ಹುಬ್ಬಳ್ಳಿ: ವಾಡಿಕೆಯಂತೆ ಜೂನ್ 6ರಿಂದ ಮುಂಗಾರು ಮಳೆ ಆರಂಭವಾಗಬೇಕು. ನೇಗಿಲು ಹೊತ್ತ ರೈತರೆಲ್ಲ ಹೊಲದಲ್ಲಿ ಉಳುಮೆಗೆ ಇಳಿಯಬೇಕು. ಆದರೆ ಈಗ ಕಾಲ ಬದಲಾಗಿದೆ. ವಾಡಿಕೆಯ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಆದರೂ ರೈತರು ಹೊಲದಲ್ಲಿ ಉತ್ತು ಬಿತ್ತನೆ ಕಾರ್ಯ ಆರಂಭಿಸುವುದನ್ನು ತಪ್ಪಿಸುವುದಿಲ್ಲ.

ಕಳೆದ ವರ್ಷದ ಉತ್ತಮ ಮಳೆಯಾಗದೇ ಉಂಟಾಗಿದ್ದ ಬರಗಾಲದ ಭೀಕರತೆಯ ನೆನಪು ರೈತರ ಮನದಲ್ಲಿನ್ನೂ ಮಾಸಿಲ್ಲ. ಮುಂಗಾರು ಮಳೆ ರಭಸವನ್ನು ಪಡೆದುಕೊಳ್ಳದೇ ಇದ್ದರೂ ಆಗೀಗ ಸುರಿಯುತ್ತಿರುವ ಮಳೆ ರೈತರಿಗೆ ಒಂದಿಷ್ಟು ಹುರುಪು ತಂದಿದೆ.

ಆದಾಗ್ಯೂ ಹುಬ್ಬಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಮುಂಗಾರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಸೋಮವಾರ ಕೆಲವೆಡೆ `ಪ್ರಜಾವಾಣಿ' ಪ್ರತಿನಿಧಿ ಭೇಟಿ ನೀಡಿದಾಗ ರೈತರು ಮಳೆಯ ಬಗ್ಗೆ ಆತಂಕದಲ್ಲಿದ್ದರೂ ತಮ್ಮ ಎಂದಿನ ಕಾಯಕದಲ್ಲಿ ತೊಡಗಿದ್ದು ಕಂಡು ಬಂತು.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದರೆ ಮುಂಗಾರು ಹಂಗಾಮಿನಲ್ಲಿ ಅಂದಾಜು 29 ಸಾವಿರ ಹೆಕ್ಟೇರ್ನಲ್ಲಿ ವಿವಿಧ ಬೆಳೆ ಬೆಳೆಯಲಾಗುತ್ತದೆ. ಪ್ರಸ್ತುತ ಸುಮಾರು 120 ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ. ಹುಬ್ಬಳ್ಳಿ-ವಿಜಾಪುರ ರಸ್ತೆಯ ಕುಸುಗಲ್ ಬಳಿ ರೈತರು ಈಗಾಗಲೇ ಹದಗೊಳಿಸಿದ ಹೊಲದಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ್ದರು.

ಹೆಸರು ಕಾಳು, ಸೋಯಾಬಿನ್, ಶೇಂಗಾ ಮತ್ತಿತರ ಬೀಜಗಳ ಬಿತ್ತನೆಗೆ ತೊಡಗಿದ್ದರು. ಉತ್ತಮ ಮಳೆ ನಿರೀಕ್ಷೆಯಲ್ಲಿ...

`ಮುಂಗಾರು ಮಳೆ ಜೋರಾಗಿ ಬಾರದೇ ಇದ್ದರೂ ಒಂದಿಷ್ಟು ಮಳೆ ಬಿದ್ದು ಹೊಲ ಹಸಿ ಆಗ್ಯಾವ್ರಿ...ಹೀಂಗಾಗೀ ಬಿತ್ತನೆ ಕೆಲಸ ಚಾಲೂ ಮಾಡೀವ್ರಿ...ಕಳೆದ ವರ್ಷವಂತೂ ಮಳೆ ಇಲ್ಲದೇ ಏನೇನೂ ಒಳ್ಳೆ ಬೆಳೆ ಬಂದಿಲ್ರಿ...ಈ ವರ್ಷವಾದರೂ ಉತ್ತಮ ಮಳೆ ಬರಬಹುದು ಎನ್ನುವ ನಿರೀಕ್ಷೆ ಮಾಡೀವ್ರಿ ' ಎನ್ನುವ ಬೆಂಗೇರಿ ಹದ್ದು ಗ್ರಾಮದ ಸಿದ್ದಪ್ಪ ಹೆಬಸೂರ ಮುಖದಲ್ಲಿ ಮಳೆಯ ಅನಿಶ್ಚಿತತೆಯ ಆತಂಕವಿದೆ.

ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರು ಸಿಗದೇ ಇರುವುದರಿಂದ ಮನೆಯವರೆಲ್ಲ ಸೇರಿಕೊಂಡು ಹೊಲದಲ್ಲಿ ಸೋಯಾಬಿನ್ ಹಾಗೂ ಹೆಸರುಕಾಳು ಬಿತ್ತನೆ ಕಾರ್ಯವನ್ನು ಟ್ರ್ಯಾಕ್ಟರ್ ಸಹಾಯದಿಂದ ನಡೆಸುತ್ತಿದ್ದರು.

ಕಳೆದ ವರ್ಷವಂತೂ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಕಾರ್ಯಕ್ಕೆ ಅಡಚಣೆಯಾಗಿ ರೈತರು ತೊಂದರೆ ಪಟ್ಟಿದ್ದರು. ಆದರೆ ಈ ವರ್ಷ ಮೇ ತಿಂಗಳ ಅಂತ್ಯದಲ್ಲಿ ಹಾಗೂ ಜೂನ್ ಮೊದಲ ವಾರದಲ್ಲಿ ಉತ್ತರ ಒಳನಾಡಿನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಮಳೆಯಾಗಿದ್ದು ರೈತರಿಗೆ ಸ್ವಲ್ಪ ಮಟ್ಟಿನ ಖುಷಿ ನೀಡಿದೆ. ಆದರೆ ಆತಂಕ ಮಾತ್ರ ಹೋಗಿಲ್ಲ.

ಈ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಸೋಯಾಬಿನ್, ಹೆಸರು, ಶೇಂಗಾ ಮತ್ತಿತರ ಬೆಳೆಗಳನ್ನು ತೆಗೆದರೆ ಹಿಂಗಾರು ಹಂಗಾಮಿನಲ್ಲಿ ಕಡಲೆ, ಗೋಧಿ, ಖುಸಬಿ, ಜೋಳ, ಹತ್ತಿ ಮತ್ತಿತರ ಬೆಳೆಗಳನ್ನು ಬೆಳೆಯುತ್ತಾರೆ. ಇನ್ನು ಛಬ್ಬಿ ಮತ್ತು ಹುಬ್ಬಳ್ಳಿಯ ಹಲವು ಕಡೆಗಳಲ್ಲಿ 500-600 ಹೆಕ್ಟೇರ್ ಜಾಗದಲ್ಲಿ ರೈತರು ಭತ್ತ ಬೆಳೆಯುತ್ತಾರೆ.

ಇನ್ನು ಶೇಂಗಾ ಬಿತ್ತನೆಯಲ್ಲಿ ತೊಡಗಿದ್ದ ಕುಸುಗಲ್ ರೈತ ಹಸನ್ಸಾಬ್ ಮಿರ್ಜಾನವರ ಅವರನ್ನು ಮಾತನಾಡಿಸಿದಾಗ ಸುಮಾರು 3 ಎಕರೆ ಹೊಲದಲ್ಲಿ ಶೇಂಗಾ ಬಿತ್ತನೆ ಮಾಡುತ್ತಿದ್ದು ಮುಂಗಾರು ಹಂಗಾಮಿನಲ್ಲಿ ಹತ್ತಿ, ಹುರುಳಿ, ಹೆಸರು ಬೆಳೆಯುವುದಾಗಿ ತಿಳಿಸಿದರು.

`ಕೆಲ ದಿನಗಳ ಹಿಂದೆ ಒಂದಿಷ್ಟು ಮಳೆ ಆಗೈತ್ರಿ...ಕಳೆದ ವರ್ಷವಂತೂ ಮಳೆಯಿಲ್ಲದೇ ಬರಗಾಲ ಆಗಿತ್ತಲ್ರಿ...ಈ ವರ್ಷಾನೂ ಮಳೆಯಿಲ್ಲದೇ ಇದ್ರ ಮತ್ತೆ ಗೌಂಡಿ ಕೆಲಸ ಮಾಡೋದು ಇದ್ದೇ ಇರ್ತಾವಲ್ರಿ' ಎಂದು ವಿಷಾದದ ನಗೆ ಬೀರುತ್ತಾರೆ. ಇದು ಬಹಳಷ್ಟು ರೈತರ ವಿಷಾದದ ಉತ್ತರವೂ ಹೌದು. `ಈ ಬಾರಿಯಾದ್ರೂ ಉತ್ತಮ ಮಳೆಯಾಗಲಿ, ಭರ್ಜರಿ ಫಸಲು ಬರಲಿ' ಎಂದು ವರುಣನ ಕೋರುತ್ತ ರೈತರು ಕಾಯಕದಲ್ಲಿ ನಿರತರಾಗಿದ್ದಾರೆ.

120 ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ
`ಹುಬ್ಬಳ್ಳಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಮಳೆ ಉತ್ತಮವಾಗಿ ಆಗಿದೆ. ಮೇ ಅಂತ್ಯದಲ್ಲಿ ಶೇ 70ರಷ್ಟು ಮಳೆಯಾಗಿದ್ದು ರೈತರಿಗೆ ಬಿತ್ತನೆ ಆರಂಭಿಸಲು ಅನುಕೂಲವಾಗಿದೆ. ಇನ್ನಷ್ಟು ಮಳೆ ಬೇಕು ನಿಜ. ಆದರೂ ಈಗ ಬಿದ್ದಿರುವ ಮಳೆ ಹೊಲವನ್ನು ಹಸಿ ಮಾಡಿದೆ.

