೆ ತುಂಬಾ ಉದ್ದವಾದ ಉತ್ತರಗಳನ್ನು ಬರೆಯುವ ರೂಢಿ ಮಾಡಿಕೊಂಡಿದ್ದಾರೆ. ಅಂದರೆ 5 ಅಂಕದ ಪ್ರಶ್ನೆಗೆ ಅರ್ಧ ಪುಟ, 10 ಅಂಕದ ಪ್ರಶ್ನೆಗೆ ಒಂದು ಪುಟ ಬರೆಯುವುದನ್ನು ಸ್ವತಃ ಅನೇಕ ವಿದ್ಯಾರ್ಥಿಗಳಿಂದ ಕೇಳಿ ತಿಳಿದುಕೊಂಡಿದ್ದೇನೆ. ಇದರಿಂದ ಸಮಯ ವ್ಯಯ ಆಗುತ್ತದೆ ಹೊರತು ಹೆಚ್ಚಿನ ಅಂಕ ಗಳಿಸಲು ಸಾಧ್ಯ ಆಗದು.  ಪ್ರತಿಯೊಂದು ವಿಷಯದಲ್ಲಿ ಅಧ್ಯಯನಕ್ಕೆ ಕೊಟ್ಟಿರುವ ಪಾಠಗಳನ್ನು ಸಂಪೂರ್ಣವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ. ಹಾಗಾಗಿ ಪ್ರತಿಯೊಂದು ಪಾಠದ ಮೇಲೆ ಚಿಕ್ಕ ಪಾಯಿಂಟ್‌ಗಳನ್ನು ಮಾಡಿ. ಉದಾಹರಣೆಗೆ ಎಸ್‌ಎಸ್‌ಎಲ್‌ಸಿಯ ಇತಿಹಾಸ ವಿಷಯದಲ್ಲಿ ಮೊದಲನೇ ಪಾಠ  `ಭಾರತಕ್ಕೆ ಯುರೋಪಿಯನ್ನರ ಆಗಮನ~.ಈ ಪಾಠದಲ್ಲಿರುವ 10 ಅಥವಾ 15 ಪ್ರಮುಖ ಅಂಶಗಳನ್ನು ಒಂದು ಪ್ರತ್ಯೇಕ ಹಾಳೆಯಲ್ಲಿ ಬರೆದುಕೊಳ್ಳಿ. ನಂತರ ಇಡೀ ಪಾಠವನ್ನು ಒಂದು ಸಲ ಓದಿ. ಬಳಿಕ ಪುಸ್ತಕ ತೆಗೆದಿಟ್ಟು ಗುರುತು ಹಾಕಿಕೊಂಡ ಅಂಶಗಳನ್ನು ಓದಿಕೊಳ್ಳಿ. ಒಂದು ಇಡೀ ಪಾಠದ ಬದಲಾಗಿ ಈ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಸುಲಭ ಮತ್ತು ಅಂಕ ಗಳಿಸಲು ಸಹಕಾರಿ.ಪರೀಕ್ಷೆಯಲ್ಲಿ `ಭಾರತಕ್ಕೆ ಯುರೋಪಿಯನ್ನರ ಆಗಮನ~  ಪಾಠದ ಮೇಲೆ 5 ಅಥವಾ 10 ಅಂಕದ ಪ್ರಶ್ನೆ ಕೇಳುತ್ತಾರೆ ಎಂದು ಭಾವಿಸಿಕೊಳ್ಳಿ. ಇದಕ್ಕೆ ಉತ್ತರ ಬರೆಯೋದು ಹೇಗೆ ಎಂಬ ಪ್ರಶ್ನೆ ನಿಮ್ಮದು.5 ಅಂಕದ ಪ್ರಶ್ನೆ ಬಂದಾಗ ಮೊದಲಿಗೆ ನೀವು ಗುರುತು ಹಾಕಿಕೊಂಡ 5 ಅಂಶಗಳನ್ನು (ಪಾಯಿಂಟ್) ಬರೆದು ಬಿಡಿ. ನಂತರ ಒಂದೊಂದು ಅಂಶದ ಮೇಲೆ ಎರಡು ಸಾಲು ಚಿಕ್ಕದಾದ ಉತ್ತರ ಬರೆದರೆ ಸಾಕು. ಉತ್ತಮ ಅಂಕ ದೊರೆಯುವ ಸಾಧ್ಯತೆ ಹೆಚ್ಚು.