ಶುಕ್ರವಾರ, ಜೂನ್ 18, 2021
24 °C

ಇಲ್ಲಿನ ಆಭರಣ ವಿನ್ಯಾಸಕನಿಗೆ ‘ಒಲಂಪಿಯಾಡ್’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓದುವತ್ತ ಒಂದಿಷ್ಟೂ ಆಸಕ್ತಿ ಇರಲಿಲ್ಲ. ಆದರೂ ಮನೆಯಲ್ಲಿ ನಾನು ಓದಿ ಯಾವುದಾದರೂ ನೌಕರಿ ಸೇರಬೇಕೆಂದು ಹೇಳುತ್ತಿದ್ದರು. ಓದಿಗಿಂತ ಹೆಚ್ಚಾಗಿ ವಿನ್ಯಾಸ ಹಾಗೂ ಕಲೆಯತ್ತ ಮನಸ್ಸು ಸೆಳೆಯುತ್ತಿತ್ತು. ಆರನೇ ತರಗತಿಯಲ್ಲಿದ್ದೆ. ಓದುವುದು ತೀರಾ ಕಷ್ಟ ಎಂದೆನಿಸಿತು. ಅಣ್ಣ ಕೆಲಸ ಮಾಡುತ್ತಿದ್ದ ಆಭರಣ ಅಂಗಡಿಯಲ್ಲಿ ಸಹಾಯಕನಾಗಿ ಸೇರಿಕೊಂಡೆ. ಆಗ ನಾನು ಈ ವೇದಿಕೆಯಲ್ಲಿ ನಿಂತುಕೊಳ್ಳುತ್ತೇನೆಂಬ ಕಲ್ಪನೆಯೂ ಇರಲಿಲ್ಲ’ ಎಂದು ಹೇಳುವಾಗ ಬಭೇಶ್‌ ಚಂದ್ರ ಜನಾ ಅವರ ಮುಖದಲ್ಲಿ ಸಾರ್ಥಕತೆಯ ಕಳೆ.ಆಭರಣ ವಿನ್ಯಾಸಕಾರರಾಗಿರುವ ಬಭೇಶ್‌ ಇತ್ತೀಚೆಗಷ್ಟೇ ಜರ್ಮನಿಯಲ್ಲಿ ನಡೆದ ವಿಶ್ವ ಕೌಶಲ ಸ್ಪರ್ಧೆಯಲ್ಲಿ ‘ಮೆಡಲಿಯನ್ ಆಫ್ ಎಕ್ಸಲೆನ್ಸ್’ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಇದಕ್ಕಾಗಿ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಬಭೇಶ್‌ ಅವರನ್ನು ಸನ್ಮಾನ ಮಾಡುವ ಸಲುವಾಗಿ ಗಂಜಾಂ ಆಭರಣ ಮಳಿಗೆ ಒಂದು ಸಮಾರಂಭವನ್ನೇ ಆಯೋಜಿಸಿತ್ತು.ಆಭರಣ ತಯಾರಿಕೆಯ ಸ್ಪರ್ಧೆಯಲ್ಲಿ ಒಲಿಂಪಿಕ್‌ ಎಂದೇ ಕರೆಸಿಕೊಂಡಿರುವ ‘ವರ್ಲ್ಡ್‌ ಸ್ಕಿಲ್ಸ್‌’  ಸ್ಪರ್ಧೆಗೆ 50 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಈ ಸ್ಪರ್ಧೆಯಲ್ಲಿ 24 ವಿಭಾಗಗಳಿವೆ. ಅವುಗಳಲ್ಲಿ ಬೆಳ್ಳಿ ವಿಭಾಗದಲ್ಲಿ ಭಾರತದಿಂದ ಸ್ಪರ್ಧಿಸಿದ ಏಕೈಕ ಸ್ಪರ್ಧಿ ಬಭೇಶ್‌ ಚಂದ್ರ ಜನಾ.‘ಸ್ಪರ್ಧೆಯಲ್ಲಿ ಒಟ್ಟು 18 ಸ್ಪರ್ಧಾಳುಗಳಿದ್ದರು. ವಿಭಿನ್ನ ಬಗೆಯ ಆಕೃತಿಗಳನ್ನು ಮಾಡುವಂತೆ ಹೇಳಲಾಗಿತ್ತು. ಅದನ್ನು ನಿರ್ದಿಷ್ಟ ಲೋಹ ಬಳಸಿ, ಕೊಟ್ಟ ಸಮಯದಲ್ಲಿ ಮುಗಿಸಬೇಕಾಗಿತ್ತು. ಹೀಗೆ ನಾನು ತಯಾರಿಸಿದ 33 ಮಿ.ಮೀ.ನಷ್ಟು ಗಾತ್ರದ ವಿನ್ಯಾಸ ತೀರ್ಪುಗಾರರ ಮೆಚ್ಚುಗೆ ಗಳಿಸಿತು’ ಎಂದು ಸ್ಪರ್ಧೆಯ ವಿವರ ಬಿಚ್ಚಿಟ್ಟರು 21 ವರ್ಷದ ಬಭೇಶ್‌.