ಸೋಮವಾರ, ಜನವರಿ 20, 2020
24 °C

ಕಂಡಿದ್ದೆಲ್ಲಾ ‘3ಡಿ’ ಮಾಡಿ

ವಿಶ್ವನಾಥ್ ಎಸ್.ಶರ್ಮಾ Updated:

ಅಕ್ಷರ ಗಾತ್ರ : | |

ಅಂಗೈಗೆ ಇಡೀ ವಿಶ್ವವನ್ನೇ ತಂದಿತ್ತಿರುವ ಮೊಬೈಲ್‌ ಫೋನ್‌ ಎಂಬ ಅಚ್ಚರಿಯ ಉಪಕರಣದಿಂದ ಏನೇನೆಲ್ಲವೂ ಸಾಧ್ಯವಾಗುತ್ತಿವೆ. ಇದೀಗ ಕಣ್ಣಿಗೆ ಕಾಣಿಸುವ ವಸ್ತುಗಳನ್ನೆಲ್ಲ ‘3ಡಿ’ ಚಿತ್ರವಾಗಿಸಬಹುದಾದ ಜಾದೂ ಸಹ ಸಾಧ್ಯವಾಗಿದೆ. ಇನ್ನುಮುಂದೆ ಮೊಬೈಲಿನಲ್ಲೇ ನೈಜ ವಸ್ತುಗಳ ‘3ಡಿ’ ಚಿತ್ರ ಪಡೆಯಲು ಸಾಧ್ಯ ಎನ್ನುತ್ತಾರೆ ಎಲೆಕ್ಟ್ರಾನಿಕ್‌ ಕ್ಷೇತ್ರದ ತಂತ್ರಜ್ಞರು.ಸಾಮಾನ್ಯವಾದ ಸ್ಮಾರ್ಟ್‌ಫೋನನ್ನೂ ಸಹ ‘3ಡಿ’ ಸ್ಕ್ಯಾನರ್‌ನಂತೆ ಕೆಲಸ ಮಾಡುವಂತೆ ಪರಿವರ್ತಿಸುವ ಹೊಸ ಅಪ್ಲಿಕೇಷನ್‌ ಒಂದನ್ನು ತಂತ್ರಜ್ಞರು ಅಭಿವೃದ್ಧಿಪಡಿಸಿದ್ದಾರೆ. ಸ್ವಿಟ್ಜರ್‌ಲೆಂಡ್‌ನಲ್ಲಿರುವ  ಇಟಿಎಚ್ ಜ್ಯೂರಿಚ್‌ ವಿಶ್ವವಿದ್ಯಾಲಯದ ವಿಷುಯಲ್ ಕಂಪ್ಯೂಟಿಂಗ್ ವಿಭಾಗದ ಪ್ರೊಫೆಸರ್ ಮಾರ್ಕ್ ಪೊಲೆಫೆಸ್ ಮತ್ತವರ ತಂಡ ಈ ಹೊಸ ಆಪ್‌ ಅನ್ನು ಅಭಿವೃದ್ಧಿ ಪಡಿಸಿದೆ.ಇನ್ನೂ ಹೆಸರಿಡದ ಈ ಆ್ಯಪ್ ಸದ್ಯ ಚಾಲ್ತಿಯಲ್ಲಿರುವ ಸ್ಮಾರ್ಟ್‌ಫೋನಿನ ಕ್ಯಾಮೆರಾ ಸಹಾಯದಿಂದಲೇ 3ಡಿ ಸ್ಕ್ಯಾನ್ ಕೆಲಸ ಮಾಡಲಿದೆ. ಈ ಪ್ರಕ್ರಿಯೆಗೆ ಸಂಕೀರ್ಣ ಅಲ್ಗಾರಿದಂ ವ್ಯವಸ್ಥೆಯನ್ನು ಅಪ್ಲಿಕೇಷನ್‌ಗೆ ಅಳವಡಿಸಲಾಗಿದ್ದು, ಫೋನಿನ ಗ್ರಾಫಿಕ್ಸ್ ಸಹ ಸಂಸ್ಕಾರಕದ (ಜಿಪಿಯು) ಸಹಾಯದಿಂದ ಕಾರ್ಯನಿರ್ವಹಿಸುತ್ತದೆ.ಈ ಆ್ಯಪ್ ಬಳಸಿ ಪ್ರೀತಿ ಪಾತ್ರರ  ಭಾವಚಿತ್ರ ಅಥವಾ ವ್ಯಕ್ತಿ ಚಿತ್ರಗಳನ್ನು 3ಡಿ ರೂಪದಲ್ಲಿ ಪಡೆಯಬಹುದು ಎನ್ನುತ್ತಾರೆ ಪೊಲೆಫೆಸ್.3ಡಿ ಸ್ಕ್ಯಾನ್ ಹೇಗೆ?

ಒಂದು ಸಾಮಾನ್ಯ ಚಿತ್ರ ತೆಗೆಯುವಷ್ಟೇ ಸುಲಭವಾಗಿ ಒಂದು ವಸ್ತುವನ್ನು ಸ್ಕ್ಯಾನ್ ಮಾಡುವ ಮೂಲಕ ತ್ರಿಡಿ ಚಿತ್ರವನ್ನು ಪಡೆಯಬಹುದು ಎನ್ನುವುದು ತಂತ್ರಜ್ಞರ ಹೇಳಿಕೆ.ಸಾಮಾನ್ಯವಾಗಿ ಮೊಬೈಲ್ ಬಳಸಿ ಒಂದು ಚಿತ್ರ ತೆಗೆಯುವಾಗ ಹೇಗೆ ವಿವಿಧ ದೃಷ್ಟಿಕೋನಗಳಿಂದ ಅದನ್ನು ಸೆರೆ ಹಿಡಿಯುತ್ತೇವೆಯೋ ಹಾಗೆಯೇ ಈ ಆ್ಯಪ್ ಇರುವ ಸ್ಮಾರ್ಟ್‌ಫೋನ್‌ ಕ್ಯಾಮೆರಾ ದಿಂದ ಚಿತ್ರವನ್ನು ಸೆರೆಹಿಡಿಯಬಹುದು.ಅಂದರೆ 3ಡಿ ಚಿತ್ರ ಬಯಸುವ ವಸ್ತುವಿನ ಸುತ್ತ ಮೊಬೈಲನ್ನು ಸರಿಸಾಡಿ­ಸುತ್ತಿದ್ದಂತೆಯೇ ಈ ಆ್ಯಪ್ ಮೂಲಕ ಸ್ಮಾರ್ಟ್‌ಫೋನ್‌ ಕ್ಯಾಮೆರಾದ ಅಕ್ಷಿಪಟಲವು ಎದುರಿರುವ ವಸ್ತುವನ್ನು ನಿರಂತರವಾಗಿ ಸ್ಕ್ಯಾನ್ ಮಾಡಿ ಆಕಾರವನ್ನು ಗ್ರಹಿಸಿಕೊಳ್ಳುತ್ತದೆ. ಮೊಬೈಲಿನಲ್ಲಿರುವ ಜಡತ್ವ ಸಂವೇದಕಗಳು (inertial sensors) 3ಡಿ ಮೇಲ್ಮೈ ರಚನೆಗೆ ಬೇಕಾದ ಚಿತ್ರದ ಭಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ.ಮೊಬೈಲ್ ಕ್ಯಾಮೆರಾವನ್ನು  ವಸ್ತುವಿನ ಸುತ್ತ ಸರಿಸಾಡುವ  ಆಧಾರದ ಮೇಲೆ ಕ್ಯಾಮೆರಾವು ಚಿತ್ರಗಳನ್ನು ತೆಗೆಯಲು ಸರಿಯಾದ ಕ್ಷಣವನ್ನು ನಿರ್ಧರಿಸುತ್ತದೆ.ಹೀಗೆ ಸೆರೆಹಿಡಿದ ಚಿತ್ರಗಳನ್ನು 3ಡಿಯಾಗಿ ಪರಿವರ್ತಿಸಲು ಬೇಕಾದ ಲೆಕ್ಕಾಚಾರವನ್ನು (ಅಲ್ಗಾರಿದಂ)  ಆ್ಯಪ್  ಮಾಡುತ್ತದೆ. ಅಲ್ಲದೆ ಯಾವ ಕೋನದಲ್ಲಿ ವಸ್ತುವನ್ನು ಸ್ಕ್ಯಾನ್ ಮಾಡಿದ್ದೇವೆ ಎಂಬುದನ್ನೂ ತೋರಿಸುತ್ತದೆ.ಸ್ಕ್ಯಾನ್ ಪ್ರಕ್ರಿಯೆ ಪೂರ್ಣಗೊಂಡ ನಂತರ 3ಡಿ ಸ್ಕ್ಯಾನನ್ನು ಮತ್ತಷ್ಟು ಉತ್ತಮವಾಗಿಸಲು ‘ಕ್ಲೌಡ್ ಸೋರ್ಸ್’ ಗೆ ರವಾನಿಸುತ್ತದೆ. ಅಲ್ಲಿ ಸಿದ್ಧವಾದ ಮಾದರಿಯನ್ನು ನೈಜ 3ಡಿ ಮಾದರಿಯನ್ನಾಗಿ ಪರಿವರ್ತಿಸಬಹುದು ಎನ್ನುತ್ತಾರೆ ಅವರು.