ಸೋಮವಾರ, ಏಪ್ರಿಲ್ 19, 2021
31 °C

ಎಂಥ ಮಜಾ, ಈ ರಜಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪರೀಕ್ಷೆ ಮುಗೀತು; ಪುಸ್ತಕ ಗಂಟು ಕಟ್ಟಿ ಮೂಲೆಯಲ್ಲಿಟ್ಟು ಆಮೇಲೆ ಟಿ.ವಿ. ನೋಡೋದು, ಊಟ ಮಾಡೋದು, ಆಟ ಆಡೋದು, ನಿದ್ದೆ ಮಾಡೋದು ಇದಿಷ್ಟೇ! ಆಹಾ, ಎಂಥ ಮಜಾ ಈ ರಜಾ!’ ಇದು ಪರೀಕ್ಷೆ ಮುಗಿಸಿ ರಜೆಯ ಸಂಭ್ರಮದಲ್ಲಿರುವ ಬಹಳಷ್ಟು ಮಕ್ಕಳ ಮನದಾಳದ ಬಯಕೆ-ಮಾತು!ನಿಜವೇ! ರಜಾ ಎಂದರೆ ಮಜವೇ; ಆದರೆ ಅದಷ್ಟೇ ಅಲ್ಲ. ರಜಾದಿನಗಳು ಮಕ್ಕಳು ಹೊಸ ಅನುಭವಗಳಿಗೆ ತೆರೆದುಕೊಳ್ಳಲು, ಬೇರೆ ಬೇರೆ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಕುಟುಂಬದವರೊಂದಿಗೆ ಬೆರೆಯಲು ಸಕಾಲ. ಶಾಲೆಯ ಕಟ್ಟು ಪಾಡು ಇಲ್ಲದ ಈ ಸಮಯದಲ್ಲಿ ಮಕ್ಕಳು ಸಂತೋಷವಾಗಿರಬೇಕು ಕಾರ್ಯಶೀಲರಾಗಿರಬೇಕು ಮತ್ತು ಸಮಯದ ಸದ್ವಿನಿಯೋಗವಾಗಬೇಕು. ಇವೆಲ್ಲವನ್ನೂ ನಿಭಾಯಿಸುವ ಹೊಣೆ ತಂದೆ-ತಾಯಿಯರದ್ದು.ತುಂಬಾ ಜನ ತಾಯಂದಿರು ಹೇಳುವ ಪ್ರಕಾರ ‘ರಜಾ ಬಂದ್ರೆ ಮಕ್ಕಳ ಹಿಂದೆ ಓಡಿ ಓಡಿ ಸಾಕಾಗುತ್ತೆ. ನಮ್ಮ ಕೆಲಸ ಮಾಡೋರ್ಯಾರು? ಹಾಗಾಗಿ ಟಿ.ವಿ. ನೋಡಲು ಬಿಟ್ರೆ ಆಯ್ತು. ಒಂಚೂರೂ ಗಲಾಟೆ ಇಲ್ಲದೆ ಗೊಂಬೆಗಳಂತೆ ಕೂತೀರ್ತಾರೆ. ನಮಗೂ ಕೆಲಸ ಸಲೀಸು’. ಇದು ಖಂಡಿತಾ ತಪ್ಪು. ಇಡೀ ರಜೆಯನ್ನು ಟಿ.ವಿ. ಮುಂದೆ ಕುಳಿತು ಹಾಳುಮಾಡುವುದರ ಬದಲು ಮೊದಲೇ ಒಂದು ವೇಳಾಪಟ್ಟಿ (ರಜೆಯನ್ನು ಹೇಗೆ ಕಳೆಯಬೇಕು) ಮಾಡಿಡುವುದು ಒಳ್ಳೆಯದು.ಮನೆಯ ಹೊರಗೆ ಮೋಜು

