ಮಂಗಳವಾರ, ಮಾರ್ಚ್ 2, 2021
23 °C

ಕಂಪ್ಯೂಟರ್‌ನಿಂದ ಕಣ್ಣು ಹಾಳಾಗುವುದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಯೂಟರ್‌ನಿಂದ ಕಣ್ಣು ಹಾಳಾಗುವುದೆ?

ಕಂಪ್ಯೂಟರ್ ಇಲ್ಲದೆ ಕೋಟ್ಯಂತರ ಜನರಿಗೆ ಇಂದು ಕೆಲಸ ಮಾಡುವುದೇ ಸಾಧ್ಯವಿಲ್ಲ. ಕೆಲವು ಗಂಟೆಗಳ ಕಾಲ ಕಂಪ್ಯೂಟರನ್ನು ಉಪಯೋಗಿಸಿದ ನಂತರ ಸುಮಾರು ಶೇ. 65 ಜನರಿಗೆ ಕಣ್ಣಿಗೆ ಸಂಬಂಧಪಟ್ಟ ತೊಂದರೆಗಳು ಕಾಣಿಸಿಕೊಳ್ಳಬಹುದು. ಕಣ್ಣುಕೆಂಪಾಗುವುದು, ಉರಿಯುವುದು, ಅತಿಯಾಗಿ ನೀರಾಡುವುದು ಅಥವಾ ಕಣ್ಣು ಒಣಗಿದಂತೆನಿಸಬಹುದು.ಬೆಳಕು ನೋಡಲು ಕಷ್ಟವಾಗಬಹುದು. ತಲೆನೋವು ಮತ್ತು ಕಣ್ಣುನೋವು ಕಾಣಿಸಿಕೊಳ್ಳಬಹುದು. ಕಾಂಟಾಕ್ಟ್ ಲೆನ್ಸನ್ನು ಬಳಸುವವರಿಗೆ ಬಹಳ ಹೊತ್ತು ಲೆನ್ಸನ್ನು ಬಳಸುವುದು ಸಾಧ್ಯವಿಲ್ಲ ಎಂದೆನಿಸಬಹುದು. ಈ ಚಿಹ್ನೆಗಳಿಗೆ ಒಂದು ಹೊಸ ಹೆಸರೇ ಇದೆ.  ಅದು ಕಂಪ್ಯೂಟರ್ ವಿಷನ್ ಸಿಂಡ್ರೋಮ್.ಇದೇ ಚಿಹ್ನೆಗಳು ಬಹಳ ಹೊತ್ತು ಟಿವಿ ನೋಡಿದಾಗ, ಮೊಬೈಲ್ ಬಳಸಿದಾಗ ಅಥವಾ ವಿಡಿಯೊ ಆಟಗಳನ್ನು ಆಡಿದ ನಂತರ ಕೂಡ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರೂ ತಿಳಿದಿರುವುದು ಕಂಪ್ಯೂಟರ್‌ನಿಂದ ಹಾನಿಕರವಾದ ಕಿರಣಗಳು ಬರುತ್ತವೆ. ಇದರಿಂದ ಕಣ್ಣಿಗೆ ಹಾನಿಯಾಗುವುದು, ದೃಷ್ಟಿ ಕಮ್ಮಿಯಾಗಿ ಕನ್ನಡಕ ಬಳಸಬೇಕಾಗುತ್ತೆ ಎಂದು.ಕನ್ನಡಕ ಆಗಲೇ ಇದ್ದರೆ, ಅದರ ಸಂಖ್ಯೆ ಜಾಸ್ತಿಯಾಗುತ್ತಾ ಹೋಗುತ್ತದೆ ಎಂಬ ನಂಬಿಕೆಯುಂಟು. ಈ ನಂಬಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹಲವಾರು ತಜ್ಞರು ಸಂಶೋಧನೆಯ ಆಧಾರದ ಮೇಲೆ ತಿಳಿಸಿರುತ್ತಾರೆ.ಹಾನಿಕರವಾದ ಯಾವುದೇ ಅಂಶವೂ ಇಲ್ಲದಿದ್ದರೆ ಇಷ್ಟೊಂದು ಹಿಂಸೆ ಆಗುವುದಕ್ಕೆ ಕಾರಣವೇನೆಂದು ಅರ್ಥಮಾಡಿಕೊಳ್ಳೋಣ. ಮುದ್ರಣದ ಅಕ್ಷರಗಳನ್ನು ಓದುವುದಕ್ಕೂ ಒಂದು ಸ್ಕ್ರೀನ್‌ನಿಂದ (ಯಾವುದೇ ವಿಡಿಯೊ ಡಿಸ್‌ಪ್ಲೇ ಯೂನಿಟ್) ಓದುವುದಕ್ಕೂ ವ್ಯತ್ಯಾಸವಿದೆ.