ಕರುನಾಡಿನ ಭವ್ಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಇಲಿಗಳು ಪುಟ್ಟ ಮಗುವಿನ ಕಿವಿ, ಮೂಗು ಇತ್ಯಾದಿ ತಿಂದು ಹಾಕಿವೆ ಎಂಬ ಸುದ್ದಿ ರಾಜ್ಯಾದ್ಯಂತ ಮಿಂಚಿನಂತೆ ಸಂಚರಿಸಿ ದೊಡ್ಡ ಕೋಲಾಹಲವೇ ಸೃಷ್ಟಿಯಾಯಿತು. ವಿಧಾನಮಂಡಲದಲ್ಲಿ ಪ್ರತಿಪಕ್ಷಗಳು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡವು. ‘ಇದೇನು ಇಲಿಗಳ ಸಾಮ್ರಾಜ್ಯವೇ? ಸರ್ಕಾರ ಏನು ನಿದ್ದೆ ಮಾಡ್ತಿದೆಯೆ? ಯಕಶ್ಚಿತ್ ಇಲಿಗಳಿಂದಲೂ ಜನರಿಗೆ ರಕ್ಷಣೆ ಇಲ್ಲವೇ?’ ಎಂದೆಲ್ಲ ಬೊಬ್ಬೆ ಹಾಕಿದವು.

ಇಲಿಗಳ ಕಾರಣಕ್ಕೆ ವಿಲವಿಲ ಒದ್ದಾಡಿದ ಮುಖ್ಯಮಂತ್ರಿಗಳು ಸಮಾಧಾನದಿಂದಲೇ ಉತ್ತರಿಸಿದರು ‘ನೋಡಿ, ಹುಲಿಗಳಾಗಿದ್ದರೆ ಅವನ್ನು ಗುಂಡಿಟ್ಟು ಕೊಲ್ಲಬಹು ದಿತ್ತು ಅಥವಾ ಸೆರೆ ಹಿಡಿದು ಕಾಡಿಗೆ ಅಟ್ಟಬಹುದಿತ್ತು. ನೀವೇ ಹೇಳಿದ ಹಾಗೆ ಅವು ಯಕಶ್ಚಿತ್ ಇಲಿಗಳು. ಅವನ್ನು ಹೇಗೆ ನಿಯಂತ್ರಿಸೋದು? ಸ್ವಲ್ಪ ಕಾಲಾವಕಾಶ ಕೊಡಿ, ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.

‘ಯಾರೊಡನೆ ಚರ್ಚಿಸುತ್ತೀರಿ? ಇಲಿಗಳ ಜೊತೆಯಲ್ಲಾ?’ ಪ್ರತಿಪಕ್ಷಗಳು ವ್ಯಂಗ್ಯವಾಡಿದವು. ಮುಖ್ಯಮಂತ್ರಿಗಳು ತಾಳ್ಮೆ ಕಳೆದುಕೊಂಡರು. ‘ನೋಡಿ, ನನಗೇನೋ ಆ ಇಲಿಗಳು ನಿಮ್ಮ ಪಕ್ಷಕ್ಕೇ ಸೇರಿದವು ಎನ್ನಿಸುತ್ತಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನೀವೇ ಏಕೆ ಅವನ್ನು ಬಿಟ್ಟಿರಬಾರದು? ಇರಲಿ, ಅವನ್ನು ಹೇಗೆ ಮಟ್ಟ ಹಾಕಬೇಕೆಂಬುದು ನನಗೆ ಗೊತ್ತು’ ಎಂದರಲ್ಲದೆ ಆ ಕೂಡಲೇ ತುರ್ತು ಸಂಪುಟ ಸಭೆ ಕರೆದರು. ವಿಶೇಷವಾಗಿ ಆರೋಗ್ಯ ಇಲಾಖೆ, ಆಹಾರ ಇಲಾಖೆ, ಗೃಹ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಇರಲೇಬೇಕೆಂದು ಸೂಚಿಸಿದರು.