ಮಕ್ಕಳನ್ನು ಕರೆದುಕೊಂಡು     ಪಾರ್ಕ್, ಜಾತ್ರೆ, ವಸ್ತುಪ್ರದರ್ಶನ, ದೇವಸ್ಥಾನ ಹೀಗೆ ಹತ್ತಿರದ ಜಾಗಗಳಿಗೆ ಹೋಗಿ. ಇದರಿಂದ ಮಕ್ಕಳು ಹೊಸ ವಿಷಯ ಕಲಿಯುತ್ತಾರೆ. ಇತರ ಮಕ್ಕಳೊಡನೆ ಬೆರೆಯುತ್ತಾರೆ. ಕೌಟುಂಬಿಕ ಬಾಂಧವ್ಯ ಹೆಚ್ಚುವುದಲ್ಲದೆ ಅವರಲ್ಲಿನ ಶಕ್ತಿ ಸದ್ಬಳಕೆಯಾಗುತ್ತದೆ. ಆಟಗಳಂತೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಅವಶ್ಯಕ. ಕ್ರಿಕೆಟ್, ಕಬಡ್ಡಿ, ಷಟಲ್, ವಾಲಿಬಾಲ್, ಡಿಸ್ಕ್ ಇವೆಲ್ಲಾ ಮನರಂಜನೆ ಜತೆ ಮಕ್ಕಳಿಗೆ ಬೇಕಾದ ವ್ಯಾಯಾಮವನ್ನು ನೀಡುತ್ತದೆ.ಮನೆಯ ಒಳಗೆ ಬೇಸಿಗೆಯಲ್ಲಿ ಸೂರ್ಯನ ಬಿಸಿಲು ಅತೀ ಹೆಚ್ಚು. ಹೀಗಾಗಿ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಹೊರಗೆ ಆಡದೇ ಇರುವುದು ಒಳ್ಳೆಯದು. ಈ ಸಮಯದಲ್ಲಿ ಮಕ್ಕಳಿಗೆ ಬೇಸರ ಬರದಂತೆ ನಾನಾ ಚಟುವಟಿಕೆಗಳಲ್ಲಿ ತೊಡಗಿಸಬೇಕು.  ಉದಾಹರಣೆಗೆ ಹಳೆಯ ಪೇಪರ್‌ಗಳಿಂದ ಪೇಪರ್ ಬ್ಯಾಗ್ ಮಾಡುವುದು, ತರಕಾರಿ ಉಪಯೋಗಿಸಿ ವಿವಿಧ ವಿನ್ಯಾಸ, ಜೇಡಿಮಣ್ಣಿನ ಆಕೃತಿ, ಹಳೆಯ ಶುಭಾಶಯ ಪತ್ರಗಳಿಂದ ಹೊಸ  ಕಾರ್ಡ್‌ಗಳು ಹೀಗೆ.ಜೀವನ ಕೌಶಲ್ಯಗಳು

ಅದೆಷ್ಟೋ ತಾಯಂದಿರು ಹತ್ತು ವರ್ಷದ ಮಕ್ಕಳಿಗೆ ಊಟ ಮಾಡಿಸುತ್ತಾರೆ, ತಲೆ ಬಾಚುತ್ತಾರೆ. ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಕೆಲವೊಮ್ಮೆ ಹೀಗೆಮಾಡಬೇಕಾಗುವುದು ಅನಿವಾರ್ಯ. ಆದರೆ ರಜಾ ದಿನಗಳಲ್ಲಿ ಆದಷ್ಟೂ ಮಕ್ಕಳು ಸ್ವತಂತ್ರವಾಗಿ ಕೆಲಸ ಮಾಡಲು ಪ್ರೋತ್ಸಾಹ ನೀಡಬೇಕು. ಐದು ವರ್ಷದ ಮೇಲಿನ ಮಕ್ಕಳಿಗೆ ಪುಸ್ತಕ ಜೋಡಿಸಿಡುವುದು, ತಮ್ಮ ಬಟ್ಟೆ ಓರಣವಾಗಿಡುವುದು, ತಿಂಡಿ-ಊಟ ತಾವೇ ಮಾಡುವುದು, ಬಡಿಸಲು ಸಹಾಯ ಮಾಡುವುದು ಈ ರೀತಿ. ಇದು ಮಕ್ಕಳು ತಮ್ಮ ಜವಾಬ್ದಾರಿ ತಾವೇ ಹೊರುವಂತೆ ಮಾಡುವಲ್ಲಿ ಸಹಾಯಕಾರಿ.ಬೇಸಿಗೆ ಶಿಬಿರಗಳು

ತಂದೆ-ತಾಯಿಯರಿಬ್ಬರೂ ಹೊರಗೆ ದುಡಿಯುತ್ತಿದ್ದಲ್ಲಿ ಅಥವಾ ಸಮಯದ ಕೊರತೆ ಇದ್ದಲ್ಲಿ ಬೇಸಿಗೆ ಶಿಬಿರಗಳು ಉತ್ತಮ ಆಯ್ಕೆ. ಆದರೆ ಶಿಬಿರಕ್ಕೆ ಸೇರಿಸುವಾಗ ಮಗುವಿನ ಆಸಕ್ತಿಯ ಬಗ್ಗೆ ಗಮನ ಬೇಕು. ತಂದೆ-ತಾಯಿಯರು ತಮ್ಮ ಇಷ್ಟದ ವಿಷಯಕ್ಕೆ ಮಗುವನ್ನು ಸೇರಿಸಿದರೆ ಪ್ರಯೋಜನವಿಲ್ಲ.ಓದುವುದು

