ಗುರುವಾರ , ಮೇ 19, 2022
20 °C

ಎಂದೂ ಮುಗಿಯದ ಸುಗ್ಗಿಯ ಕಣಜ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡಾಯ ಸಾಹಿತ್ಯ ಚಳವಳಿಯ ಕಾಲದಲ್ಲಿ ಪ್ರಭಾವಶಾಲಿ ಕಥೆಗಳನ್ನು ಬರೆಯುತ್ತಿದ್ದ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸಮಗ್ರ ಕಥೆಗಳ ಸಂಕಲನ ಇದೀಗ ಪ್ರಕಟವಾಗಿದ್ದು, ಅವರ ಎಲ್ಲಾ ಕಥೆಗಳನ್ನು ಒಟ್ಟಾಗಿ ಓದುವ ಅವಕಾಶ ಕನ್ನಡಿಗರಿಗೆ ಲಭ್ಯವಾಗಿದೆ.

 

ರಾಮಣ್ಣನವರು ಪ್ರಕಟಿಸಿದ್ದ `ನೆಲದ ಒಡಲು~ (1967), `ಗರ್ಜನೆ~ (1972), `ನೆಲದ ಸಿರಿ~ (1974), `ಒಂದು ಹುಡುಗನಿಗೆ ಬಿದ್ದ ಕನಸು~ (1979), `ಕೊಳಲು ಮತ್ತು ಖಡ್ಗ~ (1998) ಹಾಗೂ `ತೋಳಗಳ ನಡುವೆ~ (1983, ಕಿರುಕಾದಂಬರಿ)

 

- ಹೀಗೆ ರಾಮಣ್ಣನವರ ಎಲ್ಲ ಸಂಕಲನಗಳ ಕಥೆಗಳು ಈ ಸಂಪುಟದಲ್ಲಿ ಸೇರ್ಪಡೆಯಾಗಿವೆ. ಇಲ್ಲಿನ ಕಥೆಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಸೊಗಸಾದ ಮುನ್ನುಡಿಯೊಂದನ್ನು ಬರೆದಿರುವ ಡಾ. ಕೆ.ವಿ.ನಾರಾಯಣ ಅವರು ಸಂಪುಟದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.ರಾಮಣ್ಣನವರ ಎಲ್ಲಾ ಕಥೆಗಳು ಮಾನವ ಪ್ರಕೃತಿಯನ್ನು ನಿಸರ್ಗ ವ್ಯಾಪಾರಗಳ ನಡುವೆ ಇರಿಸಿ ಚರ್ಚಿಸಲು ಪ್ರಯತ್ನಿಸುತ್ತವೆ. ಈ ಸಂಬಂಧ ನಿಷ್ಕರ್ಷೆಯಲ್ಲಿ ಕೆಲವು ಬಾರಿ ನಿಸರ್ಗ ಗೆಲುವು ಸಾಧಿಸಿದರೆ, ಕೆಲವು ಬಾರಿ ಮಾನವ ಗೆಲುವು ಸಾಧಿಸುತ್ತಾನೆ.

 

