ಭಾನುವಾರ, ಮೇ 16, 2021
26 °C

ಓ ಮೋಡಗಳೆ ನಿಲ್ಲಿ ನಾಲ್ಕು ಹನಿ ಚೆಲ್ಲಿ...

ಬಸವರಾಜ ಪಟ್ಟಣಶೆಟ್ಟಿ Updated:

ಅಕ್ಷರ ಗಾತ್ರ : | |

ರೋಣ ತಾಲ್ಲೂಕಿನ  ಜನತೆ  ಸತತ ಮೂರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವಂತಹ ಕರಾಳ ಛಾಯೇ ಇನ್ನೂ ಮಾಸಿಲ್ಲ. ಜನರ-ಜಾನುವಾರುಗಳ ಬರದ ಭವನೆ ಇನ್ನೂ ನೀಗಿಲ್ಲ. ಇದರ ನಡುವೆಯೇ  ತಾಲ್ಲೂಕಿನ ಬಹುತೇಕ ರೈತರು ಮುಂಗಾರು ಮಳೆಯನ್ನೇ ನಂಬಿದ್ದು, ಅದಕ್ಕಾಗಿಯೇ ಹೊಲ ಹದಗೊಳಿಸಿ, ಶೇ.35 ರಷ್ಟು ರೈತರು ದುಬಾರಿ ಮೊತ್ತದ ಕೊಟ್ಟಿಗೆ ಗೊಬ್ಬರವನ್ನು  ಹೊಲಕ್ಕೆ ಹಾಕಿದ್ದಾರೆ. ಇಷ್ಟೆಲ್ಲ ಖರ್ಚು ಮಾಡಿದರೂ ಏನೂ ಪ್ರಯೋಜನ? ಕೈಕೊಟ್ಟರುವ ರೈತನ ನಂಬಿಗಸ್ಥ ಮಳೆ ರೋಹಿಣಿ ಒಂದಡೆಯಾದರೆ, ಧರೆಗಿಳಿಯಲು ಮುಜುಗರ ಪಡುತ್ತಿರುವ ಮೃಗಶಿರಾ ಮಳೆ ಇನ್ನೊಂದೆಡೆಯಾದ್ದರಿಂದ ಇವುಗಳು  ರೈತನ ಬದುಕಿನ ಮೇಲೆ ಕಾರ್ಮೋಡ ಆವರಿಸುವಂತೆ ಮಾಡುತ್ತಿವೆ.ಆಕಾಶದಲ್ಲಿ ಪ್ರತಿದಿನವೂ  ದಟ್ಟ ಮೋಡಗಳು ಆವರಿಸಿಕೊಳ್ಳುತ್ತಲೇ ಇವೆ. ಭೀಕರ ಗಾಳಿಗೆ ಅವು ಕರಗಿ ಸಂಜೆ ವೇಳೆಗಾಗಲೇ ಮಾಯವಾಗಿ ತಂಪನೆಯ ಗಾಳಿ ಬೀಸಲು ಪ್ರಾರಂಭಿಸುತ್ತದೆ. ಇದರಿಂದ ಮತ್ತೇ ಬರಗಾಲ ನಿಧಾನವಾಗಿ ಅಪ್ಪಳಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ರೈತ ಸಮುದಾಯ ಆಕಾಶದತ್ತ ಮುಖ ಮಾಡಿ `ಓಡುತ್ತಿರುವ ಮೊಡಗಳೇ ನಿಲ್ಲಿ, ನಾಲ್ಕು ಹನಿಯಾದರೂ ಉದುರಿಸಿ' ಎಂದು ಗೋಗರೆಯುತ್ತಿದ್ದಾರೆ.ಪ್ರಾರಂಭದಲ್ಲಿ ಸುರಿದ ರೋಹಿಣಿ ನಂತರದ ಕೊನೆಯಲ್ಲಿ ಅದರ ಸುಳಿವೇ ಇಲ್ಲ. ವಾಡಿಕೆಯಂತೆ 127 ಮೀ. ಮಳೆಯಾಗಬೇಕಿತ್ತು. ಆಗಿದ್ದು ಕೇವಲ 28.5 ಮೀ ಮಳೆಯಾಗಿದೆ. ಇದರಿಂದ ಶೇ. 35 ರಷ್ಟು ರೈತರು ಭೂಮಿಯನ್ನು ಹದಮಾಡಿಕೊಂಡು ಬಿತ್ತನೆಗೆ ಕಾರ್ಯ ಮುಗಿಸಿದ್ದರೆ. ಕೆಲ ರೈತರು ಇನ್ನೂ ಭಿತ್ತನೆಗೆ ಮಳೆಯ ದಾರಿ ನೋಡುತ್ತಿದ್ದಾರೆ.ಸದ್ಯ ಮೃಗಶಿರಾ ಮಳೆ ಬರಲಿಲ್ಲ. ರೈತನ ರೋಧನೆ ನಿಲ್ಲುತ್ತಿಲ್ಲ. ಈಗಾಗಲೇ ತಾಲ್ಲೂಕಿನ ಕೆಲವಡೆ 28.5 ಮಿ.