ಶುಕ್ರವಾರ, ಜುಲೈ 30, 2021
28 °C

ಈಗ ಒಡಲಾಳದ ಗುಟ್ಟು ಬಿಚ್ಚಿದ ಶಂಕರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗ ಒಡಲಾಳದ ಗುಟ್ಟು ಬಿಚ್ಚಿದ ಶಂಕರ!

ಕಾಸರಗೋಡು: ನಾಲ್ಕೂವರೆ ದಶಕಗಳ ಹಿಂದೆ ಕಾಸರಗೋಡಿನ ನೆಲವನ್ನು ನರಕಸದೃಶಗೊಳಿಸಿದ ಮಾರಕ ವಿಷಗಳ ಪೈಕಿ ಎಂಡೋಸಲ್ಫಾನ್ ಕೊನೆಗೂ ಜಾಗತಿಕ ನಿಷೇಧಕ್ಕೆ ಒಳಗಾಗಿದೆ.ಜೀವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದ ಎಂಡೋಸಲ್ಫಾನ್ ಕಾಸರಗೋಡಿನ 15 ಗ್ರಾಮ ಪಂಚಾಯಿತಿಗಳಲ್ಲಿ 15ಸಾವಿರಕ್ಕೂ ಅಧಿಕ ಮಂದಿಯಲ್ಲಿ ಮಾನಸಿಕ ಮತ್ತು ವಿವಿಧ ದೈಹಿಕ ರೋಗಗಳನ್ನು ಸೃಷ್ಟಿಸಿತು.ಎಣ್ಮಕಜೆ ಗ್ರಾಮ ಪಂಚಾಯಿತಿಯ ಸ್ವರ್ಗ, ವಾಣೀನಗರ ಮತ್ತು ಏತಡ್ಕ- ಈ ಗ್ರಾಮೀಣ ಪ್ರದೇಶಗಳಲ್ಲಿ ಪುಟ್ಟ ಕ್ಲಿನಿಕ್ ಇಟ್ಟುಕೊಂಡು ಖಾಸಗಿ ವೈದ್ಯಕೀಯ ಸೇವೆ ಒದಗಿಸುತ್ತಿದ್ದ ಡಾ.ಮೋಹನ್ ಕುಮಾರ್ ಏತಡ್ಕ ಅವರು ತಮ್ಮಲ್ಲಿಗೆ ಬಂದ ರೋಗಿಗಳ ಲಕ್ಷಣಗಳಿಂದ ಎಚ್ಚೆತ್ತುಕೊಂಡರು.ಇದು ಎಂಡೋಸಲ್ಫಾನ್‌ನ ಪರಿಣಾಮ ಎಂದು ‘ಡೌನ್ ಟು ಅರ್ತ್’ನಲ್ಲಿ ಮೊದಲ ಬಾರಿ ಲೇಖನ ಬರೆದು ಪ್ರಜ್ಞಾವಂತರನ್ನು ಎಚ್ಚರಿಸಿದರು. 1982ರಲ್ಲಿ ‘ಕೇರಳ ಮೆಡಿಕಲ್ ಜರ್ನಲ್’ನಲ್ಲಿ ‘ಸಮ್‌ಥಿಂಗ್ ಈಸ್ ರಾಂಗ್’ ಎಂಬ ಲೇಖನದ ಮೂಲಕ ಜನರನ್ನು ಪ್ರಥಮ ಬಾರಿಗೆ ಬಡಿದೆಬ್ಬಿಸಿದರು. ಇಷ್ಟಾದರೂ ಸ್ಥಳೀಯರು ಜಟಾಧಾರಿ ದೈವದ ಸಿಟ್ಟಿನಿಂದ ತಮಗೆ ವಿಚಿತ್ರ ರೋಗಗಳು ಕಾಣಿಸಿಕೊಳ್ಳುತ್ತಿದೆ ಎಂದೇ ಭ್ರಮಿಸಿದ್ದರು.

