ಶನಿವಾರ, ಜನವರಿ 18, 2020
27 °C

ಎರಡು ದೋಣೀಲಿ ಬಾಂಡ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ಳಿತೆರೆಯ ಮಿಂಚು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೊಸವರ್ಷ ಭಿನ್ನ ಜಾಡು ತುಳಿಯಲು ಮುಂದಾಗಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಒಂದು ಕೈ ನೋಡಲು ಅವರೀಗ ಸನ್ನದ್ಧ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿಯ ಕನ್ನಡ ರೂಪಾಂತರದಲ್ಲಿ ಅವರು ಸೂತ್ರಧಾರ. ಈ ಕಾರ್ಯಕ್ರಮದ ಬಗ್ಗೆ ಸ್ವತಃ ಪುನೀತ್ ತುಂಬಾ ಎಕ್ಸೈಟ್ ಆಗಿದ್ದಾರೆ. ರಿಯಾಲಿಟಿ ಶೋ ಜೊತೆ ಜೊತೆಗೆ ಸಿನಿಮಾ ರಂಗದ ಪಯಣದ ಬಗ್ಗೆ ಅವರು ಹಂಚಿಕೊಂಡ ಮಾತುಗಳಿವು.

ನಟರಾಗಿ ಬ್ಯುಸಿಯಾಗಿದ್ದೂ ರಿಯಾಲಿಟಿ ಶೋ ನಡೆಸಿಕೊಡಲು ಒಪ್ಪಿಕೊಳ್ಳಲು ಕಾರಣ?

ಕಾರ್ಯಕ್ರಮದ ಸ್ವರೂಪ ಇಷ್ಟವಾಯಿತು. ಜನಪ್ರಿಯ ಕಾರ್ಯಕ್ರಮ ಬೇರೆ. ನನಗೆ ಇಷ್ಟವಾಗಿದ್ದನ್ನು ಖಂಡಿತ ಒಪ್ಪಿಕೊಳ್ಳುತ್ತೇನೆ. ಜನರೊಂದಿಗೆ ಬೆರೆತು ಕಲಿಯುವ ಅವಕಾಶವನ್ನು ಯಾರು ಬಿಡುತ್ತಾರೆ. ಇಲ್ಲಿಯೂ ನಾನು ನಾಯಕನ ಪಾತ್ರಧಾರಿಯಂತೆ. ನಿರ್ದೇಶಕರು ಹಿನ್ನೆಲೆಯಲ್ಲಿರುತ್ತಾರೆ.

`ಅಣ್ಣಾ ಬಾಂಡ್~ ಚಿತ್ರೀಕರಣ ಹೇಗೆ ಸಾಗಿದೆ?

ಶೇಕಡಾ 60 ರಿಂದ 65ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರೀಕರಣದ ವೇಗ ಮತ್ತು ಚಿತ್ರಕಥೆ ಖುಷಿ ಕೊಟ್ಟಿದೆ. ಕಾರ್ಯಕ್ರಮದ ತಾಲೀಮಿಗಾಗಿ ಚಿತ್ರೀಕರಣಕ್ಕೆ ಸದ್ಯಕ್ಕೆ ತಾತ್ಕಾಲಿಕ ಬಿಡುವು ಕೊಟ್ಟಿದ್ದೇನೆ.`ಜಾಕಿ~ ಬಳಿಕ ಕೂಡಲೇ ಸೂರಿ ಜೊತೆ ಮತ್ತೆ ಚಿತ್ರ ಒಪ್ಪಿಕೊಳ್ಳಲು ಕಾರಣ?

ಸೂರಿ ಅದ್ಭುತ ನಿರ್ದೇಶಕ. ಅವರ ಸ್ಕ್ರಿಪ್ಟ್ ತುಂಬಾ ಸ್ಟೈಲಿಶ್ ಆಗಿರುತ್ತದೆ. ಅವರ ಜೊತೆ ಕೆಲಸ ಮಾಡುವುದನ್ನು ಸಾಕಷ್ಟು ಎಂಜಾಯ್ ಮಾಡುತ್ತೇನೆ.ಅವರು ಚಿತ್ರದಲ್ಲಿ ತೊಡಗಿಕೊಳ್ಳುವ ರೀತಿ ಇಷ್ಟವಾಗುತ್ತದೆ. ಪ್ರತಿ ಸನ್ನಿವೇಶವೂ ವಿಭಿನ್ನವಾಗಿರಬೇಕು ಎನ್ನುವುದು ಅವರ ಉದ್ದೇಶ. ಅದಕ್ಕೆ ಅನುಗುಣವಾಗಿ ಶ್ರಮ ಪಡುತ್ತಾರೆ. ಕನ್ನಡದ ಎಲ್ಲಾ ನಿರ್ದೇಶಕರ ನಡುವೆ ಅವರು ಪ್ರತ್ಯೇಕವಾಗಿಯೇ ಎದ್ದುಕಾಣುತ್ತಾರೆ.

`ಜಾಕಿ~ ಮತ್ತು `ಅಣ್ಣಾ ಬಾಂಡ್~ ಚಿತ್ರಗಳ ನಡುವೆ ಯಾವ ವ್ಯತ್ಯಾಸಗಳಿವೆ?

ಕಥೆ ಸಂಪೂರ್ಣ ವಿಭಿನ್ನ. ಎರಡರ ನಿರ್ದೇಶಕ ಸೂರಿ ಅವರೇ ಆದರೂ ಆ ಭಾವನೆ ಉಂಟಾಗುವುದೇ ಇಲ್ಲ. ಚಿತ್ರಕಥೆ, ದೃಶ್ಯಗಳಲ್ಲಿ `ಜಾಕಿ~ಯ ಯಾವ ಛಾಯೆಯೂ ಇಲ್ಲ.

