ಬುಧವಾರ, ಸೆಪ್ಟೆಂಬರ್ 23, 2020
26 °C

ಈದ್ಗಾ ಮೈದಾನಕ್ಕೆ ಹಸಿರು ಚಪ್ಪರ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಈದ್ಗಾ ಮೈದಾನಕ್ಕೆ ಹಸಿರು ಚಪ್ಪರ!

ಅಲ್ಲಿ ಸುಮಾರು ಹದಿನೈದು ಸಾವಿರ ಮಂದಿ ಕುಳಿತುಕೊಳ್ಳಬಹುದು. ಕುಳಿತುಕೊಳ್ಳುವುದಷ್ಟೇ ಅಲ್ಲ ಅಲ್ಲಾಹನನ್ನು ಪ್ರಾರ್ಥಿಸಬಹುದು. ಅವರಿಗೆ ಕೊಂಚವೂ ಬಿಸಿಲು ತಾಗದು. ಅಂಥ ಹಸಿರು ಚಪ್ಪರ ಅಲ್ಲಿದೆ.ಅದು ಇರುವುದು ಮೈಸೂರು ಫಾರೂಕಿಯ ದಂತ ವೈದ್ಯಕೀಯ ಕಾಲೇಜು ಬಳಿ(ತಿಲಕನಗರ)ಯ ಈದ್ಗಾ ಮೈದಾನದಲ್ಲಿ. ಸುಮಾರು 1000 ಅಡಿ ಉದ್ದ ಮತ್ತು 350 ಅಡಿ ಅಗಲದ ಈ ಹಸಿರು ಚಪ್ಪರ ಸದ್ಯದಲ್ಲಿಯೇ ಲಿಮ್ಕಾ ದಾಖಲೆ ಸೇರಲಿದೆ!ಈ ಹಸಿರು ಚಪ್ಪರವನ್ನು ನಿರ್ಮಿಸಿದವರು ಮೆಕ್ಯಾನಿಕಲ್ ಫಿಟ್ಟರ್ ಎಂಜಿನಿಯರ್ ಆಗಿರುವ ಹೈದರ್ ಅಲಿ  ಖಾನ್. ಇಲ್ಲಿ ಹಸಿರು ಚಪ್ಪರವನ್ನು ನಿರ್ಮಿಸಲು ಅವರು ಹನ್ನೆರಡು ವರ್ಷ ಶ್ರಮ ಪಟ್ಟಿದ್ದಾರೆ.  ಮುಸ್ಲಿಂ ಬಾಂಧವರಿಗೆ ಪ್ರಾರ್ಥನೆ ಮಾಡಲು ಸಾಕಾಗುವಷ್ಟು ಜಾಗವನ್ನು ಅಂದಾಜು ಮಾಡಿ 300ಕ್ಕೂ ಹೆಚ್ಚು ಹೊಂಗೆ ಸಸಿಗಳನ್ನು ನೆಟ್ಟು ಅವು ಚಪ್ಪರದ ಎತ್ತರಕ್ಕೆ ಬರುವಂತೆ ಪೋಷಿಸಿ ಬೆಳೆಸಿ ಸಹಜ ಹಸಿರು ಚಪ್ಪರ ನಿರ್ಮಿಸಿದ್ದಾರೆ. ಇಂಥ ಹಸಿರು ಚಪ್ಪರ ಇಲ್ಲಿ ಮಾತ್ರ ಅಲ್ಲ. ನೀವು ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಹೋದರೆ  ಅಲ್ಲಿಯೂ ಚೆರ್ರಿ ಗಿಡಗಳ ಸಾಲು ಚಪ್ಪರ ಕಾಣಿಸುತ್ತದೆ. ಮೈಸೂರು ಶಕ್ತಿ ನಗರ ಬಡಾವಣೆಯ ಅಧ್ಯಯನ ಶಾಲೆಯಲ್ಲಿಯೂ 120 ಅಡಿ ಉದ್ದ ಮತ್ತು 60 ಅಡಿ ಅಗಲದ ಹಸಿರು ಚಪ್ಪರವಿದೆ. ಇದಲ್ಲದೆ ಆಟೋ ನಿಲ್ದಾಣ, ಚಲನಚಿತ್ರ ಮಂದಿರಗಳ ಆವರಣ, ಹೊಟೇಲ್ ಆವರಣ, ಆಸ್ಪತ್ರೆ, ಶಾಲೆಗಳ ಆಟದ ಮೈದಾನ, ಕಾರು ನಿಲುಗಡೆಗೆ ಸೂಕ್ತವಾದ ಹಲವಾರು ಹಸಿರು ಚಪ್ಪರಗಳನ್ನು ಹೈದರ್ ಅಲಿ ಖಾನ್ ನಿರ್ಮಿಸಿದ್ದಾರೆ.