ಶುಕ್ರವಾರ, ಏಪ್ರಿಲ್ 16, 2021
31 °C

ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ತಾಂತ್ರಿಕ ಶಿಕ್ಷಣ ಮಂಡಳಿಯ ಅವೈಜ್ಞಾನಿಕ ನೀತಿಯನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.ನಗರದ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದು ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ತಾಂತ್ರಿಕ ಶಿಕ್ಷಣ ಮಂಡಳಿಯ ವಿರುದ್ದ ಘೋಷಣೆ ಕೂಗಿದರಲ್ಲದೇ ನಂತರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಬಸವರಾಜ ಪೂಜಾರ, ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣವನ್ನು ಮಾರಾಟಕ್ಕಿಟ್ಟಿದ್ದು, ಖಾಸಗೀಕರಣದ ನೀತಿಗಳನ್ನು ಜಾರಿಗೊಳಿಸುತ್ತಿದೆ. ಸಂಸ್ಥೆಗಳು ಅನಗತ್ಯವಾಗಿ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.ಹೆಚ್ಚಿನ ಶುಲ್ಕ ವಸೂಲಿ, ಹಾಜರಾತಿ, ಆಂತರಿಕ ಅಂಕಗಳಿಗಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಹೊಸದಾಗಿ ರೂಪಿಸಿರುವ ಪಠ್ಯಕ್ರಮ, ಪರೀಕ್ಷಾ ನೀತಿಗಳು, ಪ್ರತಿ ಸೆಮಿಸ್ಟರ್‌ಗೆ ಕೇವಲ 2 ತಿಂಗಳು ತರಗತಿ ನಡೆಯುವುದು ಸೇರಿದಂತೆ ವಿವಿಧ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಈ ಲೋಪದೋಷಗಳನ್ನು ಸರಿಪಡಿಸಿ ಕಾಲೇಜುಗಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಅವರು ಒತ್ತಾಯಿಸಿದರು.ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ನ್ನು ಪದವಿಗೆ ಸರಿಸಮವಾಗಿ ಪರಿಗಣಿಸಬೇಕು. ಅವೈಜ್ಞಾನಿಕ ಪಠ್ಯಕ್ರಮವನ್ನು ಸರಿಪಡಿಸಬೇಕು. ಪ್ರತಿ ಸೆಮಿಸ್ಟರ್‌ನಲ್ಲಿ 4 ತಿಂಗಳು ತರಗತಿಗಳು ನಡೆಯಬೇಕು. ಏಕಕಾಲದಲ್ಲಿ 2-3 ಪರೀಕ್ಷೆಗಳು ನಡೆಸುವುದನ್ನು ನಿಲ್ಲಿಸಬೇಕು. ಹಣ ಮಾಡುವ ಕಾರ್ಯದಲ್ಲಿ ನಿರತವಾಗಿರುವ ಖಾಸಗಿ ಪಾಲಿಟೆಕ್ನಿಕ್‌ಗಳ ಮಾನ್ಯತೆ ರದ್ದುಗೊಳಿಸಬೇಕು ಎಂದು ಪೂಜಾರ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ್, ಎಸ್‌ಎಫ್‌ಐ ಮುಖಂಡರಾದ ವಿನಾಯಕ, ಜಿ.ದುರ್ಗಾ, ಮಲ್ಲಿಕಾರ್ಜುನ ಹಿರೇಮಠ, ಇಮಾಮ್ ನದಾಫ್, ಮಾಂತೇಶ.ಕೆ.ಜಿ, ವಿನಯ ಚಿಕ್ಕಮಠ, ರಾಕೇಶ, ಶಶಿಧರ ಸೇರಿದಂತೆ ಹಲವರು ಹಾಜರಿದ್ದರು.ಶಿಗ್ಗಾವಿಯಲ್ಲಿ ಪ್ರತಿಭಟನೆ