ಮೀ ಮಾತ್ರ ಮಳೆಯಾಗಿದ್ದು, ತಾಲ್ಲೂಕಿನ 97 ಗ್ರಾಮಗಳ ಪೈಕಿ ಸುಮಾರು 1,10,500 ಹೆಕ್ಟೇರ್ ಪ್ರದೇಶ ಮುಂಗಾರು ಬಿತ್ತನೆಗೆ ಮೀಸಲಿದೆ. ಅದರಲ್ಲಿಯೇ  ಶೇ 60 ರಷ್ಟು ಕೆಂಪು ಮಿಶ್ರಿತ ಜೌಗು (ಮಸಾರಿ) ಮಣ್ಣು ಆವರಿಸಿದ್ದು, ಈ ಮಸಾರಿ ಭೂಮಿಯಲ್ಲಿ 30,000 ಹೆಕ್ಟೇರ್ ನೀರಾವರಿ ಸಾಗುವಳಿ ಕೃಷಿ ಕ್ಷೇತ್ರವನ್ನು ಹೊಂದಿದೆ. ಪ್ರಸಕ್ತ ವರ್ಷ 70,700 ಹೆಕ್ಟೇರ್ ಕ್ಷೇತ್ರವನ್ನು ತಾಲ್ಲೂಕು ಕೃಷಿ ಇಲಾಖೆ ಮುಂಗಾರು ಬಿತ್ತನೆಗೆ ನೀರಿಕ್ಷಿಸಿದೆ. ಅದರಲ್ಲಿ ಶೇ 35 ರಷ್ಟು ಪ್ರದೇಶದಲ್ಲಿ ಬಿತ್ತನೆ ಚಟುವಟಿಕೆ ಪ್ರಾರಂಭವಾಗಿದೆ. ಇದಕ್ಕೆ ಪೂರಕವಾಗಿ ತಾಲ್ಲೂಕು  ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಮೃದ್ಧವಾಗಿ ಪೂರೈಕೆಯಾಗುವಂತೆ ಹೈಬ್ರೀಡ್ ಜೋಳ, ಹೆಸರು, ತೊಗರೆ, ಮೆಕ್ಕೆಜೋಳ, ಸಜ್ಜೆ ಮತ್ತು ಶೇಂಗಾ  ದಾಸ್ತಾನು ಮಾಡಲಾಗಿದೆ. ಇದರಲ್ಲಿ ಹೆಸರು -200 ಕ್ವಿಂಟಲ್, ತೊಗರಿ-36 ಕ್ವಿಂಟಲ್, ಹೈಬ್ರಿಡ್ ಜೋಳ-34 ಕ್ವಿಂಟಲ್, ಸಜ್ಜಿ-32 ಕ್ವಿಂಟಲ್, ಸೂರ್ಯಕಾಂತಿ-34 ಕ್ವಿಂಟಲ್, ಮೆಕ್ಕೆಜೋಳ-450 ಕ್ವಿಂಟಲ್ ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರವಾನಿಸಲಾಗಿದೆ. ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆ ತಾಲ್ಲೂಕಿನಾದ್ಯಂತ ಹೆಚ್ಚುವರಿ ರೈತ ಸಂಪರ್ಕ ಕೇಂದ್ರಗಳನ್ನು ತೆರೆದಿದೆ. ತಾಲ್ಲೂಕಿನ ನರೇಗಲ್, ಹೊಳೆಆಲೂರ ಪಟ್ಟಣಗಳಲ್ಲಿ ಪ್ರಮುಖ ಕೇಂದ್ರಗಳವೆ. ಗಜೇಂದ್ರಗಡ, ಹಿರೇಹಾಳ, ಬೆಳವಣಿಕೆಗಳಲ್ಲಿ ಉಪಕೇಂದ್ರಗಳನ್ನು ತೆರೆಯಲಾಗಿದೆ.ಜೊತೆಗೆ ಸೂಡಿ, ಮುಶಿಗೇರಿ, ಹಾಲಕೇರಿ, ಅಬ್ಬಿಗೇರಿ ಸೇರಿದಂತೆ ಒಟ್ಟು 11 ಭೂ ಚೇತನ ಕೇಂದ್ರಗಳನ್ನು ತೆರೆಯಲಾಗಿದೆ ಹಾಗೂ ಖಾಸಗಿ ಡೀಲರ್, ಕೋ-ಆಪರೇಟಿವ್ ಸೊಸೈಟಿಯಲ್ಲಿ ಗೊಬ್ಬರ ದಾಸ್ತಾನು ಮಾಡಲಾಗಿದೆ. ರೋಹಿಣಿ ಮಳೆ ಬೀಳದಿರುವದರಿಂದ ಭೂಮಿ ತೇವಗೊಂಡಿಲ್ಲ. ಬಿತ್ತನೆ ಮಾಡಲು ಭೂಮಿ ಹದವಾಗಿಲ್ಲ. ಮೃಗಶಿರಾ ಮಳೆ ಆರಂಭದಲ್ಲೇ ಕೈಕೊಟ್ಟಿದೆ. ಈಗಾಲಾದರೂ 2-3 ಬಾರಿ ಉತ್ತಮ ಮಳೆಯಾದರೆ ಭೂಮಿ ತೇವಗೊಂಡು, ಹದವಾಗಿ ಬಿತ್ತನೆಗೆ ಸಹಾಯಕಾರಿಯಾಗಲಿದೆ ಎಂದು ತಾಲ್ಲೂಕ ಕೃಷಿ ನಿರ್ದೇಶಕ ಎಸ್.