ಮಂಗಳವಾರ, ಏಪ್ರಿಲ್ 20, 2021
27 °C

ಒಣಗುತ್ತಿದೆ ಹತ್ತಿ , ಶೇಂಗಾ, ಸೂರ್ಯಕಾಂತಿ

ಎನ್.ಎಲ್. ಬಸವರಾಜ್ Updated:

ಅಕ್ಷರ ಗಾತ್ರ : | |

ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಜವಾನನ ಹುದ್ದೆಯಲ್ಲಿ ಇರುವ ವ್ಯಕ್ತಿ ನಡೆಸುವಷ್ಟು ನೆಮ್ಮದಿ ನಮಗಿಲ್ಲ. ಬದುಕಿನ ಆಸೆಯನ್ನೇ ಬಿಡುವಂತಹ ಸ್ಥಿತಿ ಮುಂದುವರಿಯುತ್ತಿದೆ. ಈ ವ್ಯವಸಾಯವೇ ಸಾಕೆನಿಸಿದೆ ಎಂದು ಯರಬಳ್ಳಿಯ ರೈತರೊಬ್ಬರು ನೋವು ತೋಡಿಕೊಂಡರು.ಎರಡು ವರ್ಷದ ಹಿಂದೆ ಬೆಳೆ ಕೈಗೆ ಬರುವ ಹಂತದಲ್ಲಿ ಜಡಿ ಮಳೆ ಹಿಡಿದ ಕಾರಣಕ್ಕೆ ಎಲ್ಲಾ ಬೆಳೆ ಕೊಳೆತು ಕೈಗೆ ಬರದೆ ಹೋಯಿತು. ಹಿಂದಿನ ವರ್ಷ ಮುಂಗಾರು ಮತ್ತು ಹಿಂಗಾರು ಕೈಕೊಟ್ಟ ಕಾರಣ ಬಿತ್ತನೆ ಸಕಾಲಕ್ಕೆ ಆಗಲಿಲ್ಲ. ಬಿತ್ತನೆಗೆ ಖರ್ಚು ಮಾಡಿದ ಹಣವೂ ಬರಲಿಲ್ಲ. ಈ ವರ್ಷ ಜುಲೈ ಆರಂಭವಾದರೂ ಮಳೆಯ ಸುಳಿವಿಲ್ಲ. ಏನು ಮಾಡಬೇಕು ಎಂದು ತೋಚದಾಗಿದೆ ಎಂದು ರೈತರು ತಿಳಿಸಿದರು.ಹಿರಿಯೂರು ತಾಲ್ಲೂಕಿನಲ್ಲಿ ಮೇ ತಿಂಗಳ ವಾಡಿಕೆ ಮಳೆ 71.3 ಮಿ.ಮೀ. ಆದರೆ, ಈ ಬಾರಿ 36.25 ಮಿ.ಮೀ. ಬಂದಿದೆ. ಜೂನ್ ವಾಡಿಕೆ ಮಳೆ 33.7. ಬಂದಿರುವುದು ಕೇವಲ 1.3 ಮಿ.ಮೀ. ಇತ್ತೀಚಿನ ವರ್ಷಗಳಲ್ಲಿ ಜೂನ್ ತಿಂಗಳಲ್ಲಿ ಮಳೆ ಈ ಪ್ರಮಾಣದಲ್ಲಿ ಕೈಕೊಟ್ಟಿರುವುದು ಈ ಬಾರಿ ಮಾತ್ರ. 49,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ, ಆಗಿರುವುದು 8,512 ಹೆಕ್ಟೇರ್ ಮಾತ್ರ. ಇದರಲ್ಲಿ 4,852 ಹೆಕ್ಟೇರ್ ಬಿತ್ತನೆ ಆಗಿರುವುದು ನೀರಾವರಿ ಆಶ್ರಯದಲ್ಲಿ.ಖುಷ್ಕಿಯಲ್ಲಿ 3,660 ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ. ಇದರಲ್ಲಿ 1,622 ಹೆಕ್ಟೇರ್ ಹತ್ತಿ, 1,161 ಹೆಕ್ಟೇರ್ ಸೂರ್ಯಕಾಂತಿ ಆಗಿದ್ದು, ಈ ಎರಡೂ ಬೆಳೆಗಳು ಮಳೆ ಬಂದರೂ ಚೇತರಿಸಿಕೊಳ್ಳದಷ್ಟು ಒಣಗಿ ಹೋಗಿವೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ. 25,000 ಹೆಕ್ಟೇರ್ ಬಿತ್ತನೆ ಆಗಬೇಕಿದ್ದ ಕಡೆ ಕೇವಲ 260 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಬೆಳೆ ಪೂರ್ಣ ಒಣಗಿದೆ. ಶೇಂಗಾ ಬಿತ್ತನೆಗೆ ಜುಲೈ 15ರವರೆಗೆ ಅವಕಾಶವಿದೆ.ಈ ವಾರದಲ್ಲಿ ಮಳೆ ಬಂದರೆ ಬಿತ್ತನೆ ಮಾಡಬಹುದು. ಮಳೆ ತಡವಾದರೆ ಅಲ್ಪಾವಧಿ ಬೆಳೆಗಳಾದ ಸಜ್ಜೆ, ಜೋಳ, ನವಣೆ, ಸೂರ್ಯಕಾಂತಿ ಬೆಳೆಗಳನ್ನು ಪರ್ಯಾಯ ಬೆಳೆಗಳಾಗಿ ಬಿತ್ತನೆ ಮಾಡಬಹುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಹಿಂದಿನ ವರ್ಷ ಕೇವಲ ಶೇ 32ರಷ್ಟು ಬಿತ್ತನೆ ಆಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.