ಎದೆಯುರಿ ಎಂದರೇನು?
ಎದೆಯುರಿಗೆ ಕಾರಣವೇನು?
ಎದೆಯುರಿಗೂ ಹೃದಯಕ್ಕೂ ಸಂಬಂಧವಿಲ್ಲ. ಬದಲಾಗಿ ಹೊಟೆಯಲ್ಲಿ ತೀರಾ ಹೆಚ್ಚಾಗಿ ಆಮ್ಲ (ಆ್ಯಸಿಡ್) ಶೇಖರವಾದರೆ ಎದೆಯುರಿ ಬರುತ್ತದೆ.
* ಎದೆಯುರಿ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆಯೆ?
ಶೇಕಡಾ 30ರಷ್ಟು ವಯಸ್ಕರಿಗೆ ಆಗಾಗ್ಗೆ ಎದೆಯುರಿ ಬರುತ್ತದೆ. ಶೇಕಡಾ 10ರಷ್ಟು ವಯಸ್ಕರಿಗೆ ಪ್ರತಿದಿನವೂ ಎದೆಯುರಿ ಬರುತ್ತದೆ. ಗರ್ಭಿಣಿಯರಲ್ಲಿ ಶೇಕಡಾ 25ರಷ್ಟು ಮಂದಿಗೆ ಎದೆಯುರಿ ಅಥವಾ ಅದಕ್ಕೆ ಸಂಬಂಧಿಸಿದ ಲಕ್ಷಣಗಳು ಕಾಣಿಸುವುದು ಸಾಮಾನ್ಯ.
* ಎದೆಯುರಿ ಎನ್ನುವುದು ಒಂದು ಗಂಭೀರ ಸಮಸ್ಯೆಯೆ?
ಸಾಮಾನ್ಯವಾಗಿ ಹೇಳುವುದಾದರೆ ಎದೆಯುರಿ ಅಂತಹ ಗಂಭೀರ ಸಮಸ್ಯೆ ಅಲ್ಲ. ಆಗಾಗ್ಗೆ ಎದೆಯುರಿ ಬಂದರೆ, ನಾವು ತಿಂದ ಆಹಾರ ಹೊಟ್ಟೆಯಲ್ಲಿ ಹೆಚ್ಚು ಆಮ್ಲ (ಆ್ಯಸಿಡ್) ಉಂಟು ಮಾಡಿದೆ ಎಂದರ್ಥ. ಪ್ರತಿದಿನ ಎದೆಯುರಿ ಬಂದರೆ ಮಾತ್ರ, ಅದು ‘ಗ್ಯಾಸ್ಟ್ರೊ ಎಸೊಫೊಗಿಲ್ ರಿಫ್ಲೆಕ್ಸ್ ಡಿಸೀಸ್’ ನಂತಹ (ಜಿಇಆಡಿ)ಗಂಭೀರ ಸಮಸ್ಯೆಗೆ ಮೂಲ ಎನ್ನಬಹುದು. ಈ ರೀತಿಯ ಅತಿಹೆಚ್ಚಿನ ಎದೆಯುರಿ ನಮ್ಮ ದಿನಿನಿತ್ಯದ ಕೆಲಸಗಳಿಗೆ ಅಡ್ಡಿ ಉಂಟುಮಾಡಿ, ಇನ್ನಷ್ಟು ತೊಂದರೆಗಳನ್ನು ಹುಟ್ಟಿಸಬಹುದು.
* ಎದೆಯುರಿ ಬರುತ್ತಿದ್ದರೆ ನಾನು ಯಾವ ಆಹಾರ ಸೇವಿಸಬಾರದು?
ಎದೆಯುರಿಗೆ ಬಹುದೊಡ್ಡ ಕಾರಣ ನಾವು ಸೇವಿಸುವ ಆಹಾರ. ಅನ್ನನಾಳದ ಕೆಳಭಾಗ ಹಿಗ್ಗಿ ನಾವು ಸೇವಿಸಿದ ಆಹಾರ ಹೊಟ್ಟೆಯಿಂದ ಮತ್ತೆ ಅನ್ನನಾಳಕ್ಕೆ ಮರಳಿಬಂದಾಗ ಎದೆಯುರಿ ಉಂಟಾಗುತ್ತದೆ. ಹೊಟ್ಟೆಯಲ್ಲಿ ತೀರಾ ಹೆಚ್ಚು ಆಮ್ಲ ಉಂಟಾಗಿ ಅದು ಅನ್ನನಾಳಕ್ಕೆ ನುಗ್ಗಿದಾಗಲೂ ಎದೆಯುರಿ ಉಂಟಾಗುತ್ತದೆ.
