ಸೋಮವಾರ, ಜೂಲೈ 13, 2020
25 °C

ಉಚಿತ ಶಿಬಿರದ ಚಕ್ರವರ್ತಿ

ರಮೇಶ ಕಂಚೀಪುರ Updated:

ಅಕ್ಷರ ಗಾತ್ರ : | |

ಉಚಿತ ಶಿಬಿರದ ಚಕ್ರವರ್ತಿ

ಮಾರ್ಚ್, ಏಪ್ರಿಲ್‌ನಲ್ಲಿ ಪರೀಕ್ಷೆಗಳು ಮುಗಿಯುತ್ತಿದ್ದಂತೆ ಬೇಸಿಗೆ ಶಿಬಿರಗಳ ಭರಾಟೆ ಶುರು. ಇವುಗಳ ಪೈಕಿ ಹೆಚ್ಚಿನವುಗಳ ಹಿಂದಿರುವುದು ಹಣ ಗಳಿಕೆ ಉದ್ದೇಶ. ಆದರೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಕ್ಕಳಿಗೆ ಎಲ್ಲ ಸೌಕರ್ಯ ಕಲ್ಪಿಸಿ ಉಚಿತ ಬೇಸಿಗೆ ಶಿಬಿರ ಆಯೋಜಿಸುವ ಕೆಲವಾರು ಸಂಸ್ಥೆಗಳೂ ಇವೆ.ಈ ಸಾಲಿನಲ್ಲಿ ಉಲ್ಲೇಖಿಸಬಹುದಾದ ಹೆಸರು ಬಸವನಗುಡಿಯ ಗೋವಿಂದಪ್ಪ ರಸ್ತೆಯಲ್ಲಿರುವ ಚಕ್ರವರ್ತಿ ಪ್ರತಿಷ್ಠಾನ. ಇದು 1997ರಿಂದ ಇದುವರೆಗೂ ಉಚಿತ ಬೇಸಿಗೆ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. 12 ವರ್ಷ ಮೇಲ್ಪಟ್ಟ ಮಕ್ಕಳು, ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು ಸಹ ಪಾಲ್ಗೊಳ್ಳಬಹುದು. ಅದೇ ಇದರ ವಿಶೇಷ.ಈ ಪ್ರತಿಷ್ಠಾನವನ್ನು ಆರಂಭಿಸಿದವರು ಚಾಮರಾಜನಗರದ ಚಕ್ರವರ್ತಿ ಗೋಪಾಲಾಚಾರ್. ಅವರ ನಿಧನಾನಂತರ ಅವರ ಮಗ ಶ್ರೀವತ್ಸ ಚಕ್ರವರ್ತಿ ನಡೆಸಿಕೊಂಡು ಬರುತ್ತಿದ್ದಾರೆ. ‘ನಮಗೆ ಗೊತ್ತಿರುವ ವಿದ್ಯೆಯನ್ನು ನಾಲ್ಕು ಜನರಿಗೆ ಹೇಳಿಕೊಡಬೇಕು ಎಂಬ ಮಾತನ್ನು ನಮ್ಮಪ್ಪ ಸದಾ ಹೇಳುತ್ತಿದ್ದರು. ಅದೇ ನನಗೆ ಸ್ಫೂರ್ತಿ’ ಎನ್ನುತ್ತಾರೆ.ಈ ಶಿಬಿರಕ್ಕೆ 150 ವಿದ್ಯಾರ್ಥಿಗಳನ್ನು ಮಾತ್ರ ನೋಂದಾಯಿಸಿಕೊಳ್ಳಲಾಗುತ್ತದೆ. ಮೊದಲು ಬಂದವರಿಗೆ ಆದ್ಯತೆ. ಮಕ್ಕಳ ಜೊತೆಗೆ ಪೋಷಕರಿಗೂ ಅವಕಾಶವಿದೆ. ಇಲ್ಲಿ  ಸಾಮಾನ್ಯ ಜ್ಞಾನ, ದೇವರ ನಾಮ, ಸ್ತೋತ್ರ, ಸುಭಾಷಿತ, ವ್ಯಕ್ತಿತ್ವ ವಿಕಸನ, ಯೋಗ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಹಿಂದಿ ದೋಹೆಗಳು, ಜಾನಪದ ನೃತ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಆಯಾ ಕ್ಷೇತ್ರಗಳಲ್ಲಿ ಪರಿಣಿತರಿಂದ ಶಿಕ್ಷಣ ನೀಡಲಾಗುತ್ತದೆ. ಪ್ರಸಕ್ತ ವರ್ಷದ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ ವಿಷಯ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಚಿತ್ರ ನಟ ಶಿವರಾಂ, ಸಂಗೀತ ಶಿಕ್ಷಣಕ್ಕೆ ಉಪಾಸನಾ ಮೋಹನ್, ಶಶಿಧರ್ ಕೋಟೆ ಹೀಗೆ ಆಯಾ ಕ್ಷೇತ್ರದ ಪರಿಣಿತರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಶಿಬಿರಾರ್ಥಿಗಳಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಇರುತ್ತದೆ. ಶಿಬಿರದ ಕೊನೆಯ ದಿನ ಸಮಾರೋಪ ಸಮಾರಂಭ ಏರ್ಪಡಿಸಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸುವ ಜೊತೆಗೆ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಗಣ್ಯರನ್ನು ಸನ್ಮಾನಿಸುವ ಕೈಂಕರ್ಯವನ್ನು ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿದೆ.ಬೇಸಿಗೆ ಶಿಬಿರವೇ ಅಲ್ಲದೆ, ದಸರಾ ವೇಳೆ 10 ದಿನಗಳ ದಸರಾ ಶಿಬಿರವನ್ನು ಆಯೋಜಿಸಲಾಗುತ್ತದೆ. ಆಗಲೂ ಕೂಡಾ ವಿಶಿಷ್ಟ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.ಒಟ್ಟಾರೆ ಎಲೆಮರೆ ಕಾಯಿಯಂತೆ ಚಕ್ರವರ್ತಿ ಪ್ರತಿಷ್ಠಾನ ಉದ್ಯಾನ ನಗರಿಯಲ್ಲಿ ಬೇಸಿಗೆ ಶಿಬಿರದ ಮೂಲಕ ಬಡ, ಆಸಕ್ತರಿಗೆ ಸಾಂಸ್ಕೃತಿಕ, ಶೈಕ್ಷಣಿಕ ಸೇವೆ ಸಲ್ಲಿಸುತ್ತಿದೆ. ಒಂದು ತಿಂಗಳ ಅವಧಿಯ ಶಿಬಿರ  ಏ. 2 ರಿಂದ ಆರಂಭವಾಗಲಿದೆ. ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 3. ಮಾಹಿತಿಗೆ: 99015 72212

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.