ಗುರುವಾರ , ಏಪ್ರಿಲ್ 22, 2021
27 °C

ಒಂದೇ ಸೂರಿನಡಿ ಶಾಲೆ, ಆರೋಗ್ಯ ಕೇಂದ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಸಿದು ಬೀಳುವ ಸ್ಥಿತಿಯಲ್ಲಿ ಕೊಠಡಿ, ಆತಂಕದಲ್ಲಿ ವಿದ್ಯಾರ್ಥಿಗಳು

ಮಹದೇವಪುರ:
ಒಂದೇ ಕಟ್ಟಡದಲ್ಲಿ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ! 132 ವಿದ್ಯಾರ್ಥಿಗಳಿಗೆ ಮೂರೇ ಕೊಠಡಿ. 60 ವರ್ಷಗಳ ಹಿಂದೆ ನಿರ್ಮಾಣಗೊಂಡ ಪ್ರಮುಖ ಶಾಲಾ ಕೊಠಡಿ ಈಗಲೋ-ಆಗಲೋ ಕುಸಿದು ಬೀಳುವ ಸ್ಥಿತಿ. ಆತಂಕದಲ್ಲಿ ದಿನ ಕಳೆಯುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು..- ಇದು ಮಹದೇವಪುರ ಕ್ಷೇತ್ರದ ಹಗದೂರು ವಾರ್ಡ್ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಪ್ರಾಥಮಿಕ ಪಾಠ ಶಾಲೆಯ ದುಸ್ಥಿತಿ. ಇನ್ನು, ಶಾಲಾ ಆವರಣದಲ್ಲಿರುವ ಅಂಗನವಾಡಿ ಕಟ್ಟಡವೂ ಹಳೆಯದಾಗಿದ್ದು, ಅದರ ಗೋಡೆಗಳು ಕೂಡ ಬಿರುಕು ಬಿಟ್ಟಿವೆ. ಶಾಲಾ ಕೊಠಡಿಯೊಂದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅದು ಕೂಡ ಏಕೈಕ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಅವರ ಸ್ವಕ್ಷೇತ್ರದಲ್ಲಿ ಎಂಬುದು ಗಮನಾರ್ಹ.ವ್ಯವಸ್ಥಿತ ಆರೋಗ್ಯ ಕೇಂದ್ರಕ್ಕೆ ಇರಬೇಕಾದಂತಹ ಅಗತ್ಯವಾದ ಸ್ಥಳಾವಕಾಶ ಹಾಗೂ ಮೂಲಭೂತ ಸೌಲಭ್ಯಗಳು ಇಲ್ಲಿಲ್ಲ. ಇದರಿಂದಾಗಿ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ಅದರಲ್ಲೂ ಮಕ್ಕಳಿರುವ ಶಾಲೆಯ ಆವರಣದಲ್ಲಿ ಆಸ್ಪತ್ರೆ ಇರುವುದು ಆರೋಗ್ಯಕರವಲ್ಲ. ಆದಷ್ಟು ಬೇಗನೆ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.ಒಂದು ಕೊಠಡಿಯಲ್ಲಿ ಎರಡೆರಡು ತರಗತಿ: ಇರುವ ಮೂರು ಶಾಲಾ ಕೊಠಡಿಗಳ ಪೈಕಿ ಒಂದು ಕೊಠಡಿಯನ್ನು ರೋಟರಿ ಸಂಸ್ಥೆ ನಿರ್ಮಿಸಿಕೊಟ್ಟಿದೆ. ಹೀಗಾಗಿ ಶಾಲೆಯ ಶಿಕ್ಷಕರು ಒಂದೊಂದು ಕೊಠಡಿಯಲ್ಲಿ ಎರಡೆರಡು ತರಗತಿಗಳನ್ನು ನಡೆಸುವಂತಾಗಿದೆ. ಈ ಬಗ್ಗೆ ಶಾಲೆಯ ಮುಖ್ಯೋಧ್ಯಾಯಿನಿ ಎನ್.ಮಂಜುಳಾ ಅವರು ಈಗಾಗಲೇ ಇಲಾಖೆಯ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.ಆದಷ್ಟು ಬೇಗನೆ ಅಗತ್ಯವಾದ ಹೆಚ್ಚುವರಿ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿಕೊಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಅವರ ಮನವಿಗೆ ಇದುವರೆಗೆ ಸ್ಪಂದಿಸಿಲ್ಲ.  ಶಾಲಾ ಆವರಣದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಸಾಕಷ್ಟು ಜಾಗವಿದ್ದು, ಕಳೆದ ವರ್ಷವೇ ಶಾಲಾ ಕೊಠಡಿಗಳನ್ನು ನಿರ್ಮಿಸಲು ಸರ್ಕಾರದಿಂದ ಒಟ್ಟು 12 ಲಕ್ಷ ರೂಪಾಯಿ ಹಣ ಬಿಡುಗಡೆ ಆಗಿದೆ. ಆದರೆ, ಸಂಬಂಧಪಟ್ಟ ಇಲಾಖೆ ಕೊಠಡಿಗಳನ್ನು ನಿರ್ಮಿಸಲು ಮುಂದಾಗಿಲ್ಲ ಎಂದು ಸ್ಥಳೀಯ ನಿವಾಸಿ ವೆಂಕಟೇಶ `ಪ್ರಜಾವಾಣಿ~ಯೊಂದಿಗೆ ದೂರಿದರು.