ಶನಿವಾರ, ಮೇ 8, 2021
20 °C
ಅಕ್ರಮ ಮರಳು ಗಣಿಗಾರಿಕೆ ಭಾಗ 10

ಇಲ್ಲಿ ನದಿಪಾತ್ರಗಳೇ ಬದಲು, ಕೆರೆಗಳು ಮಾಯ

ಪ್ರಜಾವಾಣಿ ವಾರ್ತೆ/ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ತುಮಕೂರು:  ಅದಿರು ಗಣಿಗಾರಿಕೆ ಮೀರಿಸುವಂತೆ ಅಕ್ರಮ ಮರಳು ಗಣಿಗಾರಿಕೆ ಜಿಲ್ಲೆಯಲ್ಲಿ ಬೆಳೆದು ಬಿಟ್ಟಿದೆ. ನದಿಗಳು, ಕೆರೆಗಳನ್ನು ಒಂದೊಂದಾಗಿ ಆಪೋಶನ ತೆಗೆದುಕೊಳ್ಳುತ್ತಿದ್ದರೂ ಕಡಿವಾಣ ಹಾಕುವವರೇ ಇಲ್ಲವಾಗಿದ್ದಾರೆ.ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಹಾಕಲು ಮುಂದಾಗಿದ್ದ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರನ್ನು ಮೂರು ತಿಂಗಳಲ್ಲೇ ಇಲ್ಲಿಂದ ಎತ್ತಂಗಡಿ ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಗಟ್ಟಲು ಬಳಸಿದ್ದ ಸಿ.ಸಿ ಕ್ಯಾಮರಾಗಳನ್ನು ಅಕ್ರಮ ಮರಳು ಗಣಿಗಾರಿಕೆ ತಡೆಯಲು ಬಳಸಿಕೊಳ್ಳುವುದಾಗಿ ಅವರು ಹೇಳಿದ್ದರು. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರುವ ಮುನ್ನವೇ ಅವರ ವರ್ಗಾವಣೆ ಜಿಲ್ಲೆಯ ಮರಳು ಮಾಫಿಯಾ ಶಕ್ತಿಗೆ ಸಾಕ್ಷಿ.ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ತವರು ಕ್ಷೇತ್ರ ಶಿರಾದ ಮದಲೂರು ಕೆರೆ ಹೊಕ್ಕವರಿಗೆ ಚಂಬಲ್ ಕಣಿವೆಯ ರೀತಿಯಲ್ಲಿ ಭಾಸವಾಗುತ್ತದೆ. ಸಾವಿರ ಎಕರೆಗೂ ಮೀರಿದ ವಿಸ್ತೀರ್ಣದ ಈ ಐತಿಹಾಸಿಕ ಕೆರೆಯಲ್ಲಿ 30-40 ಅಡಿಯಷ್ಟು ಆಳ ತೋಡಿ ಸಾವಿರಾರು ಟನ್ ಮರಳು ದೋಚಲಾಗಿದೆ.ಸರ್ಕಾರದ ಮರಳು ನೀತಿ ದಾಖಲೆಯಲ್ಲಿದೆ. ಮರಳು ನೀತಿ ಜಾರಿ ಹಾಗೂ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಲು ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ, ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನು ಒಳಗೊಂಡ ಮರಳು ಮೇಲುಸ್ತುವಾರಿ ಸಮಿತಿ ಇದ್ದರೂ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಭೆಯೂ ಸೇರುತ್ತಿಲ್ಲ.ಶಿರಾ ತಾಲ್ಲೂಕಿನ ಸುವರ್ಣಮುಖಿ ನದಿಪಾತ್ರದ ನಾಲ್ಕು ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಒಬ್ಬರೇ ಒಬ್ಬರು ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿದೆ. ಇದನ್ನು ಹೊರತುಪಡಿಸಿ ಜಿಲ್ಲೆು ಬೇರೆಲ್ಲೂ ಮರಳು ತೆಗೆಯಲು ಅನುಮತಿ ನೀಡಿಲ್ಲ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಹಾಲ್‌ಚಿಕ್ಕಣ್ಣ. ಆದರೆ ವಾಸ್ತವ ಬೇರೆ ಇದೆ. ಇಡೀ ಜಿಲ್ಲೆ ಅಕ್ರಮ ಮರಳು ಗಣಿಗಾರಿಕೆಯ ಬೋಗುಣಿಯಂತಾಗಿದೆ.