ಶುಕ್ರವಾರ, ಮೇ 27, 2022
31 °C

ಈಗ ಯಥಾ ಪ್ರಜಾ ತಥಾ ರಾಜಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಗಿನ ರಾಜಕಾರಣವೇ ಬೇರೆ ಆಗಿತ್ತು. ಸ್ವಾತಂತ್ರ್ಯ ಹೋರಾಟ ಸೇರಿದಂತೆ ವಿವಿಧ ಚಳವಳಿಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಂಡವರು ನಾಯಕರಾಗಿದ್ದರು. ಅವರಿಗೆ ಆದರ್ಶವಿತ್ತು. ಮೌಲ್ಯದ ಪರಿವೆ ಇತ್ತು. ಅವರಿಂದ ಸ್ಫೂರ್ತಿ ಪಡೆದ ಜನಸಮೂಹವೂ ಧುರೀಣರ ಹಾದಿಯನ್ನೇ ಅನುಸರಿಸಿತ್ತು. ವಿಶ್ವಾಸವೇ ಎಲ್ಲವೂ ಆಗಿತ್ತು...ಸ್ವಾತಂತ್ರ್ಯಾನಂತರದ ಎರಡು ದಶಕಗಳ ರಾಜಕಾರಣ ನೆನೆಯುವಾಗ 90 ವರ್ಷ ವಯಸ್ಸಿನ ವಸಂತರಾವ್ ಎಲ್. ಪಾಟೀಲ ಅವರ ಮುಖ ಅರಳಿತು.ಈಗ ತದ್ವಿರುದ್ಧದ ಸ್ಥಿತಿ. ಯಾರ ಬಗ್ಗೆ ಯಾರಿಗೂ ನಂಬಿಕೆ ಇಲ್ಲ. ಆರಿಸುವ ಜನರೇ ಹಾದಿ ತಪ್ಪಿದ್ದಾರೆ. `ಯಥಾ ಪ್ರಜಾ ತಥಾ ರಾಜಾ~ ಎಂಬಂತಾಗಿದೆ. ವ್ಯವಸ್ಥೆ ಇಡಿಯಾಗಿ ಕೆಟ್ಟಿದೆ. ತೇಪೆ ಹಚ್ಚುವುದೇ ಕಷ್ಟವೆಂಬಂತಾಗಿದೆ ಎಂದರು ಪಾಟೀಲರು.ಕರ್ನಾಟಕ ವಿಧಾನಮಂಡಲಕ್ಕೆ ಈಗ 60 ವರ್ಷ. 1952ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದ ರಾಯಬಾಗದ ಈ ಧುರೀಣ, ರಾಜ್ಯ ಪುನರ್‌ವಿಂಗಡಣೆ ನಂತರ ಮೈಸೂರು ರಾಜ್ಯ ವಿಧಾನಸಭೆಗೆ ಬಂದರು. ವಜ್ರಮಹೋತ್ಸವ ಅಂಗವಾಗಿ ಸನ್ಮಾನಿತರಾಗುತ್ತಿರುವ ಐವರು ಶಾಸಕರಲ್ಲಿ ಇವರೂ ಒಬ್ಬರು. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ `ಪ್ರಜಾವಾಣಿ~ ಅವರನ್ನು ಮಾತಿಗೆಳೆದಾಗ ನೆನಪಿನ ಬುತ್ತಿ ಬಿಚ್ಚಿಕೊಂಡಿತು.ಬದಲಾವಣೆಗೆ ನಾಂದಿ ಹಾಡಿದ ಅರಸು: `
ವೀರೇಂದ್ರ ಪಾಟೀಲರ ಮೊದಲ ಅವಧಿಯ (1972) ಸರ್ಕಾರದವರೆಗೂ ಎಲ್ಲವೂ ಚೆನ್ನಾಗಿತ್ತು. ಹೊಣೆ ಅರಿತ ಆಡಳಿತ ಇತ್ತು. ಮೊದಲ ತಲೆಮಾರಿನ ಜನಪ್ರತಿನಿಧಿಗಳ ಅವಧಿ ಮುಗಿದ ಬಳಿಕ ಕ್ಷೀಣದೆಸೆ ಶುರುವಾಯಿತು. ವೀರೇಂದ್ರರ ನಂತರ ಮುಖ್ಯಮಂತ್ರಿ ಪಟ್ಟ ಏರಿದ್ದು ದೇವರಾಜ ಅರಸು. ಅವರದು ಒಂದು ಬಗೆಯ ನಿರಂಕುಶ ಧೋರಣೆ. ವ್ಯಕ್ತಿಗತವಾಗಿ ನನಗೆ ತೊಂದರೆ ಕೊಟ್ಟರು. ಆದರೆ, ಹಿಂದುಳಿದ ವರ್ಗಗಳಿಗೆ ನಿಜವಾದ ಅರ್ಥದಲ್ಲಿ ದನಿಯಾದರು. ರಾಜ್ಯ ರಾಜಕಾರಣದಲ್ಲಿ ಬದಲಾವಣೆಗೆ ನಾಂದಿ ಹಾಡಿದರು~ ಎಂದು ವಿಶ್ಲೇಷಿಸಿದರು.ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಹೆಡೆಬಿಚ್ಚಿತು ಎಂಬ ಆರೋಪದ ಬಗ್ಗೆ ಗಮನ ಸೆಳೆದಾಗ, `ಜನರಲ್ಲಿ ಇಂತಹದೊಂದು ಗುನುಗುನು ಶುರುವಾಗಿದೆ ಅಂತ ಸಚಿವ ಸಂಪುಟ ಸಭೆಯಲ್ಲಿ ನಾನೊಮ್ಮೆ ಪ್ರಸ್ತಾಪಿಸಿದ್ದೆ. `ನಾನಾಗಲಿ, ನೀವಾಗಲಿ ಇಲ್ಲಿರುವುದು ಇಂದಿರಾ ಗಾಂಧಿ ಅವರ ಕೃಪೆಯಿಂದ. ಅವರು ಕೂಡ ಇಂತಹ ಆರೋಪಗಳಿಂದ ಹೊರತಲ್ಲ~ ಎಂದು ಅರಸು ಉತ್ತರಿಸಿದ್ದರು” ಎಂದು ಸ್ಮರಿಸಿದರು.ಪಾಟೀಲರು ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರೊಂದಿಗೂ ರಾಜಕೀಯ ಸಂಪರ್ಕ ಹೊಂದಿದ್ದವರು. ಒಂದು ಅವಧಿಗೆ (1962) ಸಂಸತ್ತಿಗೂ ಆರಿಸಿಹೋಗಿದ್ದರು. ವೀರೇಂದ್ರ ಪಾಟೀಲ, ಅರಸು, ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಈ ಮೂವರೂ ಮುಖ್ಯಮಂತ್ರಿಗಳೊಂದಿಗೆ ಜಗಳ ಆಡಿದವರು.ಬೇರೆ ಬೇರೆ ಕಾರಣಗಳಿಗಾಗಿ ನಾಲ್ಕೂ ಸಲ (ಹೆಗಡೆ ಅವಧಿಯಲ್ಲಿ ಎರಡು ಬಾರಿ ಸಚಿವರಾಗಿದ್ದರು) ಮಧ್ಯದಲ್ಲೇ ಸಂಪುಟ ತೊರೆದವರು. ಬೆಳಗಾವಿ ಜಿಲ್ಲೆಯ ರಾಯಬಾಗ ಭಾಗದಲ್ಲಿ ಚುನಾವಣೆ ವೇಳೆ ಈಗಲೂ `ಚಕ್ರ~ ತಿರುಗಿಸಬಲ್ಲ ಗಟ್ಟಿಗರು.ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ವೀರೇಂದ್ರರಿಗೆ ದೂರದೃಷ್ಟಿ ಇತ್ತು. ರಾಜ್ಯದ ಸಂಪನ್ಮೂಲ ಮಿತವಾಗಿದ್ದರೂ ಅದರ ಬಳಕೆ ಸರಿಯಾದ ರೀತಿಯಲ್ಲಿ ಆಗುತ್ತಿತ್ತು. ಬದುಕು ಈಗಿನಂತೆ ವೇಗ ಪಡೆದಿರಲಿಲ್ಲ. ಜನರ ಅಪೇಕ್ಷೆಗಳೂ ಹಿತಮಿತವಾಗಿದ್ದವು. ಜಾತೀಯತೆ ಈಗಿನಂತೆ ಅಸಹ್ಯ ರೂಪ ಪಡೆದಿರಲಿಲ್ಲ ಎಂದು ತುಲನಾತ್ಮಕವಾಗಿ ವ್ಯಾಖ್ಯಾನಿಸಿದರು.ರಾಜ್ಯ ಶಾಸನಸಭೆಗಳು ಉತ್ತಮ ನಡವಳಿಕೆಗೆ ಹೆಸರಾಗಿದ್ದವು. ಸಭಾಧ್ಯಕ್ಷ ಸ್ಥಾನಕ್ಕೆ ಬಹಳ ಗೌರವ ಇತ್ತು. ವಿರೋಧ ಪಕ್ಷಗಳು ಸದಾ ಎಚ್ಚರದಿಂದ ಇರುತ್ತಿದ್ದವು. ಶಾಂತವೇರಿ ಗೋಪಾಲಗೌಡ ಅವರಂತಹ ಅತ್ಯುತ್ತಮ ಸಂಸದೀಯ ಪಟುಗಳು ಇದ್ದರು. ಆರೋಪಗಳಿಗೆ ಆಧಾರಗಳು ಇರುತ್ತಿದ್ದವು. ಮಾತಿಗೆ, ನಿಯಮಗಳಿಗೆ ಮನ್ನಣೆ ಇತ್ತು. ಸಚಿವರು ಸಿದ್ಧತೆ ಮಾಡಿಕೊಂಡು ಸದನಕ್ಕೆ ಬರುತ್ತಿದ್ದರು.