**ನಿಮ್ಮ ಮೊದಲ ಪ್ರೀತಿ ಕಾವ್ಯ. ಸುಮಾರು ಅರ್ಧಶತಮಾನದಿಂದ ಕವಿತೆಗಳನ್ನು ಬರೆದುಕೊಂಡು ಬಂದಿದ್ದೀರಿ. ನೀವು ಕವಿತೆಗಳನ್ನು ಬರೆದಿರುವಂತೆಯೇ ಕಾವ್ಯ ಕೂಡ ನಿಮ್ಮ ಬದುಕನ್ನು ರೂಪಿಸಿದೆ. ನಿಮ್ಮ ಒಟ್ಟಾರೆ ಬರವಣಿಗೆಯ ಹಾದಿಯನ್ನು ಈಗ ನಿಂತು ಅವಲೋಕಿಸಿದಾಗ ಅನಿಸುವುದು ಏನು?

ಹೌದು, ಕಾವ್ಯ ನನ್ನ ಮೊದಲ ಪ್ರೀತಿ. ನನ್ನ ದೃಷ್ಟಿಯಲ್ಲಿ ಕಾವ್ಯ ಮತ್ತು ಪ್ರೀತಿ ಸಮಾನಾರ್ಥಕ ಹಾಗೂ ಸರ್ವಾರ್ಥಕ ಪದಗಳು. ಜೀವನಪ್ರೀತಿ ಮತ್ತು ಕಾವ್ಯಜೀವನ ನಿಜವಾದ ಕವಿಯ ಸತ್ಯ ಮತ್ತು ಸತ್ವ; ಈ ಅರಿವು ಇಟ್ಟುಕೊಂಡೇ ಪ್ರಾಮಾಣಿಕವಾಗಿ ಕವಿತೆ ಬರೆಯುತ್ತ, ನನ್ನನ್ನೇ ಅಭಿವ್ಯಕ್ತಿಸಿಕೊಳ್ಳುತ್ತ ಅರ್ಧ ಶತಮಾನಕ್ಕಿಂತ ಹೆಚ್ಚು ಕಳೆದಿದ್ದೇನೆ. ನನ್ನ ಮೊದಲ ಕವನಸಂಕಲನ ‘ನೀನಾ’ ಪ್ರಕಟವಾದದ್ದು ೧೯೬೪ರಲ್ಲಿ, ನನ್ನ ೨೫ನೇ ವಯಸ್ಸಿನಲ್ಲಿ. ಅದಕ್ಕೂ ೮–೧೦ ವರ್ಷ ಮೊದಲಿನಿಂದಲೇ ಕವಿತೆ ಬರೆಯುತ್ತಿದ್ದೆ.
ನನ್ನ ಪ್ರಕಟಿತ ಮತ್ತು ಅಪ್ರಕಟಿತ ಕವಿತೆಗಳು ಸಾವಿರಕ್ಕಿಂತ ಜಾಸ್ತಿ. ಇನ್ನಷ್ಟು ಸಮಯ, ಕಾಳಜಿ ಕಾವ್ಯಕ್ಕಾಗಿಯೇ ನೀಡಬೇಕಿತ್ತು, ಹಾಗೆ ಮಾಡಲಿಲ್ಲ ಎಂಬ ನೋವಿದೆ. ಆದರೂ ಕಾವ್ಯವನ್ನು ನಾನು ಈ ಪರಿ ಹಚ್ಚಿಕೊಂಡದ್ದು, ಒಲಿಸಿಕೊಂಡದ್ದು ನನಗೇ ಬೆರಗು. ಕಾವ್ಯ ನನಗೆ ನೆಮ್ಮದಿ ನೀಡಿದೆ, ಕಾಪಾಡಿದೆ. ಅದನ್ನು ಓದುತ್ತ, ಕೇಳುತ್ತ, ಗುನುಗುನಿಸುತ್ತ ನನ್ನಷ್ಟಕ್ಕೇ ನನ್ನ ಕಾವ್ಯವನ್ನು ತಿದ್ದಿಕೊಂಡ ಏಕಲವ್ಯವ್ರತ ನನ್ನದು. ಇತ್ತೀಚೆಗೆ ಪ್ರಕಟವಾದ ‘ಕುಲಾಯಿ ಇರಲಿ ನನ್ನಲ್ಲಿಯೇ’ ಸಂಗ್ರಹದಲ್ಲಿ ಕಳೆದ ೫೦ ವರ್ಷದ ನನ್ನ ಜೀವದ್ರವ್ಯವನ್ನು ಪುಟಕ್ಕಿಟ್ಟಿದ್ದೇನೆ ಎಂದು ಅನ್ನಿಸಿದೆ. ಇಷ್ಟು ದೀರ್ಘ ಕಾಲದ ಕಾವ್ಯಯಾನವನ್ನು ಈಗ ನೆನೆಸಿದರೆ ಏಕಕಾಲಕ್ಕೆ ಆಶ್ಚರ್ಯ ಮತ್ತು ಆನಂದವೆನಿಸುತ್ತದೆ.

