ಭಾರತ...ಏನು ಎತ್ತ:ಪರುಪಳ್ಳಿ ಕಶ್ಯಪ್
ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಹಿಂದೆ ತರಬೇತಿ ಪಡೆದಿದ್ದ ಪರುಪಳ್ಳಿ ಕಶ್ಯಪ್ ಇದೀಗ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತದ ಸವಾಲನ್ನು ಎತ್ತಿ ಹಿಡಿಯಲಿದ್ದಾರೆ.

ಇಪ್ಪತ್ತೈದರ ಹರೆಯದ ಕಶ್ಯಪ್ ಈಗಾಗಲೇ ಹತ್ತು ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡು ದಟ್ಟ ಅನುಭವ ಗಳಿಸಿದ್ದಾರೆ. ಮೊದಲಿಗೆ ಅವರು ಹೈದರಾಬಾದ್ನಲ್ಲಿ ಎಸ್ ಎಂ ಆರಿಫ್ ಅವರಲ್ಲಿ ತರಬೇತಿ ಪಡೆದರು.

ಅದೇ ದಿನಗಳಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದ ಇವರ ತಂದೆಗೆ ಬೆಂಗಳೂರಿಗೆ ವರ್ಗವಾಗಿದ್ದರಿಂದ ಕಶ್ಯಪ್ ಬೆಂಗಳೂರಿಗೆ ಬಂದರು. ಇಲ್ಲಿ ಅವರು ಪ್ರಕಾಶ್ ಪಡುಕೋಣೆ ಬಳಿ ತರಬೇತಿ ಪಡೆದರು. 2004ರಲ್ಲಿ ಮತ್ತೆ ಹೈದರಾಬಾದ್ಗೆ ವಾಪಸಾದರು. ಅಲ್ಲಿ ಪುಲ್ಲೆೀಲ ಗೋಪಿಚಂದ್ ಅಕಾಡೆಮಿಗೆ ಸೇರಿಕೊಂಡ ಮೇಲೆ ಹಿಂತಿರುಗಿ ನೋಡಿದ್ದೇ ಇಲ್ಲ.

2005ರಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಇವರು ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಇದರ ಮರುವರ್ಷವೇ ಹಾಂಕಾಂಗ್ ಓಪನ್ನಲ್ಲಿ ಪಾಲ್ಗೊಂಡಿದ್ದು, ಅಲ್ಲಿ ಪ್ರಿಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ 19ನೇ ಕ್ರಮಾಂಕದ ಪ್ರಮಿಷಾ ವಾಛಾ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದರು. ಅದೇ ವರ್ಷ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಇವರು 64ನೇ ಸ್ಥಾನಕ್ಕೇರಿದ್ದರು.

ದೋಹಾದಲ್ಲಿ 2006ರಲ್ಲಿ ನಡೆದಿದ್ದ ಏಷ್ಯಾಡ್ನಲ್ಲಿ ಇವರು ಪಾಲ್ಗೊಂಡಿದ್ದರು. ನಂತರ 33ನೇ ರಾಷ್ಟ್ರೀಯ ಕ್ರೀಡಾಕೂಟದ ಫೈನಲ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಚೇತನ್ ಆನಂದ್ ಅವರನ್ನು ಮಣಿಸಿದರು.
2008ರಲ್ಲಿ ಡಚ್ ಓಪನ್ ಸೆಮಿಫೈನಲ್ ತಲುಪಿದ್ದ ಇವರು, 2009ರಲ್ಲಿ ಥಾಯ್ಲೆಂಡ್ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ರನ್ನರ್ಅಪ್ ಸ್ಥಾನ ಗಳಿಸಿದ್ದರು.

