ಭಾನುವಾರ, ಮಾರ್ಚ್ 7, 2021
25 °C

ಐಪಿಎಲ್ ಸಂಭ್ರಮಕ್ಕೆ ವರ್ಣರಂಜಿತ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಪಿಎಲ್ ಸಂಭ್ರಮಕ್ಕೆ ವರ್ಣರಂಜಿತ ಚಾಲನೆ

ಚೆನ್ನೈ (ಪಿಟಿಐ, ಐಎಎನ್‌ಎಸ್): ಕತ್ತಲನ್ನು ಸೀಳಿಕೊಂಡು ಗಗನದತ್ತ ಚಿಮ್ಮಿದ ಬಾಣ ಬಿರುಸುಗಳ ಅಬ್ಬರ, ಅಮೆರಿಕದ ಪಾಪ್ ತಾರೆ ಕೇಟಿ ಪೆರ‌್ರಿಯ ಮನಮೋಹಕ ಪ್ರದರ್ಶನ, ಬಾಲಿವುಡ್ ತಾರೆಯರ ನೃತ್ಯದ ಸೊಬಗು, ಆಗಿಂದಾಗ್ಗೆ ಲೇಸರ್ ಕಿರಣಗಳಿಂದ ಮೂಡಿಬರುತ್ತಿದ್ದ ನೆರಳು ಬೆಳಕಿನ ಚಿತ್ತಾರ...ಚೆನ್ನೈನ ವೈಎಂಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಹೊಸಲೋಕವೇ ಸೃಷ್ಟಿಯಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್‌ನ ಐದನೇ ಅವತರಣಿಕೆಯ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಕಂಡುಬಂದ ದೃಶ್ಯಗಳು ನೆರೆದವರ ಮನದಲ್ಲಿ ಅಚ್ಚಳಿಯದೇ ಉಳಿಯುವಂತದ್ದು. ಮುಂದಿನ ದಿನಗಳಲ್ಲಿ ಚೆಂಡು ದಾಂಡಿನ ಆಟದ ಜೊತೆ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯೂ ಕಾದು ಕುಳಿತಿದೆ ಎಂಬುದನ್ನು ಸಾರಿ ಹೇಳುವಂತಿತ್ತು ಈ ಆರಂಭ. ದೇಸಿ ಹಾಗೂ ವಿದೇಶಿ ಸಂಸ್ಕೃತಿಯ ಕೆಲವು ತುಣುಕುಗಳು ಈ ವೇಳೆ ಅನಾವರಣಗೊಂಡವು. ಐಪಿಎಲ್‌ನಲ್ಲಿ ವಿದೇಶಿ ಆಟಗಾರರೂ ಇರುವುದರಿಂದ ಕಾರ್ಯಕ್ರಮದಲ್ಲಿ ವಿದೇಶಿ ಸಂಸ್ಕೃತಿಯ ಸ್ಪರ್ಶ ಕಾಣಬಹುದಿತ್ತು. ಹಾಡು ಮತ್ತು ನೃತ್ಯ ಇಡೀ ಸಮಾರಂಭವನ್ನು ಸಮ್ಮೊಹನಗೊಳಿಸಿತ್ತು. ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಒಂಬತ್ತು ತಂಡಗಳ ನಾಯಕರು ಹಾಗೂ ಕೆಲವು ತಂಡಗಳ ಆಟಗಾರರು ಸಮಾರಂಭದಲ್ಲಿ ಹಾಜರಿದ್ದರು. ಸಿನಿಮಾ ತಾರೆಯರು, ರಾಜಕಾರಣಿಗಳ ದಂಡೇ ನೆರೆದಿತ್ತು. ದೇಶಾದ್ಯಂತ ಕೋಟ್ಯಂತರ ಮಂದಿ ಟಿವಿ ಮೂಲಕ ಸಮಾರಂಭದ ನೇರ ಪ್ರಸಾರ ವೀಕ್ಷಿಸಿದರು.ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರು ಟೂರ್ನಿಗೆ ಚಾಲನೆ ನೀಡುತ್ತಿರುವುದಾಗಿ ಪ್ರಕಟಿಸಿದರು. ಈ ವೇಳೆ ವೇದಿಕೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಎನ್. ಶ್ರೀನಿವಾಸನ್, ಐಪಿಎಲ್‌ನಲ್ಲಿ ವಿವಿಧ ತಂಡಗಳನ್ನು ಮುನ್ನಡೆಸಲಿರುವ ರಾಹುಲ್ ದ್ರಾವಿಡ್, ಗೌತಮ್ ಗಂಭೀರ್, ಸೌರವ್ ಗಂಗೂಲಿ, ಆ್ಯಡಮ್ ಗಿಲ್‌ಕ್ರಿಸ್ಟ್, ವೀರೇಂದ್ರ ಸೆಹ್ವಾಗ್, ಹರಭಜನ್ ಸಿಂಗ್, ಡೇನಿಯಲ್ ವೆಟೋರಿ, ಕ್ಯಾಮರೂನ್ ವೈಟ್, ಮಹೇಂದ್ರ ಸಿಂಗ್ ದೋನಿ ಹಾಜರಿದ್ದರು. ಬಾಲಿವುಡ್ `ಸೂಪರ್ ಸ್ಟಾರ್~ ಅಮಿತಾಭ್ ಬಚ್ಚನ್ ಗೀತೆ ವಾಚಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಪ್ರಸೂನ್ ಜೋಶಿ ರಚಿಸಿದ ಗೀತೆಯನ್ನು ವಾಚಿಸಿದಾಗ ನೆರೆದ ಪ್ರೇಕ್ಷಕರಲ್ಲಿ ಹೊಸ ಅನುಭವ. ಇದಕ್ಕೆ ಕಲಾವಿದರ ನೃತ್ಯ ಸಾಥ್ ಇದ್ದೇ ಇತ್ತು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಮಿತಾಭ್ ಕೆಲದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಹೊರಬಂದಿದ್ದರು.ದಕ್ಷಿಣ ಆಫ್ರಿಕಾದ `ಫಸ್ಟ್ ಪ್ರೊಜೆಕ್~್ಟ ಮತ್ತು `ರವಿ ಡ್ರಮ್ಸ~ ತಂಡದ ಸದಸ್ಯರು ಪ್ರದರ್ಶನ ನೀಡಿದಾಗ ಪ್ರೇಕ್ಷಕರ ಎದೆಬಡಿತ ಹೆಚ್ಚುತ್ತಾ ಹೋಯಿತು. ಎಲ್ಲರ ಮನದಲ್ಲೂ ವಿದ್ಯುತ್ ಸಂಚರಿಸಿದ ಅನುಭವ. ಇದಾದ ಬಳಿಕ ವೇದಿಕೆಯಲ್ಲಿ ರಾರಾಜಿಸಿದ್ದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ. `ಡಾನ್ ಮತ್ತು `ಡಾನ್ 2~ ಚಲನಚಿತ್ರದ ಹಾಡಿಗೆ ಅವರು ಮೋಹಕ ನೃತ್ಯ ಪ್ರದರ್ಶಿಸಿದರು. ಪ್ರಿಯಾಂಕಾ ಸಮಾರಂಭದ ಪ್ರಮುಖ ವೇದಿಕೆಗೆ `ಹಾರಾಡುತ್ತಾ~ ಬಂದಿಳಿದ ರೀತಿ ಆಕರ್ಷಕವಾಗಿತ್ತು.ಪ್ರಿಯಾಂಕಾ ಆ ಬಳಿಕ ಮಹೇಂದ್ರ ಸಿಂಗ್ ದೋನಿ ಒಳಗೊಂಡಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ತಮ್ಮಂದಿಗೆ ನೃತ್ಯ ಮಾಡಲು ಪ್ರೇರೇಪಿಸಿದ ಕ್ಷಣ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದ್ದು ನಿಜ. ಸ್ಥಳೀಯ `ಹೀರೊ~ ಪ್ರಭುದೇವ ನೃತ್ಯ ನೋಡುಗರನ್ನು ಮೋಡಿ ಮಾಡಿತು. ಬಾಲಿವುಡ್ ನಟಿ ಕರೀನಾ ಕಪೂರ್ ಎಲ್ಲರನ್ನೂ ಮಾಯಾಲೋಕಕ್ಕೆ ಕೊಂಡೊಯ್ದರು.ಕರೀನಾ `ರಾ ಒನ್~ ಒಳಗೊಂಡಂತೆ ಬಾಲಿವುಡ್‌ನ ಚಲನಚಿತ್ರಗಳ ಕೆಲವು ಹಾಡುಗಳಿಗೆ ನೃತ್ಯ ಮಾಡಿದರೆ, ಸಲ್ಮಾನ್ ಖಾನ್ `ಹಾಸ್ಯ ಮಿಶ್ರಿತ~ ನೃತ್ಯಗಳ ಮೂಲಕ ಪ್ರೇಕ್ಷಕರ ಗಮನವನ್ನು ಕೆಲಹೊತ್ತು ಹಿಡಿದಿಟ್ಟುಕೊಂಡರು. ಆದರೆ ಎಲ್ಲರೂ ಕಾತರದಿಂದ ಕಾಯುತ್ತಿದ್ದದ್ದು ಪಾಪ್ ತಾರೆ ಕೇಟಿ ಪೆರ‌್ರಿ ಅವರ ಪ್ರದರ್ಶನಕ್ಕೆ.ಪೆರ‌್ರಿ ಆಗಮನವಾದಾಗ ಅಲ್ಲಿ ಸಂಭ್ರಮದ ಕಟ್ಟೆಯೊಡೆದಿತ್ತು. ಅಮೆರಿಕದ ತಾರೆ ಭಾರತದಲ್ಲಿ ನೀಡಿದ ಮೊದಲ ಪ್ರದರ್ಶನ ಇದು. ಪೆರ‌್ರಿ ತಂಡದ ಕೆಲವು ಸದಸ್ಯೆಯರು ಸೀರೆಯುಟ್ಟುಕೊಂಡಿದ್ದರು. ಆ ಮೂಲಕ ತಮ್ಮ ಪ್ರದರ್ಶನಕ್ಕೆ ಭಾರತೀಯತೆಯ ಸ್ಪರ್ಶ ನೀಡುವ ಕಸರತ್ತು ನಡೆದಿತ್ತು. ಪೆರ‌್ರಿ ಮಧುರ ಕಂಠದ ಹಾಡಿಗೆ ಅಲ್ಲಿ ರೆದವರೆಲ್ಲರೂ ತಲೆದೂಗಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.