ಶುಕ್ರವಾರ, ಮೇ 7, 2021
25 °C
ಕೇಂದ್ರೀಯ ವಿದ್ಯಾಲಯಕ್ಕೆ ಜಮೀನು ಮಂಜೂರು; ಆರಂಭವಾಗದ ಕಾಮಗಾರಿ

ಇನ್ನೂ ದೊರೆಯದ ಸ್ವಂತ ಕಟ್ಟಡ ಭಾಗ್ಯ

ಎಂ. ಮಹೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದಲ್ಲಿ ಆರಂಭವಾಗಿರುವ ಕೇಂದ್ರೀಯ ವಿದ್ಯಾಲಯಕ್ಕೆ ಇನ್ನೂ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಭಾಗ್ಯ ಕೂಡಿಬಂದಿಲ್ಲ.ಜಿಲ್ಲೆಯಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ಕೇಂದ್ರೀಯ ವಿದ್ಯಾಲಯ 2010ರಲ್ಲಿ ಮಂಜೂರಾಗಿ, ತಾತ್ಕಾಲಿಕವಾಗಿ ನಗರದ ಕಾವೇರಮ್ಮ ಶಾಲೆಯ ಕಟ್ಟಡದಲ್ಲಿ ನಡೆಯುತ್ತಿದೆ. ಮೂರು ವರ್ಷ ಕಳೆದರೂ ಈ ಶಾಲೆ ಸ್ವಂತ ಸೂರಿಗೆ ಸ್ಥಳಾಂತರಗೊಳ್ಳಲು ಸಾಧ್ಯವಾಗಿಲ್ಲ.ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ವಿವಿಧ ರಾಜ್ಯಗಳ 330 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೂನ್ 24ರಿಂದ ಪ್ರಸಕ್ತ ಶಾಲಿನ ತರಗತಿಗಳು ಆರಂಭವಾಗಲಿವೆ. ಆಗ, ಪ್ರವೇಶ ಪ್ರಕ್ರಿಯೆ ನಡೆಯುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ.ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು, ಮೂಲಸೌಲಭ್ಯ ವೃದ್ಧಿಸುತ್ತಿಲ್ಲ. ಇದು, ವಿದ್ಯಾರ್ಥಿಗಳಿಗೆ `ಸಮರ್ಪಕ ಹಾಗೂ ಅತ್ಯುತ್ತಮ ಕಲಿಕೆಯ ವಾತಾವರಣ' ನಿರ್ಮಾಣ ಕಲ್ಪಿಸುವಲ್ಲಿ ತೊಡಕಾಗಿರುವುದು ಕಂಡುಬಂದಿದೆ.ಕೇಂದ್ರೀಯ ವಿದ್ಯಾಲಯಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ನಿಯಮಗಳಂತೆ, ರಾಜ್ಯ ಸರ್ಕಾರವು ಕಾವೇರಮ್ಮ ಶಾಲೆಯಲ್ಲಿ ಸ್ಥಳಾವಕಾಶ ಕಲ್ಪಿಸಿದೆ. 8 ತರಗತಿಗಳಿಗೆ ತಲಾ 40 ಮಕ್ಕಳಂತೆ ಎಂಟು ಕೊಠಡಿಗಳಿವೆ. ಅಂದುಕೊಂಡಂತೆ ನಡೆದಿದ್ದಲ್ಲಿ ಈ ವೇಳೆಗಾಗಲೇ ಸ್ವಂತ ಕಟ್ಟಡ ನಿರ್ಮಾಣಗೊಳ್ಳಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸಾಧ್ಯವಾಗಿಲ್ಲ.ಸೌಲಭ್ಯ ಕೊರತೆ: ಈ ಶಾಲೆಯಲ್ಲಿ ಕೊಠಡಿ ಸಾಕಾಗುತ್ತಿಲ್ಲ. ಪುಟ್ಟದಾಗಿರುವ ಶಾಲೆಯ ಆವರಣವೇ ಮಕ್ಕಳ ಆಟದ ಮೈದಾನವಾಗಿದೆ. ಸ್ಥಳಾವಕಾಶ ಕೊರತೆಯಿಂದಾಗಿ, ಸುಸಜ್ಜಿತ ಪ್ರಯೋಗಾಲಯ, ಜಿಮ್, ಚಟುವಟಿಕೆಗಳ ಸಭಾಂಗಣ... ಮೊದಲಾದ ಸೌಲಭ್ಯ ಕಲ್ಪಿಸಲು ಆಗಿಲ್ಲ. ಇದು, ಮಕ್ಕಳ ಆಟಪಾಠದ ಮೇಲೆ ಪರಿಣಾಮ ಬೀರುತ್ತಿದೆ.`ಪ್ರಸ್ತುತ 8 ತರಗತಿಗಳಿಗೆ ಹೇಗೋ ಕೊಠಡಿ ವ್ಯವಸ್ಥೆ ಮಾಡಲಾಗಿದೆ. 9ರಿಂದ 12ನೇ ತರಗತಿಗಳು ನಡೆದರೆ ಕೊಠಡಿಗಳು ಸಾಕಾಗುವುದಿಲ್ಲ.ಸ್ಥಳಾವಕಾಶ ಇಲ್ಲದಿರುವುದರಿಂದ ಈಗ ಕೇವಲ ಕಂಪ್ಯೂಟರ್ ಪ್ರಯೋಗಾಲಯ ಮಾತ್ರ ಸಿದ್ಧಪಡಿಸಲಾಗಿದೆ (20 ಕಂಪ್ಯೂಟರ್‌ಗಳಿವೆ). ಉಳಿದಂತೆ, ಮೂರು ವಿಜ್ಞಾನ, ಗಣಿತ ಪ್ರಯೋಗಾಲಯ ಸ್ಥಾಪಿಸಲು ಸಾಧ್ಯವಾಗಿಲ್ಲ. ಸ್ವಂತ ಕಟ್ಟಡ ನಿರ್ಮಾಣ ಆಗುವವರೆಗೆ ಹೆಚ್ಚುವರಿಯಾಗಿ ಕನಿಷ್ಠ ನಾಲ್ಕು ಕೊಠಡಿ ನೀಡುವಂತೆ ಕೋರಿ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ' ಎಂದು ಕೇಂದ್ರೀಯ ವಿದ್ಯಾಲಯದ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.ಜಮೀನು ದೊರೆತು 2 ವರ್ಷ:  ಕೇಂದ್ರೀಯ ವಿದ್ಯಾಲಯಕ್ಕೆ ಕಟ್ಟಡ ನಿರ್ಮಿಸಲು ಜಮೀನು ದೊರೆತು ಎರಡು ವರ್ಷ ಕಳೆದಿದೆ. ಆವರಗೊಳ್ಳದ ಬಳಿ 10 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಹೇಳಲಾಗಿತ್ತು. 12ನೇ ತರಗತಿವರೆಗೆ 24 ಕೊಠಡಿಗಳು, ಪ್ರಯೋಗಾಲಯ ಮೊದಲಾದವುಗಳನ್ನು ನಿರ್ಮಿಸುವ ಸಂಬಂಧ ಜಾಗ ಪರಿಶೀಲನೆಗೆ ಆಗಮಿಸಿದ ಕೇಂದ್ರೀಯ ವಿದ್ಯಾಲಯದ ಅಧಿಕಾರಿಗಳು, ಮಂಜೂರಾದ ಜಾಗದಲ್ಲಿ ಎರಡು ಎಕರೆ ಕಡಿಮೆ ಇರುವುದನ್ನು ಪತ್ತೆಹಚ್ಚಿದ್ದಾರೆ.ಹೀಗಾಗಿ, ಇದನ್ನು ಖಾತರಿಪಡಿಸಿಕೊಳ್ಳಲು ಸರ್ವೇ, ಜಂಟಿ ಸರ್ವೇಗಳು ನಡೆದಿವೆ. ನಿಖರ ಅಳತೆ ನಮೂದಿಸಿ, ಹಸ್ತಾಂತರ ಪತ್ರ ನೀಡಬೇಕು ಎಂದು ವಿದ್ಯಾಲಯದ ಉನ್ನತ ಅಧಿಕಾರಿಗಳು ಹೇಳಿದ್ದರಿಂದ, 15 ದಿನಗಳ ಹಿಂದೆಯಷ್ಟೇ ಹೊಸದಾಗಿ ಆರ್‌ಟಿಸಿ, ಹಸ್ತಾಂತರ ಪತ್ರಗಳನ್ನು ತಹಶೀಲ್ದಾರ್ ಕಚೇರಿಯಿಂದ ಶಾಲೆಯ ಪ್ರಾಂಶುಪಾಲರಿಗೆ ಕೊಡಲಾಗಿದೆ. ಈ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಕೆಲ ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.ಕಟ್ಟಡ ಕಾಮಗಾರಿ ಆರಂಭವಾದರೆ, ಪೂರ್ಣಗೊಳ್ಳಲು ಕನಿಷ್ಠ ಎರಡು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.`ಇನ್ನೆರಡು ತಿಂಗಳಲ್ಲಿ ಆರಂಭ...'

