ಶುಕ್ರವಾರ, ಮೇ 7, 2021
20 °C
ಚಿತ್ರ: ಆ್ಯಕ್ಷನ್ (ತೆಲುಗು)

ಇಮೇಜಿಗೆ ಗಾಳ, ಖಾಲಿ ಗೋಳ

ಡಿ.ಕೆ. ರಮೇಶ್ Updated:

ಅಕ್ಷರ ಗಾತ್ರ : | |

ಇಮೇಜಿಗೆ ಗಾಳ, ಖಾಲಿ ಗೋಳ

ನಿರ್ಮಾಪಕ: ಸುಂಕರ ರಾಮಬ್ರಹ್ಮಂ

ನಿರ್ದೇಶಕ: ಅನಿಲ್ ಸುಂಕರ

ತಾರಾಗಣ: ಅಲ್ಲರಿ ನರೇಶ್, ಸುದೀಪ್, ರಾಜು ಸುಂದರಂ, ಕಿಕ್ ಶ್ಯಾಂ, ವೈಭವ್, ನೀಲಂ ಉಪಾಧ್ಯಾಯ, ಸ್ನೇಹಾ ಉಲ್ಲಾಳ್, ಕಾಮ್ನಾ ಜೇಠ್ಮಲಾನಿ, ಶೀನಾ ಶಹಬಾದಿ ಇತರರು.
`ಈಗ' ಚಿತ್ರದ ಮೂಲಕ ತೆಲುಗಿನಲ್ಲಿ ಮನೆಮಾತಾದವರು ನಟ ಸುದೀಪ್. ಆ ಇಮೇಜನ್ನು ಬಂಡವಾಳ ಮಾಡಿಕೊಂಡು `ಆ್ಯಕ್ಷನ್' ರೂಪುಗೊಂಡಿದೆ. ಅವರಿದ್ದಾರೆ ಎಂದು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರು ಅನೇಕ. ಆದರೆ `ಈಗ'ದ ಮೋಡಿ ಇಲ್ಲಿಲ್ಲ. ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಅವರಿಗೆ ಮೊದಮೊದಲು ಖಳನ ವರ್ಚಸ್ಸು. `ಈಗ'ದಿಂದಾಗಿಯೇ ನಾನಿಲ್ಲಿ ನಿಂತಿದ್ದೇನೆ ಎಂದು ಡೈಲಾಗ್ ಹೇಳಿ ಶಿಳ್ಳೆ ಗಿಟ್ಟಿಸುತ್ತಾರೆ. ಕಡೆಗೆ ಬಂದಷ್ಟೇ ವೇಗವಾಗಿ ಮಾಯವಾಗುತ್ತಾರೆ.

