ಶನಿವಾರ, ಫೆಬ್ರವರಿ 27, 2021
31 °C

ಒತ್ತಿಟ್ಟಿಗೆ, ಕೆಂಪಿಟ್ಟಿಗೆ, ಕಾಂಕ್ರಿಟ್‌ ಚೌಕಟ್ಟು!

ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಒತ್ತಿಟ್ಟಿಗೆ, ಕೆಂಪಿಟ್ಟಿಗೆ, ಕಾಂಕ್ರಿಟ್‌ ಚೌಕಟ್ಟು!

ಜೀವಮಾನದಲ್ಲಿ ಸ್ವಂತಕ್ಕೆ ಒಂದಾದರೂ ಮನೆ ಕಟ್ಟಿಕೊಳ್ಳಬೇಕು ಎಂಬುದು ಬಹುತೇಕ ಎಲ್ಲರ ಕನಸು. ಆದರೆ, ಹೆಚ್ಚುತ್ತಿರುವ ನಿರ್ಮಾಣದ ವೆಚ್ಚದಿಂದಾಗಿ ಮನೆ ಕಟ್ಟಲು ಸಾಧ್ಯವಾಗದೇ ಬಹಳಷ್ಟು ಮಂದಿ ಕಂಗಾಲಾಗಿದ್ದಾರೆ. ಆದರೆ ಇಲ್ಲೊಬ್ಬರು ಕಿಟಕಿ, ಮೇಲ್ಛಾವಣಿ, ಇಟ್ಟಿಗೆ ಸೇರಿದಂತೆ ಕಡಿಮೆ ಬೆಲೆಯ, ಆದರೆ ಸುಭದ್ರತೆಯ ಭರವಸೆ ನೀಡುವಂತಹ ಭಿನ್ನ ಸಾಮಗ್ರಿಗಳನ್ನೇ ಬಳಸಿ ಮನೆ ನಿರ್ಮಿಸಿ  ಮನೆ ನಿರ್ಮಾಣ ವಿಧಾನವನ್ನೇ ಒಂದು ಪ್ರಯೋಗವಾಗಿಸಿದ್ದಾರೆ. ಆ ಮೂಲಕ ಕಡಿಮೆ ಖರ್ಚಿನಲ್ಲಿ ಸುಂದರ ಮನೆ ನಿರ್ಮಿಸಿಕೊಳ್ಳಬಹುದು ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ.ವಿಭಿನ್ನ ಪ್ರಯೋಗಗಳ ಮೂಲಕ ಮಂಡ್ಯ ನಗರದ ಚಾಮುಂಡೇಶ್ವರಿ ಬಡಾವಣೆಯ 11ನೇ ಕ್ರಾಸ್‌ನಲ್ಲಿ 1800 ಚದರ ಅಡಿ ವಿಸ್ತಾರದ ಮನೆಯನ್ನು (2007ರಲ್ಲಿ) ಕೇವಲ ₨13 ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಂಡಿದ್ದಾರೆ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಪ್ರಸನ್ನಕುಮಾರ್‌.ಸ್ಥಳದಲ್ಲೇ ಒತ್ತಿಟ್ಟಿಗೆ

ಮನೆ ನಿರ್ಮಾಣಕ್ಕೆ ಅವರು ಎಲ್ಲರೂ ಬಳಸುವಂತಹ ಇಟ್ಟಿಗೆಗಳನ್ನು ಬಳಸಿಲ್ಲ. ಎಚ್‌್.ಡಿ. ಕೋಟೆಯ ಕ್ರಸ್ಟ್‌ ಆರ್ಗನೈಸೇಷನ್‌್ ಅವರ ಸಲಹೆಯಂತೆ ಒತ್ತಿಟ್ಟಿಗೆಗಳನ್ನು ಬಳಸಿದ್ದಾರೆ. ಮಣ್ಣು, ರಂಗೋಲಿ ಪುಡಿ, ಕಲ್ಲಿನ ಕ್ವಾರಿಯ ಪುಡಿ ಹಾಗೂ ಸಿಮೆಂಟ್‌ ಮಿಶ್ರಣ ಮಾಡಿ ಮನೆ ನಿರ್ಮಾಣ ಸ್ಥಳದಲ್ಲಿಯೇ ಅಚ್ಚಿನಲ್ಲಿ ಒತ್ತಿಟ್ಟಿಗೆಗಳನ್ನು ತಯಾರಿಸಿಕೊಂಡಿದ್ದಾರೆ. ಅವುಗಳಿಗೆ 21 ದಿನಗಳ ಕಾಲ ಕ್ಯೂರಿಂಗ್‌ ಮಾಡಿ, ನಂತರ ಕಟ್ಟಡ ಕಟ್ಟಲು ಬಳಸಿದ್ದಾರೆ. ಸಾಮಾನ್ಯ ಇಟ್ಟಿಗೆಗಳ ಎರಡೂವರೆಯಷ್ಟು ಗಾತ್ರದಲ್ಲಿ ಒಂದು ಒತ್ತಿಟ್ಟಿಗೆ ಇರುತ್ತದೆ. ಹೊರ ಭಾಗಕ್ಕೆ ಸಿಮೆಂಟ್‌ ಪ್ಲಾಸ್ಟರಿಂಗ್‌ ಮಾಡುವ ಅಗತ್ಯವೂ ಇಲ್ಲ. ಮನೆಯೂ ತುಸು ಭಿನ್ನವಾಗಿ, ಅಷ್ಟೇ ಅಂದವಾಗಿ ಕಾಣಿಸುತ್ತದೆ. ಅಲ್ಲಿಗೆ ಪ್ಲಾಸ್ಟರಿಂಗ್‌ ಖರ್ಚಿನಲ್ಲಿಯೂ ಭಾರಿ ಉಳಿತಾಯ. ಜತೆಗೆ ಉಳಿದ ಮನೆಗಳಿಂತ ಭಿನ್ನವಾಗಿರುವ ಕಾರಣದಿಂದಾಗಿ ಜನರ ಗಮನವನ್ನೂ ಸೆಳೆಯುತ್ತದೆ.ಬಲಿಯಾಪಟ್ಟಣಂ ಟೈಲ್ಸ್‌

