ಸೋಮವಾರ, ಜೂನ್ 21, 2021
30 °C

ಎಂಥ ಮಾದರಿ ಈ ತೂರಮರಿ

ಎ.ಎಸ್. ಹೂಲಗೇರಿ Updated:

ಅಕ್ಷರ ಗಾತ್ರ : | |

‘ಹಂಚಿಕೊಂಡು ಉಂಡರೆ ಹೊಂದಿಕೊಂಡು ಬಾಳಿದರೆ ಜೀವನ ಹೊನ್ನಿನ ದಿಬ್ಬ...’ ಇದು ಹಳೆಯ ಮಾತು. ಆ ಮಾತನ್ನು ಅಕ್ಷರಶಃ ಸತ್ಯ ಮಾಡಿ ತೋರಿಸಿ ಎಲ್ಲರಿಗೂ ಮಾದರಿಯಾಗಿದೆ ‘ತೂರಮರಿ’. ಇದು  ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಆದರ್ಶ ಗ್ರಾಮ. ಇಲ್ಲಿ ದ್ವೇಷ, ಅಸೂಯೆ, ಜಗಳ, ಹೊಡೆದಾಟ ಬಡಿದಾಟಗಳಿಗೆ ಆಸ್ಪದವೇ ಇಲ್ಲ. ಹೊಂದಿಕೊಂಡು ಬಾಳು ನಡೆಸಬೇಕು ಎನ್ನುವುದು ಗ್ರಾಮಸ್ಥರ ಮೂಲ ಮಂತ್ರ.ಮನೆ ನೂರು– ದಾರಿ ಮೂರು

ಈ ಗ್ರಾಮದಲ್ಲಿನ ಮನೆಗಳು ಬರೋಬ್ಬರಿ ನೂರು. ಊರೊಳಗೆ ಹೋಗಲು ಇರುವ ದಾರಿ ಬರೀ ಮೂರು. ಎಲ್ಲ ಮನೆಗಳಿಗೂ ಎತ್ತರವಾದ ಕಾಂಪೌಂಡ್‌ ಇವೆ. ಇವುಗಳ ಮೇಲೆ ಮನೆ ನಿರ್ಮಿಸಲಾಗಿದೆ. ಈ ಗ್ರಾಮ ಪ್ರವೇಶಿಸಿ ಈ ಮನೆಗಳ ಬಾಗಿಲಿಗೆ ತಲುಪಲು ಸಿಕ್ಕ ಸಿಕ್ಕ ದಾರಿ ಹಿಡಿಯುವಂತಿಲ್ಲ. ಇರುವ ಮೂರು ದಾರಿಗಳಲ್ಲಿನ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು.ಸುಶಿಕ್ಷಿತರೂ, ಸುಸಂಸ್ಕೃತರೂ ಆಗಿರುವ ಈ ಊರ ಜನರು ಕಟ್ಟು ನಿಟ್ಟಿಗೆ ಹಾಗೂ ಒಗ್ಗಟ್ಟಿಗೆ ಹೆಸರಾದವರು. ಯಾವುದೇ ಸಣ್ಣ ಕಲಹಗಳಿರಲಿ ಅವುಗಳನ್ನು ದೊಡ್ಡದು ಮಾಡಲು ಹೋಗುವುದಿಲ್ಲ, ಅದಕ್ಕೆ ಇಲ್ಲಿ ಆಸ್ಪದವೂ ಇಲ್ಲ. ಕೋರ್ಟು ಕಚೇರಿ ಅಲೆಯುವುದರಿಂದ ಆಗುವ ಕಷ್ಟ ನಷ್ಟಗಳ ಬಗ್ಗೆ ತಿಳಿವಳಿಕೆ ನೀಡಿ ಹಿರಿಯರೇ  ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಾರೆ. ಹಿರಿಯರ ಮಾತು ಮೀರಿ ಹೋದರೆ ಉಳಿದವರ ಬೆಂಬಲ ಸಿಗುವುದು ಕಡಿಮೆ.  ಆದ್ದರಿಂದ ಅಪರೂಪಕ್ಕೇನಾದರೂ ಜಗಳ, ಕಚ್ಚಾಟ ಏನೇ ಆರಂಭವಾದರೂ ಅಲ್ಲೇ ಶಮನ ಆಗಿ ಬಿಡುತ್ತದೆ.ಇಲ್ಲಿ ಮುಸ್ಲಿಂ ಸಮುದಾಯದವರು ಇಲ್ಲ. ಆದರೆ ಇಲ್ಲಿ ಎಲ್ಲರೂ ಮೊಹರಂ ದಿನವನ್ನು ಅದ್ದೂರಿಯಿಂದ ಆಚರಿಸುತ್ತಾರೆ. ಸಾರಾಯಿ ಅಂಗಡಿ, ಅಷ್ಟೇ ಏಕೆ ಚಹಾ ಅಂಗಡಿಗೂ ಇಲ್ಲಿ ವಿರೋಧ. ಯಾರದ್ದೇ ಮನೆಯಲ್ಲಿ ಮದುವೆ ಇರಲಿ, ಅದು ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಇಡೀ ಊರ ಜನರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಕೂಡಿ ಊಟ ಮಾಡುತ್ತಾರೆ. ನ್ಯಾಯಬೆಲೆ ಅಂಗಡಿಯಲ್ಲಿ ಬಡ ರೈತರಿಗೆ ಮೊದಲು ಉಚಿತವಾಗಿ ದಿನಸಿ ನೀಡಲಾಗುತ್ತದೆ.  ಅಂತಹ ರೈತರು ಬೆಳೆ ಬಂದ ನಂತರ ಹಣವನ್ನು ತೀರಿಸುತ್ತಾರೆ.ಊರಿನಲ್ಲಿ ಯಾರಾದರೂ ನಿಧನರಾದರೆ ಅಂದಿನ ಎಲ್ಲಾ ಕೆಲಸಕ್ಕೂ ಎಲ್ಲರದ್ದೂ ಕಡ್ಡಾಯ ರಜೆ. ಶ್ರೀಮಂತರಿರಲಿ, ಬಡವರಿರಲಿ ಸತ್ತವರನ್ನು ಹೊತ್ತೊಯ್ಯುವುದು ಅಲಂಕೃತ ಮಂಟಪದಲ್ಲಲ್ಲ, ಕೌದಿಯಲ್ಲಿ. ಆಡಂಬರ ಮಂಟಪದ ಬದಲು ಕೇವಲ ಕೌದಿಯನ್ನು ಉಪಯೋಗಿಸಬೇಕೆಂದು ಊರ ಗುರುಗಳಾದ ಮಳೇಂದ್ರ ಸ್ವಾಮಿಗಳು ಅಪ್ಪಣೆ ಮಾಡಿದ್ದರಿಂದ ಅದನ್ನು ತಪ್ಪದೇ ಪಾಲಿಸಿಕೊಂಡು ಬರಲಾಗುತ್ತಿದೆ.ಊರ ನಡುವೆ ರೈತ ಚರ್ಚಾ ಮಂಡಳಿಯೊಂದು ಇದೆ. ಇಲ್ಲಿ ಗ್ರಾಮಸ್ಥರು ಭೇಟಿ ನೀಡಿದರೆ ಇಡೀ ಊರಿನ ಮಾಹಿತಿ ಸಿಗುತ್ತದೆ. ಮನೆಗಳು, ಜನಸಂಖ್ಯೆ, ಅವರ ವಿದ್ಯಾಭ್ಯಾಸ, ನೌಕರರ ಸಂಖ್ಯೆ, ಅಂಗವಿಕಲರು... ಅಷ್ಟೇ ಏಕೆ ಗ್ರಾಮದಲ್ಲಿನ ಎತ್ತು, ಎಮ್ಮೆ, ಆಕಳು, ಆಡು, ಎತ್ತು ಬಂಡಿ ಹೀಗೆ ಸಮಗ್ರ ಮಾಹಿತಿಯ ಫಲಕವನ್ನೇ ತೂಗು ಹಾಕಲಾಗಿದೆ.ಸ್ವಚ್ಛ ಗ್ರಾಮ