ಹುಬ್ಬಳ್ಳಿ, ಹಳೆ ಹುಬ್ಬಳ್ಳಿ, ಛಬ್ಬಿ, ಶಿರಗುಪ್ಪಿ, ಕುಸುಗಲ್ ಗೊರೂರುಗಳಲ್ಲಿ ರೈತರಿಗೆ ಅಗತ್ಯದ ಬಿತ್ತನೆ ಬೀಜ ಮತ್ತು ಗೊಬ್ಬರಗಳನ್ನು ಪೂರೈಸಲಾಗುತ್ತಿದೆ. ಉತ್ತಮ ಮಳೆಯಾದರೆ 29 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಆಗುತ್ತವೆ. ಪ್ರಸ್ತುತ 120 ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ನಡೆದಿದೆ.
-ಎನ್.ವೈ.ಶೆಟ್ಟಪ್ಪಗೌಡರ, ಕೃಷಿ ತಾಂತ್ರಿಕ ಅಧಿಕಾರಿ

2-3 ದಿನಗಳಲ್ಲಿ ಉತ್ತಮ ಮಳೆ
`ಉತ್ತರ ಒಳನಾಡಿನಲ್ಲಿ ಮುಂಗಾರು ಹಂಗಾಮಿನ ಆರಂಭಿಕ ಮಳೆ ಉತ್ತಮವಾಗಿದ್ದು ರೈತರು ಬಿತ್ತನೆ ಕಾರ್ಯಕ್ಕೆ ತೊಡಗುವಷ್ಟು ಮಳೆಯಾಗಿದೆ. ಮುಂದಿನ 2-3 ದಿನಗಳಲ್ಲಿ ಇನ್ನಷ್ಟು ಉತ್ತಮ ಮಳೆಯಾಗಲಿದ್ದು ಕೃಷಿ ಕಾರ್ಯಕ್ಕೆ ಅನುಕೂಲವಾಗಲಿದೆ'
-ಹವಾಮಾನ ಇಲಾಖೆ

ಹೊಲಗಳು ಹೋಗಿ ಸೈಟ್ ಆದವು...!
ನಗರೀಕರಣ ಹೆಚ್ಚಿದಂತೆ ನಗರವ್ಯಾಪ್ತಿಯೂ ವಿಸ್ತಾರಗೊಳ್ಳುತ್ತಲೇ ಸಾಗುತ್ತಿದೆ. ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿ ಸಾಗಿದರೆ ಎಲ್ಲ ಕಡೆಗಳಂತೆ ಇಲ್ಲಿಯೂ ನಗರೀಕರಣ ಭರಾಟೆ ಅನಾವರಣಗೊಳ್ಳುತ್ತ ಸಾಗುತ್ತದೆ.

ರಸ್ತೆ ಇಕ್ಕೆಲಗಳಲ್ಲಿ ಗಗನಚುಂಬಿ ಅಪಾರ್ಟ್ಮೆಂಟ್ಗಳು ತಲೆ ಎತ್ತುತ್ತಿವೆ. ಒಂದು ಎಕರೆಯ ಬೆಲೆ ಕೋಟಿ ತಲುಪಿದೆ. ಹಲವು ರಿಯಲ್ ಎಸ್ಟೇಟ್ ಕಂಪೆನಿಗಳು ಕುಸುಗಲ್ ರಸ್ತೆ ಇಕ್ಕೆಲಗಳ ಹೊಲವನ್ನು ಖರೀದಿಸಿ ಅವನ್ನು ಸೈಟ್ಗಳಾಗಿ ಬದಲಾಯಿಸಿವೆ. ಡಬಲ್ ಬೆಡ್ರೂಮು ಮನೆ ನಿರ್ಮಿಸಿಕೊಡಲು ಕನಿಷ್ಠ ರೂ 28 ಲಕ್ಷ ಬೆಲೆಯಿದೆ.

`ಹೌದ್ರಿ, ಹೊಲ ಮಾಡಿಕೊಂಡು ಹೋಗಲು ಮನೆಯೊಳಗೆ ಜನರೇ ಇಲ್ಲದಿದ್ದರೆ ರೈತರು ಇನ್ನೇನ್ರಿ ಮಾಡ್ತಾರ್ರಿ...ಒಳ್ಳೆ ಬೆಲೆ ಬಂದ್ರ ಹೊಲ ಮಾರಾಟ ಮಾಡ್ತಾರ್ರಿ... ಇನ್ನೊಂದು 4-5 ವರ್ಷ ಕಳೆದ್ರೆ ರಸ್ತೆ ಪಕ್ಕದ ಎಲ್ಲ ಹೊಲಗಳೂ ಸೈಟ್ಗಳಾಗ್ತಾವ್ರಿ...' ಎಂದು ರೈತ ಬಸಪ್ಪ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.