ಪ್ರತಿಷ್ಠಿತ ಸಿಂಗಪುರ ಸೂಪರ್ ಸೀರಿಸ್ನಲ್ಲೂ ಸೆಮಿಫೈನಲ್ ತಲುಪಿದ್ದರು. ದೆಹಲಿಯಲ್ಲಿ 2010ರಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಇವರು ಗೆದ್ದುಕೊಂಡರು. ಕಳೆದ ತಿಂಗಳ 15ರಂದು ಜಕಾರ್ತಾದಲ್ಲಿ ನಡೆದ ಜರಾಮ್ ಇಂಡೊನೇಷ್ಯಾ ಓಪನ್ ಟೂರ್ನಿಯ ಸೆಮಿಫೈನಲ್ ತಲುಪಿದ್ದರು. ಇದೀಗ ಇವರು ಅಚ್ಚರಿ ಫಲಿತಾಂಶ ನೀಡುವ ಹೆಗ್ಗುರಿ ಇರಿಸಿಕೊಂಡು ಲಂಡನ್ನತ್ತ ಹೊರಟು ನಿಂತಿದ್ದಾರೆ.

ಸೋಲ್ (1988)
ದಕ್ಷಿಣ ಕೊರಿಯಾದ ಸೋಲ್ನಲ್ಲಿ 1988ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕ್ರೀಡಾಶಕ್ತಿ ದೇಶಗಳಾದ ಸೋವಿಯತ್ ಒಕ್ಕೂಟ ಮತ್ತು ಪೂರ್ವ ಜರ್ಮನಿಗಳ ತಂಡಗಳು ಕೊನೆಯ ಬಾರಿಗೆ ಕಾಣಿಸಿಕೊಂಡವು. ಆ ನಂತರ ಸೋವಿಯತ್ ಒಕ್ಕೂಟ ಛಿದ್ರಗೊಂಡರೆ, ಪೂರ್ವ ಮತ್ತು ಪಶ್ಚಿಮ ಜರ್ಮನಿ ದೇಶಗಳು ಒಂದುಗೂಡಿದವು.

ಸೋಲ್ನಲ್ಲಿ 159 ದೇಶಗಳ 8,391 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಇವರು 27 ಕ್ರೀಡೆಗಳ 263 ಸ್ಪರ್ಧೆಗಳಲ್ಲಿ ಪೈಪೋಟಿ ನಡೆಸಿದ್ದರು. ಈ ಕೂಟದಲ್ಲಿ ದಕ್ಷಿಣ ಕೊರಿಯಾದ ಶತ್ರು ದೇಶವಾಗಿದ್ದ ಉತ್ತರ ಕೊರಿಯ ಪಾಲ್ಗೊಳ್ಳಲಿಲ್ಲ. ಜತೆಗೆ ಅಲ್ಬೇನಿಯ, ಕ್ಯೂಬಾ, ಮಡಗಾಸ್ಕರ್ ದೇಶಗಳೂ ಇಲ್ಲಿಗೆ ತಮ್ಮ ತಂಡಗಳನ್ನು ಕಳುಹಿಸಲಿಲ್ಲ.

ಈ ಕೂಟದಲ್ಲಿ ಮೊದಲ ಬಾರಿಗೆ ಟೇಬಲ್ ಟೆನಿಸ್ ಕ್ರೀಡೆಯನ್ನು ಸೇರಿಸಲಾಗಿತ್ತು. ಈ ಕ್ರೀಡೆಯ ಚೊಚ್ಚಲ ಚಿನ್ನವನ್ನು ಚೀನಾ ದೇಶವೇ ಗೆದ್ದುಕೊಂಡಿತು. ಒಲಿಂಪಿಕ್ಸ್ ಇತಿಹಾಸದಲ್ಲಿ 64 ವರ್ಷಗಳ ನಂತರ ಟೆನಿಸ್ ಕ್ರೀಡೆಯನ್ನು ಆಡಿಸಲಾಯಿತು. ಆ ಸಲ ಜರ್ಮನಿಯ ಸ್ಟೆಫಿಗ್ರಾಫ್ ಪ್ರಶಸ್ತಿ ಗೆದ್ದರು. ಬೇಸ್ಬಾಲ್, ಟೇಕ್ವಾಂಡೊ ಪ್ರದರ್ಶನ ಪಂದ್ಯಗಳನ್ನು ಏರ್ಪಡಿಸಲಾಗಿತ್ತು.