ಶಾಲೆಯ ಓದನ್ನು ಹೊರತುಪಡಿಸಿಯೂ ಮಕ್ಕಳಿಗೆ ಓದು ಬೇಕು. ಕತೆ ಪುಸ್ತಕಗಳು ಮಕ್ಕಳಿಗೆ ಮನರಂಜನೆ ಮಾತ್ರವಲ್ಲ ಅರಿವು, ಜ್ಞಾನವನ್ನು ನೀಡುತ್ತವೆ. ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನು ಬೆಳೆಸುತ್ತವೆ.ಪ್ರತಿದಿನ ಒಂದಿಷ್ಟು ಸಮಯವನ್ನು ಪುಸ್ತಕ ಓದಲೆಂದು, ಕತೆ ಹೇಳಲೆಂದು ಮೀಸಲಿಡಿ (ರಾತ್ರಿ ಊಟದ ನಂತರ, ಸಂಜೆಯ ಸಮಯ.....ಹೀಗೆ)ತಂದೆ-ತಾಯಿಯರು ತಾವೂ ನಿಯಮಿತವಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳು ಪೋಷಕರನ್ನು ನೋಡಿ ಅನುಸರಿಸುತ್ತಾರೆ, ಕಲಿಯುತ್ತಾರೆ.ಮಕ್ಕಳು ತಮಗೆ ಇಷ್ಟವಾಗುವ ಪುಸ್ತಕಗಳನ್ನು ಓದಲು ಸ್ವಾತಂತ್ರ್ಯ ನೀಡಿ. ಸಾಧ್ಯವಾದಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ. ಎಲ್ಲರೂ ಒಟ್ಟಿಗೆ ಕುಳಿತು ಪುಸ್ತಕ ಜೋರಾಗಿ ಓದುವುದು ಒಳ್ಳೆಯದು. ಒಬ್ಬೊಬ್ಬರಾಗಿ ಸರದಿಯಂತೆ ಓದುವುದರಿಂದ, ಓದುವ ಅಭ್ಯಾಸ ಮತ್ತು ಕಷ್ಟಕರವಾದ ಶಬ್ದಗಳ ಪರಿಚಯ-ಅರ್ಥ ಎಲ್ಲರಿಗೂ ಆಗುತ್ತದೆ. ಬರೀ ಕತೆ ಪುಸ್ತಕ ಮಾತ್ರವಲ್ಲದೆ ನಿಯತಕಾಲಿಕ, ವೃತ್ತಪತ್ರಿಕೆ ಓದುವುದನ್ನೂ ಪ್ರೋತ್ಸಾಹಿಸಿ. ಇದರಿಂದ ಮಕ್ಕಳ ಪ್ರಪಂಚ ಜ್ಞಾನ ಹೆಚ್ಚುತ್ತದೆ, ಆಗು-ಹೋಗುಗಳ ಅರಿವು ಉಂಟಾಗುತ್ತದೆ.ಸಂಬಂಧಿತ ಪುಸ್ತಕಗಳನ್ನು ಓದುವುದು ಉತ್ತಮ. ಉದಾಹರಣೆಗೆ ಮೈಸೂರಿಗೆ ಪ್ರವಾಸ ಹೋಗುವುದಾದರೆ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಇತಿಹಾಸ... ಇತ್ಯಾದಿ. ಇದರಿಂದ ಮಕ್ಕಳಿಗೆ ಪ್ರವಾಸವನ್ನು ಹೆಚ್ಚು ಅರ್ಥಪೂರ್ಣವಾಗಿ, ಆನಂದವಾಗಿ ಕಳೆಯಲು ಸಾಧ್ಯ.ಮಕ್ಕಳಿಗೆ ಪುಸ್ತಕ ಓದಿದ ನಂತರ ಅದರ ಬಗ್ಗೆ ಮಾತನಾಡಲು, ಚರ್ಚೆ ಮಾಡಲು ಅವಕಾಶ ನೀಡಬೇಕು. ಇದರಿಂದ ಅವರ ಸೃಜನಶೀಲತೆ ಬೆಳೆಯುವುದರ ಜತೆ ಧೈರ್ಯವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅನುಕೂಲವಾಗುತ್ತದೆ. ಟಿ.ವಿ. ನೋಡುವುದು