**ಧಾರವಾಡದಲ್ಲಿ ಒಂದು ಕಡೆ ಬೇಂದ್ರೆಯಂಥ ಮೇರುಪ್ರತಿಭೆ, ಇನ್ನೊಂದೆಡೆ ಮಧುರ ಚೆನ್ನರ ಕಾವ್ಯ; ಮತ್ತೊಂದೆಡೆ ಚೆನ್ನವೀರ ಕಣವಿಯಂಥವರು. ಇವರ ನಡುವೆ ನೀವು ನಿಮ್ಮದೇ ಆದ ಕಾವ್ಯ ವ್ಯಕ್ತಿತ್ವವನ್ನು, ನಿಮ್ಮದೇ ದನಿ ಬನಿಯನ್ನು, ಶೈಲಿಯನ್ನು ಪಡೆದುಕೊಳ್ಳಲು ಹೇಗೆ ಸಾಧ್ಯವಾಯಿತು? ಧಾರವಾಡದ ಸ್ಥಳೀಯವಾದಂಥ ಕಾವ್ಯ, ಮಾತಿನ ಗುಣ, ಸೊಗಡು ಹಾಗೂ ಬೇಂದ್ರೆ ರೀತಿಯ ಕವಿಗಳು ನಿಮ್ಮ ಮೇಲೆ ಬೀರಿದ ಪ್ರಭಾವ ಯಾವ ರೀತಿಯದು?

ನಾನು ಆಡುವ ಮಾತಿನ ರೀತಿ, ಭಾಷೆಯ ಸೊಗಡು, ಶೈಲಿ ಧಾರವಾಡದ ಆಜೂಬಾಜೂಕಿನ ಯಾದವಾಡದ ಬೆಳವಲ ಮತ್ತು ಮನಗುಂಡಿಯ ಮಲೆನಾಡ ಪರಿಸರದಿಂದ ಪಡೆದದ್ದು. ಅದನ್ನು ಕಾವ್ಯದಲ್ಲಿ ಬಳಸುವ ಪರಿ ಬೇಂದ್ರೆಯವರಿಂದ ಹೊಳೆಯಿತು. ಅವರಂತೆ ಧಾರವಾಡದಲ್ಲಿಯೇ ಹುಟ್ಟಿ ಧಾರವಾಡದಲ್ಲಿಯೇ ಕವಿತ್ವಕ್ಕೆ ಶರಣಾದವನು ನಾನು. ಸಾಲಿ ರಾಮಚಂದ್ರರಾಯರ ಬದುಕು, ಗೋಕಾಕರ ಸ್ವಭಾವ ಮತ್ತು ಬೇಂದ್ರೆ ಮಾತು ನನ್ನನ್ನು ಕಟೆದಿವೆ. ನನ್ನ ಮೊದಲಿನ ಕವನಗಳಲ್ಲಿ ಬೇಂದ್ರೆ ಛಾಯೆ ಇತ್ತು. ಪ್ರಯತ್ನಪೂರ್ವಕ ಅದರಿಂದ ಹೊರಬಂದೆ. ಆಗಿನ ಬಹಳಷ್ಟು ಕವಿತೆಗಳನ್ನು ಪ್ರಕಟಿಸಲಿಲ್ಲ. ನಾನು ಅರಗಿಸಿಕೊಂಡ ಭಾಷೆಯ ಸತ್ವಕ್ಕೆ, ಮೌಲಿಕತೆಗೆ ಕಾವ್ಯಪ್ರಯೋಗದ ಸ್ವಂತದ ಕುಲುಮೆಯನ್ನೇ ಬಳಸಿ ನನ್ನತನ, ಅನನ್ಯತೆ ರೂಪಿಸಿಕೊಂಡಿದ್ದೇನೆ.