ಮನೆಯ ಮೇಲ್ಛಾವಣಿಯು 12 ಅಡಿ ಎತ್ತರದಲ್ಲಿದೆ. ಬಲಿಯಾಪಟ್ಟಣಂನ ಟೈಲ್ಸ್‌ಗಳನ್ನು ಬಳಸಿರುವುದರಿಂದ ತಾರಸಿಗೆ ಅತ್ಯಗತ್ಯವಾಗಿದ್ದ ಕಬ್ಬಿಣ ಬಳಕೆಯಲ್ಲಿಯೂ ಉಳಿತಾಯವಾಗಿದೆ. ಒಳಗೆ ಟೊಳ್ಳಾಗಿರುವ ಕೆಂಪಿಟ್ಟಿಗೆಗಳನ್ನು ಬಳಸಿರುವುದರಿಂದ ಸೂರ್ಯನ ಬಿಸಿಲಿನ ತಾಪ ಮನೆಯ ಒಳಗಿನ ವಾತಾವರಣವೂ ತಂಪಾಗಿ ಇರುತ್ತದೆ.ಮೇಲ್ಛಾವಣಿಗೆ ಬಳಸಿರುವ ಕೆಂಪು ಟೈಲ್ಸ್‌ ಎಂಟು ಅಂಗುಲ ದಪ್ಪ ಇವೆ. ಮಧ್ಯದಲ್ಲಿ ಐದು ಅಂಗುಲ ಟೊಳ್ಳಾಗಿರುತ್ತವೆ. ಟೊಳ್ಳಾಗಿರುವುದರಿಂದ ಬಿಸಿಲಿನ ಝಳವು ಟೊಳ್ಳಾಗಿರುವ ಪ್ರದೇಶವನ್ನು ದಾಟಿ ಮನೆಯೊಳಕ್ಕೆ ಪ್ರವೇಶಿಸುವುದಿಲ್ಲ. ಸುಡು ಬೇಸಿಗೆಯಲ್ಲಿಯೂ ಬಿಸಿಲ ತಾಪದ ಅನುಭವವಾಗುವುದಿಲ್ಲ. ಹೀಗಾಗಿ ಮನೆಯಲ್ಲಿ ಫ್ಯಾನ್‌ಗಳಿಗೆ ಕೆಲಸ ಕಡಿಮೆ.ಕಾಂಕ್ರಿಟ್‌ ಚೌಕಟ್ಟು

ಕಿಟಕಿ, ಬಾಗಿಲಿಗೆ ಕಾಂಕ್ರಿಟ್‌ ಚೌಕಟ್ಟುಗಳನ್ನು ಬಳಸಿದ್ದಾರೆ. ಪುತ್ತೂರಿನ ಮಾಸ್ಟರ್‌ ಪ್ಲಾನರಿ ಘಟಕದಲ್ಲಿ ಇವುಗಳನ್ನು ಸಿದ್ಧಪಡಿಸಲಾಗಿದೆ. ಬೇಡಿಕೆಗೆ ತಕ್ಕಂತೆ ಅಳತೆ, ಆಕಾರದಲ್ಲಿ ಈ ಕಾಂಕ್ರಿಟ್‌ ಚೌಕಟ್ಟುಗಳನ್ನು ಸಿದ್ಧಪಡಿಸಿಕೊಡುವ ವ್ಯವಸ್ಥೆ ಅಲ್ಲಿದೆ.