ಕಳೆದ  ವರ್ಷದ ಏಪ್ರಿಲ್‌ನಿಂದ ಜನವರಿ ತಿಂಗಳವರೆಗೆ ಅಕ್ರಮ ಮರಳು ದಂಧೆಯ ಮೇಲೆ ದಾಳಿ ನಡೆಸಿ 43.90 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. 236 ಲಾರಿ ವಶಪಡಿಸಿಕೊಂಡು, 8 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬ ಅಂಕಿಅಂಶ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯದು.ಶಿರಾದ ಸುವರ್ಣಮುಖಿ ನದಿ, ಮಧುಗಿರಿಯ ಕಡಗತ್ತೂರು, ಕುಮುದ್ವತಿ ನದಿ, ಕುಣಿಗಲ್‌ನ ಶಿಂಷಾ ನದಿ, ಕೊಡವತ್ತಿ ನದಿಗಳ ದಿಕ್ಕು ಬದಲಾಗುವಂತೆ ಮರಳು ಲೂಟಿ ಮಾಡಲಾಗಿದೆ. ಹಗಲು ಹೊತ್ತಿನಲ್ಲೇ ರಾಜಾರೋಷವಾಗಿ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ಪೊಲೀಸರಿಗೆ ದೂರು ನೀಡಿದರೂ ಏನೇನು ಪ್ರಯೋಜನವಾಗುವುದಿಲ್ಲ ಎಂಬುದು ಈ ಭಾಗದ ಜನರ ಆರೋಪವಾಗಿದೆ.ಮರಳು ಗಣಿಗಾರಿಕೆಗೆ ಹೆಸರಾಗಿರುವ ಶಿರಾ ತಾಲ್ಲೂಕಿನಲ್ಲಿ ಟ್ರ್ಯಾಕ್ಟರ್, ಟಿಪ್ಪರ್‌ಲಾರಿ, ಜೆಸಿಬಿ ಯಂತ್ರ ಖರೀದಿಸುತ್ತಿರುವವರ ಸಂಖ್ಯೆ ಇಮ್ಮಡಿಯಾಗ ತೊಡಗಿದೆ. ಈ ಸಂಖ್ಯೆ ಹೆಚ್ಚಿದಂತೆಲ್ಲ ನದಿ, ತೊರೆಗಳ ಮರಳಿನ ರಾಶಿ ಕರಗತೊಡಗಿದೆ. ಇಲ್ಲಿಂದ ಮರಳು ನೇರ ಬೆಂಗಳೂರು ಸೇರುತ್ತಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಯಲ್ಲಿ ಅಕ್ರಮ ಮರಳು ದಂಧೆ ತಡೆಯಲು ಹೋದ ಗ್ರಾಮ ಸೇವಕ ವಿಜಯ್‌ಕುಮಾರ್ ಅವರನ್ನು ಲಾರಿ ಮಾಲೀಕರು ಮರಳು ಗುಂಡಿಯಲ್ಲೇ ಮುಚ್ಚಿ ಕೊಲೆ ಮಾಡಿದ ಘಟನೆ ನಡೆದೂ ಎರಡು ವರ್ಷವಾದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಪ್ರಕರಣದ ಮರು ತನಿಖೆಗೆ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಮಾಡಿದ ಆದೇಶಕ್ಕೆ ಬೆಲೆಯೇ ಇಲ್ಲವಾಗಿದೆ.ಇಷ್ಟೇ ಅಲ್ಲದೆ ನೀರು ತುಂಬಿದ ಮರಳು ಗುಣಿಗಳಲ್ಲಿ ಬಿದ್ದು, ಮರಳು ದಿಬ್ಬ ಕುಸಿದು ಎರಡು ವರ್ಷದಿಂದ ಈಚೆಗೆ ಹತ್ತಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇಂಥ ಪ್ರಕರಣಗಳನ್ನು `ಕಾಲು ಜಾರಿ ಬಿದ್ದು ಆಕಸ್ಮಿಕ ಸಾವು' ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಅಕ್ರಮ ಮರಳು ಗಣಿಗಾರಿಕೆ ರಕ್ಷಣೆಗೆ ನಿಲ್ಲತೊಡಗಿದ್ದಾರೆ.ಕುಣಿಗಲ್ ದೊಡ್ಡಕೆರೆಯಲ್ಲಿ ಇಡೀ ರಾತ್ರಿ ಜೆಸಿಬಿ ಬಳಸಿ ಮರಳು ರಾಶಿ ಮಾಡಲಾಗುತ್ತದೆ. ಕೊಡವತ್ತಿ ಗ್ರಾಮ ಎಡಬಿಡದೇ ಮರಳು ಗಣಿಗಾರಿಕೆಯ ಚಟುವಟಿಕೆಯ ಕೇಂದ್ರವಾಗಿದೆ. ಕೊಡವತ್ತಿಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಬೆಂಗಳೂರು, ಮಾಗಡಿ, ಚನ್ನಪಟ್ಟಣಕ್ಕೆ ಮರಳು ರವಾನೆಯಾಗುತ್ತಿದೆ.