ಭಾನುವಾರ, ಮೇ 22, 2022
21 °C

ಉನ್ನಿಕೃಷ್ಣನ್ ಸೌಖ್ಯ ಗಾನಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಅದು ಎಂ.ವಿ. ನರಸಿಂಹಾಚಾರ್ ಸಂಗೀತ ಪ್ರತಿಷ್ಠಾನದ 9ನೇ ವಾರ್ಷಿಕೋತ್ಸವ ಸಮಾರಂಭ. ಚೆನ್ನೈನ ಸುಪ್ರಸಿದ್ಧ ಗಾಯಕ ವಿದ್ವಾನ್ ಪಿ. ಉನ್ನಿಕೃಷ್ಣನ್‌ರವರ ಸಂಗೀತ ಗಾಯನ ಸಮಾಜದಲ್ಲಿ ಅನುರಣಿಸಿತು.ಶಹನ ರಾಗದ ವರ್ಣದಿಂದ ಗಾಯನ ಪ್ರಾರಂಭಿಸಿದ ಉನ್ನಿಕೃಷ್ಣನ್ ಸಭಾಂಗಣದಲ್ಲಿ ಸೌಖ್ಯದ ವಾತಾವರಣ ಸೃಷ್ಟಿಸಿದರು. ಹಂಸಧ್ವನಿಯಲ್ಲಿ ವಂದೆ ಸದಾವಲ್ಲಭಂ ಮತ್ತು ರಾಮಚಂದ್ರ ಭಾವಯಾಮಿ ಕೃತಿಯ ಅದ್ಭುತ ನಿರೂಪಣೆ ಮಾಡಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ಹಿರಿಮೆ ಪ್ರತಿಬಿಂಬಿಸುವಂತಹ ಬೇಗಡೆ ರಾಗದ ನಿರೂಪಣೆ ಮತ್ತು ಭಕ್ತುನಿ ಕೃತಿಯಲ್ಲಿ ಮೂರು ಅಕ್ಷರಗಳಿಗೆ ಹಾಡಿಕೊಂಡು ಬಂದಂತಹ ಸ್ವರಕಲ್ಪನೆಯ ಬಿಗಿಯಿಂದಾಗಿ ಈ ಕ್ಲಿಷ್ಟ ರಾಗ ಕೇಳುಗರಿಗೆ ಆಹ್ಲಾದ ಉಂಟುಮಾಡಿತ್ತು. ಹಂಸನಾದ ರಾಗದ ಆಲಾಪನೆಯಲ್ಲಿ ವಾದಿ ಸಂವಾದಿತ್ವಗಳ ಬಳಕೆ ತಾರಷಡ್ಜದಲ್ಲಿ ಸಂಗತಿಗಳನ್ನು ಪೋಣಿಸಿ ಬಂದ ರೀತಿ, ಜಿ.ಎನ್. ಬಾಲಸುಬ್ರಮಣಿಯಂ ಅವರ ಪ್ರಸಿದ್ಧ ಕೃತಿ “ಬಾರಮ” ಮತ್ತು ಸಾರಸಾಕ್ಷಿಯಲ್ಲಿ ನೆರವಲ್ ಬಹಳ ಉತ್ಸಾಹ ಪ್ರದಾಯಕವಾಗಿತ್ತು. ತ್ಯಾಗರಾಜರ “ಇಂತ ಸೌಖ್ಯ” ಕೃತಿ ಕಛೇರಿಯ ಮುಖ್ಯ ವಸ್ತುವಾಗಿದ್ದು, ಸ್ವರರಾಗಲಯದಲ್ಲಿನ ವಿನ್ಯಾಸಕ್ಕೆ ಪ್ರೇಕ್ಷಕರ ಕರತಾಡನ ಬಿತ್ತು.ಗಾನಕಲಾಶ್ರೀ  ವಿ. ಎಚ್.ಕೆ. ವೆಂಕರಾಮ್ ಅವರ ಅನುಸರಣೆ, ಶೃತಿ ಶುದ್ಧವಾದನ, ಗಾನಕಲಾಶ್ರೀ ವಿ. ಆನೂರ್ ಅನಂತಕೃಷ್ಣ ಮತ್ತು ವಿ. ಗುರುಪ್ರಸನ್ನರವರ ಅದ್ಭುತ ಅನುಸರಣೆ ಮತ್ತು ವಿಶೇಷವಾಗಿ ತನಯಲ್ಲಿ ನುಡಿಸಿದ ಖಂಡ ನಡೆಯ ಕೊರಪು ಕಛೇರಿಯೆಂಬ ಮೂರ್ತಿಗೆ, ಪುಷ್ಪಾಲಂಕಾರದಂತಿತ್ತು. ಸುಪ್ರಸಿದ್ಧ ದೇವರ ನಾಮಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.