‘ಪ್ರಜಾವಾಣಿ’ಯಲ್ಲಿ ಬರೆದ ಅಂಕಣದಲ್ಲಿ ನಾನು ಚಹಾದ ಜೋಡಿ ನಡೆದಾಗಲೂ ಬೇಂದ್ರೆ ಜೊತೆಗಿದ್ದರು, ಆಗ ನನ್ನದೇ ಆದ ಕಾವ್ಯಗದ್ಯ ಘಮಘಮಾ ಘಮಾಡಿಸಿತು ಅಂತ ಮಂದಿ ಮೆಚ್ಚಿದರು. ಕಣವಿಯವರದು ಶಿಷ್ಟ, ಸುಕುಮಾರ ಭಾಷೆ. ಬೆಟಗೇರಿ ಕೃಷ್ಣಶರ್ಮರು ಭಾವ, ಭಾಷೆ ಎರಡರಲ್ಲೂ ಹೆಚ್ಚು ಜನಪದರು. ಮಧುರಚೆನ್ನರ ಲಲಿತ ಭಾಷೆ ಸಹಜತೆಯಲ್ಲಿಯೂ ಸಹಜೋಕ್ತಿಯಲ್ಲಿಯೂ ಅಲೌಕಿಕವಾದ ಆಧ್ಯಾತ್ಮಿಕ ಎತ್ತರದತ್ತ ತುಡಿಯುವಂಥದು.

ಆ ಗುಣ, ಸ್ವಭಾವದಲ್ಲಿಯ ಸಂತೃಪ್ತಿ, ಸಮಾಧಾನಗಳು ಇತ್ತೀಚಿನ ನನ್ನ ಕವಿತೆಗಳಲ್ಲಿ ಮೂಡುತ್ತಿವೆ ಎಂದು ಅನಿಸುತ್ತಿದೆ. ನಾನು ಮೊದಲೂ ನಿವೃತ್ತಿಭಾವದ ಪದ್ಯ ಬರೆದಿದ್ದೆ, ಅವು ಅಷ್ಟು ಸಾರ್ಥಕವಾಗಿ ಮೂಡಿಬಂದಿರಲಿಲ್ಲ. ಕವನಗಳ ಬೋರಂಗಿ ಹಿಡಿಹಿಡಿದು ನಕ್ಕೇನು, ಹಂತಿ ಹೊಡೆಯುತಲಿರುವೆ ದಿನದ ದನಗಳ ಕಟ್ಟಿ, ನೆನಪುಗಳ ಪಯಿರನ್ನು ತುಳಿಸುತಿರುವೆ, ಕಾಳಿಂಗ ಸರ್ಪಗಳ ಹೆಡಿ ಮೆಟ್ಟಿ ಹಾಡೇನು, ಡಬಗಳ್ಳಿ ಮೆಳೆಯೊಳಗೆ ಅಳುಅಳುಕಿ ಸತ್ತೇನು, ಕಣ್ಣ ಗುಡ್ಡಿಗಳ ಹಿಲಾಲನ್ನೇ ಹಿಡಿದೇನು, ಮನಸೀನ ಬಾಳೀಗೆ ಗಚ್ಚsನ ಬಡದೈತಿ ಬೆಳ್ಳsನ ಸಿಡಿಲೊಂದು ಕಣ್ಣ ಕುಕ್ಕಿ, ಒಂದು ಮುಟಗಿ, ಚಿಮಟಗಿಯಷ್ಟರ ಬೆಳದಿಂಗಳ– ಮುಂತಾದ ನೆನಪು ಗುಳಾಪುಗಳನ್ನು ಸಿಂಗರಿಸುತ್ತ, ಕಲಿತ ಭಾಷೆಯನ್ನು ಪ್ರಯೋಶೀಲತೆಗೆ ಒಡ್ಡುತ್ತಲೇ ಸ್ವಂತಿಕೆ ಸಾಧಿಸಿಕೊಂಡಿದ್ದೇನೆ. ಈಗ ನನ್ನದೇ ಆದ ಭಾಷೆ, ಭಾವಾಭಿವ್ಯಕ್ತಿಯ ಹಿಲಾಲು ನನ್ನ ಧಾರವಾಡತನಕ್ಕೆ ಬೆಳಕಾಗಿವೆ.

**ಬರವಣಿಗೆಗೆ ಸಂಬಂಧಿಸಿದಂತೆ ಸರೀಕ ಬರಹಗಾರರು, ಅವರ ಬರವಣಿಗೆಯೊಂದಿಗಿನ ನಿಮ್ಮ ಗುದಮುರಿಗೆ ಹೇಗಿತ್ತು. ಅವರು ನಿಮ್ಮ ಬರವಣಿಗೆಗೆ ಒದಗಿಬಂದದ್ದು ಯಾವ ರೀತಿಯಲ್ಲಿ? ಅಥವಾ ಅವರೆಲ್ಲರಿಂದ ದೂರ ನಿಂತೇ ನಿಮ್ಮ ಬರವಣಿಗೆ ಮಾಡಲು ಸಾಧ್ಯವಾಯಿತೆ?