`ಪರಮಾತ್ಮ~ದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂತು?

ನಿಜ. ಕೆಲವರಿಗೆ ಚಿತ್ರ ಇಷ್ಟವಾದರೆ, ಕೆಲವರಿಗೆ ಇಷ್ಟ ಆಗಲಿಲ್ಲ. ಚಿತ್ರ ಪುನೀತ್ ಇಮೇಜ್‌ಗೆ ತಕ್ಕಂತೆ ಇಲ್ಲ ಎಂಬ ಮಾತುಗಳು ಬಂದಿರಬಹುದು. ಅದು ಸ್ವೀಕರಿಸುವವರ ಮನಸಿಗೆ ಬಿಟ್ಟಿದ್ದು. ನಿರ್ದೇಶಕ ಹೇಗೆ ಬಯಸುತ್ತಾರೋ ನಾನು ಹಾಗೆ ನಟಿಸುತ್ತೇನೆ. ಎಲ್ಲಾ ರೀತಿಯ ಪಾತ್ರಗಳನ್ನೂ ನಾನು ಮಾಡಬೇಕು.

ಯೋಗರಾಜ್ ಭಟ್ಟರ ಜೊತೆಗಿನ ಅನುಭವ ಹೇಗಿತ್ತು?

ಚೆನ್ನಾಗಿತ್ತು. ಅವರೊಬ್ಬ ಅತ್ಯುತ್ತಮ ಬರಹಗಾರ. ದೃಶ್ಯಗಳ ಕುರಿತ ಅವರ ಪರಿಕಲ್ಪನೆಗಳೂ ಅದ್ಭುತ. ಅವರ ಜೊತೆ ಕೆಲಸ ಮಾಡುವಾಗ ಕಲಿತದ್ದು ತುಂಬಾ. ಅವರೊಟ್ಟಿಗೆ ಮತ್ತೊಂದು ಚಿತ್ರ ಮಾಡುವ ಬಯಕೆಯೂ ಇದೆ.

ನಿರ್ದೇಶನದ ಕನಸು?

ಇನ್ನೂ ಹಾಗೇ ಉಳಿದುಕೊಂಡಿದೆ. ಈಗಿನ್ನೂ ನಟನಾಗಿ ಚಿತ್ರಗಳನ್ನು ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಖಂಡಿತಾ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

ಶಿವರಾಜ್‌ಕುಮಾರ್ ಜೊತೆಗೂಡಿ ನಟಿಸುವ ಬಯಕೆ?

ಎರಡು ಮೂರು ಕಥೆಗಳನ್ನು ನೋಡಿದೆವು. ಇಷ್ಟವಾಗಲಿಲ್ಲ. ಇಬ್ಬರೂ ಜೊತೆಗೂಡಿ ನಟಿಸುವ ಆಸೆ ಇದೆ. ಒಳ್ಳೆ ಕಥೆಗಾಗಿ ಹುಡುಕಾಡುತ್ತಿದ್ದೇವೆ.

ಶಿವಣ್ಣ ಜೊತೆ ಹೇಗೆ ಹೋಲಿಸಿಕೊಳ್ಳುತ್ತೀರಿ?

ಅದು ಸಾಧ್ಯವೇ ಇಲ್ಲ. ಶಿವಣ್ಣ ಚಿತ್ರರಂಗಕ್ಕೆ ಕಾಲಿಟ್ಟು 26 ವರ್ಷವಾಯಿತು. 100 ಚಿತ್ರಗಳನ್ನು ಪೂರೈಸಿದ್ದಾರೆ. ನಾನು ನಾಯಕನಾಗಿ 11 ವರ್ಷ ಮಾತ್ರ ಆಗಿದೆ. ನಟಿಸಿದ ಚಿತ್ರಗಳೂ ಬೆರಳಣಿಕೆಯಷ್ಟು. ಶಿವಣ್ಣ ನನಗಿಂತಲೂ ಯಂಗ್ ಆಗಿ ಕಾಣಿಸುತ್ತಾರೆ. ಕುಟುಂಬದಲ್ಲಿ ಅವರೀಗ ತಂದೆ ಸ್ಥಾನದಲ್ಲಿದ್ದಾರೆ. ನಟನೆಯಲ್ಲಿ ಅವರನ್ನು ಯಾವುದೇ ರೀತಿಯಲ್ಲೂ ಹೋಲಿಕೆ ಮಾಡಿಕೊಳ್ಳಲಾರೆ.

ಮುಂದಿನ ಚಿತ್ರ?

`ಅಣ್ಣಾ ಬಾಂಡ್~ ಚಿತ್ರ ಮುಗಿಯುವವರೆಗೆ ಯೋಚನೆ ಇಲ್ಲ. ಈಗ ರಿಯಾಲಿಟಿ ಶೋ ಜವಾಬ್ದಾರಿಯೂ ಇದೆ. ರತ್ನವೇಲು ನಿರ್ದೇಶನದ ಚಿತ್ರವೊಂದಕ್ಕೆ ಒಪ್ಪಿಕೊಂಡಿದ್ದೇನೆ.

ಈ ವರ್ಷದ ಚಿತ್ರರಂಗದ ಬಗ್ಗೆ ನಿಮ್ಮ ಕನಸು?

ಉತ್ತಮ ಗುಣಮಟ್ಟದ ಚಿತ್ರಗಳು ಬರಬೇಕು. ಮುಖ್ಯವಾಗಿ ಚಿತ್ರಗಳು ಗೆಲ್ಲಬೇಕು.

ಪ್ರತಿಕ್ರಿಯಿಸಿ (+)