ಎರಡು ವರ್ಷಗಳ ಹಿಂದೆ ಇಂತಹ ತಂತ್ರಾಂಶಗಳು ಕೇವಲ ಬೃಹತ್ ಪ್ರಮಾಣದ ಕಂಪ್ಯೂಟರ್‌ಗಳಲ್ಲಿ ಮಾತ್ರ ಕೆಲಸ ಮಾಡುತ್ತಿದ್ದವು. ನಾವು ಅದನ್ನು ಸ್ಮಾರ್ಟ್‌ಫೋನ್‌ಗೆ ಹೊಂದುವಂತೆ ಸಂಕೀರ್ಣಗೊಳಿಸಿದ್ದೇವೆ ಮತ್ತು ಅದರ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ ಎಂದು ಪೊಲೆಫೆಸ್ ತಿಳಿಸಿದ್ದಾರೆ.ಕ್ಲೌಡ್ ಸೆಟ್ಟಿಂಗ್‌ನಲ್ಲಿ ಚಿತ್ರಗಳ ಬ್ಯಾಚ್ ಪ್ರೊಸೆಸ್ ವಿಧಾನಕ್ಕೆ ಹೋಲಿಸಿದಲ್ಲಿ ಇದು ಹೆಚ್ಚು ಉಪಯುಕ್ತವಾಗಿದೆ ಎನ್ನುವುದು ಪೊಲೆಫೆಸ್ ಅಭಿಮತ. ದೈನಂದಿನ ವಸ್ತುಗಳ 3ಡಿ ಮಾದರಿಗಳನ್ನು 360 ಡಿಗ್ರಿ ಕೋನದಲ್ಲಿ ಪಡೆಯಬಹುದಾಗಿದೆ.ಅಲ್ಲದೆ ಈ ಆ್ಯಪ್‌ನಲ್ಲಿ ವಿವಿಧ ರೀತಿಯ ಸೆಟ್ಟಿಂಗ್‌ಗಳಿದ್ದು, ಮಂದ ಬೆಳಕಿನಲ್ಲಿ  ಅಂದರೆ ವಸ್ತು ಸಂಗ್ರಹಾಲಯದ ಒಳಗಡೆ  3ಡಿ ಮಾದರಿಯಲ್ಲಿ  ಚಿತ್ರಗಳನ್ನು ಸೆರೆಹಿಡಿದು ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು.ಒಟ್ಟಾರೆ ನೈಜ ವಸ್ತುಗಳ ಪ್ರತಿರೂಪ ಪಡೆಯಲು ಈ 3ಡಿ ಮಾದರಿಗಳನ್ನು ದೃಶ್ಯೀಕರಣ ಅಥವಾ ವರ್ಧಿತ ನೈಜ  ಆನ್ವಯಿಕ, ಇಲ್ಲವೇ 3ಡಿ ಪ್ರಿಂಟಿಂಗ್ ಮಾಡಲು ಬಳಸಬಹುದು.ಈ ಹಿಂದೆ ಕ್ಯಾಮ್ ಸ್ಕ್ಯಾನರ್ ಎಂಬ ಮೊಬೈಲ್ ಆ್ಯಪ್ ಮಾರುಕಟ್ಟೆಗೆ ಬಂದಾಗ ‘ಸ್ಕ್ಯಾನರ್’ ಸಾಧನ ನಿರುಪಯುಕ್ತವಾಗಲಿದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಈ 3ಡಿ ಸ್ಕ್ಯಾನರ್ ಮಾರುಕಟ್ಟೆಗೆ ಬಂದರೆ ‘ಸ್ಕ್ಯಾನರ್’ ಸಾಧನ ತನ್ನ ಜನಪ್ರಿಯತೆ ಕಳೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ.

ಪ್ರತಿಕ್ರಿಯಿಸಿ (+)