 

ವಿಷದ ವರ್ತುಲ: 1962-63ರಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರ್ಲ ವಿಭಾಗದಲ್ಲಿ ‘ಕ್ಯಾಶ್ಯೂ ಪ್ರಾಜೆಕ್ಟ್ ಆಫ್ ಕಾಸರಗೋಡು’ ಗೇರು ಬೀಜ ಕೃಷಿಗೆ ಸಮೀಕ್ಷೆ ನಡೆಸಿತು. ಅದೇ ಸಾಲಿನಲ್ಲಿ ಗೇರು ಬಿತ್ತನೆ ಮಾಡಿದಾಗ ಹಂದಿ ಇತ್ಯಾದಿ ಪ್ರಾಣಿಗಳು ಬಿತ್ತನೆ ಬೀಜಗಳನ್ನು ತಿಂದು ಹಾನಿ ಮಾಡಿತು. ಇದನ್ನು ತಡೆಯಲು ‘ನಲ್ಪಾಂಬರ’ (ಎಂಡ್ರಿನ್) ಎಂಬ ವಿಷವನ್ನು ತೆಂಗಿನ ಹಿಂಡಿಯಲ್ಲಿ ಬೆರೆಸಿ ಮತ್ತೆ ಬಿತ್ತನೆ ಮಾಡಲಾಯಿತು. ಇದರ ಪರಿಣಾಮ ಪರಿಸರದ ಹತ್ತು ಹಲವು ಪ್ರಾಣಿ ಸಂಪತ್ತು ನಾಶವಾಯಿತು. ‘ತೈಡಾನ್’ ಎಂಬ ಮತ್ತೊಂದು ವಿಷಕಾರಿ ವಸ್ತುವನ್ನೂ 1963ರಿಂದ 1970ರ ವರೆಗೆ ಗೇರು ಕೃಷಿಗೆ ಬಳಸಲಾಗಿತ್ತು.ಇದರ ಜತೆಗೆ ಅದೇ ವರ್ಷದಿಂದ ಎಂಡೋಸಲ್ಫಾನ್ ಕೀಟನಾಶಕ ಸಿಂಪಡಿಸಲು ಪ್ರಾರಂಭಿಸಲಾಗಿತ್ತು ಎಂದು 1964ರಲ್ಲಿ ತೋಟಗಾರಿಕಾ ನಿಗಮದಲ್ಲಿ ಕಾರ್ಮಿಕರಾಗಿ ಸೇರಿದ್ದ ಕೆ.ಶಂಕರ ಕಜಂಪಾಡಿ ‘ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದರು.ತೈಡಾನ್ ಅನ್ನು ನುಸಿಕೀಟದ ಬಾಧೆಗೆ ಬಳಸಿದರೆ, ಎಂಡೋಸಲ್ಫಾನ್ ಗೇರಿನ ಚಿಗುರಿಗೆ ಬಾಧಿಸುವ ರೋಗಗಳಿಗೆ ಬಳಸಲಾಗಿತ್ತು. ಬೆನ್ನಿಗೆ ಕಟ್ಟುವ ಹಂಡೆ ಮೂಲಕ ಇದನ್ನು ಸಿಂಪಡಿಸಲಾಗುತ್ತಿತ್ತು. 1970-77ರವರೆಗೆ ರೆಕರ್/ ಗಟೋರ್ ಪಂಪ್ ಬಳಸಿ ಈ ಮಾರಕ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿತ್ತು.1976ರಲ್ಲಿ ‘ಕ್ಯಾಶ್ಯೂ ಪ್ರಾಜೆಕ್ಟ್ ಆಫ್ ಕಾಸರಗೋಡು’ ಗೇರು ತೋಟವನ್ನು ತೋಟಗಾರಿಕಾ ನಿಗಮಕ್ಕೆ ಹಸ್ತಾಂತರಿಸಿತು. 1977ರಲ್ಲಿ ನಿಗಮದ ಬೋವಿಕ್ಕಾನ ವಿಭಾಗ ಕೇಂದ್ರೀಕರಿಸಿ ಹೆಲಿಕಾಪ್ಟರ್ ಮೂಲಕ ಮೊತ್ತ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಎಂಡೋಸಲ್ಫಾನ್ ಸಿಂಪಡಿಸಲಾಗಿದೆ ಎಂದು ಅವರು ಹೇಳುತ್ತಾರೆ.ಪೆರ್ಲ ವಿಭಾಗದಲ್ಲಿ 1978 ನವೆಂಬರ್‌ನಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಆರಂಭವಾಯಿತು. ಏಳು ದಿನಗಳ ವರೆಗೆ ಸಿಂಪಡಿಸಿದ ಪರಿಣಾಮ ಬೆಟ್ಟ-ಗುಡ್ಡೆಗಳಲ್ಲಿ ಮೇಯುತ್ತಿದ್ದ ದನ-ಕರುಗಳು ಸತ್ತು ಹೋಯಿತು. ನಿಗಮದ 13 ಕಾರ್ಮಿಕರೂ ಮೃತಪಟ್ಟಿದ್ದನ್ನು ಶಂಕರ ಈಗ ಸ್ಮರಿಸುತ್ತಾರೆ.