ಎಲ್ಲೆಲ್ಲಿ ನಿಸರ್ಗ ಗೆಲುವು ಸಾಧಿಸುತ್ತದೆಯೋ ಅಲ್ಲಿ ಗ್ರಾಮೀಣ ಪರಿಸರದ ಪಾತ್ರಗಳು ವಿಜೃಂಭಿಸಿದರೆ, ಎಲ್ಲೆಲ್ಲಿ ಮಾನವ ಜಯ ಸಾಧಿಸುತ್ತಾನೆಯೋ ಅಲ್ಲಿ ಆಧುನಿಕತೆ ಪ್ರವೇಶ ಮಾಡಿರುತ್ತದೆ.ಉದಾಹರಣೆಗೆ, ರಾಮಣ್ಣನವರ ಮೊದಲ ಸಂಕಲನದಲ್ಲಿ ಪ್ರಕಟವಾದ `ಮಳೆಗರೆಯಿತು ಬಾನು, ಹಸುರಾಯಿತು ಮನ~ ಕಥೆಯನ್ನು ಗಮನಿಸಬಹುದು. ಇಲ್ಲಿ ಗದ್ದೆಯ ನೀರು ಕಾರಣವಾಗಿ ಸಣ್ಣ ಮತ್ತು ಪುಟ್ಟರಾಮರ ನಡುವೆ ಜಗಳ ಏರ್ಪಡುತ್ತದೆ.ಆದರೆ ಈ ಜಗಳ ಅವರ ನಡುವಣ ಸಂಬಂಧಗಳನ್ನು ತುಂಡು ಮಾಡುವುದಿಲ್ಲ. ಮದುವೆಯಲ್ಲಿ ಎರೆಯಲಾಗುವ `ಧಾರೆ ನೀರು~ ಹೇಗೆ ದಂಪತಿಗಳನ್ನು ಶಾಶ್ವತವಾಗಿ ಒಗ್ಗೂಡಿಸುತ್ತದೆಯೋ ಹಾಗೆಯೇ ಇಲ್ಲಿ ಕೂಡಾ ಬೀಳುವ `ಮೊಮೇರಿ ಮಳೆ~ಯು ಅವರಿಬ್ಬರ ನಡುವಣ ವೈಷಮ್ಯವನ್ನು ಅಳಿಸಿ ಹಾಕುತ್ತದೆ. ನಿಸರ್ಗದ ತೆಕ್ಕೆಯಲ್ಲಿ ಮನುಷ್ಯ ಸಂಬಂಧಗಳು ಹಾಳಾಗದೆ ಉಳಿಯುತ್ತವೆ.ಇಂಥ ನಿಲುವಿಗೆ ವಿರುದ್ಧವಾದ `ಕ್ಷಯ~ ಕಥೆಯಲ್ಲಿ ನಿಸರ್ಗವಿಲ್ಲ. ಬದಲು ನಿಸರ್ಗವನ್ನು ಲೂಟಿ ಮಾಡುವ ನೀಲಕಂಠರಾಯನಂಥವರಿದ್ದಾರೆ. ಅವನಿಗೆ ಸಹಕಾರಿಯಾಗಿ ನಿಲ್ಲಬಲ್ಲ ಜಯರಾಮನಂಥ ವಿದ್ಯಾವಂತರಿದ್ದಾರೆ. ಈ ಶಕ್ತಿಗಳು ದೇವೇಗೌಡರಂಥ ಅಮಾಯಕರನ್ನು ಸುಲಭವಾಗಿ ಬಲಿ ತೆಗೆದುಕೊಳ್ಳುತ್ತವೆ. ನಿಸರ್ಗವನ್ನು ನಿರ್ಲಕ್ಷಿಸಿ ವಿಜೃಂಭಿಸುವ ಮಾನವನ ಕರಾಳ ಇತಿಹಾಸದ ಕಥೆಯಿದು.`ಕೆಂಪು ಹುಂಜ~ ಕಥೆಯು ಇಂತಹದ್ದೇ ನಿಲುವಿನ ಇನ್ನೊಂದು ಬಗೆಯ ಅಭಿವ್ಯಕ್ತಿಯಾಗಿದೆ. ಈ ಕಥೆಯಲ್ಲಿ `ನಿಂಗಕ್ಕ~ನಿಗೆ ಕೆಂಪು ಹುಂಜದೊಡನೆ ಸಾಧ್ಯವಾದ ಸಂಬಂಧ ಜೈವಿಕವಾದುದು. ಆಕೆಗೆ ನಿದ್ದೆಯಲ್ಲಿ ಕೂಡಾ ಅದು ಕಾಣಿಸುತ್ತದೆ. ಆದರೆ ಸಂಪುಟದ ಇನ್ನೊಂದು ಕಥೆ `ಗೋಸುಂಬೆ~ಯಲ್ಲಿ ಉಗ್ರ ನರಸಿಂಹಯ್ಯನಿಗೆ `ನಾಯಿ~ಯೊಡನೆ ಏರ್ಪಡುವ ಸಂಬಂಧವು ಜೈವಿಕವಾದುದಲ್ಲ.

 

ಅದು ಅಧಿಕಾರದೊಡನೆ ಸಂಬಂಧಹೊಂದಿ ಗೋಸುಂಬೆಯಂತೆ ಬದಲಾಗುತ್ತಾ ಹೋಗುತ್ತದೆ. ಈ ಎರಡೂ ಕಥೆಗಳು ಮಾನವನು ನಿಸರ್ಗದ ಭಾಗವಾದ ಪ್ರಾಣಿವರ್ಗದೊಡನೆ ಏರ್ಪಡಿಸಿಕೊಂಡ ಸಂಬಂಧಗಳಲ್ಲಾದ ಬದಲಾವಣೆಯನ್ನು ತುಂಬ ಪರಿಣಾಮಕಾರಿಯಾಗಿ ಧ್ವನಿಸುತ್ತವೆ.ರಾಮಣ್ಣ ಅವರಿಗೆ ಹೆಸರು ತಂದುಕೊಟ್ಟ `ಜೀತ~ ಕಥೆಯಲ್ಲಿ ಚಿಕ್ಕರಾಮ ಮತ್ತು ಪುಟ್ಟನಿಂಗರ ಮೂಲಕ ಸಾಂಪ್ರದಾಯಿಕ ಜೀತದ ವಿವರಣೆಯನ್ನು ನೀಡಲಾಗಿದೆ. ಜೊತೆಗೆ ಶೋಷಿತ ಸಮುದಾಯದ ಜೀವನದೊಳಗಡೆ ಹುದುಗಿರುವ ಅದಮ್ಯ ಜೀವನೋತ್ಸಾಹವನ್ನು ತೆರೆದಿಡಲಾಗಿದೆ.