ಸುಮಾರು ಹತ್ತನ್ನೆರಡು ವರ್ಷಗಳ ಹಿಂದೆ ಒಮ್ಮೆ ಹೈದರ್ ಅಲಿಖಾನ್ ಅವರು ದಣಿವು ನೀಗಿಸಿಕೊಳ್ಳಲು ಒಂದು ಮರದ ಬುಡಕ್ಕೆ ಕುಳಿತುಕೊಂಡಿದ್ದರಂತೆ. ಆಗ ಅವರಿಗೆ ಈ ಹಸಿರು ಚಪ್ಪರದ ಜ್ಞಾನೋದಯವಾಯಿತು. ಆದರೆ ಅದನ್ನು ಅನುಷ್ಠಾನಕ್ಕೆ ತರಲು ಜಾಗ ಇರಲಿಲ್ಲ. ತಮ್ಮ ಕನಸನ್ನು ಅವರು ಈದ್ಗಾ ಸಮಿತಿ ಅಧ್ಯಕ್ಷ ತಾಜ್ ಮೊಹಮ್ಮದ್ ಖಾನ್ ಅವರಲ್ಲಿ ಹೇಳಿಕೊಂಡಾಗ ಅವರು ಅದಕ್ಕೆ ಅವಕಾಶ ಮಾಡಿಕೊಟ್ಟರು. ಅದರ ಫಲವಾಗಿಯೇ ಈಗ  ಈದ್ಗಾ ಮೈದಾನದಲ್ಲಿ ಬೃಹತ್ ಹಸಿರು ಚಪ್ಪರದ ಕನಸು ನನಸಾಗಿದೆ.ಮೆಕ್ಯಾನಿಕಲ್ ಫಿಟ್ಟರ್ ಆಗಿ 27 ವರ್ಷ ಸೇವೆ ಸಲ್ಲಿಸಿರುವ ಹೈದರ್ ಅಲಿ ಈಗ ಹಸಿರು ಚಪ್ಪರ ನಿರ್ಮಾಣವನ್ನೇ ತಮ್ಮ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಅವರನ್ನು ಜನ ಗುರುತಿಸುವುದು ಕೂಡ ‘ಹಸಿರು ಚಪ್ಪರದ ಖಾನ್’ ಎಂದೇ.ಹೊಂಗೆ, ಅಶೋಕ, ಸಿಂಗಾಪುರ ಚೆರ್ರಿ ಸಸಿಗಳನ್ನು ಹಸಿರು ಚಪ್ಪರಕ್ಕೆ ಬಳಸುವ ಹೈದರ್ ಅಲಿಖಾನ್ ಬೇರೆ ಯಾರೋ ನೆಟ್ಟು ಈಗಾಗಲೇ ಬಲಿತಿರುವ ಮರಗಳಿಂದ ಹಸಿರು ಚಪ್ಪರ ನಿರ್ಮಾಣ ಅಸಾಧ್ಯ ಎನ್ನುತ್ತಾರೆ. ತಾವೇ ಸಸಿಗಳನ್ನು ನೆಟ್ಟು ಅವುಗಳ ಪೋಷಣೆ ಮಾಡಿದರೆ ಸಸಿಗಳು ತನ್ನ ಮಾತನ್ನು ಕೇಳುತ್ತವೆ. ಎಷ್ಟು ಎತ್ತರಕ್ಕೆ ಬೇಕೋ ಅಷ್ಟು ಎತ್ತರಕ್ಕೆ ಅವುಗಳನ್ನು ಬೆಳೆಸಬಹುದು. ಬಾಗಿಸಬಹುದು. ಬಳ್ಳಿಗಳನ್ನು ಕಟ್ಟಿ ಚಪ್ಪರದ ರೀತಿಯೇ ಅವು ಬೆಳೆಯುವಂತೆ ಮಾಡಬಹುದು ಎನ್ನುತ್ತಾರೆ.ಹೈದರ್ ಅಲಿ ಖಾನ್ ಅವರಿಗೆ ಸಾಕಷ್ಟು ಕನಸುಗಳಿವೆ. ಅವಕಾಶ ಸಿಕ್ಕರೆ, ಸರ್ಕಾರ ಬೆಂಬಲ ನೀಡಿದರೆ ಮೈಸೂರಿನಿಂದ ಬೆಂಗಳೂರಿನವರೆಗೆ ಹೆದ್ದಾರಿಯಲ್ಲಿ ಹಸಿರು ಚಪ್ಪರ ನಿರ್ಮಾಣ ಮಾಡಿ ಎಲ್ಲ ವಾಹನಗಳೂ ಚಪ್ಪರದ ಅಡಿಯಲ್ಲಿಯೇ ಸಾಗುವಂತೆ ಮಾಡುತ್ತೇನೆ ಎನ್ನುತ್ತಾರೆ.