ಸಭೆ ಪ್ರಾರಂಭವಾಯಿತು. ಮುಖ್ಯಮಂತ್ರಿಗಳು ಕೆಂಡಾಮಂಡಲರಾಗಿ ‘ಏನ್ರಿ ಇದೆಲ್ಲ? ನೀವೆಲ್ಲ ಏನ್ಮಾಡ್ತಿದೀರಿ? ಇಲಿಗಳು ಅಕ್ಕಿ ತಿನ್ನೋದು ಕೇಳಿದೀನಿ, ಹಣ್ಣು ತರಕಾರಿ ತಿನ್ನೋದು ಕೇಳಿದೀನಿ. ಮಕ್ಕಳ ಕಿವಿ ಮೂಗು ತಿಂತಾವೆ ಅಂದ್ರೆ ಏನರ್ಥ? ರಾಜ್ಯದಲ್ಲಿ ಇಲಿ,- ಹೆಗ್ಗಣಗಳು ಇಷ್ಟೆಲ್ಲ ಹೆಚ್ಕಳ್ಳೋಕೆ ಏನು ಕಾರಣ?’ ಎಂದು ತರಾಟೆಗೆ ತೆಗೆದುಕೊಂಡರು.

‘ಅದೂ... ಇಲಿಗಳಿಗೆ ಕಾಳು ಕಡ್ಡಿ, ತರಕಾರಿ ತಿಂದು ಬೇಜಾರಾಗಿರಬೇಕು ಸಾ, ಅದ್ಕೇ ನಾನ್ವೆಜ್ ಶುರು ಹಚ್ಕಂಡಿದಾವೆ ಅನ್ಸುತ್ತೆ...!’ ಆಹಾರ ಇಲಾಖೆ ಅಧಿಕಾರಿ ತೆಪರೇಸಿ ಹಲ್ಲುಗಿಂಜುತ್ತ, ತಡವರಿಸುತ್ತ ಹೇಳಿದಾಗ ‘ಶಟಪ್, ಕತೆ ಹೇಳ್ತೀರಾ? ನೀವು ಇಲಿಗಳಿಗೆ ತಿನ್ನೋಕೆ ಏನಾದ್ರು ಬಿಟ್ಟಿದ್ರೆ ತಾನೆ? ಅವು ತಿನ್ನೋ ಅಕ್ಕಿ, ಗೋಧಿ, ಬ್ರೆಡ್ಡು, ತರಕಾರಿನೆಲ್ಲ ನೀವೇ ತಿಂದುಹಾಕ್ತೀರ. ಮತ್ತೆ ಅವೇನ್ ಮಾಡ್ತವೆ? ಹೋಗ್ಲಿ ಇಲಿಗಳ ನಿರ್ಮೂಲನೆಗಾದ್ರು ಏನು ಕ್ರಮ ಕೈಗೊಂಡಿದ್ದೀರಿ?’ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

‘ಅದೂ... ಬೋಂಡಾ ಕಟ್ಟಿ ಬೋನು ಇಟ್ಟಿದ್ವಿ ಸಾ, ಆದ್ರೆ ಇಲಿಗಳು ಅದ್ಹೇಗೋ ಬೋಂಡಾ ಮಾತ್ರ ತಿಂತವೆ, ಬೋನಿಗೆ ಬೀಳ್ತಾ ಇಲ್ಲ. ಆಮೇಲೆ ಹೆಂಗೂ ಇಲಿಗಳು ನಾನ್ವೆಜ್ ಆಗಿವೆ ಅಂತ ಚಿಕನ್ ಕಬಾಬಲ್ಲಿ ಇಲಿಪಾಷಾಣ ಬೆರೆಸಿ ಮೂಲೆ ಮೂಲೆಗೂ ಇಟ್ಟಿದ್ವಿ. ಆದ್ರೆ ಇಲಿಗಳು ಅದನ್ನ ಮೂಸಿಯೂ ನೋಡ್ತಿಲ್ಲ...’
‘ಹೌದಾ? ಬೆಕ್ಕುಗಳನ್ನ ಬಿಡ್ಬೇಕಾಗಿತ್ತು?’

