ಸೋಮವಾರ, ಮೇ 17, 2021
30 °C

ಇಳಿದ ನೀರಿನ ಮಟ್ಟ: ಸಮಸ್ಯೆ ಭೀತಿ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ತಾಲ್ಲೂಕಿನಲ್ಲಿನ ಜಮೀನಿನಲ್ಲಿನ ನೀರಿನ ಮಟ್ಟ ಕೆಳಗೆ ಹೋಗುತ್ತಿರುವ ಕಾರಣ ಬಾವಿಗಳು ವಿಫಲವಾಗುತ್ತಿವೆ. ಈಗಲೇ ಕೆಲ ಗ್ರಾಮಗಳಲ್ಲಿನ ಕೊಳವೆ ಬಾವಿಗಳಲ್ಲಿನ ನೀರು ಬರಿದಾಗಿದ್ದು  ಮುಂದಿನ ತಿಂಗಳಲ್ಲಿ ನೀರಿನ ಸಮಸ್ಯೆ ಭೀಕರವಾಗುವ ಭೀತಿ ಆವರಿಸಿದೆ.ಮೊದಲು 300 ರಿಂದ 400 ಅಡಿ ಕೊಳವೆ ಬಾವಿ ಕೊರೆದರೆ ಸಾಕಷ್ಟು ನೀರು ಇರುತ್ತಿತ್ತು. ಆದರೆ ಈಚೆಗೆ ಕೆಲ ಸ್ಥಳಗಳಲ್ಲಿ 6.50 ಅಡಿಗಳಷ್ಟು ಆಳದವರೆಗೆ ಕೊರೆಯಬೇಕಾಗುತ್ತಿದೆ. ಇದುವರೆಗೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಭುಗಿಲೆದ್ದಿರಲಿಲ್ಲ. ಆದರೆ ಒಂದು ವಾರದಿಂದ ಕೊಳವೆ ಬಾವಿಗಳಲ್ಲಿನ ನೀರು ಕಡಿಮೆಯಾಗಿದ್ದರಿಂದ ಮೋಟರ್‌ಗಳು ನಡೆಯುತ್ತಿಲ್ಲ. ಆದ್ದರಿಂದ ನೀರಿನ ಪೂರೈಕೆ ಸಮರ್ಪಕವಾಗಿ ಆಗದೆ ಜನರು ಪರದಾಡಬೇಕಾಗುತ್ತಿದೆ.ಗದ್ಲೇಗಾಂವ, ಹತ್ತರ್ಗಾ, ಕಿಟ್ಟಾ, ಹಾರಕೂಡಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿರುವ ಬಗ್ಗೆ ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ. ಬರೀ ಕುಡಿಯುವ ನೀರಿನ ಸಮಸ್ಯೆ ಅಷ್ಟೇಅಲ್ಲ; ಹೊಲಗಳಲ್ಲಿನ ಬಾವಿಗಳು ಸಹ ಒಣಗುತ್ತಿರುವ ಕಾರಣ ಬೆಳೆಗಳಿಗೆ ನೀರು ಹರಿಸಲಾಗುತ್ತಿಲ್ಲ. ರೈತರು ಸಾಲ ಮಾಡಿ ಬಾವಿ ಕೊರೆಯುವ ಪ್ರಯತ್ನ ನಡೆಸಿದ್ದಾರಾದರೂ ನೀರು ಹತ್ತದೆ ಕಷ್ಟಕ್ಕೊಳಬೇಕಾಗುತ್ತಿದೆ.ಇಲ್ಲಿನ ಪಿಕಾರ್ಡ್ ಬ್ಯಾಂಕ್‌ನಿಂದ ಸಾಲ ಪಡೆದು ಕೊರೆದ ಸುಮಾರು 375 ಬಾವಿಗಳು ವಿಫಲವಾಗಿವೆ ಎಂದು ತಿಳಿಸಲಾಗಿದೆ. ಈ ಕಾರಣ ಪ್ರತಿ ರೈತನಮೇಲೆ 2.50 ಲಕ್ಷ ರೂಪಾಯಿ ಸಾಲದ ಹೊರೆ ಬಿದ್ದಿದ್ದರಿಂದ ಯಾರೂ ಸಾಲ ಮರುಪಾವತಿಸಿಲ್ಲ ಆದ್ದರಿಂದ ಬ್ಯಾಂಕ್‌ಗೂ ನಷ್ಟ ಆಗಿದೆ.ವಿಫಲ ಬಾವಿಗಳ ಸಹಾಯಧನ ಶಿಘ್ರ ಬಿಡುಗಡೆ ಮಾಡಿ ರೈತರನ್ನು ಸಂಕಟದಿಂದ ಮುಕ್ತ ಮಾಡಬೇಕು ಎಂದು ಬ್ಯಾಂಕಿನ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಇದುವರೆಗೆ ಅವರು ಕ್ರಮ ಕೈಗೊಂಡಿಲ್ಲ.