ಕೆನಡಾದ ಬೆನ್ ಜಾನ್ಸನ್ 100 ಮೀಟರ್ಸ್ ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಆದರೆ ಮೂತ್ರದ ಸ್ಯಾಂಪಲ್ ಪರಿಶೀಲಿಸಿದಾಗ ಆತ ಸ್ಟ್ಯಾನ್ಜೊಲೊಲ್ ಎಂಬ ನಿಷೇದಿತ ಮದ್ದು ಸೇವಿಸಿರುವುದು ಪತ್ತೆಯಾಗಿತ್ತು. ಹೀಗಾಗಿ ಆತನಿಗೆ ನೀಡಲಾಗಿದ್ದ ಪದಕವನ್ನು ವಾಪಸು ಪಡೆಯಲಾಯಿತು.

ಈ ಕೂಟದಲ್ಲಿ ಸೋವಿಯತ್ ಯೂನಿಯನ್ 55ಚಿನ್ನವೂ ಸೇರಿದಂತೆ 132 ಪದಕಗಳನ್ನು ಗೆದ್ದರೆ, ಪೂರ್ವ ಜರ್ಮನಿ 102 ಪದಕಗಳನ್ನು ಗಳಿಸಿತು. ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕಿಳಿದಿದ್ದ ಅಮೆರಿಕ ಒಟ್ಟು 94 ಪದಕಗಳನ್ನಷ್ಟೇ ಗೆದ್ದಿತ್ತು. ಆದರೆ ಆತಿಥೇಯ ದಕ್ಷಿಣ ಕೊರಿಯ 12 ಚಿನ್ನವೂ ಸೇರಿದಂತೆ 33 ಪದಕಗಳನ್ನು ಗೆಲ್ಲಲಷ್ಟೇ ಶಕ್ತವಾಗಿತ್ತು.

ಬೆನ್ ಜಾನ್ಸನ್
ವಿಶ್ವದ ಅತ್ಯಂತ ವೇಗದ ಓಟಗಾರ ಎಂಬ ಹೆಗ್ಗಳಿಕೆಯಿಂದ ಮುಗಿಲೆತ್ತರ ಜಿಗಿದಿದ್ದ ಓಟಗಾರನೊಬ್ಬ ಎರಡೇ ದಿನಕ್ಕೆ ಉದ್ದೀಪನಾ ಮದ್ದು ಸೇವನೆ ಆರೋಪಕ್ಕೆ ಸಿಲುಕಿ ಅಪಮಾನದ ಪಾತಾಳಕ್ಕೆ ಜಾರಿದ ಘಟನೆ ಸೋಲ್ ಒಲಿಂಪಿಕ್ಸ್ನಲ್ಲಿ ನಡೆದು ಹೋಯಿತು.

ಬೆನ್ ಜಾನ್ಸನ್ ಎಂಬ ಓಟಗಾರನೇ ಈ ಖಳನಾಯಕ. ಈತ ಸೋಲ್ ಒಲಿಂಪಿಕ್ಸ್ನ 100 ಮೀಟರ್ಸ್ ಸ್ಪರ್ಧೆಯ ಫೈನಲ್ನಲ್ಲಿ 9.79 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಮರುದಿನ ಜಗತ್ತಿನಾದ್ಯಂತ ಪತ್ರಿಕೆಗಳೆಲ್ಲಾ ಈ ಸಾಹಸಿಯನ್ನು ಪುಟಗಟ್ಟಲೆ ಹೊಗಳಿ ಬರೆದಿದ್ದವು. ಅಂದು ಆತ ಜಗತ್ತನೇ ಗೆದ್ದ ವೀರನಂತಿದ್ದ. ಆದರೆ ಮೂರನೆ ದಿನವೇ ಬೆನ್ ಜಾನ್ಸನ್ `ಆರೋಪಿ~ ಸ್ಥಾನದಲ್ಲಿ ನಿಂತಿದ್ದ. ಪತ್ರಿಕೆಗಳೆಲ್ಲಾ ಆತನನ್ನು ತುಚ್ಚೀಕರಿಸಿ ಪುಟಗಟ್ಟಲೆ ಬರೆದಿದ್ದವು !