‘ಅದನ್ನೂ ಮಾಡಿದ್ವಿ ಸಾ, ನಾಲ್ಕು ಬೆಕ್ಕು ತರಿಸಿ ಇಲಿ ಹಿಡಿಯೋಕೆ ಅಂತ ಬಿಟ್ವಿ. ಆದ್ರೆ...’
‘ಆದ್ರೆ ಏನ್ರಿ?’
‘ಇಲಿಗಳಿಗೆ ಹಾಕಿದ್ದ ಚಿಕನ್ ಕಬಾಬ್ ತಿಂದು ಬೆಕ್ಕುಗಳೇ ಸತ್ತೋಗಿದ್ವು ಸಾ...’
‘ಥು ನಿಮ್ಮ, ಎದ್ದೋಗ್ರಿ ಅತ್ಲಾಗೆ...’ ಎಂದು ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ತಮ್ಮ ಆಸ್ಥಾನ ಪಂಡಿತರು, ಸಾಹಿತಿಗಳು, ಬುದ್ಧಿಜೀವಿಗಳನ್ನು ಬರಮಾಡಿಕೊಂಡು ಇಲಿಗಳ ಸಮಸ್ಯೆಯನ್ನು ಅವರ ಮುಂದಿಟ್ಟರು.
ಹಿರಿಯ ಸಾಹಿತಿಯೊಬ್ಬರು ಎಡಗೈಯಲ್ಲಿ ತಮ್ಮ ಗಡ್ಡ ಕೆರೆದುಕೊಳ್ಳುತ್ತ ಜ್ಯೋತಿಷಿಗಳ ಸ್ಟೈಲಲ್ಲಿ, ‘ಸಮಸ್ಯೆ ದೊಡ್ಡದೇ... ಆದರೆ ಪರಿಹಾರ ಇದೆ’ ಎಂದರು.
‘ಏನದು ಪರಿಹಾರ? ದಯವಿಟ್ಟು ಹೇಳಿ’ ಮುಖ್ಯಮಂತ್ರಿಗಳು ವಿನಂತಿಸಿಕೊಂಡರು.

‘ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಬೊಮ್ಮನಹಳ್ಳಿಯ ಕಿಂದರಿಜೋಗಿ ಅಂತ ಒಬ್ಬ ಇದ್ದದ್ದು ನಿಮಗೆಲ್ಲ ಗೊತ್ತಿದೆ. ಆತ ಬಾರಿಸೋ ಕಿಂದರಿ ನಾದಕ್ಕೆ ಇಲಿಗಳೆಲ್ಲ ಅವನ ಹಿಂದೆ ಬರ್ತಿದ್ವು ಅನ್ನೋದನ್ನ ನೀವೆಲ್ಲ ಓದಿದ್ದೀರಿ. ಅವನ ಮರಿ ಮೊಮ್ಮಗ... ಅಲ್ಲಲ್ಲ ಗಿರಿಮೊಮ್ಮಗ ಒಬ್ಬ ಇದಾನೆ. ಅವನು ಬಾರಿಸೋ ಕಿಂದರಿ ರಾಗಕ್ಕೆ, ವೇಗಕ್ಕೆ ಇಲಿಗಳು ಎಲ್ಲಿದ್ರೂ ಎದ್ದೂ ಬಿದ್ದೂ ಅವನ ಹಿಂದೆ ಓಡಿ ಬರ್ತವೆ...’
‘ಹೌದಾ? ವೆರಿಗುಡ್, ಹಾಗೆ ಅವನ ಹಿಂದೆ ಬರೋ ಇಲಿಗಳನ್ನೆಲ್ಲ ಒಂದೆಡೆ ಕೂಡಿ ಹಾಕಿ ಎನ್ಕೌಂಟರ್ ಮಾಡಿಬಿಟ್ರೆ ಹೆಂಗೆ?’ ಕ್ರಾಂತಿಕಾರಿ ಬುದ್ಧಿಜೀವಿ ಒಬ್ಬರು ಸಲಹೆ ನೀಡಿದರು.