ಈ ಕಾಂಕ್ರೀಟ್‌ ಚೌಕಟ್ಟುಗಳ ಬಾಳಿಕೆಯೂ ಜಾಸ್ತಿ. ಜತೆಗೆ ಮರದ ಪಟ್ಟಿಗಳ ಬೆಲೆಗೆ ಹೋಲಿಸಿದರೆ ಅರ್ಧಕ್ಕೂ ಕಡಿಮೆ ಬೆಲೆಯಲ್ಲಿ ಲಭಿಸುತ್ತವೆ. ಪರಿಸರವೂ ಉಳಿಯುತ್ತದೆ ಪ್ರಸನ್ನ ಕುಮಾರ್‌ ಅವರ ಅನಿಸಿಕೆ.ಕೆಂಗೇರಿಯಲ್ಲಿ ಲಭಿಸುವ ಪ್ರೆಸ್‌ ಡೋರ್‌ಗಳನ್ನು(ಅಚ್ಚುಹಾಕಿದ ಬಾಗಿಲು) ಮೂರು ಕೊಠಡಿಗಳಿಗೆ ಬಳಸಿದ್ದಾರೆ. ನೀರು ಬಿದ್ದರೂ ಇವು ಹಾಳಾಗುವುದಿಲ್ಲ. ಮನೆಯ ಮುಂಭಾಗವನ್ನು ಝಿಗ್‌ಜಾಗ್‌ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗಾಳಿ, ಬೆಳಕು ಧಾರಾಳವಾಗಿ ಬರುವಂತೆ ಮನೆಯ ವಿನ್ಯಾಸವನ್ನು ರೂಪಿಸಲಾಗಿದೆ.ಮಳೆ ನೀರು ಸಂಗ್ರಹ

ಮನೆ ನಿರ್ಮಾಣದ ಖರ್ಚಿನಲ್ಲಿ ಉಳಿತಾಯ ಮಾಡಿರುವ ಇವರು, ಮನೆಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಒಂದು ಲಕ್ಷ ಲೀಟರ್‌ ಸಂಗ್ರಹಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸೂಕ್ತ ಫಿಲ್ಟರ್‌ ವ್ಯವಸ್ಥೆ ಮಾಡಿಕೊಂಡಿದ್ದು, ಮೂರು ಸಂಪುಗಳಲ್ಲಿ ನೀರು ಸಂಗ್ರಹಿಸುತ್ತಾರೆ. ಹೆಚ್ಚಾದ ನೀರನ್ನು ಕೊಳವೆ ಬಾವಿ ಮರುಪೂರಣಕ್ಕೆ ಬಳಸಿಕೊಂಡಿದ್ದಾರೆ. ಪರಿಣಾಮ ಅಂತರ್ಜಲ ನೀರಿನ ಲಭ್ಯತೆ ಮಟ್ಟದಲ್ಲಿ ಸುಧಾರಣೆಯಾಗಿದೆ. ಲವಣಾಂಶ ಮಿಶ್ರಿತ ಪ್ರಮಾಣವು 1000 ಪಿ.ಪಿ.ಯಿಂದ 500 ಪಿ.ಪಿ.ಗೆ ಇಳಿದಿದೆ ಎನ್ನುತ್ತಾರೆ ಪ್ರಸನ್ನಕುಮಾರ್‌ (ಮೊ: 9844574374).ತ್ಯಾಜ್ಯದಿಂದ ಅನಿಲ

ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಸದ್ಬಳಕೆಗಾಗಿ ಇತ್ತೀಚೆಗಷ್ಟೇ ಬಯೋಗ್ಯಾಸ್‌ ಕಿಟ್‌ ಅಳವಡಿಸಲಾಗಿದೆ. ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದಲೇ ದಿನಕ್ಕೆ ಎರಡು ಗಂಟೆ ಕಾಲ ಗ್ಯಾಸ್‌ ಒಲೆಯನ್ನು ಉರಿಸಬಹುದಾಗಿದೆ.

ಪ್ಲಾಸ್ಟಿಕ್‌, ಮೂಸಂಬಿ, ನಿಂಬೆ ಹಣ್ಣು, ಕಿತ್ತಲೆ ಸಿಬ್ಬೆಯನ್ನು ಹಾಕಬಾರದು. ಉಳಿದ ಎಲ್ಲ ತ್ಯಾಜ್ಯವನ್ನು ಹಾಕಬಹುದು ಎನ್ನುತ್ತಾರೆ ಅವರು.ಉಕ್ಕು ಮತ್ತೆ ತುಟ್ಟಿಯಾಯಿತು

ಕಟ್ಟಡ ನಿರ್ಮಾಣ ಉದ್ಯಮ ಕ್ಷೇತ್ರಕ್ಕೆ ಫೆಬ್ರುವರಿ ಆರಂಭದಲ್ಲೇ ತುಸು ಆಘಾತಕಾರಿ ಸುದ್ದಿ. ಉಕ್ಕಿನ ಬೆಲೆ ಏರಿಕೆ!