ಕರ್ನಾಟಕ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ನಾನು, ಚಂಪಾ, ಗಿರಡ್ಡಿ ಒಟ್ಟಿಗೇ ಇದ್ದೆವು. ಹಳ್ಳಿಯವ, ಬಡವ, ಇಂಗ್ಲಿಷ್ ಕಚ್ಚಾ ಇದ್ದವ, ಹಿಂದೀ ಕಲಿಯುವವ ಇತ್ಯಾದಿ ನನ್ನನ್ನು ಹಚ್ಚಿಕೊಳ್ಳಲಿಕ್ಕೆ ಕೆಲವರಿಗೆ ಇದ್ದ ಅಡಚಣೆಗಳು. ಹೇಗೋ ಚಂಪಾ ಆಪ್ತನಾದ. ನನ್ನ ಪದ್ಯಗಳನ್ನು ಅವನಿಗೆ ತೋರಿಸುತ್ತಿದ್ದೆ. ಎಂ.ಎ. ಕಲಿಯುವಾಗ ನಾವೆಲ್ಲ ಆಗಾಗ ಕೂಡುತ್ತಿದ್ದೆವು. ಬರೆದದ್ದನ್ನು ಚರ್ಚಿಸುತ್ತಿದ್ದೆವು. ಆಗಿನ ಹರಟೆ, ಚೇಷ್ಟೆ, ಚರ್ಚೆ, ಟೀಕೆ ಪರೋಕ್ಷವಾಗಿ ನನ್ನನ್ನು ಕಟ್ಟಿಕೊಳ್ಳಲು ನೆರವಾದುವು. ಹಿಂದಿ ಸಾಹಿತ್ಯದ ಗಂಭೀರ ಓದು, ಸಂಪರ್ಕ ಜೊತೆಗಿದ್ದುವು. ಆಗ ಸಂಪೂರ್ಣ ನನ್ನದೇ ಆದ ಭಿನ್ನ ಧಾಟಿ, ಶೈಲಿ, ಭಾಷೆಯ ಕವಿತೆ ಬರೆಯುತ್ತಿದ್ದೆ. ಅದೇ ಸಂದರ್ಭದಲ್ಲಿ ಪರಿಚಯವಾದ ಕಾವ್ಯಪ್ರೇಮಿ ಶಿಕ್ಷಣಾಧಿಕಾರಿ ಶಿವಶಂಕರ ಹಿರೇಮಠ ಅದುವರೆಗಿನ ನನ್ನ ಎಲ್ಲ ಪದ್ಯ ಓದಿ, ಮೆಚ್ಚಿ, ಪ್ರಕಟಿಸಲೇಬೇಕೆಂದು ಗಂಟುಬಿದ್ದರು. ಹಳೆಯ ಜಾಡಿನ ಪದ್ಯ ಬಿಟ್ಟು, ಕೆಲ ಹೊಸವನ್ನು ಸಂಕಲಿಸಿ ‘ನೀನಾ’ ಎಂದು ಹೆಸರಿಟ್ಟೆ. ಕೆ.ಎಸ್. ನರಸಿಂಹಸ್ವಾಮಿಯವರಿಂದಲೇ ಮುನ್ನುಡಿ ಬರೆಸಿಕೋ ಎಂದರು. ಮುಂದಿನದು ಇತಿಹಾಸ.

**ಕವಿತೆ ಮಾತ್ರವಲ್ಲದೇ ಕಥೆ, ವಿಮರ್ಶೆ, ಅನುವಾದಗಳನ್ನೂ ಮಾಡಿದ್ದೀರಿ. ಇವುಗಳಲ್ಲಿ ನಿಮ್ಮ ಮೊದಲ ಪ್ರೀತಿ ಕವಿತೆ. ಕವಿತೆಗೇ ನಿಷ್ಠನಾಗಿರಬೇಕು ಎಂದು ಅನ್ನಿಸಿದ್ದು ಯಾವಾಗ? ಕವಿತೆಯೊಂದೇ ನಿಮ್ಮ ಇಡೀ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ ಎಂದು ಅನ್ನಿಸಿದ್ದಿದೆಯೇ?