‘ಸ್ವಲ್ಪ ಇರ್ರಿ, ಎನ್ಕೌಂಟರ್ ಮಾಡೀರಂತೆ. ನನ್ನ ಸಲಹೆ ಏನು ಅಂದ್ರೆ ಇಲಿಗಳ ಜೊತೆ ಹೆಗ್ಗಣಗಳನ್ನೂ ಹಿಡಿಸೋದು ಒಳ್ಳೇದು... ಏನಂತೀರಿ?’ ಇನ್ನೊಬ್ಬ ಸಾಹಿತಿಗಳು ಮುಖ್ಯಮಂತ್ರಿಗಳ ಮುಖ ನೋಡಿದರು.
‘ಈಗ ಸಮಸ್ಯೆ ಇರೋದು ಇಲಿಗಳದ್ದು, ಹೆಗ್ಗಣಗಳು ಯಾಕೆ?’
‘ಎಳೆಗರುಂ ಎತ್ತಾಗದೆ’ ಎನ್ನುವ ಹಾಗೆ ‘ಇಲಿಮರಿಯುಂ ಹೆಗ್ಗಣವಾಗದೆ? ಹಿಡಿಸೋದು ಹಿಡಿಸ್ತೀರ, ಹೋಲ್ಸೇಲ್ ಆಗಿ ಒಂದ್ಸಲ ಎಲ್ಲವನ್ನೂ ಹಿಡಿಸಿಬಿಡಿ...’ ಸಾಹಿತಿಗಳು ನಕ್ಕರು. ಮುಖ್ಯಮಂತ್ರಿಗಳು ತಲೆಯಾಡಿಸಿದರು. ಕಿಂದರಿಜೋಗಿಯನ್ನು ಕರೆಸಲು ಆದೇಶಿಸಿದರು.

ಕಿಂದರಿಜೋಗಿ ಮರುದಿನ ಮುಖ್ಯಮಂತ್ರಿಗಳ ಮುಂದೆ ತನ್ನ ವಾದ್ಯದೊಡನೆ ಹಾಜರಾದ. ‘ನಾನು ಇಲಿ-, ಹೆಗ್ಗಣಗಳನ್ನೆಲ್ಲ ಓಡಿಸಿದರೆ ನನಗೇನು ಕೊಡುತ್ತೀರಿ?’ ಎಂದು ಕೇಳಿದ.

‘ಏನು ಬೇಕು? ನೀನು ಕೇಳಿದಷ್ಟು ಹಣ ಕೊಡುತ್ತೇನೆ. ಅಧಿಕಾರ ಬೇಕೆಂದರೆ ‘ಇಲಿ ನಿರ್ಮೂಲನ ಪ್ರಾಧಿಕಾರ’ ಅಂತ ರಚಿಸಿ ಅದಕ್ಕೆ ನಿನ್ನನ್ನೇ ಅಧ್ಯಕ್ಷನನ್ನಾಗಿ ಮಾಡುತ್ತೇನೆ. ಹೇಳು, ಯಾವುದು ಬೇಕು?’ ಮುಖ್ಯಮಂತ್ರಿಗಳು ಆಯ್ಕೆಯನ್ನು ಅವನಿಗೇ ಬಿಟ್ಟರು.
‘ನಾನು ಎಂ.ಎಲ್.ಸಿ. ಆಗಬೇಕು. ಮಾಡ್ತೀರಾ?...’ ಕಿಂದರಿಜೋಗಿಯ ಬೇಡಿಕೆ ಕೇಳಿ ಮುಖ್ಯಮಂತ್ರಿಗಳು ತಬ್ಬಿಬ್ಬಾದರು. ಬಿಸಿ ತುಪ್ಪ... ಉಗುಳುವ ಹಾಗಿಲ್ಲ. ಮುಖ್ಯಮಂತ್ರಿಗಳು ತಮ್ಮ ಪಕ್ಕದಲ್ಲಿದ್ದ ಆಸ್ಥಾನ ಪಂಡಿತರೊಬ್ಬರ ಕಿವಿಯಲ್ಲಿ ‘ಇವನನ್ನು ಎಂ.ಎಲ್.ಸಿ. ಮಾಡಲು ಬರುತ್ತದೆಯೇ?’ ಎಂದು ವಿಚಾರಿಸಿದರು. ‘ಯಾಕೆ ಬರೋದಿಲ್ಲ? ಎಂತೆಂಥೋರ್ನೋ ಮಾಡಿದೀರಂತೆ. ಇವನನ್ನ ‘ಮೂಷಿಕ ಮಾಂತ್ರಿಕ’ ಅಂತ ಪರಿಗಣಿಸಿ ಎಂ.ಎಲ್.ಸಿ. ಮಾಡಬಹುದು...’ ಪಂಡಿತರು ಸಲಹೆ ನೀಡಿದರು.