ಈ ಕೆಳಗಿನ ಕೆಲವು ಆಹಾರಗಳು ಎದೆಯುರಿ ಉಂಟು ಮಾಡುತ್ತವೆ:
* ಎಣ್ಣೆಯಲ್ಲಿ ಕರಿದ (ಫ್ರೈಡ್) ಆಹಾರ
* ಅತಿ ಹೆಚ್ಚು ಕೊಬ್ಬಿರುವ ಮಾಂಸ
* ಬೆಣ್ಣೆ ಮತ್ತು ಅದರ ಉಪಉತ್ಪನ್ನಗಳು
* ಬಿಳಿ ಸಾಸ್ (ಮೆಯೊನ್ನೇಸ್)
* ಕ್ರೀಮ್ ಸಾಸ್
* ಸಲಾಡ್ ಡ್ರೆಸಿಂಗ್
* ಚಾಕೊಲೇಟ್
* ಪೆಪ್ಪರಮೆಂಟ್
* ಕಾಫಿ, ಚಹಾ, ಸಾಫ್ಟ್ ಡ್ರಿಂಕ್ಸ್, ಕೋಕೊ ಇತ್ಯಾದಿ ಪಾನೀಯಗಳು
* ಆ್ಯಸಿಡ್ ಉತ್ಪಾದನೆಯನ್ನು ಹೆಚ್ಚಿಸಿ ಎದೆಯುರಿ ಹೆಚ್ಚಿಸಬಹುದಾದ ಇತರ ಆಹಾರಗಳು
* ಕೆಫಿನ್ ಇರುವ ಪಾನೀಯಗಳು
* ಕಾರ್ಬೊನೇಟ್ ಆಗಿರುವ ಪಾನೀಯಗಳು
* ಆಲ್ಕೊಹಾಲ್
* ಮಸಾಲೆಯುಕ್ತ ಆಹಾರಗಳು
* ಕರಿಮೆಣಸು
* ಕಿತ್ತಳೆ, ದ್ರಾಕ್ಷಿ ಮುಂತಾದ ಹುಳಿಯುಕ್ತ ಜ್ಯೂಸ್ಗಳು
* ಟೊಮ್ಯಾಟೊ ಜ್ಯೂಸ್
ನಾವು ಯಾವಾಗ ತಿನ್ನುತ್ತೇವೆ ಮತ್ತು ಎಷ್ಟು ತಿನ್ನುತ್ತೇವೆ ಎನ್ನುವುದೂ ಮುಖ್ಯ. ಮಲಗುವುದಕ್ಕೆ ಮುನ್ನ ಅಥವಾ ತಡರಾತ್ರಿಯಲ್ಲಿ ಭರ್ಜರಿ ಊಟ ಮಾಡುವುದೂ ರಾತ್ರಿಯ ಎದೆಯುರಿಗೆ ಕಾರಣವಾಗಬಹುದು.
* ನನಗೆ ಯಾವಾಗಲೂ ರಾತ್ರಿ ವೇಳೆಯೇ ಎದೆಯುರಿ ಬರುವುದೇಕೆ?
ಎದೆಯುರಿ ಸಾಮಾನ್ಯವಾಗಿ ಊಟವಾದ 30ರಿಂದ 60 ನಿಮಿಷಗಳ ಬಳಿಕ ಉಂಟಾಗುತ್ತದೆ. ಅದು ರಾತ್ರಿ ಅಥವಾ ಹಗಲು ಯಾವ ಹೊತ್ತಿನಲ್ಲೂ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚಾಗಿ ಮಲಗಿಕೊಂಡಾಗ ಬರುತ್ತದೆ. ಬಗ್ಗಿದಾಗ ಅಥವಾ ಕುಳಿತಿರುವ ಸಮಯದಲ್ಲೂ ಬರಬಹುದು. ರಾತ್ರಿ ವೇಳೆ ಎಂಜಲು ಉತ್ಪನ್ನವಾಗದೆ, ಅನ್ನನಾಳದ ಚಲನೆ ಕಡಿಮೆಯಾದಾಗ ಎದೆಯುರಿ ಹೆಚ್ಚಾಗುತ್ತದೆ.