ಯಾವ ಓಣಿಗಳಲ್ಲೂ ನೀರಿನ ನಲ್ಲಿಗಳಿಲ್ಲ. ಊರ ಹೊರಗಿನ ನೀರಿನ ಟ್ಯಾಂಕ್ ಮತ್ತು ಬಾವಿಗಳಿಂದಲೇ ಕೊಡದಿಂದ ಹೊತ್ತು ತರಬೇಕು. ಪ್ರತಿಯೊಬ್ಬರ ಮನೆಯ ಮುಂದೆ ಜೋಳ ನಾಶವಾಗುತ್ತದೆಂಬ ಕಾರಣದಿಂದ ನೀರಿನ ಪೈಪ್‌ಲೈನ್ ವ್ಯವಸ್ಥೆ ಇಲ್ಲ. ಎಲ್ಲರ ಮನೆಯ ಮುಂದೆ ಇಂಗು ಬಚ್ಚಲುಗಳಿವೆ. ಹೀಗಾಗಿ ಓಣಿಗಳಲ್ಲಿ ರಾಡಿ ರಸ್ತೆಗಳಿಲ್ಲ.ವಿಜಾಪುರ ಅಖಂಡ ಜಿಲ್ಲೆಯಾಗಿದ್ದಾಗ ಕೃಷಿ ಇಲಾಖೆಯವರು ಏರ್ಪಡಿಸಿದ್ದ ರೈತ ಮಂಡಳಿ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರೂ ಭಾಗವಹಿಸಿದ್ದರು. ಅದರಲ್ಲಿ ತೂರಮರಿಗೇ ಪ್ರಥಮ ಸ್ಥಾನ ಸಿಕ್ಕಿತು. ೧೯೮೧ ರಿಂದ ೮೭ರ ತನಕ ಸತತವಾಗಿ ಮೊದಲನೆಯ ಬಹುಮಾನ ಪಡೆದುಕೊಂಡ ಹೆಮ್ಮೆ ತೂರಮರಿಯದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.