ನನಗೆ ಮೊದಲಿನಿಂದಲೂ ಕಾವ್ಯ, ನಾಟಕ, ಛಂದಸ್ಸು, ವ್ಯಾಕರಣ ಪ್ರಿಯವಾದ ವಿಷಯಗಳು. ಇವನ್ನು ಬೆರೆಸಿ ಕಥಾತ್ಮಕವಾಗಿ, ಆಕರ್ಷಕವಾಗಿ ಮಾತಾಡುವುದು ನನಗೆ ಸಹಜವಾಗಿ ಸಾಧಿಸಿದೆ. ಕೆಲವು ಅದ್ಭುತ ಅನಿರೀಕ್ಷಿತಗಳು ನನ್ನ ಕಾವ್ಯವ್ಯಕ್ತಿತ್ವಕ್ಕೆ ವರ್ಣಮಯ ಆಯಾಮಗಳನ್ನು ಜೋಡಿಸಿವೆ. ಪಾ.ವೆಂ. ಆಚಾರ್ಯರು ನನ್ನಿಂದ ಕತೆ ಬರೆಸಿದರು. ಒಮ್ಮೊಮ್ಮೆ ಕಾವ್ಯದಲ್ಲಿ ಹೇಳಲಾಗದ ಬಹಳಷ್ಟನ್ನು ಕತೆಗಳಲ್ಲಿ ತುಂಬಿದ್ದೇನೆ. ಬಿ.ವಿ. ಕಾರಂತರ ಒತ್ತಾಯದಿಂದ ‘ಆಷಾಢದ ಒಂದು ದಿನ’ ಕನ್ನಡಿಸಿದೆ. ನಂತರ ನಾನು ಆಯ್ದುಕೊಂಡು ಅನುವಾದಿಸಿದ ವಿಶಿಷ್ಟ ನಾಟಕಗಳ ಬಹುತೇಕ ಪಾತ್ರಗಳಲ್ಲಿ ನನ್ನನ್ನೇ ಕಂಡಿದ್ದೇನೆ, ಸಂಭಾಷಣೆಗಳಲ್ಲಿ ನನ್ನ ಕಾವ್ಯವನ್ನೇ ತುಂಬಿದ್ದೇನೆ. ಕಾವ್ಯ, ನಾಟಕ, ರಂಗಭೂಮಿ ಮುಂತಾದ ವಿಷಯ ಕುರಿತು ವಿಮರ್ಶೆ ಬರೆದಾಗ ಸಹ ಕವಿಯಾಗಿಯೇ ನಾನು ಕಂಡರಿಸಿದ್ದು ಹೆಚ್ಚು.

**ರಂಗಭೂಮಿ, ನಾಟಕದೊಂದಿಗಿನ ನಿಮ್ಮ ಒಡನಾಟ ಸುದೀರ್ಘವಾದದ್ದು. ಈ ಒಡನಾಟದ ಬಗ್ಗೆ ಕೆಲಮಾತುಗಳು...
ನನ್ನ ಒಬ್ಬ ಅಜ್ಜ ಚನಮಲ್ಲಪ್ಪ, ಮೂರೂ ಜನ ಸೋದರಮಾವಂದಿರು ತಾವು ಬದುಕಿರುವವರೆಗೂ ರಂಗಭೂಮಿಯೊಂದಿಗೆ ನಂಟು ಹೊಂದಿದ್ದರು. ಬಾಲ್ಯದಲ್ಲಿ ಯಾದವಾಡ, ಮನಗುಂಡಿಗಳಲ್ಲಿ ಅವರೊಂದಿಗೆ ಸಣ್ಣಾಟ, ದೊಡ್ಡಾಟಗಳನ್ನು ನೋಡಿದ್ದೆ. ಆಗಿನಿಂದಲೂ ನನ್ನಲ್ಲಿ ನಾಟಕಪ್ರೀತಿ. ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ೧೯೬೩ರಲ್ಲಿ ಕಾರಂತರು ಧಾರವಾಡಕ್ಕೆ ಬಂದು ಕ.ವಿ.ವಿ.ಯಲ್ಲಿ ರಂಗತರಬೇತಿ ನಡೆಸಿದರು.