ಮುಖ್ಯಮಂತ್ರಿಗಳು ಒಪ್ಪಿದರು. ‘ಆಯಿತು ನಿನ್ನನ್ನು ಎಂ.ಎಲ್.ಸಿ. ಮಾಡುತ್ತೇನೆ. ಒಮ್ಮೆ ನಿನ್ನ ಕಿಂದರಿ ಬಾರಿಸಿ ತೋರಿಸು, ಇಲಿಗಳು ಬರುತ್ತವೋ ಇಲ್ಲವೋ ಪರಿಶೀಲಿಸಬೇಕು’ ಎಂದರು. ಕಿಂದರಿಜೋಗಿ ವಿಧಾನಸೌಧದ ನಟ್ಟ ನಡುವೆ ನಿಂತು ತಾರಕಸ್ವರದಲ್ಲಿ ತನ್ನ ಕಿಂದರಿ ಬಾರಿಸಲು ಆರಂಭಿಸಿದ.

ಎರಡೇಕ್ಷಣ... ಅವು ಎಲ್ಲಿದ್ದವೋ, ಯಾವ ಸಂದುಗೊಂದುಗಳಲ್ಲಿ ಅಡಗಿದ್ದವೋ ಇಲಿಗಳು, ಹೆಗ್ಗಣಗಳು ನೂರು, ಸಾವಿರ ಸಂಖ್ಯೆಯಲ್ಲಿ ದಂಡುದಂಡಾಗಿ ಕಿಂದರಿಜೋಗಿಯ ಕಡೆಗೆ ಧಾವಿಸಿ ಬರಲಾರಂಭಿಸಿದವು. ಮುಖ್ಯಮಂತ್ರಿಗಳು ಒಮ್ಮೆಲೆ ಹೌಹಾರಿದರು. ಎದ್ದು ತಮ್ಮ ಕುರ್ಚಿಯ ಮೇಲೆ ಹತ್ತಿ ನಿಂತುಕೊಂಡರು. ನೋಡುತ್ತಾರೆ... ಅನ್ನಭಾಗ್ಯದ ಅಕ್ಕಿ ತಿನ್ನೋ ಹೆಗ್ಗಣಗಳು, ಟ್ರಾನ್ಸ್ಫರ್ ಕಡತ ತಿನ್ನೋ ಹೆಗ್ಗಣಗಳು, ಕಾಮಗಾರಿ ಬಿಲ್ ನುಂಗೋ ಹೆಗ್ಗಣಗಳು, ನಿಗಮ-ಮಂಡಳಿಗಳಿಗೆ ಲಾಬಿ ಮಾಡೋ ಹೆಗ್ಗಣಗಳು, ಸರ್ಕಾರಿ ಫೈಲ್ ಮಾಯ ಮಾಡೋ ಹೆಗ್ಗಣಗಳು, ಭ್ರಷ್ಟಾಚಾರದ ಹೆಗ್ಗಣಗಳು, ಮೀಡಿಯೇಟರ್ ಹೆಗ್ಗಣಗಳು... ಒಂದೇ ಎರಡೇ... ಇವುಗಳಲ್ಲಿ ಮಗುವಿನ ಕಿವಿ ಮೂಗು ತಿಂದ ಇಲಿ ಎಲ್ಲಿ ಎಂದು ಹುಡುಕುವುದೇ ಕಷ್ಟವಾಯಿತು ಮುಖ್ಯಮಂತ್ರಿಗಳಿಗೆ.

