ಶನಿವಾರ, ಮೇ 15, 2021
24 °C
ಭಾಷೆ, ಭಾಷಾ ಬೋಧಕರ ಮೇಲೆ ಪರಿಣಾಮ

ಏಕರೂಪ ಭಾಷಾ ಪಠ್ಯಕ್ಕೆ ತೆರೆಮರೆ ಯತ್ನ

ಪ್ರಜಾವಾಣಿ ವಾರ್ತೆ/ ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ತುಮಕೂರು: ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಪದವಿ ಕೋರ್ಸ್‌ಗಳಿಗೆ ಏಕರೂಪ ಭಾಷಾ ಪಠ್ಯ ಅಳವಡಿಸಲು ಉನ್ನತ ಶಿಕ್ಷಣ ಇಲಾಖೆ ಸಲಹೆ ನೀಡಿದ್ದು, ಈ ಸಂಬಂಧ ವಿಶ್ವವಿದ್ಯಾನಿಲಯಗಳಿಂದ ಅಭಿಪ್ರಾಯ ಕೇಳಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.ಪ್ರಸ್ತುತ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್ ಪದವಿಯಲ್ಲಿ ಎರಡು ವರ್ಷ ಕಡ್ಡಾಯವಾಗಿ ವಿದ್ಯಾರ್ಥಿಗಳು ಭಾಷಾ ಪತ್ರಿಕೆಗಳ ಅಧ್ಯಯನ ನಡೆಸಬೇಕು. ಅಂದರೆ ಪದವಿಯ ಒಟ್ಟು ಆರು ಸೆಮಿಸ್ಟರ್‌ಗಳಲ್ಲಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಭಾಷಾ ಅಧ್ಯಯನ ಮಾಡಬೇಕಾಗಿದೆ. ಪ್ರತಿ ವಿಭಾಗದ ಭಾಷಾ ಪಠ್ಯ ಬೇರೆ ಬೇರೆ ಇವೆ. ಆದರೆ ಇದಕ್ಕೆ ತಿಲಾಂಜಲಿ ನೀಡಿ ಮುಂದೆ ಪದವಿಯ ಎಲ್ಲ ಕೋರ್ಸ್‌ಗಳಿಗೂ ಏಕ ರೂಪದ ಭಾಷಾ ಪಠ್ಯ ಅಳವಡಿಸುವುದು ಈಗಿನ ಉದ್ದೇಶವಾಗಿದೆ.ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಿಗೂ ಸುತ್ತೋಲೆ ರವಾನಿಸಿದ್ದಾರೆ. ಈ ಶೈಕ್ಷಣಿಕ ವರ್ಷದಿಂದಲೇ ಏಪರೂಪ ಭಾಷಾ ಪಠ್ಯ ಜಾರಿಗೆ ತರಲಾಗುತ್ತದೆಯೋ ಅಥವಾ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವುದೋ ಎಂಬದುನ್ನು ಇನ್ನೂ ಹೇಳಿಲ್ಲ. ವಿವಿಗಳು ಏನು ಕ್ರಮ ಕೈಗೊಳ್ಳಲಿವೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.ಪದವಿಯ ಬೇರೆ ಬೇರೆ ಕೋರ್ಸ್‌ಗಳಲ್ಲಿ ಭಾಷಾ ಪಠ್ಯಗಳನ್ನು ಹೊರತುಪಡಿಸಿ ಇತರೆ ಪಠ್ಯಗಳನ್ನು ಮೂರು ವರ್ಷವೂ ಓದಬೇಕು. ಭಾಷಾ ಪಠ್ಯ ಮಾತ್ರ ಎರಡು ವರ್ಷ ಇರುವುದರಿಂದ ಭಾಷಾ ಅಧ್ಯಾಪಕರ ಕೆಲಸದ ಅವಧಿ ಕಡಿಮೆ. ಏಪರೂಪ ಪಠ್ಯವಾದರೆ ಇದನ್ನು ಸರಿದೂಗಿಸಿ ಸರ್ಕಾರದ ಆರ್ಥಿಕ ಹೊರೆ ತಗ್ಗಿಸಬಹುದು ಎಂಬುದು ಇಲಾಖೆಯ ವಾದವಾಗಿದೆ.