ನಗರದ ಕೇಂದ್ರೀಯ ವಿದ್ಯಾಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಆವರಗೊಳ್ಳ ಬಳಿ 10 ಎಕರೆ ಜಮೀನನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆಗೆ ಹಸ್ತಾಂತರಿಸಲಾಗಿದೆ.ಕಟ್ಟಡ ನಿರ್ಮಾಣ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಸಚಿವರು, ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವರು, `ಕೇಂದ್ರೀಯ ವಿದ್ಯಾಲಯ ಸಂಘಟನೆ' ಜಂಟಿ ಆಯುಕ್ತ ಹಾಗೂ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದೆ. ಕೂಡಲೇ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಕೋರಿದ್ದೆ.ಈ ಹಿನ್ನೆಲೆಯಲ್ಲಿ, ಜಮೀನು ಪರಿಶೀಲನೆ ಸಂಬಂಧ ಕೇಂದ್ರೀಯ ವಿದ್ಯಾಲಯ ಸಂಘಟನೆಯವರು ಬಂದಿದ್ದರು. ಆಗ, ಜಮೀನು ಕಡಿಮೆ ಇರುವುದು ಗೊತ್ತಾಗಿದೆ. ಮತ್ತೆ ಶಾಲೆಯ ಪ್ರಾಂಶುಪಾಲರ ಹೆಸರಿಗೆ ನೋಂದಣಿ ಮಾಡಿಸಿ ಕಳುಹಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.

- ಜಿ.ಎಂ.ಸಿದ್ದೇಶ್ವರ, ಸಂಸತ್ ಸದಸ್ಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.