ಗುರುವಾರ , ಜನವರಿ 23, 2020
18 °C

ಎಮ್ಮೇ ನಿನಗೆ ಸಾಟಿಯಿಲ್ಲ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿಯ ಒಂದು ಮನೆಯಲ್ಲಿ ಎಮ್ಮೆ ಕಳೆದುಹೋಗುವುದು ಆ ಮನೆಗೆ ಸೀಮಿತವಾಗುವ ಸಂಗತಿಯಾಗುವುದಿಲ್ಲ. ಅಂಥದ್ದೊಂದು ಎಮ್ಮೆಯ ಕಳವು ಇಡೀ ಊರಿನಲ್ಲಿ ಗೊಂದಲಗಳು, ಚರ್ಚೆ, ವ್ಯವಸ್ಥೆಯ ಬದಲಾವಣೆಗೂ ಕಾರಣವಾಗಬಲ್ಲದು. ಎಮ್ಮೆ ಇಲ್ಲಿ ರೂಪಕವಷ್ಟೆ. ಜಾಗತೀಕರಣ ಪ್ರಕ್ರಿಯೆಯಲ್ಲಿ ಹಳ್ಳಿಗಳ ಸ್ವರೂಪದಲ್ಲಿ ಆಗುತ್ತಿರುವ ಸೂಕ್ಷ್ಮ ಬದಲಾವಣೆಗಳನ್ನು ದಾಖಲಿಸತೊಡಗಿದರೆ ಈ ‘ಕಳವು’ ಎಲ್ಲೆಲ್ಲಿ ಯಾವ ರೀತಿಯಲ್ಲಿ ಆಗುತ್ತಿದೆ ಎನ್ನುವುದು ಅರ್ಥವಾದೀತು.ಎಮ್ಮೆಯೊಂದರ ಕಣ್ಮರೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಆಧುನಿಕತೆಯ ಪ್ರಭಾವಕ್ಕೆ ನಿಧಾನಕ್ಕೆ ಒಳಗಾಗುತ್ತಿರುವ ಒಂದು ಹಳ್ಳಿಯ ಚಿತ್ರಣವನ್ನು ಕಟ್ಟಿಕೊಡುವ ಹೊಸ ಬಗೆಯ ಪ್ರಯತ್ನ ‘ಕಳವು’ ಚಿತ್ರತಂಡದ್ದು.ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಉತ್ಸಾಹಿಗಳ ಕೂಟ ಒಂದಾಗಿ ಸಿದ್ಧಪಡಿಸಿರುವ ‘ಕಳವು’ ಈ ವಾರ ಬಿಡುಗಡೆಯಾಗುತ್ತಿದೆ. ಕಳವಿನ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಇವಿಷ್ಟನ್ನೂ ಒದಗಿಸಿರುವವರು ಕೆ.ವೈ. ನಾರಾಯಣಸ್ವಾಮಿ. ಅವರ ಪ್ರಕಾರ ಎಲ್ಲ ಬಗೆಯ ಸಿನಿಮಾಗಳೂ ಹಳ್ಳಿಯ ವಾತಾವರಣವನ್ನು ಸಮರ್ಪಕವಾಗಿ ಕಟ್ಟಿಕೊಡಲು ವಿಫಲವಾಗುತ್ತಿವೆ.ಹಳ್ಳಿಗಳೆಂದರೆ ಮೌನ ಮತ್ತು ನಿಧಾನಗತಿಯ ಜೀವನ ಎಂದು ಬಿಂಬಿಸುವ ಯುರೋಪಿಯನ್ ಮಾದರಿ ಪ್ರಭಾವಿತ ಚಿತ್ರಗಳೇ ಹೆಚ್ಚು. ಆದರೆ ‘ಕಳವು’ ವಿಭಿನ್ನವಾಗಿ ಮತ್ತು ವಾಸ್ತವಕ್ಕೆ ಹತ್ತಿರವಾಗಿ ಹಳ್ಳಿಯನ್ನು ಚಿತ್ರಿಸುತ್ತದೆ ಎನ್ನುತ್ತಾರೆ ನಾರಾಯಣಸ್ವಾಮಿ.‘ಕಳವು ತಟಸ್ಥ ಪ್ರಕ್ರಿಯೆ. ಕಳವಾಗುತ್ತಿರುವುದು ಏನು? ವಸ್ತುವೋ? ಜೀವನವೋ? ಹಳ್ಳಿಗಳೋ? ಇಂಥದ್ದೊಂದು ಜಿಜ್ಞಾಸೆಯನ್ನು ಪ್ರೇಕ್ಷಕನಲ್ಲಿ ಹುಟ್ಟುಹಾಕುವ ಪ್ರಯತ್ನವಿದು’ ಎನ್ನುವುದು ನಾರಾಯಣಸ್ವಾಮಿ ಅವರ ವಿಶ್ಲೇಷಣೆ.ಒಬ್ಬ ಕಳ್ಳನನ್ನು ಸಮಾಜವೇ ಹುಟ್ಟುಹಾಕುತ್ತದೆ ಮತ್ತು ಆತನನ್ನು ಸಮಾಜವೇ ಸಿಕ್ಕಿ ಹಾಕಿಸುತ್ತದೆ ಎನ್ನುವುದು ನಿರ್ದೇಶಕ ರವಿ ಅಭಿಪ್ರಾಯ. ಅಂಥ ಕಳ್ಳ ಮತ್ತು ಸಮಾಜದ ನಡುವಿನ ಸಂಬಂಧ ಹಾಗೂ ಸಂಘರ್ಷಗಳನ್ನು ಚಿತ್ರದಲ್ಲಿ ಹಲವು ಮಜಲುಗಳಲ್ಲಿ ನೀಡಲಾಗಿದೆ ಎಂದರು ರವಿ. ಕೋಲಾರದ ಹಳ್ಳಿಗಳಲ್ಲಿ ಅವರು ಚಿತ್ರೀಕರಣ ನಡೆಸಿದ್ದಾರೆ.ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಉಮಾಶ್ರೀ. ಅವರ ಪಾತ್ರಕ್ಕೆ ಸಮನಾದ ಪಾತ್ರ ತಮಗೆ ಸಿಕ್ಕಿದೆ ಎಂಬ ಸಂತಸ ವ್ಯಕ್ತಪಡಿಸಿದರು ನಟ ಕರಿಸುಬ್ಬು.ನಿರ್ದೇಶಕರ ರವಿ ಅವರಿಗೆ ರಂಗಚಟುವಟಿಕೆಗಳಲ್ಲಿ ಮಾರ್ಗದರ್ಶಿಯಾಗಿದ್ದವರು ಕಲಾನಿರ್ದೇಶಕ ಶಶಿಧರ ಅಡಪ. ಸಿನಿಮಾ ತಂತ್ರಜ್ಞರ ಮತ್ತು ಕಲಾವಿದರ ಪರಿಶ್ರಮಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಕಲಾ ನಿರ್ದೇಶಕ ಬಿ. ವಿಠ್ಠಲ್, ನಿರ್ಮಾಪಕ ಮುರಳಿಧರ್ ಸುದ್ದಿಗೋಷ್ಠಿಯಲ್ಲಿದ್ದರು. 

ಪ್ರತಿಕ್ರಿಯಿಸಿ (+)