ಎಂಡೋಸಲ್ಫಾನ್ ಸಿಂಪಡಣೆಗೆ ಸಂಬಂಧಿಸಿ ಪಾಲಿಸಬೇಕಿದ್ದ ನೀತಿ- ನಿಯಮಾವಳಿಗಳನ್ನು ಕೇವಲ ಒಂದು ವರ್ಷ ಮಾತ್ರ ನಿಗಮ ಪಾಲಿಸಿತ್ತು. ಎರಡನೇ ವರ್ಷ ಜನರು ಬೇಕಿದ್ದರೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಿತ್ತು. ಇದರ ಪರಿಣಾಮ ಜನರಲ್ಲಿ ವ್ಯಾಪಕವಾಗಿ ಚರ್ಮರೋಗಗಳು ಕಂಡುಬಂತು ಎನ್ನುತ್ತಾರೆ.ಹೆಲಿಕಾಪ್ಟರ್‌ನಲ್ಲಿ ಒಂದು ಬಾರಿ ಎಂಡೋಸಲ್ಫಾನ್ ಸಿಂಪಡಿಸುವಾಗ 240ಲೀ. ಬಳಸಲಾಗುತ್ತಿತ್ತು. ಇದು 3 ದಿನಗಳ ವರೆಗೆ ಮುಂದುವರಿಯುತ್ತಿತ್ತು. ಈ ರೀತಿ ವರ್ಷದಲ್ಲಿ 4ಬಾರಿ (ಚಿಗುರುವಾಗ, ಹೂ ಬಿಡುವಾಗ, ಮಿಡಿಗೆ, ಬೆಳೆದ ಗೇರಿಗೆ) ಸಿಂಪಡಿಸಲಾಗುತ್ತಿತ್ತು.1992ರಲ್ಲಿ ತೋಟಗಾರಿಕಾ ನಿಗಮದ ಕೆಲಸ ತೊರೆದ ಶಂಕರ ಕಜಂಪಾಡಿ ಅವರಿಗೆ ಎಂಡೋಸಲ್ಫಾನ್ ಬಾಧಿತ ರೋಗಿಗಳನ್ನು ಜಿಲ್ಲಾಡಳಿತ ಗುರುತಿಸಿದ ರೀತಿಗೆ ಆಕ್ರೋಶವಿದೆ. ಸ್ಥಳೀಯಾಡಳಿತ ವ್ಯವಸ್ಥೆ ಮತ್ತು ಎಂಡೋಸಲ್ಫಾನ್ ಹೋರಾಟಗಾರರಿಗೆ ಎಂಡೋಸಲ್ಫಾನ್ ಕೀಟನಾಶಕ ಸಿಂಪಡಿಸಿದ ಸ್ಥಳ ಮತ್ತು ಈ ಸ್ಥಳದಲ್ಲಿ ರೋಗ ಬಾಧಿಸಿದ ರೋಗಿಗಳ ಬಗ್ಗೆ ಸರಿಯಾದ ಅರಿವು ಇಲ್ಲ ಎಂದು ಕಿಡಿಕಾರುತ್ತಾರೆ.ಎಂಡೋಸಲ್ಫಾನ್ ದುಷ್ಪರಿಣಾಮಕ್ಕೆ ಒಳಗಾಗದವರಿಗೆ ಸರ್ಕಾರದ ಸಹಾಯ ಲಭಿಸಿದೆ. ಆದರೆ ನಿಜವಾದ ರೋಗಿಗಳನ್ನು ಗುರುತಿಸದೆ ನಿರ್ಲಕ್ಷಿಸಿ ಅಮಾನವೀಯವಾಗಿ ರಾಜಕೀಯ ನಡೆಸಲಾಗಿದೆ ಎಂದು ಆರೋಪಿಸುತ್ತಾರೆ.ಪೆರ್ಲ ವಿಭಾಗದಲ್ಲಿ ಕಜಂಪಾಡಿ, ಸರ್ಪಮಲೆ, ಪುತ್ರಕಳ, ಪೆರಿಯಾಲ್, ಏನೆಂಕೂಡ್ಲು, ವಳಕುಂಜ, ಉಕ್ಕಿನಡ್ಕ, ಕುಡ್ವ, ಇಡಿಯಡ್ಕ, ಬಜಕೂಡ್ಲು, ಸೇರಾಜೆ, ಕುರಿಯಡ್ಕ, ಖಂಡಿಗೆ, ನಲ್ಕ, ಅಡ್ಕಸ್ಥಳ, ಅಡ್ಯನಡ್ಕ, ಸಾಯ, ಕುಡುತ್ತಡ್ಕ, ಸ್ವರ್ಗ, ಒಡ್ಯ, ಗಾಳಿಗೋಪುರ, ಪಡ್ರೆ ಎಂಬಲ್ಲಿ ಎಂಡೋಸಲ್ಫಾನ್ ಸಿಂಪಡಿಸಲಾಗಿದೆ ಎಂದು ಕಂಠಪಾಠ ಮಾಡಿದಂತೆ ಹೇಳುವ ಶಂಕರ ಅವರು, ಕಜಂಪಾಡಿ, ಸರ್ಪಮಲೆ, ಪುತ್ರಕಳದಲ್ಲಿ ಎಂಡೋಸಲ್ಫಾನ್ ರೋಗಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಕಜಂಪಾಡಿಯಲ್ಲಿ (ಬಡವ-ಬಲ್ಲಿದ ಎಂಬ ವ್ಯತ್ಯಾಸವಿಲ್ಲದಂತೆ) ರೋಗವಿಲ್ಲದ ಮನೆಯೇ ಇಲ್ಲ ಎನ್ನುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.