ಶಾಸಕರು ಅಧ್ಯಯನಾಸಕ್ತರಾಗಿದ್ದರು. ಅಪರೂಪಕ್ಕೆ ಒಮ್ಮೆ ಗದ್ದಲ-ವಾಗ್ವಾದ ಆಗಿದ್ದುಂಟು. ಆದರೆ, ಈಗಿನಂತೆ ಎಂದೂ ಅತಿರೇಕಕ್ಕೆ ಹೋಗಿರಲಿಲ್ಲ. ಈಗ ಚರ್ಚೆಗಿಂತ ಗದ್ದಲವೇ ಹೆಚ್ಚು. ಸದನ ಘನತೆ ಕಳೆದುಕೊಳ್ಳತೊಡಗಿದೆ ಎಂದು ವಿಷಾದಿಸಿದರು. `ಚುನಾವಣೆಗಳೂ ನಮ್ಮ ರಾಜಕೀಯದ ಭ್ರಷ್ಟತೆ ಹೆಚ್ಚಿಸುತ್ತಿವೆ. ಈಗ ಹಣ ಇಲ್ಲದೆ ಚುನಾವಣೆ ಆಗುವುದಿಲ್ಲ. ಇದನ್ನು ಜೆ.ಎಚ್.ಪಟೇಲ್ ಬಹಿರಂಗವಾಗಿಯೇ ಹೇಳಿದ್ದರು. ಅವರ ನಿಷ್ಠುರ ನುಡಿಗೆ ನನ್ನ ಮೆಚ್ಚುಗೆ ಇದೆ. `ನಾನು 1952ರಲ್ಲಿ ಚುನಾವಣೆ ಎದುರಿಸಿದಾಗ ಒಂದು ಕಾರು, ಅದಕ್ಕೆ ಪೆಟ್ರೋಲ್ ಮತ್ತು ಐವರು ಬೆಂಬಲಿಗರು, ಇಷ್ಟೇ ಬಂಡವಾಳ. ಚಹಾ, ಊಟ ಎಲ್ಲ ಮಂದಿ ಮನೆಯಲ್ಲೇ ಆಗುತ್ತಿತ್ತು~ ಎಂದರು.ಎಲ್ಲೆಡೆ `ಮಾಮೂಲಿ ವಸೂಲಿ:
`ಅಧಿಕಾರಿಗಳು, ಸಾರ್ವಜನಿಕ ಹಣವನ್ನು ಕಬಳಿಸಲು ಈಗಿನಂತೆ ಹಾತೊರೆಯುತ್ತಿರಲಿಲ್ಲ. ಸಚಿವರಿಗೆ ಸಲಹೆ- ಸೂಚನೆ ಕೊಡಲು ಸಂಕೋಚಪಡುತ್ತಿರಲಿಲ್ಲ. ಸಚಿವನಾಗಿದ್ದಾಗ ಅಧಿಕಾರಿಗಳ ಮಾತಿಗೆ ಓಗೊಟ್ಟು ಅನೇಕ ಸಲ ನಿರ್ಧಾರ ಬದಲಿಸಿದ್ದೇನೆ. ಈಗ ಗ್ರಾಮ ಪಂಚಾಯ್ತಿ ಸದಸ್ಯನಿಂದ ಸಂಸದನವರೆಗೂ ಎಲ್ಲರೂ `ಮಾಮೂಲಿ~ ವಸೂಲಿಗೆ ಇಳಿದುಬಿಟ್ಟಿದ್ದಾರೆ. ಇದು ನಿಲ್ಲದ ಹೊರತು ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.ಆಗಿನ ಮುಖ್ಯಮಂತ್ರಿಗಳು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಮುಕ್ತವಾಗಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಂಪುಟದಿಂದ ನಾನು ಹೊರಬಂದಿದ್ದೇನೆ. ರಾಯಬಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ವಿಚಾರದಲ್ಲಿ ವೀರೇಂದ್ರ ಪಾಟೀಲರ ಜತೆ ಭಿನ್ನಾಭಿಪ್ರಾಯ ಉಂಟಾದಾಗ ನಾನು ಸಚಿವ ಸ್ಥಾನ ತ್ಯಜಿಸಿದೆ. ಆ ಸಂಘರ್ಷ ಕೊನೆಗೆ ಸರ್ಕಾರದ ಪತನಕ್ಕೇ ಕಾರಣವಾಯಿತು ಎಂದು ನೆನಪಿಸಿಕೊಂಡರು.