ಮೂಲತಃ ಜಮೈಕಾ ದೇಶದವನಾದ ಬೆನ್ಜಾನ್ಸನ್ 1976ರಲ್ಲಿ ಎಳವೆಯಲ್ಲಿಯೇ ಕೆನಡಾದ ಒಂಟಾರಿಯೊಗೆ ವಲಸೆ ಹೋಗಿ ನೆಲೆಸಿದ್ದನು. ಅಲ್ಲಿ ವೇಗದ ಓಟದ ತರಬೇತಿ ಪಡೆದು ಮೊದಲಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಗೆಲುವು ಗಳಿಸಿದ್ದನು. 1982ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಎರಡು ರಜತ ಪದಕಗಳನ್ನು ಗ್ದ್ದೆದನು. ಅಲ್ಲಿ 100 ಮೀಟರ್ಸ್ ಓಟವನ್ನು 10.05 ಸೆಕೆಂಡುಗಳಲ್ಲಿ ಕ್ರಮಿಸಿದ್ದನು.

1985ರವರೆಗೆ ಆ ಕಾಲದ ಖ್ಯಾತ ವೇಗದ ಓಟಗಾರ ಅಮೆರಿಕಾದ ಕಾರ್ಲ್ ಲೂಯಿಸ್ನ ಎದುರು ಸತತ ಏಳು ಸಲ ಸೋತಿದ್ದ ಬೆನ್ ಜಾನ್ಸನ್, ಅದೇ ವರ್ಷ ಕಾರ್ಲ್ ಲೂಯಿಸ್ನನ್ನೇ ಹಿಂದಿಕ್ಕಿದ. ವಿಶ್ವ ಚಾಂಪಿಯನ್ಷಿಪ್ನಲ್ಲಿಯೂ ಪದಕ ಗಳಿಸಿದ. 9.95 ಸೆಕೆಂಡುಗಳಲ್ಲಿ ಓಡಿ ನೂತನ ವಿಶ್ವ ದಾಖಲೆ ನಿರ್ಮಿಸಿದ. ಇಂತಹ ಸಾಧನೆಗಳನ್ನು ಬೆನ್ನಿಗಿಟ್ಟುಕೊಂಡು ಸೋಲ್ ಒಲಿಂಪಿಕ್ಸ್ನ 100ಮೀಟರ್ಸ್ ಓಟದಲ್ಲಿ ಎಲ್ಲರಿಗಿಂತ ಮೊದಲು ಗುರಿ ಮುಟ್ಟಿದಾಗ ಜಗತ್ತೇ ಈತನನ್ನು ಹಾಡಿ ಹೊಗಳಿತ್ತು.

ಅದೇ ದಿನ ತಜ್ಞ ವೈದ್ಯರು ಈತನ ಮೂತ್ರದ ಸ್ಯಾಂಪಲ್ ಪಡೆದರು. ಆ ಪರೀಕ್ಷೆಯಲ್ಲಿ ಈತ `ಸ್ಟ್ಯಾನ್ಜೊಲೊಲ್~ ಎಂಬ ಉದ್ದೀಪನಾ ಮದ್ದು ಸೇವಿಸಿರುವುದು ಪತ್ತೆಯಾಯಿತು. ಆಗ ಬೆನ್ ಜಾನ್ಸನ್ ಅದನ್ನು ನಿರಾಕರಿಸಿದ. ನಂತರ ಐಒಎನವರು ಡಬ್ಲಿನ್ನಲ್ಲಿ ವಿಶೇಷ ತನಿಖೆ ನಡೆಸಿದರು.

ಕೆನಡಾ ಸರ್ಕಾರ ಕೂಡಾ ತನಿಖೆ ನಡೆಸಿತು. ಕೊನೆಗೂ ಬೆನ್ಜಾನ್ಸನ್ ತಾನು ಮದ್ದು ಸೇವಿಸಿರುವುದನ್ನು ಒಪ್ಪಿಕೊಂಡ. ತಾನು 1981ರಿಂದಲೇ ಮದ್ದು ಸೇವಿಸುತ್ತಿರುವುದಾಗಿ ಆತ ಸತ್ಯ ಒಪ್ಪಿಕೊಂಡಾಗ ಇಡೀ ಕ್ರೀಡಾ ಜಗತ್ತು ತಲ್ಲಣಿಸಿತ್ತು. ಬೆನ್ಜಾನ್ಸನ್ ಘಟನೆ ಒಲಿಂಪಿಕ್ಸ್ ಚರಿತ್ರೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿದು ಹೋಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.