ಶಿಗ್ಗಾವಿ: ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕ್ಯಾರಿ ಓವರ್ ಪದ್ಧತಿ ಜಾರಿಗೊಳಿಸಬೇಕು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅವೈಜ್ಞಾನಿಕ ನೀತಿ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಂಕಾಪುರದಲ್ಲಿ ಮಂಗಳವಾರ ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರುತಾಂತ್ರಿಕ ಶಿಕ್ಷಣ ಮಂಡಳಿಯ ಅವೈಜ್ಞಾನಿಕ ನೀತಿಗಳಿಂದ ಡಿಪ್ಲೊಮಾ ವಿದ್ಯಾರ್ಥಿಗಳು ಬೀದಿಪಾಲಾಗುವ ಆತಂಕವಿದೆ. ವಿದ್ಯಾರ್ಥಿಗಳಿಗೆ ಅವೈಜ್ಞಾನಿಕ ಪಠ್ಯಕ್ರಮ, ಪರೀಕ್ಷಾ ನೀತಿ ಜಾರಿಗೊಳಿಸಿದೆ. ರಾಜ್ಯದಲ್ಲಿ ಹೊಸ ಪಠ್ಯ ಕ್ರಮದಂತೆ ಬೋಧನೆ ಮಾಡುವ ಪ್ರಾಧ್ಯಾಪಕರು, ಮೂಲಸೌಲಭ್ಯಗಳ ಕೊರತೆಯಿದೆ. ಅದನ್ನು ನಿವಾರಿಸುವವರೆಗೆ ವಿದ್ಯಾರ್ಥಿಗಳಿಗೆ ಹಳೆಯ ಪದ್ಧತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಸ ಮಾದರ, ಸುನೀಲ ಸುಗಂಧಿ, ಜಮೀರ, ಎಸ್.ಆರ್. ಬಳ್ಳಾರಿ, ಅಭಿಷೇಕ, ಕಲ್ಲನಗೌಡ್ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ವಿದ್ಯಾರ್ಥಿಗಳಿಂದ ರಸ್ತೆ ತಡೆ

ಹಾನಗಲ್: ತಾಂತ್ರಿಕ ಶಿಕ್ಷಣದ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಸೋಮವಾರ ಇಲ್ಲಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ಎಸ್.ಎಫ್.ಐ ಸಹಯೋಗದಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ತಾಂತ್ರಿಕ ಶಿಕ್ಷಣದ ಕ್ಯಾರಿಓವರ್ ಪದ್ಧತಿ ಜಾರಿಗೊಳ್ಳಬೇಕು, ಅಲ್ಲಿಯವರೆಗೆ ಪ್ರವೇಶ ಪ್ರಕ್ರಿಯೆ ದಿನಾಂಕವನ್ನು ಮುಂದೂಡಬೇಕು. ಪ್ರಸ್ತುತ 3 ತಿಂಗಳಲ್ಲಿ ಪಠ್ಯಕ್ರಮ ಪೂರ್ಣಗೊಳ್ಳುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. ಆದ್ದರಿಂದ ಪಠ್ಯಕ್ರಮವನ್ನು ನಾಲ್ಕು ತಿಂಗಳವರೆಗೆ ವಿಸ್ತರಿಸಬೇಕು ಎಂದು ಆಗ್ರಸಿದರು.ಗೇಟ್ ಪದ್ಧತಿ ರದ್ದುಗೊಳಿಸಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಪರೀಕ್ಷೆ ಸಮಯ ನಿಗದಿಗೊಳಿಸಿದ 15 ದಿನಗಳ ಮುಂಚಿತವಾಗಿ ವೇಳಾಪಟ್ಟಿ ಪ್ರಕಟಿಸಬೇಕು. ಎರಡು ವಿಷಯಗಳ ಪರೀಕ್ಷೆಯ ಮಧ್ಯದಲ್ಲಿ 2-3 ದಿನ ಅಂತರವಿರಬೇಕು ಎಂದರು.ವೃತ್ತಿಪರ ತಾಂತ್ರಿಕ ಕೊರ್ಸ್‌ಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ಡಿಪ್ಲೊಮಾ ಕೋರ್ಸ್ ಅನ್ನು ಪದವಿ ಮಟ್ಟದ್ದಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ವಿದ್ಯಾರ್ಥಿ ಮುಖಂಡರಾದ ವಿನಾಯಕ ಕುರುಬರ, ದರ್ಶನ ಅರಳೆಲಿಮಠ, ಜಗದೀಶ ಕಟ್ಟಿಮನಿ, ವಿದ್ಯಾರ್ಥಿಗಳಾದ ಪುನೀತ್ ಗೊಯಿಕಾಯಿ, ಸಂತೋಷ ತುಮರಿಕೊಪ್ಪ, ಸಂಜಯ ಹಬೀಬ, ಪಿ.ಕೆ. ಮಣಿಕಂಠ, ವಿನಾಯಕ ಮಾನೆ, ಕೆ.ಬಿ. ಶಶಿಕುಮಾರ, ತೌಸೀಫ್ ಹಂಚಿನಮನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.