ಏಕರೂಪ ಭಾಷಾ ಪಠ್ಯ ಜಾರಿಗೊಳಿಸುವುದರಿಂದ ಭಾಷಾ ಅಧ್ಯಾಪಕರ ನೇಮಕಾತಿಯೂ ಕಡಿಮೆಯಾಗಲಿದೆ. ಸದ್ಯ ಪದವಿಯ ಎಲ್ಲ ಕೋರ್ಸ್‌ಗಳಿಗೂ ಬೇರೆ ಬೇರೆ ಅಧ್ಯಾಪಕರು ಬೇಕು. ಏಕ ರೂಪಿಯಾದರೆ ಮೂರು-ನಾಲ್ಕು ಕೋರ್ಸ್‌ಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿಕೊಂಡು ಒಬ್ಬರೇ ಅಧ್ಯಾಪಕರು ಪಾಠ ಮಾಡಬಹುದು. ಇದರಿಂದ ಭಾಷಾ ಬೋಧಕರ ಸಂಖ್ಯೆ ಕಡಿಮೆ ಮಾಡಬಹುದಾಗಿದೆ ಎನ್ನಲಾಗಿದೆ.ಹೊಸ ನೀತಿ ಜಾರಿಯಾದರೆ ಭಾಷಾ ಅಧ್ಯಾಪಕರ ಬೇಡಿಕೆ ಕುಸಿಯಲಿದೆ. ಈಗಾಗಲೇ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯುತ್ತಿರುವ ಮುಖ್ಯವಾಗಿ ಕನ್ನಡ, ಇಂಗ್ಲಿಷ್ ಭಾಷಾ ಬೋಧಕರು ಮತ್ತಷ್ಟು ಸಮಸ್ಯೆಗೆ ಸಿಲುಕಿಕೊಳ್ಳಲಿದ್ದಾರೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.`ಉನ್ನತ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಬಂದಿದೆ. ಆಯಾಯ ವಿಭಾಗಗಳ ಮುಖ್ಯಸ್ಥರ ಅಭಿಪ್ರಾಯ ಪಡೆದ ಬಳಿಕ ವಿ.ವಿ ಸಿಂಡಿಕೇಟ್‌ನಲ್ಲಿ ಇಟ್ಟು  ನಿರ್ಧಾರ ತೆಗೆದುಗೊಳ್ಳಲಾಗುವುದು' ಎಂದು ತುಮಕೂರು ವಿಶ್ವವಿದ್ಯಾನಿಲಯದ ಉಪ ಕುಲಸಚಿವ ವೇಣುಗೋಪಾಲ್ `ಪ್ರಜಾವಾಣಿ'ಗೆ ತಿಳಿಸಿದರು.`ಭಾಷಾ ಪಠ್ಯ ಏಕರೂಪಿಯಾಗಿ ಬೋಧಿಸುವುದು ತಪ್ಪು. ಭಾಷಾಭಿವೃದ್ಧಿ ದೃಷ್ಟಿಯಿಂದಲೂ ಇದು ಸರಿಯಾದ ಹೆಜ್ಜೆ ಅಲ್ಲ. ಏಕರೂಪ ಪಠ್ಯ ಕಲಿಸುವುದರ ಬದಲಿಗೆ ಪಿಯುಸಿಗೆ ಭಾಷಾ ಕಲಿಕೆ ನಿಲ್ಲಿಸುವುದು ಒಳಿತು. ಉನ್ನತ ಶಿಕ್ಷಣ ಇಲಾಖೆಯ ಈ ನಿರ್ಧಾರ ಭಾಷಾ ಶಿಕ್ಷಣ ಕಲಿತವರ ಉದ್ಯೋಗ ಅವಕಾಶ ಸಂಕುಚಿತಗೊಳಿಸುತ್ತದೆ. ಬಹುಮುಖ್ಯವಾಗಿ ಕನ್ನಡ ಭಾಷೆಯ ಬೆಳವಣಿಗೆ, ಭಾಷೆ ಅಧ್ಯಯನವನ್ನೂ ಕುಂಠಿತಗೊಳಿಸಲಿದೆ' ಎಂದು ಪ್ರಾಧ್ಯಾಪಕ ಕೆ.ಬಿ.ಸಿದ್ದಯ್ಯ ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.