ಗುರುವಾರ , ಮಾರ್ಚ್ 4, 2021
29 °C

ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ಕಲ್ಮಾಡಿ ಯುಗಾಂತ್ಯ

ಪ್ರಜಾವಾಣಿ ವಾರ್ತೆ / ಪಿ.ಜಿ.ವಿಜು ಪೂಣಚ್ಚ Updated:

ಅಕ್ಷರ ಗಾತ್ರ : | |

ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ಕಲ್ಮಾಡಿ ಯುಗಾಂತ್ಯ

ಪುಣೆ: ಏಷ್ಯಾದ ಅಥ್ಲೆಟಿಕ್ಸ್ ಚಟುವಟಿಕೆಯ ಚಾರಿತ್ರಿಕ ಸಂದರ್ಭಕ್ಕೆ ಮಹಾರಾಷ್ಟ್ರದ ಈ ಸುಂದರ ನಗರ ಇದೀಗ ಸಾಕ್ಷಿಯಾಗುತ್ತಿದೆ. ಏಷ್ಯಾ ಅಥ್ಲೆಟಿಕ್ಸ್ ಸಂಸ್ಥೆ ಹುಟ್ಟು ಪಡೆದ 40ನೇ ವರ್ಷಾಚರಣೆ ಸಂಭ್ರಮ ಇಲ್ಲಿ ನಡೆದಿದೆ. ಜತೆಗೆ ಇಪ್ಪತ್ತನೇ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಆತಿಥ್ಯದ ಸಂತಸ. ಈ ನಡುವೆ ಇದೇ ಊರಿನ ಸುರೇಶ್ ಕಲ್ಮಾಡಿಯವರನ್ನು ಚುನಾವಣೆಯಲ್ಲಿ ಸೋಲಿಸಿದ ಕತಾರ್‌ನ ದಹ್ಲಾನ್ ಈ ಮಹಾಸಂಸ್ಥೆಯ ಅಧ್ಯಕ್ಷ ಪಟ್ಟಕ್ಕೇರಿದರು.ಸೋಮವಾರ ಇಲ್ಲಿ ಇಡೀ ದಿನ ಜಿಟಿಜಿಟಿ ಮಳೆ. ಮೋಡ ಕವಿದ ವಾತಾವರಣ. ಆದರೆ ಬಾಳೆವಾಡಿಯ ಛತ್ರಪತಿ ಶಿವಾಜಿ ಕ್ರೀಡಾಂಗಣ ಮತ್ತು ಅದರ ಸಮೀಪದಲ್ಲಿಯೇ ಇರುವ ಪಂಚತಾರಾ ಹೋಟೆಲ್‌ನಲ್ಲಿ ಬಿಸಿ ಏರಿದ ವಾತಾವರಣ.ಇಲ್ಲಿನ ಸಂಸದ ಸುರೇಶ್ ಕಲ್ಮಾಡಿ ಅವರು ಭಾರತ ಒಲಿಂಪಿಕ್ ಸಂಸ್ಥೆ, ಅಥ್ಲೆಟಿಕ್ ಸಂಸ್ಥೆಗಳ ಆಡಳಿತದ ಚುಕ್ಕಾಣಿಯನ್ನು ದಶಕಗಳ ಕಾಲ ತಮ್ಮಲ್ಲೇ ಇರಿಸಿಕೊಂಡಿದ್ದವರು. ಇವರು ಕಳೆದ 13 ವರ್ಷಗಳಿಂದ ಏಷ್ಯಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇದ್ದುದರಿಂದ ಸೋಮವಾರ ಬೆಳಿಗ್ಗೆಯಿಂದಲೇ ಇಲ್ಲಿ ತುರುಸಿನ ರಾಜಕೀಯ ಚಟುವಟಿಕೆ.ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ನ ಅಧ್ಯಕ್ಷ ಲಾಮಿನ್ ಡಿಯಾಕ್ ಕಣ್ಗಾವಲಲ್ಲಿಯೇ ಮಧ್ಯಾಹ್ನ ಗುಪ್ತ ಮತದಾನ ನಡೆಯಿತು. ಪ್ರತಿಯೊಂದು ಸದಸ್ಯ ರಾಷ್ಟ್ರಕ್ಕೂ ಒಂದು ಮತ. ಅಂತಿಮವಾಗಿ ದಹ್ಲಾನ್ ಹಮಾದ್ ಅವರಿಗೆ 20 ಮತಗಳು ಬಿದ್ದರೆ, ಕಲ್ಮಾಡಿ ಅವರಿಗೆ 18 ಮತಗಳು ಬಂದವು. ಆದರೆ 7ಮತಗಳು ತಿರಸ್ಕೃತಗೊಂಡವು!ಭಾರತದ ವಿವಾದಾತ್ಮಕ ಕ್ರೀಡಾಡಳಿತಗಾರ ಕಲ್ಮಾಡಿ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ  ಸಂಘಟನೆಯ ಸಂದರ್ಭದಲ್ಲಿ ನಡೆಸಿದ್ದಾರೆನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಹತ್ತು ತಿಂಗಳ ಕಾಲ ತಿಹಾರ್ ಜೈಲಿನಲ್ಲಿದ್ದರು. ಆ ನಂತರ ಅವರು ಹೊಂದಿದ್ದ ಕ್ರೀಡಾ ಸಂಘಟನೆಗಳ ಮೇಲಿನ ಅವರ ಹಿಡಿತ ಒಂದೊಂದಾಗಿ ಕಳಚಿಕೊಳ್ಳುತ್ತಾ ಬಂದಿತು. ಇದೀಗ ಏಷ್ಯಾ ಅಥ್ಲೆಟಿಕ್ಸ್ ಸಂಸ್ಥೆಯ ಉನ್ನತ ಸ್ಥಾನದಿಂದ ಅಧಿಕೃತವಾಗಿ ಹೊರ ಬಂದಂತಾಯಿತು.ಚುನಾವಣೆ ಫಲಿತಾಂಶ ಗೊತ್ತಾಗುತ್ತಿದ್ದಂತೆಯೇ ಹೊರಬಂದು ಪತ್ರಕರ್ತರೊಡನೆ ಮಾತನಾಡಿದ ದಹ್ಲಾನ್ ಹಮಾದ್ `ನನಗೆ ಏಷ್ಯಾದ ಎಲ್ಲಾ ದೇಶಗಳೂ ಒಂದೇ. ಎಲ್ಲೆಡೆಯೂ ಕ್ರೀಡಾ ಚಟುವಟಿಕೆಗಳಿಗೆ ಚುರುಕು ನೀಡಿ ಜಗತ್ತಿನಲ್ಲಿ ಏಷ್ಯಾವನ್ನು ಅಥ್ಲೆಟಿಕ್ಸ್‌ನ ಬಲಿಷ್ಠ ಶಕ್ತಿಯನ್ನಾಗಿ ರೂಪಿಸಲು ಶ್ರಮಿಸಲಿದ್ದೇನೆ' ಎಂದರು.ಕಳಾಹೀನರಾಗಿದ್ದ ಸುರೇಶ್ ಕಲ್ಮಾಡಿ ತಮಗೆ ಎದುರಾದ ಪತ್ರಕರ್ತರೊಡನೆ ಕಾಟಾಚಾರಕ್ಕೆ ಎಂಬಂತೆ ಮಾತನಾಡುತ್ತಾ `ಅಥ್ಲೆಟಿಕ್ಸ್ ಅಭಿವೃದ್ಧಿಗಾಗಿ ಉನ್ನತ ಮಟ್ಟದಲ್ಲಿ ಕೆಲಸ ಮಾಡಿದ ಸಂತೃಪ್ತಿ ಇದೆ. ಇನ್ನು ತಳಮಟ್ಟದಲ್ಲಿ ದೇಶದಾದ್ಯಂತ ಅಥ್ಲೆಟಿಕ್ಸ್ ಪ್ರಗತಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ಉದ್ದೇಶ ಇದೆ' ಎಂದರು.