ಇದು ಕರ್ನಾಟಕದಲ್ಲಿ ಅವರ ಪ್ರಥಮ ಶಿಬಿರ. ಆಗ ನಾನು, ಚಂಪಾ, ದೇಸಾಯಿ, ತೋಂಟದಾರ್ಯ, ಮುರಿಗೆಪ್ಪ ಹಾಗೂ ಡಂಬಳ ಕಾರಂತರ ಶಿಷ್ಯಮಿತ್ರರು. ನಂತರ ನಾವು ಕಟ್ಟಿದ ‘ಅಂತರಂಗ’ ನಾಟಕಕೂಟ ಸಮಗ್ರ ಉತ್ತರ ಕರ್ನಾಟಕಕ್ಕೆ ಅಸಂಗತ ನಾಟಕವನ್ನು ಪರಿಚಯಿಸಿತು. ನಾಟಕದ ಹುಚ್ಚು ಹಿಡಿದ ನಾನು, ಚಂಪಾ ರಜಾ ಹಾಕಿ ಬೆಂಗಳೂರು, ಸಾಗರ, ಹೆಗ್ಗೋಡು, ಮೈಸೂರು, ಹೂವಿನಹಡಗಲಿ ಎಂದೆಲ್ಲ ಅಲೆಯುತ್ತಿದ್ದೆವು. ಇದನ್ನು ತಿಳಿದಿದ್ದ ಶ್ರೀರಂಗರು ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಧಾರವಾಡ ಜಿಲ್ಲಾ ಸಮಿತಿಗೆ ನನ್ನನ್ನು ಸದಸ್ಯನನ್ನಾಗಿಸಿದ್ದರು. ಆಗ ಜಿಲ್ಲೆಯ ತುಂಬ ನಾಟಕ ಚೆಲ್ಲುವರಿಸಿದ್ದೆ. ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ ವಿದ್ಯಾರ್ಥಿಗಳಲ್ಲಿ ರಂಗಪ್ರೀತಿ ಹುಟ್ಟಿಸಿದೆ. ರಂಗಾಯಣದ ಆರಂಭದಿಂದಲೂ, ನಂತರವೂ, ರಂಗಸಮಾಜದ ಸದಸ್ಯನಾಗಿ ಒಡನಾಟ. ಬಹಳ ಕಡೆಗೆ ನಾಟಕವಾಚನ ಮಾಡಿದ್ದೇನೆ. ಹಿಂದಿಯ ಅನೇಕ ನಟ ನಾಟಕಕಾರರ ಸಂಪರ್ಕವೂ ಇದೆ. ನನ್ನ ಆಸಕ್ತಿಯ ನಡೆಗಾಡಿಗೆ ಕಾವ್ಯ ಮತ್ತು ಕಲಾರಂಗ ಎರಡು ಹಳಿಗಳು.

**ಗಿರಡ್ಡಿ ಗೋವಿಂದ ರಾಜ, ಚಂದ್ರಶೇಖರ ಪಾಟೀಲರೊಂದಿಗೆ ‘ಸಂಕ್ರಮಣ’ ಪ್ರಾರಂಭಿಸಿದಿರಿ. ಅರವಿಂದ ನಾಡಕರ್ಣಿ, ಹೇಮಂತ ಕುಲಕರ್ಣಿಯವರೊಡನೆ ‘ಸೃಜನವೇದಿ’ ಪತ್ರಿಕೆಯನ್ನು ಶುರು ಮಾಡಿದಿರಿ. ಸ್ವತಃ ನೀವೇ ‘ಸಂಕಲನ’ ಎಂಬ ಪತ್ರಿಕೆಯನ್ನು ಕೆಲಕಾಲ ನಡೆಸಿದಿರಿ. ಇವುಗಳನ್ನು ಆರಂಭಿಸುವಲ್ಲಿ ನಿಮ್ಮ ಕಾಲದ ಹಾಗೂ ನಿಮ್ಮ ವೈಯಕ್ತಿಕ ತುರ್ತುಗಳು ಏನಿದ್ದವು?

ನಾನು, ಚಂಪಾ, ಗಿರಡ್ಡಿ ಮೂವರೂ ಹತ್ಹತ್ತು ರೂಪಾಯಿ ಹಾಕಿ ೧೯೬೪ರಲ್ಲಿ ಸಂಕ್ರಮಣ ಶುರು ಮಾಡಿದ್ದೆವು. ೧೦ ವರ್ಷದ ಅದರ ನಡಿಗೆ ಸಾಹಿತ್ಯಚರಿತ್ರೆಯ ಭಾಗವಾಯಿತು. ಮೈಸೂರಿನಲ್ಲಿ ನಡೆದ ಶೂದ್ರ ಸಮ್ಮೇಳನದ ನಂತರ ಚಂಪಾಲಹರಿ ಬದಲಾಯಿತು. ಮೊದಲು ಗಿರಡ್ಡಿ, ನಂತರ ನಾನು ಸಂಕ್ರಮಣದಿಂದ ದೂರವಾದೆವು. ಹೇಮಂತ ಕುಲಕರ್ಣಿಯವರ ಸೃಜನವೇದಿ ಆಗಲೇ ಮುಂಬಯಿಯಿಂದ ಪ್ರಕಟವಾಗುತ್ತಿತ್ತು. ಅವರು ನನ್ನ ಹೆಸರನ್ನೂ ಸೇರಿಸಿಕೊಂಡರು. ಸಂಪಾದನೆ ಮುಂಬಯಿಯಿಂದ ಹೇಮಂತರದೇ. ನಂತರ ನನ್ನ ಹೆಸರು ಬೇಡ ಅಂದೆ.