ಕೋಲ್ಕತ್ತಾ ಮೂಲದ ಬಭೇಶ್‌,  ಆಭರಣ ವೃತ್ತಿಯನ್ನು ತಮ್ಮ ರಾಜ್ಯದಲ್ಲೇ ಕಲಿತರು. ಆದರೆ ಅವರಿಗೆ ವೃತ್ತಿಯಲ್ಲಿ ಒಂದಷ್ಟು ಹೊಸತನ್ನು ಕಲಿಸಿದ್ದು ಹಾಗೂ ಗೌರವ ತಂದುಕೊಟ್ಟಿದ್ದು ಬೆಂಗಳೂರು. ಹೀಗಾಗಿ ಈ ನಗರದ ಬಗ್ಗೆ ಅವರಿಗೆ ವಿಶೇಷ ಗೌರವ. ‘ಇಲ್ಲಿ ಬಗೆಬಗೆಯ ಪ್ರದೇಶಗಳ ಜನರಿದ್ದಾರೆ. ಹೀಗಾಗಿ ಅವರ ಅಭಿರುಚಿಗಳು ಭಿನ್ನ. ಗಂಜಾಂಗೆ ಭೇಟಿ ನೀಡುವ ಇಂಥ ಆಭರಣ ಪ್ರಿಯರ ಅಪೇಕ್ಷೆಯಂತೆ ಆಭರಣ ತಯಾರಿಸುವುದರಿಂದ ನನ್ನಲ್ಲಿ ಜ್ಞಾನ ಹೆಚ್ಚಾಗಿದೆ. ಇನ್ನಷ್ಟು ಕಲಿಯಬೇಕೆಂಬ ಆಸಕ್ತಿಯೂ ಮೂಡಿದೆ’ ಎನ್ನುವುದು ಅವರ ಅಭಿಪ್ರಾಯ.ಬಭೇಶ್‌ ಅವರಲ್ಲಿನ ಕಲೆಯನ್ನು ಗುರುತಿಸಿದ ಗಂಜಾಂ ಅವರಿಗೆ ವಿಶೇಷ ತರಬೇತಿ ನೀಡಲು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಪರಾಗ್‌ ವ್ಯಾಸ್‌ ಅವರ ಬಳಿ ತರಬೇತಿಗೆ ಕಳುಹಿಸಿತಂತೆ. ಆವರೆಗೂ ಸಂಪ್ರದಾಯಿಕ ಶೈಲಿಯಲ್ಲಿ ಆಭರಣ ತಯಾರಿಸುತ್ತಿದ್ದ ಬಭೇಶ್‌, ಈ ತರಬೇತಿಯಲ್ಲಿ ವೈಜ್ಞಾನಿಕವಾಗಿ ಆಭರಣ ತಯಾರಿಕೆಯ ಕೌಶಲಗಳನ್ನು ಕರಗತಮಾಡಿಕೊಂಡ ಬಗೆಯನ್ನು ವಿವರಿಸಿದರು. ಈ ಸ್ಪರ್ಧೆಯಲ್ಲಿ ವಿಜೇತರಾಗಲು ಪರಾಗ್‌ ವ್ಯಾಸ್‌ ಹಾಗೂ ಅವರ ತಂಡದ ಕೊಡುಗೆಯೂ ಅಪಾರ ಎಂದು ಕೃತಜ್ಞತೆ ಸಲ್ಲಿಸಿದರು.‘ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಕಲಿಕೆಗೆ ಸಾಕಷ್ಟು ಪ್ರೋತ್ಸಾಹವಿದೆ. ಕಚೇರಿಯಲ್ಲಿ ಕೆಲಸ ಮಾಡಿದ ನಂತರ ಮನೆಯಲ್ಲೂ ನನ್ನಿಷ್ಟದ ವಿನ್ಯಾಸದ ಆಭರಣಗಳ ನೀಲನಕ್ಷೆ ಸಿದ್ಧಪಡಿಸುವುದರಲ್ಲಿ ತಲ್ಲೀನನಾಗುತ್ತೇನೆ. ಹೀಗಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಬೆಂಗಳೂರು ನಗರವನ್ನು ಹೆಚ್ಚಾಗಿ ಸುತ್ತಾಡಿಲ್ಲ. ಈಗ ಲಭ್ಯವಿರುವ ನನ್ನ ಸಮಯವನ್ನು ಆಭರಣ ವಿನ್ಯಾಸಕ್ಕಷ್ಟೇ ಮೀಸಲಿಟ್ಟಿದ್ದೇನೆ’ ಎಂದೆನ್ನುವ ಬಭೇಶ್‌ ಅವರಿಗೆ ಸದ್ಯಕ್ಕೆ ಸ್ವಂತ ರಾಜ್ಯಕ್ಕೆ ಹೋಗುವ ಇರಾದೆ ಇಲ್ಲ. ಬೆಂಗಳೂರಿನಲ್ಲೇ ಇದ್ದು ಏನನ್ನಾದರೂ ಸಾಧಿಸಬೇಕೆಂಬುದು ಅವರ ಮಹದಾಸೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.