‘ಸಾಕು ನಿಲ್ಲಿಸು’ ಮುಖ್ಯಮಂತ್ರಿ ಆದೇಶಿಸಿದರು. ವಾದ್ಯ ನಿಂತಿತು. ಇಲಿ ಹೆಗ್ಗಣಗಳೂ ‘ಸುಯ್ ಟಪಕ್’ ಎನ್ನುವಂತೆ ಮಾಯವಾದವು. ‘ಶಹಬ್ಬಾಶ್’ ಎಂದು ಕಿಂದರಿಜೋಗಿಯ ಬೆನ್ನು ತಟ್ಟಿದ ಮುಖ್ಯಮಂತ್ರಿಗಳು ನಾಳೆ ಬೆಳಿಗ್ಗೆ ಅರಮನೆ ಮೈದಾನದಲ್ಲಿ ನಿನ್ನ ಕಿಂದರಿ ಬಾರಿಸು. ಎಲ್ಲ ಇಲಿ ಹೆಗ್ಗಣಗಳನ್ನು ಒಟ್ಟಿಗೇ ನಿರ್ಮೂಲನೆ ಮಾಡಿಬಿಡೋಣ’ ಎಂದರು. ಆ ರಾತ್ರಿ ವಿಧಾನಸೌಧದ ಕೊಠಡಿಯೊಂದರಲ್ಲೇ ಕಿಂದರಿಜೋಗಿಗೆ ಮಲಗುವ ವ್ಯವಸ್ಥೆ ಮಾಡಲಾಯಿತು.

ಮರುದಿನ ಬೆಳಿಗ್ಗೆ ಸೂರ್ಯ ನೆತ್ತಿಗೆ ಬಂದರೂ ಕಿಂದರಿಜೋಗಿಯ ಸುಳಿವಿಲ್ಲ. ಏನಾಯ್ತು ಇವನಿಗೆ? ಇನ್ನೂ ಮಲಗಿದ್ದಾನೆಯೆ? ನೋಡಿಬನ್ನಿ’ ಎಂದು ತಮ್ಮ ಸಿಬ್ಬಂದಿಗೆ ಆದೇಶಿಸಿದರು ಮುಖ್ಯಮಂತ್ರಿಗಳು. ಫಾಸ್ಟ್ ಫಾರ್ವರ್ಡ್ ಥರ ಹೀಗೆ ಹೋಗಿ ಹಾಗೆ ಬಂದ ಸಿಬ್ಬಂದಿಗಳು ವರದಿ ಒಪ್ಪಿಸಿದರು. ‘ಸಾರ್, ಕಿಂದರಿಜೋಗಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆಯಂತೆ...’
‘ಆಸ್ಪತ್ರೆಗಾ? ಯಾಕೆ?’
‘ನಿನ್ನೆ ರಾತ್ರಿ ಆತ ವಿಧಾನಸೌಧದ ಕೊಠಡಿಯಲ್ಲಿ ಮಲಗಿದ್ದಾಗ ಇಲಿ ಹೆಗ್ಗಣಗಳು ದಾಳಿ ಮಾಡಿ ಆತನ ಕಿವಿ, ಮೂಗು, ತುಟಿ ಎಲ್ಲ ತಿಂದು ಹಾಕಿವೆಯಂತೆ!
ಮುಖ್ಯಮಂತ್ರಿಗಳು ಕುಳಿತಲ್ಲೇ ಬೆವತು ಹೋದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.