ಅಧ್ಯಕ್ಷ ಪಟ್ಟಕ್ಕೆ ದಹ್ಲಾನ್ ಹಮಾದ್

ಪ್ರಜಾವಾಣಿ ವಾರ್ತೆ

ಪುಣೆ: ಏಷ್ಯಾದ ದೇಶಗಳಲ್ಲಿ ಅಥ್ಲೆಟಿಕ್ಸ್‌ಗೆ ಸಂಬಂಧಿಸಿದಂತೆ ಹೊಸಬೆಳಕು ಚೆಲ್ಲುವ ಹೆಗ್ಗನಸು ಹೊತ್ತು ಏಷ್ಯಾ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ  ಗಾದಿಗೆ ಏರಿರುವ ದಹ್ಲಾನ್ ಅಲ್ ಹಮಾದ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್ ಆಡಳಿತಗಾರರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ.ಅಂತರರಾಷ್ಟ್ರೀಯ ಅಮೆಚೂರ್ ಅಥ್ಲೆಟಿಕ್ಸ್ ಫೆಡರೇಷನ್‌ನ ಉಪಾಧ್ಯಕ್ಷರಾಗಿ 2007ರಿಂದಲೇ ಕಾರ್ಯನಿರ್ವಹಿಸುತ್ತಿರುವ ಇವರು, ಏಷ್ಯಾ  ಅಥ್ಲೆಟಿಕ್ಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿ ಎಂಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕತಾರ್ ದೇಶದ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಒಂದೂವರೆ ದಶಕದಿಂದ ಸೇವೆ ಸಲ್ಲಿಸುತ್ತಿದ್ದಾರೆ. 2006ರಲ್ಲಿ ದೋಹಾದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದ ಸಂಘಟನಾ ಸಮಿತಿಯ ಪ್ರಮುಖ ಸದಸ್ಯರಾಗಿದ್ದರು.ಆಡಳಿತ ನಿರ್ವಹಣೆ ಕುರಿತು ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪಡೆದಿರುವ ಇವರು ಕತಾರ್ ಸೇನೆಯ ಮೇಜರ್ ಜನರಲ್ ಹುದ್ದೆಯಲ್ಲಿದ್ದಾರೆ.

ಚುನಾವಣೆಯ ನಂತರ ಪತ್ರಕರ್ತರ ಜತೆಗೆ ಮಾತನಾಡಿದ ದಹ್ಲಾನ್ `ನಮ್ಮ ಕೋಚ್‌ಗಳಿಗೆ ವೈಜ್ಞಾನಿಕವಾದ ತರಬೇತಿ ನೀಡಬೇಕಿದೆ. ಹೊಸ ಪೀಳಿಗೆಯ ಅಥ್ಲೀಟ್‌ಗಳು ಅರಳುವಲ್ಲಿ ಅವರ ಪಾತ್ರ ಬಲು ದೊಡ್ಡದು. ಏಷ್ಯಾದಾದ್ಯಂತ ಸಮರ್ಥ ಕೋಚ್‌ಗಳನ್ನು ಗುರುತಿಸಿ ಅವರ ಪ್ರತಿಭೆ, ಸಾಧನೆಗೂ ಮನ್ನಣೆ ನೀಡಬೇಕಾಗಿದೆ' ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.