ಈ ರೀತಿಯ ಬರೆದಾಗ ಮೌಲ್ಯಮಾಪಕರು ಮೊದಲಿಗೆ ನೀವು ಬರೆದ ಪಾಯಿಂಟ್‌ಗಳನ್ನು ಗಮನಿಸುತ್ತಾರೆ. ಜೊತೆಗೆ ವಿದ್ಯಾರ್ಥಿಗೆ ಇಡೀ ಪಾಠದ ಅರಿವು ಇದೆ ಎಂದು ತಿಳಿದುಕೊಳ್ಳುವುದಲ್ಲದೆ ಉತ್ತಮ ಅಂಕಗಳನ್ನು ನೀಡುತ್ತಾರೆ.ಉತ್ತರ ಬರೆಯುವಾಗ ಒಂದೊಂದು ಅಂಶ ಬರೆಯುವ ಮುನ್ನ ಆರಂಭದಲ್ಲಿ ಕ್ರಮ ಸಂಖ್ಯೆ ಬಳಸಿ. ಇದರಿಂದ ಉತ್ತರ ಅಚ್ಚುಕಟ್ಟಾಗಿ ಕಾಣುವುದಲ್ಲದೆ ಮೌಲ್ಯಮಾಪಕರು ಸುಲಭವಾಗಿ ಉತ್ತರ ನೋಡಲು ಸಾಧ್ಯ.ಪರೀಕ್ಷೆ  ಹತ್ತಿರ ಇರುವ ಕಾರಣ ಪ್ರತಿಯೊಂದು ಪಾಠದ ಮೇಲೆ ಈ ರೀತಿಯ ಅಂಶಗಳನ್ನು (ಪಾಯಿಂಟ್) ಪ್ರತ್ಯೇಕ ಹಾಳೆಗಳಲ್ಲಿ ಬರೆದುಕೊಳ್ಳಿ. 3-4 ದಿನಗಳಲ್ಲಿ ಎಲ್ಲ ಪಾಠದ ಮೇಲೆ ಪಾಯಿಂಟ್‌ಗಳನ್ನು ಮಾಡಿಕೊಳ್ಳಲು ಸಾಧ್ಯ. ಬರೆದುಕೊಂಡ ಅಂಶಗಳನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ. ನಿಮ್ಮ ಬಿಡುವಿನ ವೇಳೆ, ನಡೆದಾಡುವಾಗ, ಪ್ರಯಾಣ ಮಾಡುವಾಗ, ಟಿವಿ ವೀಕ್ಷಣೆ ಮಾಡುವಾಗ ಅವುಗಳನ್ನು ಮನನ ಮಾಡಿಕೊಳ್ಳಿ. ಹೀಗೆ ಮಾಡಿದಾಗ ಎಲ್ಲ ವಿಷಯ ನಿಮ್ಮ ನೆನಪಿನಲ್ಲಿ ಉಳಿಯಲು ಸಾಧ್ಯ. ಈ ರೀತಿ ಮಾಡಿದ್ದೇ ಆದಲ್ಲಿ ಪರೀಕ್ಷೆ ದಿನ ತುಂಬಾ ಸುಲಭವಾಗಿ ಉತ್ತರ ಬರೆಯಬಹುದು ಮತ್ತು ಉತ್ತಮ ಅಂಕಗಳನ್ನು ನಿರೀಕ್ಷೆ ಮಾಡಬಹುದು.  ನಿಮ್ಮ ಪ್ರಯತ್ನ ಮಾತ್ರ ನಿಮಗೆ ಅಂಕಗಳನ್ನು ಕೊಡಲು ಸಾಧ್ಯ ಎಂಬ ಸತ್ಯ ಅರ್ಥಮಾಡಿಕೊಂಡು ಮುಂದೆ ಸಾಗಿ ಹೆಚ್ಚಿನ ಅಂಕ ನಿಮ್ಮದಾಗಿಸಿಕೊಳ್ಳಿ.(ಲೇಖಕರ ಮೊಬೈಲ್ 99804 38600)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.