ಸೋಮವಾರ, ಮೇ 23, 2022
20 °C

ಉಕ್ರೇನ್ ಮಾಜಿ ಪ್ರಧಾನಿಗೆ 7 ವರ್ಷ ಸಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಕ್ರೇನ್ ಮಾಜಿ ಪ್ರಧಾನಿಗೆ 7 ವರ್ಷ ಸಜೆ

ಮಾಸ್ಕೊ (ಐಎಎನ್‌ಎಸ್/ಆರ್‌ಐಎ ನೊವೊಸ್ತಿ): ಅನಿಲ ಒಪ್ಪಂದದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಅಪರಾಧಕ್ಕಾಗಿ ಉಕ್ರೇನ್ ಮಾಜಿ ಪ್ರಧಾನಿ ಯುಲಿಯಾ ಟಿಮೊಶೆಂಕೊ ಅವರಿಗೆ ನ್ಯಾಯಾಲಯ ಏಳು ವರ್ಷಗಳ ಸೆರೆವಾಸ ವಿಧಿಸಿದೆ.

`ರಷ್ಯಾ ಜತೆ 2009ರಲ್ಲಿ ಏರ್ಪಟ್ಟ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಟಿಮೊಶೆಂಕೊ ವೈಯಕ್ತಿಕವಾಗಿ ಸೂಚನೆಗಳನ್ನು ನೀಡುವ ಮೂಲಕ ಅಧಿಕಾರ ಮೀರಿ ವರ್ತಿಸಿದ್ದಾರೆ~ ಎಂದು ಮಂಗಳವಾರ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ರೊಡಿಆನ್ ಕಿರೀವ್ ಹೇಳಿದರು. ಈ ಒಪ್ಪಂದದಿಂದಾಗಿ ಉಕ್ರೇನ್ ಸರ್ಕಾರಿ ಸ್ವಾಮ್ಯದ ಮುಂಚೂಣಿ ಅನಿಲ ಕಂಪೆನಿ `ನ್ಯಾಫ್ತೊಗ್ಯಾಸ್~ಗೆ ಆದ ನಷ್ಟ ಭರಿಸಲು 18.9 ಕೋಟಿ ಡಾಲರ್ ಪರಿಹಾರ ನೀಡುವಂತೆಯೂ ಅವರು ಆದೇಶಿಸಿದ್ದಾರೆ.

ನ್ಯಾಯಮೂರ್ತಿಯವರು ತೀರ್ಪು ಪ್ರಕಟಿಸುವ ಮಧ್ಯದಲ್ಲೇ ಎದ್ದುನಿಂತ ಮಾಜಿ ಪ್ರಧಾನಿ, `ನ್ಯಾಯಮೂರ್ತಿಗಳು ಉಕ್ರೇನ್‌ನ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಾರೆ~ ಎಂದು ಟೀಕಿಸಿದರು. ಇದಕ್ಕೆ ಕಿವಿಗೊಡದ ನ್ಯಾಯಮೂರ್ತಿ ತೀರ್ಪನ್ನು ಪೂರ್ಣವಾಗಿ ಉಚ್ಚರಿಸಿದರು.

`ಈ ತೀರ್ಪು ನನ್ನನ್ನು ಎದೆಗುಂದಿಸುವುದಿಲ್ಲ~ ಎಂದು ನಂತರ ಹೇಳಿದ ಟಿಮೊಶೆಂಕೊ, ತಮ್ಮ ಘನತೆ ಸಂರಕ್ಷಿಸಿಕೊಳ್ಳುವ ಸಲುವಾಗಿ ಯೂರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಪ್ರಸ್ತುತ ರಾಷ್ಟ್ರಾಧ್ಯಕ್ಷ ವಿಕ್ಟರ್ ಯಾನುಕೊವಿಚ್ ಅವರ ಹಗೆತನವೇ ಈ ತೀರ್ಪಿಗೆ ಕಾರಣ. ಯಾನುಕೊವಿಚ್ ಸರ್ವಾಧಿಕಾರದ ವಿರುದ್ಧ ತಾವು ನಡೆಸುತ್ತಿರುವ ಹೋರಾಟಕ್ಕೆ ಜನತೆ ಕೈಜೋಡಿಸಬೇಕು ಎಂದು ಅವರು ಕೋರಿದರು. ರಾಷ್ಟ್ರದಲ್ಲಿ ಶೀಘ್ರವೇ ಸರ್ವಾಧಿಕಾರ ಕೊನೆಗೊಳ್ಳಲಿದೆ ಎಂದೂ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಈ ತೀರ್ಪಿನಿಂದಾಗಿ 2012ರಲ್ಲಿ ರಾಷ್ಟಾಧ್ಯಕ್ಷ ಹುದ್ದೆಗಾಗಿ ನಡೆಯಲಿರುವ ಚುನಾವಣೆಯಲ್ಲಿ ಪಾಲ್ಗೊಳ್ಳಲು ಟಿಮೊಶೆಂಕೊ ಅನರ್ಹರಾಗಿದ್ದಾರೆ.

ಜಾಗತಿಕ ತೈಲ ಬೆಲೆಗೆ ಅನುಗುಣವಾಗಿ ರಾಷ್ಟ್ರದಲ್ಲಿ ತೈಲೋತ್ಪನ್ನಗಳ ಬೆಲೆ ಏರಿಳಿತಕ್ಕೆ ಈ ಒಪ್ಪಂದ ಅನುವು ಮಾಡಿಕೊಟ್ಟಿತ್ತು. ಇದರಿಂದಾಗಿ ರಾಷ್ಟ್ರದಲ್ಲಿ ತೈಲ ಬೆಲೆ ತೀವ್ರ ದುಬಾರಿಯಾಗಿ ಭಾರಿ ಕೈಗಾರಿಕೆ, ಪೈಪ್ ತಯಾರಿಕಾ ಉದ್ದಿಮೆ ಹಾಗೂ ಲೋಹ ಸಂಬಂಧಿ ಕೈಗಾರಿಕೆಗಳು ಭಾರಿ ನಷ್ಟಕ್ಕೆ ಒಳಗಾಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.