 

ಆದರೆ ಜೀತದ ಯುಗ ಮುಗಿದು ಸ್ವಾತಂತ್ರ್ಯದ ಕಾಲ ಬಂದಾಗ ಮಾನವನಿಗೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದೆಯೇ ಎಂಬ ಪ್ರಶ್ನೆಯನ್ನು ರಾಮಣ್ಣ ಕೇಳಿಕೊಳ್ಳುತ್ತಾರೆ. `ಒಂದು ಹುಡುಗನಿಗೆ ಬಿದ್ದ ಕನಸು~ ಕಥೆಯಲ್ಲಿ ಹುಡುಗ ನೋಡುವುದು ಹಾಳು ಬಿದ್ದ ಕೋಟೆಗಳನ್ನು, ಬಂಧೀಖಾನೆಗಳನ್ನು ಮತ್ತು ಮೃಗಾಲಯದಲ್ಲಿ ಬಂಧಿತವಾದ ಪ್ರಾಣಿಗಳನ್ನು.ಈ ಸ್ಥಿತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುಡುಗ ಕರುಣಾಕರನ ಕಥೆ ಮಾತ್ರ ಹುಡುಗನಿಗೆ ಇಷ್ಟವಾಗುತ್ತದೆ. ಆದರೆ ಬಿಡುಗಡೆಯ ಕಥೆ ಹೇಳಿದ ಮಾಸ್ತರರನ್ನು ಹುಡುಗ ಕನಸಲ್ಲಿ ಕಳೆದುಕೊಳ್ಳುತ್ತಾನೆ. ಬಿಡುಗಡೆಯೇ ಇಲ್ಲದೆ ಸೊರಗುವ ಮನುಕುಲದ ಕಥೆಯನ್ನು ರಾಮಣ್ಣ ಮನಮುಟ್ಟುವಂತೆ ವಿವರಿಸುತ್ತಾರೆ. `ಗಾಂಧಿ, ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು~ ಮೊದಲಾದ ಕಥೆಯಲ್ಲಿ ಇದು ವಿಡಂಬನೆಯ ಸ್ವರೂಪವನ್ನು ಪಡೆದುಕೊಂಡಿದೆ.ಬಹಳ ವಿಶಿಷ್ಟವಾದ `ಧರ್ಮ~ ಕಥೆಯನ್ನು ಗಮನಿಸಿದರೆ ರಾಮಣ್ಣನವರ ಮಾನವೀಯ ಕಳಕಳಿ ಎಷ್ಟು ವಿಸ್ತಾರವಾದುದು ಮತ್ತು ಉದಾರವಾದುದು ಎಂಬುದು ಸ್ಪಷ್ಟವಾಗುತ್ತದೆ. ಈ ಕಥೆಯು ಭೂ ಮಸೂದೆ ಕಾಲಕ್ಕೆ ಭೂಮಿ ಕಳಕೊಂಡ ಬ್ರಾಹ್ಮಣನೊಬ್ಬನ ಕರುಣ ಕಥೆ. ಅವನ ಉದಾತ್ತತೆಗೆ ಗೇಣಿದಾರ ಚನ್ನೇಗೌಡನೂ ಒಲಿದುಬಿಡುತ್ತಾನೆ. ದೇವರಾಜ ಅರಸು ಅವರ ಕಾಲದಲ್ಲಿ ನಡೆದ ಕ್ರಾಂತಿಕಾರೀ ಬದಲಾವಣೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ಈ ಕಥೆ ಒತ್ತಾಯಿಸುತ್ತದೆ.ಹೀಗೆ, ಬೆಸಗರಹಳ್ಳಿ ರಾಮಣ್ಣನವರ ಕಥೆಗಳು ಗ್ರಾಮೀಣ ಪರಿಸರದ ಜನರ ನಡುವಣ ಬದುಕಿನ ಸಹನೀಯತೆಯನ್ನು ಹಾಗೂ ಆಧುನಿಕ ಕಾಲದ ಜನರ ನಡುವಣ ಅಸಹನೆಗಳನ್ನು ಒಟ್ಟೊಟ್ಟಾಗಿ ಪ್ರಕಟಪಡಿಸುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.