ಬುಧವಾರ, ಜೂನ್ 23, 2021
23 °C

ಏಳು ಸಾಧಕರಿಗೆ ಪುಟ್ಟರಾಜ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಸಂಗೀತ, ಸಾಹಿತ್ಯ, ನಾಟಕ ಸೇರಿದಂತೆ ವಿವಿಧ ಕ್ಷೃತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಏಳು ಜನ ಸಾಧಕರಿಗೆ ಶ್ರೀಗುರು ಪುಟ್ಟರಾಜ ಪ್ರಶಸ್ತಿಗಳನ್ನು ಸೋಮವಾರ ಪ್ರದಾನ ಮಾಡಲಾಯಿತು.ತಾಲ್ಲೂಕಿನ ದೇವಗಿರಿಯ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಗದುಗಿನ ಗಾನಗಂದರ್ವ ಕಲಾ ಟ್ರಸ್ಟ್‌ ವತಿಯಿಂದ ನಡೆದ ಪುಟ್ಟರಾಜ ಕವಿ ಗವಾಯಿಗಳ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪತ್ರ ಹಾಗೂ ಗೌರವ ಸನ್ಮಾನ ಮಾಡಲಾಯಿತು.ಗದುಗಿನ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರಿಗೆ ಗಾನಶ್ರೀ, ಬೆಂಗಳೂರಿನ ಈಶ್ವರ ಮೋರಗೇರಿ ಅವರಿಗೆ ವಾದ್ಯಶ್ರೀ, ರೇವಣಸಿದ್ದಯ್ಯ ಹೊಸೂರಮಠ ಅವರಿಗೆ ನಾಟ್ಯಶ್ರೀ, ಆಲದಕಟ್ಟಿಯ ಬಸವರಾಜ ಶಾಸ್ತ್ರಿಗಳಿಗೆ ಕೀರ್ತನಶ್ರೀ, ಧಾರವಾಡದ ಶಾಂತಾ ಇಮ್ರಾಪುರ ಅವರಿಗೆ ಸಾಹಿತ್ಯಶ್ರೀ, ಹುಬ್ಬಳ್ಳಿಯ ಡಾ. ಜಿ.ಕೆ. ಹಿರೇಮಠ ಅವರಿಗೆ ವೈದ್ಯಶ್ರೀ ಪ್ರಶಸ್ತಿಯನ್ನು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು, ಹುಕ್ಕೇರಿಮಠದ ಸದಾಶಿವ ಶ್ರೀಗಳು ಹಾಗೂ ಅಕ್ಕಿಆಲೂರಿನ ಶಿವಬಸವ ಶ್ರೀಗಳು ಪ್ರದಾನ ಮಾಡಿದರು.ಇದೇ ಸಂದರ್ಭದಲ್ಲಿ ಬಿಜಾಪುರದ ತೋಟಯ್ಯ ಗವಾಯಿಗಳು ಶಿರೋಳ ಮಠ ಅವರಿಗೆ ‘ಗುರುಸೇವಾ ರತ್ನ’ ಬಿರುದು ನೀಡಿ ಗೌರವಿಸಲಾಯಿತು.ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಪುಟ್ಟರಾಜರು ಸ್ವಾರ್ಥವಿಲ್ಲದ ತಮ್ಮ ಸಾಧನೆಯಿಂದಾಗಿ ಜನರಿಗೆ ನಡೆದಾಡುವ ದೇವರಾದರು. ಅವರು ಜನರ ಮನಸ್ಸನಲ್ಲ ಅಜರಾಮರವಾಗಿ ಉಳಿದಿದ್ದಾರೆ. ಅವರ ಕಾಯಕ ಧರ್ಮ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದೆ ಎಂದರು.ಶಾಸಕ ರುದ್ರಪ್ಪ ಲಮಾಣಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಶಿವರಾಜ ಸಜ್ಜನರ, ಗಾನಗಂದರ್ವ ಕಲಾ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಜಿತೇಂದ್ರನಾಥ, ಪ್ರಮುಖರಾದ ಪ್ರಭಾಕರ ಮಂಗಳೂರು ಇತರ ಗಣ್ಯರು ಸೇರಿದಂತೆ ಅನೇಕರು ಹಾಜರಿದ್ದರು.ಇದೇ ಸಂದರ್ಭದಲ್ಲಿ ಪುಟ್ಟರಾಜ ಕವಿ ಗವಾಯಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ೩೦ ಯುವಕರು ನೇತ್ರದಾನ ಮಾಡುವ ವಾಗ್ದಾನ ಪತ್ರವನ್ನು ದಿಂಗಾಲೇಶ್ವರ ಶ್ರೀಗಳಿಗೆ ಅರ್ಪಿಸಿದರು.ಕಿರಣ ಹಾನಗಲ್ಲ, ಸಿದ್ದಲಿಂಗೇಶ ಕಣವಿ, ಪ್ರವೀಣಕುಮಾರ ಹೂಗಾರ, ವೆಂಕಟೇಶ ಜೋಶಿ ಸೇರಿದಂತೆ ಅನೇಕ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರೆ, ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.