ಅಷ್ಟೇ ಅಲ್ಲದೆ ಶಾಲೆಯ ಕಟ್ಟಡದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸಿ ಅದರ ಬದಲಾಗಿ ಒಟ್ಟು 100 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲು ಮಹಾನಗರ ಪಾಲಿಕೆಯಿಂದ ಒಟ್ಟು ಮೂರು ಕೋಟಿ ರೂಪಾಯಿಗಳ ಅನುದಾನ ಮೀಸಲಿಡಲಾಗಿದೆ. ಹೆಚ್ಚುವರಿ ಅನುದಾನವನ್ನು ಸರ್ಕಾರ ನೀಡಲಿದೆ ಎಂದು ಸ್ಥಳೀಯ ಶಾಸಕ ಹಾಗೂ ಹಾಲಿ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಎರಡು ವರ್ಷಗಳ ಹಿಂದೆಯೇ ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೂ ಆಶ್ವಾಸನೆ ಕಾರ್ಯರೂಪಕ್ಕೆ ಬಂದಿಲ್ಲ.ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ದೊಡ್ಡನೆಕ್ಕುಂದಿ, ವರ್ತೂರು ಹಾಗೂ ಹಗದೂರು ವಾರ್ಡ್‌ಗಳ ವ್ಯಾಪ್ತಿಯಲ್ಲಿನ ಚಿನ್ನಪ್ಪನಹಳ್ಳಿ, ತೂಬರಹಳ್ಳಿಪಾಳ್ಯ, ಕುಂದಲಹಳ್ಳಿ ಕಾಲೋನಿ, ಗಾಂಧಿಪುರ, ಬಿಮೆಲ್, ಎಇಸಿಎಸ್ ಬಡಾವಣೆ, ಸಿದ್ದಾಪುರ, ತೂಬರಹಳ್ಳಿ, ರಾಮಗೊಂಡನಹಳ್ಳಿ, ನಲ್ಲೂರುಹಳ್ಳಿ, ಸೀಮಂತನಕೆರೆ, ನಾರಾಯಣಪುರ ಗ್ರಾಮಗಳು ಸೇರುತ್ತವೆ. ಈ ಊರುಗಳಲ್ಲಿ ಸುಮಾರು 30ರಿಂದ 40 ಸಾವಿರ ಜನಸಂಖ್ಯೆಯಿದೆ.ಇಷ್ಟೊಂದು ಜನಸಂಖ್ಯೆ ಜನ ಶಾಲಾ ಕೊಠಡಿಯಲ್ಲಿನ ಪುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸುವಂತಾಗಿದೆ.ಆರೋಗ್ಯ ಕೇಂದ್ರದಲ್ಲಿ ರೋಗಿಗಳು ಕೂರಲು ಅಗತ್ಯವಾದ ಸ್ಥಳಾವಕಾಶವೂ ಇಲ್ಲ. ಇದರಿಂದಾಗಿ ರೋಗಿಗಳು ಶಾಲೆಯ ಮುಂದೆ ಕುಳಿತುಕೊಂಡು ಚಿಕಿತ್ಸೆ ಪಡೆಯಲು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರೋಗಿಗಳು ಶಾಲಾ ಕೊಠಡಿಗಳ ಬಳಿ ಬರುವುದರಿಂದ ಅವರ ಸೋಂಕು ಮಕ್ಕಳಿಗೆ ತಗಲುವ ಭೀತಿ ಕಾಡುತ್ತಿದೆ. ಹೀಗಾಗಿ ಅನೇಕ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.ಆಸ್ಪತ್ರೆಗೆ ಗುರುತಿಸಿದ ಜಾಗದಲ್ಲಿ ಗುಡಿಸಲು!: ಬಿಬಿಎಂಪಿಯು ಎರಡು ವರ್ಷಗಳ ಹಿಂದೆಯೇ ಸಿದ್ದಾಪುರ ಗ್ರಾಮದ ಸರ್ವೆ ನಂ.3ರಲ್ಲಿನ 2.21 ಎಕರೆ ಸರ್ಕಾರಿ ಭೂಮಿಯನ್ನು 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆಂದು ಮೀಸಲಿಟ್ಟಿದೆ. ಆ ಜಾಗದಲ್ಲಿ ಇಂದು ಇಪ್ಪತ್ತೈದಕ್ಕೂ ಅಧಿಕ ಗುಡಿಸಲು ಹಾಗೂ ಮನೆಗಳು ತಲೆಯೆತ್ತಿವೆ.ಸಮೀಪದ ರಾಮಗೊಂಡನಹಳ್ಳಿಯ ಕೆಲ ರಾಜಕೀಯ ಮುಖಂಡರು ದಲಿತರ ಹೆಸರಿನಲ್ಲಿ ಮನೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಬಗ್ಗೆ ಸಿದ್ದಾಪುರ ಗ್ರಾಮಸ್ಥರು ಪಾಲಿಕೆಯ ಮಹದೇವಪುರ ವಲಯ ಜಂಟಿ ಆಯುಕ್ತರು, ತಾಲ್ಲೂಕು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆಸ್ಪತ್ರೆಗಾಗಿ ಮೀಸಲಟ್ಟ ಜಾಗದಲ್ಲಿ ತಲೆಯೆತ್ತಿರುವ ಗುಡಿಸಲುಗಳನ್ನು ತೆರವುಗೊಳಿಸಬೇಕು. ಸರ್ಕಾರಿ ಶಾಲಾ ಕೊಠಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.