ದಿನಕ್ಕೆ ಒಂದು ಗಂಟೆಗಿಂತ ಹೆಚ್ಚು ಸಮಯ ಟಿ.ವಿ.ಯ ಮುಂದೆ ಬೇಡ. ಧಾರಾವಾಹಿ, ಸಿನಿಮಾಗಳಿಗಿಂತ ವಿಷಯಾಧರಿತ ಕಾರ್ಯಕ್ರಮ ನೋಡುವುದು ಒಳ್ಳೆಯದು. ಮಕ್ಕಳ ವಯಸ್ಸಿಗೆ ಅನುಗುಣವಾಗಿ ಎಂಥ ಕಾರ್ಯಕ್ರಮ ನೋಡಬೇಕೆಂಬುದನ್ನು ಅವರೊಡನೆ ಚರ್ಚಿಸಿ, ನಿರ್ಧರಿಸಿ. ಟಿ.ವಿ. ಇಡೀ ಜಗತ್ತನ್ನು ತೋರಿಸುವ ಬೆಳಕಿಂಡಿಯಾಗಬೇಕೇ ಹೊರತು ಮನೆಯಲ್ಲೇ ಬಂಧಿಸಿಡುವ ಮಾಯಾಪೆಟ್ಟಿಗೆ ಅಲ್ಲ!ಶಾಲೆಗೆ ಹೋಗಲು ತಯಾರಿ

ಶಾಲೆ ಆರಂಭವಾಗುವ ಮೂರು ವಾರ ಮೊದಲೇ ಹಿಂದಿನ ತರಗತಿಯ ಮುಖ್ಯ ವಿಷಯ, ಶಾಲೆಗೆ ಬೇಕಾಗುವ ವಸ್ತುಗಳು, ಪುಸ್ತಕಗಳು, ರಟ್ಟು ಹಾಕುವುದು ಇವೆಲ್ಲವನ್ನು ಮಕ್ಕಳಿಗೆ ತಯಾರಿ ಮಾಡಿಸಬೇಕು. ಇಲ್ಲದಿದ್ದಲ್ಲಿ ಕಡೆಯ ದಿನದ ತನಕ ಮುಂದೂಡಿ ನಂತರ ಶಾಲೆಗೆ ಹೋಗುವುದು ಎಂದರೆ ಅಳು ತರುವ, ದುಃಖಿಸುವ ವಿಷಯವಾಗುತ್ತದೆ. ಅದೇ ರೀತಿ ರಜೆಯಲ್ಲಿ ಬರವಣಿಗೆ ಸುಧಾರಿಸಲು ಕಾಪಿ ಬರೆಯುವುದು, ದಿನಾ ಮಗ್ಗಿ ಹೇಳುವುದು, ಪ್ರಬಂಧ ಬರೆಯುವುದು ಇವೆಲ್ಲಾ ಶಾಲೆಯ ಕಲಿಕೆಗೆ ಪೂರಕ, ಬುದ್ಧಿ ಪ್ರಚೋದಕ. ಹೀಗೆ ರಜಾದಿನಗಳು ಮಜವಾಗಿರಲಿ, ಹಾಗೆಂದು ವೃಥಾ ಕಾಲಹರಣ ಬೇಡ. ಮಕ್ಕಳ ರಜೆ ಅರ್ಥಪೂರ್ಣವಾಗಿರಲು ತಂದೆ-ತಾಯಿಯರು ಪೂರ್ವ ತಯಾರಿ ನಡೆಸುವುದು ಒಳ್ಳೆಯದು.ರಜೆಯಲ್ಲಿ ಮಾಡಬಹುದಾದದ್ದು...

*  ಭಿತ್ತಿಪತ್ರಗಳು, ಚಿತ್ರ ಪಟಗಳು (ಪರಿಸರ,ಪ್ರಾಣಿ-ಪಕ್ಷಿಗಳು, ಆಹಾರ, ವೈವಿಧ್ಯಮಯ ಉಡುಪುಗಳು....)

*  ಲೆಕ್ಕಗಳನ್ನು ಮಾಡುವುದು, ಮಗ್ಗಿ ಹೇಳುವುದು.

*  ದಿನಕ್ಕೊಂದು ಹೊಸ ಶಬ್ದ ಕಲಿಯುವುದು (ನಿಘಂಟಿನಿಂದ)

*  ಬರವಣಿಗೆ ಸುಧಾರಿಸಿಕೊಳ್ಳುವುದು.

*  ಹೊಸ ಹಾಡು, ಶ್ಲೋಕ, ನೃತ್ಯ ಕಲಿಯುವುದು.

*  ಡೈರಿ ಬರೆಯುವುದು.

*  ಗಿಡಗಳಿಗೆ ನೀರು ಹಾಕುವುದು,

*  ಕತೆ ಓದುವುದು -ಬರೆಯುವುದು.

*  ಗಾಡಿ ಸ್ವಚ್ಛ ಮಾಡುವುದು, ಧೂಳು ಒರೆಸುವುದು.

*  ಸ್ನೇಹಿತರೊಂದಿಗೆ ಹೊರಾಂಗಣ-ಒಳಾಂಗಣ ಆಟ.

*  ಪ್ರವಾಸ.

*  ನೆಂಟರಿಷ್ಟರ ಮನೆಗೆ ಭೇಟಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.