ಎರಡು ವರ್ಷಗಳಿಂದ ಬರಗಾಲದ ಕಾರಣ ಕೆರೆಗಳಲ್ಲಿ ನೀರು ಇಂಗಿದ್ದು ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ಕೈಗೆ ಹರಿವಾಣ ನೀಡಿದಂತಾಗಿದೆ. ಅಕ್ರಮದಲ್ಲಿ ಬಹುತೇಕ ಗ್ರಾಮ ಪಂಚಾಯಿತಿಗಳ ಸದಸ್ಯರು, ಇಲ್ಲವೇ ಕೆಲ ಶಾಸಕರ ಹಿಂಬಾಲಕರೇ ಇರುವ ಕಾರಣ ಅಕ್ರಮದ ವಿರುದ್ಧ ದ್ವನಿ ಎತ್ತದಂತೆ ವ್ಯವಸ್ಥಿತವಾಗಿ ತಡೆಯಲಾಗಿದೆ.ಬರಗಾಲದಿಂದ ತತ್ತರಿಸುತ್ತಿರುವ ಜಿಲ್ಲೆಯ ಮೇಲೆ ಅಕ್ರಮ ಮರಳು ಗಣಿಗಾರಿಕೆ ಮತ್ತೊಂದು ಬರೆ ಎಳೆದಂತಾಗಿದೆ. ಮರಳು ಗಣಿಗಾರಿಕೆ ಪ್ರದೇಶಗಳ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿಯುತ್ತಿದೆ. ಬೇಕಾಬಿಟ್ಟಿ ಮರಳು ತೆಗೆಯಬಾರದೆಂಬ ನಿಯಮವಿದ್ದರೂ ಅದರ ಪಾಲನೆ ನಡೆಯುತ್ತಿಲ್ಲ ಎಂದು ಹಿರಿಯ ಭೂ ವಿಜ್ಞಾನಿಯೊಬ್ಬರು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.ಈ ಅಕ್ರಮ ತಡೆಗಟ್ಟುವಂತೆ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ.ಅಕ್ರಮ ಗಣಿಗಾರಿಕೆ ಪ್ರದೇಶಗಳ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಅವರಿಗೆ ದೂರು ನೀಡಿದರೆ  ಆ ದೂರನ್ನು ಸಂಬಂಧಿಸಿದ ಠಾಣೆಗೆ ರವಾನಿಸಿ ಕೈತೊಳೆದುಕೊಳ್ಳುತ್ತಾರೆ. ಉನ್ನತ ಪೊಲೀಸ್ ಅಧಿಕಾರಿ ವರ್ತನೆಯೇ ಹೀಗಾದರೆ ಇನ್ನೂ ಕೆಳಹಂತದ ಪೊಲೀಸರು ಈ ಅಕ್ರಮ ತಡೆಗಟ್ಟಲು ಸಾಧ್ಯವೆ? ಎಂಬ ಪ್ರಶ್ನೆ ಅವರದು.ಅಕ್ರಮ ಮರಳು ಗಣಿಗಾರಿಕೆಯಿಂದ ಗುಪ್ತವಾಗಿ ಹಫ್ತಾ ವಸೂಲು ಮಾಡುತ್ತಿದ್ದು, ಹಿರಿಯ ಅಧಿಕಾರಿಗಳು ಪಾಲು ಪಡೆಯುತ್ತಿದ್ದಾರೆ ಎಂಬ ಗುಸುಗುಸು ಅನೇಕ ಸಲ ಕೇಳಿಬಂದಿತ್ತು. ಮರಳು ಗಣಿಗಾರಿಕೆಗೆ ತಡೆ ಹಾಕದೆ ರಾಜಾರೋಷವಾಗಿ ಬಿಟ್ಟಿರುವುದನ್ನು ನೋಡಿದರೆ ಇದು ನಿಜ ಇರಬಹುದೆಂಬ ಅನುಮಾನ ಕೂಡ ಸಾರ್ವಜನಿಕರನ್ನು ಕಾಡುತ್ತಿದೆ

ಬೆಂಗಳೂರಿಗೆ ಸಿಂಹಪಾಲು

ಸ್ಥಳೀಯವಾಗಿ ಗೃಹ ನಿರ್ಮಾಣ, ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಬೇಕಾಗುವ ಮರಳಿನ ಪ್ರಮಾಣ ಹೆಚ್ಚೇನಿಲ್ಲ. ಆದರೆ ಇಲ್ಲಿ ಸಂಗ್ರಹಿಸುವ ಬಹುತೇಕ ಮರಳು ಬೆಂಗಳೂರಿಗೆ ಸಾಗಣೆಯಾಗುತ್ತದೆ. ಅಲ್ಲಿನ ನಿರ್ಮಾಣ ಚಟುವಟಿಕೆ, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಳಿಗೆ ಬೇಡಿಕೆ ಹೆಚ್ಚು ಎನ್ನುವುದೇ ಇದಕ್ಕೆ ಕಾರಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.