ನೀರಿನ ಸಮಸ್ಯೆ ಬಗೆಹರಿಸಲು ತಾಲ್ಲೂಕಿಗೆ ಅಭಾವ ಪರಿಹಾರ ನಿಧಿಯಲ್ಲಿ 1.20 ಕೋಟಿ ರೂಪಾಯಿ ಮಂಜೂರಾಗಿದ್ದು ಈಗಾಗಲೇ 30 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ 14 ಸ್ಥಳಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲಾಗಿದೆ.ಮುಖ್ಯಮಂತ್ರಿಗಳ ಅನುದಾನದಲ್ಲಿ ಇಲ್ಲಿನ ತಾಲ್ಲೂಕು ಪಂಚಾಯಿತಿಯಿಂದ 14 ಗ್ರಾಮಗಳಲ್ಲಿ ಮತ್ತು 10 ಶಾಲೆಗಳಲ್ಲಿ ಕೊಳವೆ ಬಾವಿ ಕೊರೆಯಲಾಗಿದೆ. ಇವುಗಳಲ್ಲಿ 4 ಬಾವಿಗಳು ನೀರು ಇಲ್ಲದೆ ವಿಫಲವಾಗಿವೆ ಎಂದು ತಿಳಿಸಲಾಗಿದೆ.ಭೂಗರ್ಭದಲ್ಲಿನ ನೀರಿನ ಮಟ್ಟ ಕೆಳಗೆ ಹೋಗಿರುವ ಕಾರಣ ಬಹಳಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗಿರುವುದು ನಿಜ. ಜತೆಯಲ್ಲಿ ಕೆಲವೆಡೆ ಸರ್ಕಾರದ ಹಣ ಕೊಳ್ಳೆ ಹೊಡೆಯುವುದಕ್ಕಾಗಿ ಕೃತಕ ಸಮಸ್ಯೆ ಸೃಷ್ಟಿಸಿರುವ ಬಗ್ಗೆಯೂ ಜನರು ದೂರಿದ್ದಾರೆ. ಸಾಕಷ್ಟು ನೀರಿದ್ದರೂ ವಾಟರ್‌ಮೆನ್‌ಗಳು ಸಮಯಕ್ಕೆ ನೀರು ಬಿಡುವುದಿಲ್ಲ.ಪೈಪಲೈನ್ ಒಡೆದಿರುವ ಅಥವಾ ಇತರೆ ನೆಪದಿಂದ ನಳಗಳಿಗೆ ನೀರು ಸರಬರಾಜು ಮಾಡುವುದಿಲ್ಲ ಎಂದೂ ಗ್ರಾಮಸ್ಥರು ಹೇಳುತ್ತಾರೆ. ಸಂಬಂಧಿತರು ಪ್ರತಿ ಗ್ರಾಮದಲ್ಲಿನ ನೀರು ಸರಬರಾಜಿನ ಬಗ್ಗೆ ಪರಿಶೀಲನೆ ನಡೆಸಿ ಸಮಸ್ಯೆ ಉದ್ಭವಿಸದಂತೆ ಜಾಗೃತೆ ವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.