ಗುರುವಾರ , ಜನವರಿ 23, 2020
19 °C
ಏಡ್ಸ್‌ ಮುಕ್ತ ರಾಜ್ಯ ನಿರ್ಮಾಣಕ್ಕೆ ಕೈಜೋಡಿಸಿ: ಸಿದ್ದರಾಮಯ್ಯ

ಎಚ್‌ಐವಿ/ಏಡ್ಸ್‌ ಶಾಸಕಾಂಗ ವೇದಿಕೆ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕರ್ನಾಟಕವನ್ನು ಎಚ್‌ಐವಿ/ ಏಡ್ಸ್‌ ಮುಕ್ತ ರಾಜ್ಯವನ್ನಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು ಸರ್ಕಾರದೊಂದಿಗೆ ಕೈಜೋಡಿಸುವ ಮೂಲಕ ಈ ಮಾರಕ ರೋಗವನ್ನು ನಿರ್ಮೂಲನೆ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸುವರ್ಣ ವಿಧಾನಸೌಧದ ಸೆಂಟ್ರಲ್‌ ಹಾಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಎಚ್‌ಐವಿ/ಏಡ್ಸ್‌ ಶಾಸಕಾಂಗ ವೇದಿಕೆ’ ರಚನೆ ಸಮಾರಂಭ ಹಾಗೂ ಜನಪ್ರತಿನಿಧಿಗಳಿಗೆ ಸಮಗ್ರ ಆರೋಗ್ಯ, ಏಡ್ಸ್‌ ಕುರಿತ ಮಾಹಿತಿ ಸಮಾವೇಶದಲ್ಲಿ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.‘ಎಚ್‌ಐವಿ ಪೀಡಿತರನ್ನು ತಿರಸ್ಕಾರದಿಂದ ನೋಡದೇ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು. ರೋಗ ಬಂದ ತಕ್ಷಣ ಅವರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರಂತೆ ನೋಡಬಾರದು. ಹೆಚ್ಚು ವರ್ಷ ಬದುಕಲು ಅವರಿಗೆ ಅವಕಾಶ ಮಾಡಿಕೊಡಬೇಕು. ರೋಗಿ ಗಳು ಸಹ ಸ್ವಯಂ ನಿರ್ಬಂಧಗಳನ್ನು ಹಾಕಿಕೊಂಡು ಈ ಸೋಂಕು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.‘ಜಿ.ಪಂ, ತಾ.ಪಂ, ಗ್ರಾ.ಪಂ. ಹಾಗೂ ನಗರಸಭೆ, ಮಹಾನಗರ ಪಾಲಿಕೆ ಜನಪ್ರತಿನಿಧಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಈ ರೋಗದ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ಈ ರೋಗ ಮತ್ತೊಬ್ಬರಿಗೆ ಹರಡದಂತೆ ನೋಡಿಕೊಳ್ಳಬೇಕು’ ಎಂದರು.ಸಮಾವೇಶ ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ‘ಈ ರೋಗ ನಿರ್ಮೂಲನೆ ಮಾಡಲು ಗ್ರಾ.ಪಂ.ನಿಂದ ಲೋಕಸಭೆವರೆಗಿನ ಎಲ್ಲ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು. ಈ ವಿಷಯದಲ್ಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಿದರೆ ಇದನ್ನು ನಿಯಂತ್ರಣಕ್ಕೆ ತರಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.ಕೇಂದ್ರ ಭೂಸಾರಿಗೆ ಸಚಿವ ಹಾಗೂ ಎಚ್‌ಐವಿ/ ಏಡ್ಸ್‌ ಸಂಸದೀಯ ವೇದಿಕೆ ಅಧ್ಯಕ್ಷ ಆಸ್ಕರ್ ಫರ್ನಾಂಡಿಸ್‌, ‘ದೇಶದಲ್ಲಿ ಈ ಸೋಂಕು ಹರಡುವಿಕೆ ಪ್ರಮಾಣ ಶೇ.50ರಷ್ಟು ಕಡಿಮೆ ಯಾಗಿದೆ. ಹೀಗಿದ್ದರೂ ಜಗತ್ತಿನಲ್ಲಿ ದೇಶವು ಎರಡನೇ ಸ್ಥಾನದಲ್ಲಿದೆ. ಗ್ರಾಮಸಭೆಗಳಲ್ಲೂ ಈ ವಿಷಯ ಚರ್ಚೆಯಾಗಬೇಕು. ಆರೋಗ್ಯ ಇಲಾಖೆ ಜೊತೆ ಶಿಕ್ಷಣ, ಕಂದಾಯ, ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ ಸೇರಿದಂತೆ ಪ್ರಮುಖ ಇಲಾಖೆಗಳು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್.ಕೆ. ಪಾಟೀಲ, ‘ರಾಜ್ಯದಲ್ಲಿರುವ 5,629 ಗ್ರಾಮ ಪಂಚಾಯಿತಿಗಳಲ್ಲಿ ಏಡ್ಸ್‌ ಜಾಗೃತಿ ಸಮಿತಿ ರಚಿಸಲಾಗುವುದು. ಈ ರೋಗದ ಬಗ್ಗೆ ಗ್ರಾಮಸಭೆಗಳಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ವೇದಿಕೆ ರಚನೆಯ ಮಹತ್ವವನ್ನು ವಿವರಿಸಿದರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ‘ಎಚ್.ಐ.ವಿ/ ಏಡ್ಸ್ ಶಾಸ ಕಾಂಗ ವೇದಿಕೆ’ ರಚನೆಯಾಗಿರುವುದನ್ನು ಘೋಷಿಸಿದರು.ಉಪ ಸಭಾಪತಿ ವಿಮಲಾಗೌಡ, ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರ್‌, ಸಚಿವರಾದ ಎಸ್‌.ಆರ್‌. ಪಾಟೀಲ, ರಾಮಲಿಂಗಾ ರೆಡ್ಡಿ, ಎಚ್. ಆಂಜನೇಯ, ಕಿಮ್ಮನೆ ರತ್ನಾಕರ, ಡಾ. ಶರಣ ಪ್ರಕಾಶ ಪಾಟೀಲ, ಟಿ.ಬಿ. ಜಯಚಂದ್ರ, ಶ್ರೀನಿವಾಸ ಪ್ರಸಾದ, ಖಮರುಲ್‌ ಇಸ್ಲಾಂ, ವಿನಯಕುಮಾರ್ ಸೊರಕೆ, ಶಾಸಕರಾದ ಮೋಟಮ್ಮ, ತಾರಾ ಅನುರಾಧಾ ಹಾಗೂ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)