ರಾಯಬಾಗ ಹುಲಿ

ರಾಯಬಾಗ ತಾಲ್ಲೂಕಿನ ಬ್ಯಾಕೂಡ ಗ್ರಾಮದ ವಿ.ಎಲ್. ಪಾಟೀಲ ಅವರಿಗೆ ಮೂವರು ಪುತ್ರರು- ಪ್ರತಾಪರಾವ್ ಪಾಟೀಲ, ವಿವೇಕರಾವ್ ಪಾಟೀಲ ಮತ್ತು ಅಮರಸಿಂಹ ಪಾಟೀಲ. ಏಕೈಕ ಪುತ್ರಿ ಪ್ರತಿಭಾ ಪಾಟೀಲ ಈಗಿಲ್ಲ. ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಸರ್ಕಸ್ ಕಂಪೆನಿಯಿಂದ ಹುಲಿಯನ್ನು ಪಡೆದು ಅದನ್ನು ಹಿಡಿದು ಹಾದಿ-ಬೀದಿಯಲ್ಲಿ ಅಡ್ಡಾಡಿದ ಧೈರ್ಯವಂತೆ.ಹುಲಿ ಅವರ ಚುನಾವಣಾ ಚಿಹ್ನೆ ಆಗಿತ್ತು! ಅಮರಸಿಂಹ ಅವರು ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ಸಂಸದರಾಗಿಯೂ ಒಂದು ಅವಧಿಗೆ ಸೇವೆ ಸಲ್ಲಿಸಿದ್ದಾರೆ. `ರಾಯಬಾಗದ ಹುಲಿ~ ಎಂದೇ ಖ್ಯಾತರಾದ ವಿ.ಎಲ್. ಪಾಟೀಲರು ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಬಿ.ಎ.ವರೆಗೂ ಓದಿದ್ದಾರೆ. ರಾಯಬಾಗ ಸನಿಹದ ಬೆಕ್ಕೇರಿಯಲ್ಲಿ ಈಗ ವಾಸ. ಪತ್ನಿ ಅರುಣಾದೇವಿ ಅವರು ಐದಾರು ವರ್ಷಗಳ ಹಿಂದೆ ಕಾಲವಾಗಿದ್ದಾರೆ.

ಈಗಲೂ ಕಬ್ಬು ಜಗಿಯುತ್ತಾರೆ!

ತೊಂಬತ್ತು ವಸಂತಗಳನ್ನು ಪೂರೈಸಿರುವ ಪಾಟೀಲರು ಈಗಲೂ ಕಬ್ಬು ಜಗಿಯುತ್ತಾರೆ. ಬಟಗಡಲೆ, ಮೂಳೆ ಕಡಿಯುತ್ತಾರೆ. ಒಂದೂ ಹಲ್ಲು ಮುಕ್ಕಾಗಿಲ್ಲ. ಬೆಕ್ಕೇರಿಯಿಂದ ಮೊನ್ನೆ ಮಹಿಂದ್ರಾ ಬೊಲೇರೊ ವಾಹನದಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಹಳ್ಳಿಯಿಂದ ರಾಯಬಾಗಕ್ಕೆ ಕೆಲವೊಮ್ಮೆ ತಾವೇ ಜೀಪು ಓಡಿಸಿಕೊಂಡು ಹೋಗುತ್ತಾರೆ. ಕನ್ನಡಕದ ಹಂಗಿಲ್ಲದೆ ಪೇಪರ್ ಓದಬಲ್ಲರು. ಯುವಕರು ನಾಚುವಂತೆ ಚಕಚಕನೆ ಮೆಟ್ಟಿಲು ಹತ್ತಿ ಇಳಿಯುತ್ತಾರೆ. `ಕಿವಿ ಒಂದ್ಚೂರು ಮಂದವಾಗಿದೆ~ ಎಂದು ಅವರೇ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.