ಮನೆ ಅಥವಾ ಯಾವುದೇ ಕಟ್ಟಡದ ನಿರ್ಮಾಣದಲ್ಲಿ ಇಟ್ಟಿಗೆ, ಮರಳು, ಸಿಮೆಂಟ್‌ನಷ್ಟೇ ‘ಉಕ್ಕು’ ಬಹಳ ಮುಖ್ಯವಾದ ಸಾಮಗ್ರಿ. ಮೊದಲೇ ದುಬಾರಿಯಾಗಿರುವ ಉಕ್ಕಿನ ಸರಳು, ಈಗ ಮತ್ತಷ್ಟು ತುಟ್ಟಿಯಾಗಲಿದೆ.ದೇಶದಲ್ಲಿನ ಉಕ್ಕು ತಯಾರಿಕಾ ಕಂಪೆನಿಗಳು ಉಕ್ಕಿನ ಬೆಲೆಯನ್ನು ಜನವರಿಯಲ್ಲಿಯೂ ಟನ್‌ಗೆ ₨1500ರಷ್ಟು ಏರಿಸಿದ್ದವು. ಈಗ ಮತ್ತೊಮ್ಮೆ ಟನ್‌ಗೆ ₨1000ದಿಂದ ₨2000ದಷ್ಟು ಬೆಲೆ ಹೆಚ್ಚಿಸಿವೆ.‘ಉಕ್ಕು ತಯಾರಿಕೆ ವೆಚ್ಚದಲ್ಲಿ ಹೆಚ್ಚಳವಾಗಿದೆ. ಕಬ್ಬಿಣದ ಅದಿರು ಸಹ ತುಟ್ಟಿಯಾಗಿದೆ. ಹಾಗಾಗಿ ಉಕ್ಕಿನ ಸರಳುಗಳ ಬೆಲೆ ಏರಿಸದೇ ಗತ್ಯಂತರವಿಲ್ಲ’ ಎಂಬುದು ಉಕ್ಕು ಕಂಪೆನಿಗಳು ಸಮಜಾಯಿಷಿ.ಉಕ್ಕು ವಿಭಾಗದಲ್ಲಿ ಪ್ರಮುಖ ಉತ್ಪನ್ನವಾಗಿರುವ ‘ಹಾಟ್‌ ರೋಲ್ಡ್‌ ಕಾಯಿಲ್‌’(ಎಚ್‌ಆರ್‌ಸಿ) ಬೆಲೆ ಈ ಮೊದಲು ಟನ್‌ಗೆ ₨39,500ರಷ್ಟಿತ್ತು. ಈಗ ಬೆಲೆ ಹೆಚ್ಚಳದ ನಂತರ ಟನ್‌ಗೆ ₨41,500ಕ್ಕೇರಿದೆ.ಬೆಲೆ ಏರಿಕೆ ಅನಿವಾರ್ಯವಾಗಿದೆ. ಟನ್‌ ಉಕ್ಕು ಬೆಲೆಯನ್ನು ಕನಿಷ್ಠ ₨700ರಿಂದ ಗರಿಷ್ಠ ₨1200ರವರೆಗೂ ಏರಿಸುವುದು ಅನಿವಾರ್ಯವಾಗಿದೆ ಎಂದು ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪೆನಿ ಜನವರಿ ಮಾಸಾಂತ್ಯದಲ್ಲೇ ಪ್ರಕಟಿಸಿತ್ತು.ಆದರೆ, 2013ರ ಡಿಸೆಂಬರ್‌ನಲ್ಲಿ ಪ್ರತಿ ಟನ್‌ ಉಕ್ಕು ತಯಾರಿಕೆಗೇ ₨900ರಿಂದ ₨1000ಗಳಷ್ಟು ವೆಚ್ಚವಾಗುತ್ತಿತ್ತು. ಹಾಗಾಗಿ, ಬೆಲೆ ಏರಿಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ‘ಜೆಎಸ್‌ಡಬ್ಲ್ಯು ಸ್ಟೀಲ್’ನ ನಿರ್ದೇಶಕ ಜಯಂತ್‌ ಆಚಾರ್ಯ.ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಅಪಮೌಲ್ಯಗೊಂಡಿರುವುದು ಮತ್ತು ಕಬ್ಬಿಣದ ಅದಿರು ಹೆಚ್ಚು ಲಭ್ಯವಾಗದೇ ಇರುವುದೂ ಸಹ ಉಕ್ಕು ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುವುದು ಕಂಪೆನಿಗಳ ಸಮಜಾಯಿಷಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.