ಬುಧವಾರ, ಏಪ್ರಿಲ್ 21, 2021
23 °C

ಒಳಪಂಗಡಗಳ ಒಗ್ಗೂಡಿಸುವಿಕೆ: ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವೀರಶೈವ ಸಮಾಜದಲ್ಲಿರುವ ಒಳಪಂಗಡಗಳನ್ನು ಒಗ್ಗೂಡಿಸಬೇಕು ಎಂದು ಕೇವಲ ಸಲಹೆ ನೀಡುವವರ ವಿರುದ್ಧ ಅಖಿಲ ಭಾರತ ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಜಗದ್ಗುರು ಪಂಚಾಚಾರ್ಯ ಮಂದಿರ (ಶ್ರೀಶೈಲ ಪೀಠ)ದಲ್ಲಿ ಶುಕ್ರವಾರ ಆಯೋಜಿಸಿದ್ದ ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಥಮ ವರ್ಷದ ಚಿರಲಿಂಗಾಂಗ ಸಾಮರಸ್ಯ ದಿನೋತ್ಸವ, ನೂತನ ಸಮಾಧಿ ಮಂದಿರ ಉದ್ಘಾಟನೆ, ಕಳಸಾರೋಹಣ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಮಾರಂಭ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, `ಶಿಕ್ಷಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಕ್ರಾಂತಿ ಮಾಡಿದ್ದಾರೆ. ಅಖಿಲ ಭಾರತ ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು, ವೀರಶೈವ ಸಮಾಜದಲ್ಲಿರುವ ಹತ್ತಾರು ಒಳಪಂಗಡ ಒಗ್ಗೂಡಿಸಬೇಕು. ಇದಕ್ಕೆ ನಮ್ಮೆಲ್ಲರ ಸಹಕಾರವಿದೆ~ ಎಂದು ಹೇಳಿದರು.ತಮ್ಮ ಭಾಷಣದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಶಿವಶಂಕರಪ್ಪ, ಎಲ್ಲರೂ ಶಾಮನೂರು ಮಾಡಬೇಕು ಎಂದು ಹೇಳುತ್ತಾರೆಯೇ ಹೊರತು, ನಾವು ಮಾಡುತ್ತೇವೆ ಎಂದು ಹೇಳುವುದಿಲ್ಲ. ಅವರವರ ಜವಾಬ್ದಾರಿಯನ್ನು ಎಲ್ಲರೂ ಅರಿಯಬೇಕು ಎಂದರು.ಮಠಾಧೀಶರು ಹೇಳಲಿ...

ಪಂಚಪೀಠಗಳ ವಿರುದ್ಧವೂ ಅಸಮಾಧಾನ ವ್ಯಕ್ತಮಾಡಿದ ಅವರು, ಪಂಚಪೀಠದ್ದೇ ಒಂದಾದರೆ ಉಳಿದ ಜಗದ್ಗುರುಗಳದ್ದೇ ಒಂದು ದಾರಿಯಾಗಿದೆ. ನಾನೆಚ್ಚು, ನೀನು ಕಡಿಮೆ ಎಂದುಕೊಂಡಿದ್ದಾರೆ. ಸಹಕಾರ ಕೊಡುವುದಿಲ್ಲ. ಮಠಾಧೀಶರು ಮನಸ್ಸು ಮಾಡಿ ಎಲ್ಲರೂ ಒಂದಾಗಿ ಎಂದು ಹೇಳಬೇಕು. ಎಲ್ಲ ಭಕ್ತರೂ ಕೇಳುತ್ತಾರೆ. ಈ ಕೆಲಸವನ್ನು ಮಠಾಧೀಶರು ಮಾಡಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ  ಎಚ್.ಎಸ್. ಶಿವಶಂಕರ್, ಒಳಪಂಗಡಗಳ ಹಾವಳಿ ರಾಜಕಾರಣಿಗಳಿಂದಲೇ ಆದದ್ದು. ಚುನಾವಣೆ ರಾಜಕಾರಣಕ್ಕೆ ಬಳಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಒಳಪಂಗಡಗಳನ್ನು ಒಗ್ಗೂಡಿಸುವುದು ಕಷ್ಟ. ಹೀಗಾಗಿ, ಶಿವಶಂಕರಪ್ಪ ಅವರು ಚುನಾವಣೆ ನಂತರ ಪ್ರಯತ್ನಿಸಲಿ ಎಂದು ಮಾರ್ಮಿಕವಾಗಿ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಅಕ್ಕಪಕ್ಕ ಕುಳಿತಿದ್ದ ಯಡಿಯೂರಪ್ಪ ಹಾಗೂ ಶಾಮನೂರು ಶಿವಶಂಕರಪ್ಪ ಉಭಯ ಕುಶಲೋಪರಿ ವಿಚಾರಿಸಿಕೊಂಡರು. ನಗುನಗುತ್ತಲೇ ಕೆಲ ಕಾಲ ಮಾತನಾಡಿಕೊಂಡರು.ವಚನ ಸಾರ ಅಳವಡಿಕೆಗೆ ಕರೆ

ವಚನಗಳ ಸಾರವನ್ನು ದೇವರ ಮನೆಗೆ ಸೀಮಿತಗೊಳಿಸದೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ನಗರದ ಜಗದ್ಗುರು ಪಂಚಾಚಾರ್ಯ ಮಂದಿರ (ಶ್ರೀಶೈಲ ಪೀಠ)ದಲ್ಲಿ ಶುಕ್ರವಾರ ಆಯೋಜಿಸಿದ್ದ ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಥಮ ವರ್ಷದ ಚಿರಲಿಂಗಾಂಗ ಸಾಮರಸ್ಯ ದಿನೋತ್ಸವ, ನೂತನ ಸಮಾಧಿ ಮಂದಿರ ಉದ್ಘಾಟನೆ, ಕಳಸಾರೋಹಣ ಹಾಗೂ ಧರ್ಮಜಾಗೃತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಉದ್ಯಮಿ ಅಥಣಿ ಎಸ್. ವೀರಣ್ಣ ಮಾತನಾಡಿದರು.ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು.

ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳಸಾರೋಹಣ ನೆರವೇರಿಸಿದರು. ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಶಿವಲಿಂಗೇಶ್ವರ ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಹಾಂತ ದೇಶಿಕೇಂದ್ರ, ಶಿವಾನಂದ  ಶಿವಾಚಾರ್ಯ, ವಿಮಲ ರೇಣುಕ ಶಿವಾಚಾರ್ಯ, ಒಡೆಯರ್ ಶಿವಪ್ರಕಾಶ ಶಿವಾಚಾರ್ಯ, ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಶ್ರೀಶೈಲಮಠದ ಪ್ರತಿನಿಧಿ ಎಂ.ಎಸ್. ಬಸವರಾಜಸ್ವಾಮಿ, ದೇವರಮನೆ ಶಿವಕುಮಾರ್, ಲಿಂಗನಗೌಡ ಪಾಟೀಲ್ ಪಾಲ್ಗೊಂಡಿದ್ದರು.ಶಾಸಕ ಬಿ.ಪಿ. ಹರೀಶ್ ಸ್ವಾಗತಿಸಿದರು. ಸಹಕಾರಿ ಧುರೀಣ ಎನ್.ಎಂ.ಜೆ.ಬಿ. ಆರಾಧ್ಯ ಪ್ರಾಸ್ತಾವಿಕ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.