ಸಸಿಗಳಿಂದಲೇ ಮೈಸೂರು ಅರಮನೆ, ಸಂಸತ್ ಭವನ, ಕ್ರೀಡಾಂಗಣಗಳಲ್ಲಿ ವೀಕ್ಷಕರ ಗ್ಯಾಲರಿಗಳನ್ನೂ ನಿರ್ಮಾಣ  ಮಾಡಬಹುದು. ಜೀವಂತ ಬೆತ್ತ ಹಾಗೂ ಬಿದಿರು ಮೆಳೆಗಳನ್ನು ಬೆಳೆಸಿ ವೀಕ್ಷಕರ ಗ್ಯಾಲರಿಯನ್ನು ನಿರ್ಮಿಸಿದರೆ ಅವು ಕನಿಷ್ಠ 80ರಿಂದ 125 ವರ್ಷ ಬಾಳಿಕೆ ಬರುತ್ತವೆ. ಕೇವಲ ಎಂಟು ವರ್ಷಗಳಲ್ಲಿ ಇಂತಹ ಜೀವಂತ ಮರಗಳ ವೀಕ್ಷಕರ ಗ್ಯಾಲರಿ ನಿರ್ಮಿಸಬಹುದು ಎಂಬ ವಿಶ್ವಾಸ ಅವರಿಗಿದೆ.ಹಸಿರು ಚಪ್ಪರಕ್ಕೆ ಅಗತ್ಯವಾದ ಸಸಿಗಳನ್ನು ನೆಟ್ಟು ಅವು ನೇರವಾಗಿ ಬೆಳೆಯಲು ಸಹಕಾರಿಯಾಗುವಂತೆ ಕಂಬಗಳ ಆಸರೆಯನ್ನು ನೀಡಬೇಕು. ಅಲ್ಲದೆ ನಮಗೆ ಎಷ್ಟು ಎತ್ತರ ಬೇಕೋ ಅಷ್ಟು ಎತ್ತರ ಬೆಳೆದ ನಂತರ ಪ್ರತಿ ಸಸಿಗಳೂ ಎಂಟು ಶಾಖೆಗಳನ್ನು ಒಡೆಯುವಂತೆ ನೋಡಿಕೊಳ್ಳಬೇಕು. ಹಾಗೆ ಒಡೆದ ಶಾಖೆಗಳನ್ನು ಸುತ್ತಲಿನ ಎಂಟು ಮರಗಳಿಗೆ ಎಳೆದು ಕಟ್ಟಬೇಕು. ಹೀಗೆ ಮಾಡಿದಾಗ ಅವು ಒಂದಕ್ಕೊಂದು ಹೊಂದಿಕೊಂಡು ಹಸಿರು ಚಪ್ಪರವಾಗುತ್ತವೆ.  ವರ್ಷಕ್ಕೊಮ್ಮೆ  ಅವುಗಳನ್ನು ಟ್ರಿಮ್ ಮಾಡುತ್ತಾ ಬಂದರೆ ಈ ಮರಗಳು ನಿರಂತರವಾಗಿ ನೆರಳನ್ನೂ ಮತ್ತು ಆಮ್ಲಜನಕವನ್ನೂ ನೀಡುತ್ತವೆ.‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ’ ಎಂಬ ಗಾದೆಯೇ ಹಸಿರು ಚಪ್ಪರದ ಮೂಲ ಮಂತ್ರ. ಹೊಂಗೆ ಗಿಡವಾದರೆ ಬಾಳಿಕೆ ಹೆಚ್ಚು. ಸಿಂಗಪುರ ಚೆರ್ರಿಯಾದರೆ ಬಾಳಿಕೆ ಕೊಂಚ ಕಡಿಮೆ. ಗಿಡಗಳನ್ನು ತನ್ನ ಇಷ್ಟಕ್ಕೆ ಬೆಳೆಸಿ ತಾನು ಹೇಳಿದಂತೆ ಕೇಳುವ ಹಾಗೆ ಮಾಡುವುದರಲ್ಲಿ ಹೈದರ್ ಅಲಿ ಪರಿಣಿತರು.ಒಣ ಮರಗಳನ್ನು ನಿಲ್ಲಿಸಿ ಅದರ ಮೇಲೆ ಒಣಗಿದ ತೆಂಗಿನ ಗರಿಗಳನ್ನು ಹಾಕಿದ ಶುಷ್ಕ ಚಪ್ಪರಕ್ಕಿಂತ ಹಸಿರು ಚಪ್ಪರ ಸುಂದರ, ನಿತ್ಯ ನವೀನ.  ಹಸಿರು ಚಪ್ಪರದ ಬಗ್ಗೆ ಹೆಚ್ಚಿನ ಮಾಹಿತಿಗೆ ಹೈದರ್ ಅಲಿ ಖಾನ್ ಅವರನ್ನು 9845159067 ಮೂಲಕ ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.