ಎ ಸೂಡಿಶೆಟ್ಟರ್ `ಪ್ರಜಾವಾಣಿ'ಗೆ ತಿಳಿಸಿದರು. ಕೃಷಿ ಇಲಾಖೆ ಅಧಿಕಾರಿಗಳು ಸದ್ಯಕ್ಕೆ ಬೀಜ, ಗೊಬ್ಬರ ದಾಸ್ತಾನಿದೆ ಎಂದು ಹೇಳುತ್ತಾರೆ. ಮಳೆಯಾಗುತ್ತಿದ್ದಂತೆ ಕೊರತೆ ಸೃಷ್ಟಿಯಾಗುತ್ತದೆ. ಪ್ರತಿ ವರ್ಷವೂ ಇದೇ ಸಮಸ್ಯೆ. ಇದರಲ್ಲಿ ಡಿಎಪಿ ಗೊಬ್ಬರದ ಕೊರತೆ ಪ್ರಮುಖ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ  ಅಧಿಕಾರಿಗಳು ಡಿಎಪಿ ಗೊಬ್ಬರದ ಹೆಚ್ಚುವರಿ ಸಂಗ್ರಹಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಸಮಸ್ಯೆ ಸೃಷ್ಟಿಯಾಗುವುದಂತು ಖಂಡಿತ ಎನ್ನುತ್ತಾರೆ ಕೊತಬಾಳ  ಗ್ರಾಮದ ವೀರಣ್ಣ ಯಾಳಗಿ ಮಾಬಳೇಶ ಯಾಳಗಿ, ರೋಣ ಪಟ್ಟಣದ ರೈತರಾದ ಬಸವರಾಜ ಸುಂಕದ, ಮಲ್ಲಣ್ಣ ಗಡಗಿ, ಪುಟ್ಟಣ್ಣ ನವಲಗುಂದ.`ನೋಡ್ರಿ ಸಾಲ ಶೂಲ ಮಾಡಿ ಬಿತ್ತಿವಿ. ಮಳೆಯಪ್ಪ ನೋಡಿದ್ರ ನಾವೇನ ಪಾಪ ಮಾಡಿವೋ ಏನೋ ಗೊತ್ತೊಲ್ಲ ನಮ್ಮ ಹತ್ರ ಮಾತ್ರ ಸುಳಿವಲ್ಲ. ಪೀಕ್ ನೋಡಿದ್ರ ಎಲ್ಲಾ ಒಣಗಾಕತಾವು. 2-3 ವರ್ಷದಿಂದ ಭೂಮಿ ನಂಬಿ ಕೈ ಸುಟ್ಟುಕೊಂಡು ಉಪವಾಸ ಬಿದ್ದೀವಿ. ಈ ಸಾರಿನೂ ಹಂಗ ಆತಂದ್ರ ಹೆಂಡ್ರ ಮಕ್ಕಳ ಕಟ್ಟಕೊಂಡು ಬದುಕುದು ಭಾಳ ಕಷ್ಟ ಆಗ್ತತೈತಿ' ಎನ್ನುತ್ತಾರೆ ರೈತ ಹನಮಂತಪ್ಪ ಬಸನಗೌಡ್ರ. `ಮೃಗಶಿರಾ ಮುನಿಸಿನಿಂದ ತಾಲ್ಲೂಕಿನಾದ್ಯಂತ ಬರಗಾಲದ ಛಾಯೆ ಆವರಿಸಿದೆ. ಕೆರೆ ಕಂಟೆಗಳು ಕಳೆದ ವರ್ಷವೆ ಬರಿದಾಗಿವೆ. ಆದ್ದರಿಂದ ಪ್ರಸ್ತುತ ವರ್ಷ ಜಾನುವಾರುಗಳಿಗೆ ಮತ್ತು ಜನತೆಗೆ ತೀವ್ರ ತೊಂದರೆಯುಂಟಾಗಲಿದೆ. ಜಿಲ್ಲಾಡಳಿತ  ಮುಂದಿನ ದಿನಗಳ ಸಮಸ್ಯೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು' ಎನ್ನುತ್ತಾರೆ ಹುಲ್ಲೂರಿನ ಪ್ರಗತಿಪರ ರೈತ ದಶರಥ ಗಾಣಿಗೇರ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.