ಆರಂಭದಲ್ಲಿ ಇದೊಂದು ಸಸ್ಪೆನ್ಸ್ ಚಿತ್ರ ಎಂಬ ಅನುಮಾನ ಮೂಡದೆ ಇರದು. ನಗೆಯುಕ್ಕಿಸುವ ಸನ್ನಿವೇಶಗಳಂತೆ ಕುತೂಹಲ ಕಾಯ್ದುಕೊಳ್ಳುವ ಅನೇಕ ಸಂಗತಿಗಳಿವೆ. ವಿರಾಮದ ಹೊತ್ತಿಗೆ ಕೋಣೆಯಲ್ಲಿ ಹುಲಿಯೊಂದು ಇಣುಕುತ್ತದೆ. ಹುಡುಗಿಯೊಬ್ಬಳು ಮಿಂಚಿ ಮಾಯವಾಗುತ್ತಾಳೆ. ಮದುವೆ ಆಗದ ಯುವಕರ ಮಧ್ಯೆ ಮಗುವೊಂದು ಪ್ರತ್ಯಕ್ಷವಾಗುತ್ತದೆ. ಜೀವದ ಗೆಳೆಯ ಇದ್ದಕ್ಕಿದ್ದಂತೆ ನಾಪತ್ತೆ. ಇದೇನೆಂದು ಬಿಡಿಸಿಡುವುದು ಮುಂದಿನ ಕಥಾಭಾಗ.ಹಾಗೆಂದು ಕತೆ ಸ್ವಂತದ್ದೇನೂ ಅಲ್ಲ. ಈಗಾಗಲೇ ಮೂರು ಭಾಗಗಳಲ್ಲಿ ಬಿಡುಗಡೆಯಾಗಿರುವ ಹಾಲಿವುಡ್ ಚಿತ್ರ `ದ ಹ್ಯಾಂಗೋವರ್'ನ ಪಡಿಯಚ್ಚು. ಅಲ್ಲಿ ಬ್ಯಾಚುಲರ್ ಪಾರ್ಟಿ ಆಚರಿಸಲು ಗೆಳೆಯರು ಲಾಸ್ ವೆಗಾಸ್‌ಗೆ ತೆರಳುತ್ತಾರೆ. ಇಲ್ಲಿ ಮೋಜಿಗೆ ಗೋವಾ ವೇದಿಕೆ. ಭಾರತೀಯತೆಗೆ ತಕ್ಕಂತೆ ಅಲ್ಲಲ್ಲಿ ಬದಲಾವಣೆಗಳಾಗಿವೆ.    ಅಲ್ಲರಿ ನರೇಶ್ ಇದ್ದಾರೆ ಎಂದರೆ ಹಾಸ್ಯ ಕಟ್ಟಿಟ್ಟ ಬುತ್ತಿ. ಚಿತ್ರದಲ್ಲಿಯೂ ಅದು ಮುಂದುವರೆದಿದೆ. ನರೇಶ್ ತಮ್ಮ ಎಂದಿನ ತುಂಟಾಟಗಳಿಂದ ಬೇರೆಯಾಗಿ ಕಾಣಿಸಿಕೊಳ್ಳಲು ಯತ್ನಿಸಿದ್ದಾರೆ. ಪೋಷಾಕಿನಲ್ಲಿಯೂ ಹೊಸತನವಿದೆ. ಆದರೆ ಸಂಪೂರ್ಣವಾಗಿ ಅವರ `ಅಲ್ಲರಿತನ' ದೂರವಾಗಿಲ್ಲ. ಹಾಸ್ಯಪ್ರಧಾನವಾದ ಚಿತ್ರಕ್ಕೆ `ತ್ರಿಡಿ' ತಂತ್ರಜ್ಞಾನವನ್ನು ತರುವ ಯತ್ನ ನಿರ್ದೇಶಕರದು. ಕೆಲವು ಸನ್ನಿವೇಶಗಳು ಮೂರನೇ ಆಯಾಮಕ್ಕೆ ಪೂರಕ. ಆದರೂ ಇಡಿಯಾಗಿ ಹಾಸ್ಯಚಿತ್ರಗಳು ಅಂಥ ತಂತ್ರಜ್ಞಾನಕ್ಕೆ ಪ್ರಶಸ್ತವಲ್ಲ ಎನ್ನಲು ಚಿತ್ರ ಒಂದು ಉದಾಹರಣೆ.ದೊಡ್ಡ ತಾರಾಗಣದಿಂದಾಗಿ ಚಿತ್ರದ ಕ್ಯಾನ್‌ವಾಸ್ ಹಿಗ್ಗಿದೆ. ನರೇಶ್ ಜೊತೆಗೆ ಇನ್ನೂ ಮೂವರು ಪ್ರಧಾನ ಪಾತ್ರದಲ್ಲಿದ್ದಾರೆ. ಅವರೆಲ್ಲರಿಗೂ ನಾಯಕ ನಟಿಯರಿದ್ದಾರೆ. ಹೀಗೆ ಸರ್ವರ ಕತೆ ಹೇಳಲು ಹೊರಟಿರುವುದು ಚಿತ್ರದ ಎಳೆಗೆ ತುಸು ಒಜ್ಜೆ ಎನಿಸಿದೆ. ಜೊತೆಗೆ ಬ್ರಹ್ಮಾನಂದಂ, ಅಲಿ, ಸುನಿಲ್ ಮುಂತಾದ ಹಾಸ್ಯನಟರ ದಂಡೂ ಉಂಟು. ನಟಿಯರಲ್ಲಿ ಗಮನ ಸೆಳೆಯುವುದು ನೀಲಂ ಉಪಾಧ್ಯಾಯ, ಸ್ನೇಹಾ ಉಲ್ಲಾಳ್‌ರ ಅಭಿನಯ.ಕತೆಯನ್ನು ಎರವಲು ಪಡೆದಿರುವಂತೆ ಎರಡು ಹಾಡುಗಳು ಬೇರೆ ಚಿತ್ರಗಳಿಂದ ವಲಸೆ ಬಂದಿವೆ. ಒಂದು `ಡರ್ಟಿ ಪಿಕ್ಚರ್'ನ ಊಲಾಲಾ ಹಾಡನ್ನು ನೆನಪಿಸುತ್ತದೆ. ಮತ್ತೊಂದು `ಪ್ರೇಮ ಯುದ್ಧಂ'ನ `ಸ್ವಾತಿ ಮುತ್ಯಪು ಜಲ್ಲುಲಲೋ' ಗೀತೆಯ ರೀಮಿಕ್ಸ್. ಇವುಗಳನ್ನು ಹೊರತುಪಡಿಸಿದರೆ ಬಪ್ಪಿ ಮತ್ತು ಬಪ್ಪ ಲಹಿರಿ ಸಂಗೀತದಲ್ಲಿ ಪ್ರಭಾವಿ ಅಂಶಗಳು ಕಡಿಮೆ. ದೊಡ್ಡ ನಟರು, ಅದ್ದೂರಿತನದಿಂದಾಗಿ ಚಿತ್ರ ಗಮನ ಸೆಳೆಯಬೇಕಿತ್ತು. ಆದರೆ `ಎಲ್ಲ ಇದ್ದೂ ಏನೂ ಇಲ್ಲದಂತಾಗಿದೆ' ಎಂಬುದು ಚಿತ್ರದ ಕೊನೆಗೆ ಅರಿವಾಗುವ ಸತ್ಯ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.