* ಪದೇ ಪದೇ ಎದೆಯುರಿ ಬರುವುದರಿಂದ ಯಾವ ಸಮಸ್ಯೆಗಳು ಉಂಟಾಗುತ್ತವೆ?
ಅನ್ನನಾಳದಲ್ಲಿ ಅಧಿಕ ಆ್ಯಸಿಡ್ ಉಂಟಾಗುವುದರಿಂದ ಅಲ್ಸರ್ ಉಂಟಾಗಿ, ಅನ್ನನಾಳದ ಒಳಪದರ ಸಂಕುಚಿತಗೊಂಡು ಆಹಾರ ಸೇವಿಸಲು ತೊಂದರೆ ಉಂಟಾಗಬಹುದು.
ಅಪರೂಪಕ್ಕೆ ಅನ್ನನಾಳದಲ್ಲಿ ಸೋರುವಿಕೆ ಉಂಟಾಗಬಹುದು ಅಥವಾ ಹರಿದುಹೋಗಬಹುದು. ತೀರಾ ಗಂಭೀರ ಪರಿಸ್ಥಿತಿಯಲ್ಲಿ ರಕ್ತ ವಾಂತಿ ಬರಬಹುದು. ಅಥವಾ ಮಲದಲ್ಲಿಯೂ ರಕ್ತದ ಬಿಂದುಗಳು ಕಾಣಿಸಿಕೊಳ್ಳಬಹುದು.ಹೊಟ್ಟೆಯಲ್ಲಿ ಅತಿಹೆಚ್ಚು ಆ್ಯಸಿಡ್ ಉಂಟಾದರೆ ಅಸ್ತಮಾ, ವಿಪರೀತ ಕಫ, ಗಂಟಲು ನೋವು ಅಥವಾ ಹಲ್ಲುನೋವು ಕೂಡಾ ಬರಬಹುದು. ಗಂಟಲಲ್ಲಿ ಗಡ್ಡೆಯಾದಂತೆಯೂ ಅನ್ನಿಸಬಹುದು.ಈ ರೀತಿ ಹೊಟ್ಟೆಯಲ್ಲಿ ಅಧಿಕ ಆ್ಯಸಿಡ್ ಉತ್ಪಾದನೆ ದೀರ್ಘಕಾಲ ಮುಂದುವರಿದರೆ, ಅನ್ನನಾಳ ದಪ್ಪಗಾಗಿ ಘಾಸಿಗೊಳ್ಳಬಹುದು. ಆಗ ಊಟ ನುಂಗಲೂ ಆಗುವುದಿಲ್ಲ.
* ಎದೆಯುರಿ ಉಂಟಾಗುತ್ತಿದ್ದರೆ ವೈದ್ಯರನ್ನು ಕಾಣಬೇಕೆ?
ಅದನ್ನು ಆಯಾ ಸಂದರ್ಭದಲ್ಲಿ ನಿರ್ಧರಿಸಬೇಕು. ಸತತ 2 ವಾರಗಳ ಕಾಲವಾರಕ್ಕೆಮೂರುಸಲವಾದರೂ ಎದೆಯುರಿ ಬರುತ್ತಿದ್ದರೆ, ವೈದ್ಯರನ್ನು ನೋಡಲೇಬೇಕು. ಅಪರೂಪಕ್ಕೆ ಎದೆಯುರಿ ಬರುತ್ತಿದ್ದರೆ, ಆಹಾರಶೈಲಿಯ ಕೆಲವು ಸಣ್ಣ ಮಾರ್ಪಾಡುಗಳನ್ನು ಮಾಡಿಕೊಂಡು, ಎಂಟಾಸಿಡ್ ತೆಗೆದುಕೊಂಡರೆ ನಿಲ್ಲುತ್ತದೆ.
ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಶೀಘ್ರವೇ ಕಾಣುವುದು ಒಳ್ಳೆಯದು:
* ರಕ್ತ ಉಗುಳುವುದು ಮತ್ತು ಮಲದಲ್ಲಿ ರಕ್ತ ಹೋಗುವುದು
* ತೀವ್ರ ಹೊಟ್ಟೆ ನೋವು, ಮೈಭಾರ ಮತ್ತು ಅಲ್ಪ ತಲೆನೋವು
* ಆಹಾರ ನುಂಗಲು ಕಷ್ಟವಾಗುವುದು
* ದೇಹದಲ್ಲಿ ನೀರಿನ ಕೊರತೆಯಾಗಿ ಸುಸ್ತಾಗುವುದು
* ತನ್ನಷ್ಟಕ್ಕೆ ತೂಕ ಕಡಿಮೆಯಾಗುವುದು
* ಎದೆಯುರಿಗೆ ಯಾವುದೇ ಪರೀಕ್ಷೆಗಳಿಲ್ಲವೇ?
ಮೇಲ್ನೋಟದ ಲಕ್ಷಣಗಳೇ ಎದೆಯುರಿ ಬಗ್ಗೆ ತಿಳಿಸುವುದರಿಂದ ಪರೀಕ್ಷೆ ಅಗತ್ಯವಿಲ್ಲ. ಔಷಧಿಯ ಜತೆಗೇ ನಿಮಗೆ ಊಟ-ತಿಂಡಿಯ ಬದಲಾವಣೆ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನುಮಾಡಿಕೊಳ್ಳಲು ವೈದ್ಯರುಹೇಳಬಹುದು.ವೈದ್ಯರಿಗೆ ಎದೆಯುರಿಯ ಕಾರಣ ಖಚಿತವಾಗದ್ದಿದ್ದರೆ ಕೆಲವು ತಪಾಸಣೆಗಳನ್ನು ಮಾಡಿಸಿ ಕೊಳ್ಳಬಹುದು. ಕೆಲವು ಸರಳ ರಕ್ತಪರೀಕ್ಷೆಗಳಿವೆ.ಜತೆಗೆ,
* ಗ್ಯಾಸ್ಟ್ರೊಟೆಸ್ಟಿನಲ್ ಎಂಡೊಸ್ಕೊಪಿ
* ಅಪ್ಪರ್ ಜಿಐ ಸಿರೀಸ್
* ಅನ್ನನಾಳದ ಮೆನೊಮೆಟ್ರಿ
* 24 ಗಂಟೆಗಳ ಪಿಎಚ್ ಮೊನಿಟರಿಂಗ್
* ಎದೆಯುರಿಗೆ ಚಿಕಿತ್ಸೆ ಏನು?
ಸಣ್ಣ ಪ್ರಮಾಣದ ಹಾಗೂ ಆಗೊಮ್ಮೆ ಈಗೊಮ್ಮೆ ಬರುವ ಎದೆಯುರಿಗೆ ನಿಮ್ಮ ಜೀವನಶೈಲಿಯ ಬದಲಾವಣೆ ಸಾಕು. ಹೆಚ್ಚು ಎದೆಯುರಿ ಇದ್ದರೆ ಎಂಟಾಸಿಡ್ ನೀಡುತ್ತಾರೆ. ಅದೂ ಕೆಲಸ ಮಾಡದಿದ್ದರೆ ಆ್ಯಸಿಡ್ ಕಡಿಮೆ ಮಾಡಲು ಬೇರೆ ಔಷಧಿಗಳಿವೆ. ಈ ಸಂದರ್ಭಗಳಲ್ಲಿ ಬಹುತೇಕ ಎದೆಯುರಿ ನಿಲ್ಲಿಸುವುದು ಖಚಿತ. ಆಗಲೂ ನಿಲ್ಲದಿದ್ದರೆ ಸರ್ಜರಿ ಮಾಡಬೇಕಾಗುತ್ತದೆ.
( ಲೇಖಕರ ದೂರವಾಣಿ: 080-43485500)
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.