ಜಾತಿ-ಪಂಥ, ಸಾಹಿತ್ಯದ ಗುಂಪುಗಾರಿಕೆ, ರಾಜಕಾರಣದಿಂದ ದೂರವಿದ್ದು, ಲಿಂಗ ವಯಸ್ಸು ಪ್ರದೇಶಗಳನ್ನು ಮೀರಿ ಗುಣವತ್ತತೆಯನ್ನು ಮಾತ್ರ ಕೇಂದ್ರೀಕರಿಸಿದ ಒಂದು ಶುದ್ಧ ಸಾಹಿತ್ಯ ದ್ವೈಮಾಸಿಕವನ್ನು ಸಂಪಾದಿಸುವ ಉತ್ಕಟೇಚ್ಛೆ ಸಂಕ್ರಮಣದಿಂದ ಈಚೆ ಬಂದಾಗಿನಿಂದಲೇ ನನ್ನಲ್ಲಿತ್ತು. ಯಾವುದೇ ವ್ಯಕ್ತಿಯ, ಸಂಸ್ಥೆಯ ವಿರುದ್ಧವಾಗಲಿ ಅಥವಾ ಪ್ರತಿಕ್ರಿಯೆಯ ರೂಪದಿಂದಾಗಲಿ, ದ್ವೇಷ, ಮತ್ಸರ, ಅಸೂಯೆಯಿಂದಾಗಲಿ ಈ ಪತ್ರಿಕೆ ಬರಬಾರದು; ಒಳ್ಳೆಯ ಹೊಸ ಬರಹಗಾರರನ್ನು, ಸಂವೇದನೆಗಳನ್ನು, ತಿಳಿವಳಿಕೆಗಳನ್ನು, ಜ್ಞಾನಶಾಖೆಗಳನ್ನು ಅರಿಯಬೇಕು; ಸಾಹಿತ್ಯ ಪ್ರೀತಿಸುವ ಎಲ್ಲರನ್ನೂ ತಲುಪಬೇಕು ಎಂಬುದು ನನ್ನ ನಿಲುವಾಗಿತ್ತು. ೨೦೦೨ರ ಜನವರಿಯಲ್ಲಿ ‘ಸಂಕಲನ’ ಆರಂಭಿಸಿದೆ.

ಅದನ್ನು ಕನಿಷ್ಠ ಪಕ್ಷ ಮೂರು ವರ್ಷ ತಪ್ಪದೇ ನಡೆಸುತ್ತೇನೆ, ಆಜೀವನ ಇತ್ಯಾದಿ ಯೋಚನೆ ನನಗಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದ್ದೆ. ಪ್ರತಿ ೨ನೇ ತಿಂಗಳ ಮೊದಲ ವಾರದಲ್ಲಿ ಎಲ್ಲರಿಗೂ ತಲುಪುವಂತೆ ಏಳು ವರ್ಷ ಚಾಚೂ ತಪ್ಪದೇ ಕಳಿಸಿದೆ. ಷ. ಶೆಟ್ಟರ್ರಿಂದ ಕನ್ನಡ ನಾಡುನುಡಿ ಕುರಿತ ಅಪರೂಪದ ಲೇಖನಗಳನ್ನು ಬರೆಸಿದೆ. ಮುಂದೆ ಅವುಗಳ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬಂತು. ಪ್ರತಿಯೊಂದು ಲೇಖನ ಪ್ರಕಟವಾದೊಡನೆ ಸಾಂಕೇತಿಕ ಗೌರವಧನ ನೀಡುವುದಾಗಿ ತಿಳಿಸಿದ್ದೆ, ಹಾಗೆ ಮಾಡಿದೆ. ಪತ್ರಿಕೆ ತನ್ನ ಕಾಲ ಮೇಲೆ ನಿಲ್ಲಬೇಕು ಎಂದು ಬಹಳ ಯತ್ನಿಸಿದೆ. ತಾವಾಗಿ ಪತ್ರಿಸಿ, ಪತ್ರಿಕೆ ತರಿಸಿಕೊಂಡ ಅನೇಕರು ಉದ್ರಿಹಣ ಕಳಿಸಲಿಲ್ಲ. ೭ನೇ ವರ್ಷದ ಮೊದಲ ಸಂಚಿಕೆಯಲ್ಲಿಯೇ ನಿಲುಗಡೆಯನ್ನು ಘೋಷಿಸಿದೆ, ಆ ವರ್ಷ ಪೂರ್ಣಗೊಳಿಸಿ ನಿಲ್ಲಿಸಿದೆ. ಕನ್ನಡಕ್ಕೆ ಅಂಥ ಪತ್ರಿಕೆಯ ಅಗತ್ಯ ಈಗಲೂ ಇದೆ.

**ಈಗ ನಿಮಗೆ ೭೫. ಈ ಹಂತದಲ್ಲಿ ಬದುಕಿನ ಬಗ್ಗೆ ನಿಮ್ಮ ದೃಷ್ಟಿಕೋನ ಏನು? ಬಾಳಿದ ದೀರ್ಘ ಬದುಕನ್ನು ನೋಡಿದಾಗ ನಿಮಗೆ ಯಾವುದಕ್ಕೆ ಕೃತಜ್ಞನಾಗಿರಬೇಕು ಎಂದು ಅನ್ನಿಸುತ್ತದೆ? ಈ ಬದುಕಿನಲ್ಲಿ ಸುಂದರವಾದದ್ದು ಯಾವುದು, ನಿಮ್ಮಲ್ಲಿ ಈಗಲೂ ವಿನಯವನ್ನು ಹುಟ್ಟಿಸುವಂಥದ್ದು ಯಾವುದು? ನಿಮ್ಮ ಬದುಕು, ಕಾವ್ಯದಲ್ಲಿ ತೀವ್ರವಾಗಿ ಕಾಡಿದ, ಪರವಶಗೊಳಿಸಿದ ‘ಹೆಣ್ಣು’ ಎನ್ನುವುದನ್ನು ಈಗ ಅರ್ಥ ಮಾಡಿಕೊಂಡ ಬಗೆ ಯಾವುದು?

ನನಗೆ ೭೫, ಅದು ದೇಹಕ್ಕೆ. ಮನಸ್ಸಿನಲ್ಲಿ ಮಾತ್ರ ಈಗಲೂ ಪ್ರತಿಯೊಂದನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವ ಜೀವನೋತ್ಸಾಹವಿದೆ. ಬದುಕಿನಲ್ಲಿ ಅಕಾರಣ ಪೆಟ್ಟು ಬಿದ್ದಿವೆ, ನಂಬಿಕೆಗೆ ಮೋಸವಾಗಿದೆ, ತಿಳಿಯದೇ ದಾರಿ ತಪ್ಪಿದೆ. ಈಗ ಯಾವುದರ ಬಗೆಗೂ ನೋವು, ದೂರು, ಬೇಸರ ಇಲ್ಲ. ಎಲ್ಲವೂ ಅನುಭವದ ಖಜಾನೆಗೆ ಜಮೆಯಾಗಿದೆ. ಕಸ ಕಸವರವಾಗತೊಡಗಿದೆ, ಮುಚ್ಚುಮರೆಯಿರದ ಮುಕ್ತ ಕಾವ್ಯ ಬದುಕಿನೊಂದಿಗೆ ಮಾತಾಡತೊಡಗಿದೆ. ನನಗೆ ಸೇರದುದನ್ನು ಗೌರವದಿಂದ ದೂರವಿಟ್ಟಿದ್ದೇನೆ. ಮೈಹುಳಿ ದುಡಿದು ಇವತ್ತಿನ ನನ್ನನ್ನು ಮಾಡಿದ ಅವ್ವನ ನೆನಪು ನನ್ನನ್ನು ಕಾಡುವ, ಕಾಪಾಡುವ ದೈವವಾಗಿದೆ. ದುರಹಂಕಾರ, ದರ್ಪ, ಸೊಕ್ಕುಗಳನ್ನು ಆತ್ಮಪ್ರತ್ಯಯ ದೂರವಿಟ್ಟಿದೆ.

ಮೊದಲಿನಿಂದಲೂ ಹೆಣ್ಣು, ಯೌವನ, ಸೌಂದರ್ಯ, ಪ್ರಕೃತಿ ನನಗೆ ಆಕರ್ಷಣೆ, ಕುತೂಹಲ, ರಮ್ಯ ನಿಗೂಢ. ನಾನು ಪ್ರೀತಿಸಿದ, ಬಯಸಿದ, ಮಾಡಿಕೊಂಡ ಜೀವನಸಂಗಾತಿ, ಮಗಳು ಎಲ್ಲಾ ಕಡೆ ಅವ್ವನ ಅಂತಃಕರಣದ ಪವಾಡವೇ ಕಾಣುತ್ತಿದೆ. ಈಚೆಗೆ ಪ್ರತಿಯೊಂದು ಸ್ತ್ರೀಮುಖದ ಮೇಲೆ ತಾಯನಗೆ ಕುಣಿಯುತ್ತಿದೆ, ಲಾಲಿ ಹಾಡುತ್ತಿದೆ, ಅನುರಣಿಸುತ್ತಿದೆ. ಅದು ಸಂತೃಪ್ತಿ, ಸಮಾಧಾನ, ಪ್ರಶಾಂತಿ, ನನ್ನ ದರ್ಶನದ ಚೆಲುವು, ಚಿಗುರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.