- ಮುದ್ರಣದಲ್ಲಿ ಅಕ್ಷರಗಳು ಪೂರ್ತಿ ಗೆರೆಗಳಿಂದ ರಚಿತವಾಗಿರುತ್ತವೆ. ಆದರೆ ಸ್ಕ್ರೀನ್ ಮೇಲೆ ಪ್ರತಿ ಅಕ್ಷರವೂ ಹಲವಾರು ಚುಕ್ಕೆಗಳಿಂದ  (ಪಿಕ್ಸೆಲ್)ರಚಿತವಾಗಿರುತ್ತವೆ. ಒಂದು ಚುಕ್ಕೆಗೂ ಇನ್ನೊಂದಕ್ಕೂ ಅಂತರ ಕಮ್ಮಿ ಇದ್ದಷ್ಟೂ ಸ್ಪಷ್ಟತೆ ಹೆಚ್ಚು. ಹಳೆಯ ಅಥವಾ ಉತ್ತಮ ಗುಣಮಟ್ಟ ಹೊಂದಿಲ್ಲದಿದ್ದರೆ ಈ  ಪಿಕ್ಸೆಲ್‌ಗಳ ಅಂತರ ಜಾಸ್ತಿಯಾಗಿ ಓದುವುದು ಕಷ್ಟವಾಗುತ್ತದೆ.- ಈ ಚುಕ್ಕೆಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತವೆ (ರಿಫ್ರೆಶ್ ರೇಟ್). ಅತಿವೇಗದಲ್ಲಿ ಬದಲಾದರೆ ಕಣ್ಣಿಗೆ ಹಿತವಾಗಿರುತ್ತದೆ. ನಿಧಾನವಾಗಿ ಬದಲಾದರೆ, ಅಕ್ಷರಗಳು ಅಲ್ಲಾಡುವ ಹಾಗೆ ನಮ್ಮ ಕಣ್ಣಿಗೆ ತಿಳಿದು ಓದುವುದು ಶ್ರಮಕರವಾಗುತ್ತದೆ. ಇಂತಹ ಮಾನಿಟರ್ ಬದಲು ದೋಷರಹಿತ ಎಲ್‌ಸಿಡಿ ಮಾನಿಟರನ್ನು ಉಪಯೋಗಿಸಬೇಕು.- ಸಾಧಾರಣವಾಗಿ ಉಪಯೋಗಿಸುವ ಡೆಸ್ಕ್‌ಟಾಪ್ ಕಂಪ್ಯೂಟರ್ ನೋಡುವಾಗ ಕಣ್ಣುಗಳು ನೇರ ದೃಷ್ಟಿಸುತ್ತವೆ, ಪುಸ್ತಕ ಓದುವಾಗ ತಲೆ ಬಗ್ಗಿಸಿ ನೋಡುತ್ತೇವೆ. ನೇರ ನೋಟದಲ್ಲಿ ಕಣ್ಣು ಒಣಗುವ ಸಾಧ್ಯತೆ ಹೆಚ್ಚು. ಬಗ್ಗಿ ನೋಡುವಾಗ ಕಣ್ಣಿನ ರೆಪ್ಪೆಗಳು ಫ್ಯಾನ್ ಗಾಳಿಯನ್ನು ತಡೆದು, ಕಣ್ಣು ಒಣಗದ ಹಾಗೆ ಕಾಪಾಡುತ್ತವೆ. ಅನಾವಶ್ಯಕ ಬೆಳಕು ಕಣ್ಣಿಗೆ ಬಡಿಯುವುದನ್ನು ತಡೆಯುತ್ತವೆ.-ಕಂಪ್ಯೂಟರ್‌ಗಳನ್ನು ಉಪಯೋಗಿಸಿ ಬಹಳ ಜನ ಕೆಲಸ ಮಾಡುವ ಕಡೆ ವಿಸ್ತಾರವಾದ ಜಾಗದಲ್ಲಿ ಕ್ಯಾಬಿನ್‌ಗಳನ್ನು ಮಾಡಿರುತ್ತಾರೆ. ಇಂತಹ ಜಾಗಗಳಲ್ಲಿ ಹಲವಾರು ದೀಪಗಳನ್ನು ಬಳಸಿರುತ್ತಾರೆ. ಒಂದು ಕ್ಯಾಬಿನ್‌ನಲ್ಲಿ ಕುಳಿತವರ ಕಣ್ಣಿನ ಮೇಲೆ ಮತ್ತು ಅವರ ಕಂಪ್ಯೂಟರ್ ಮೇಲೆ ಅತಿಯಾಗಿ ಬೆಳಕು ಹಾಗೂ ಬೆಳಕಿನ ಶಾಖದಿಂದ `ಗ್ಲೇರ್~ (ಪ್ರಖರ ಪ್ರಭೆ) ಉಂಟಾಗುತ್ತದೆ. ಇದು ಕಣ್ಣಿಗೆ ಹಿತಕರವಾಗಿರುವುದಿಲ್ಲ, ಕೆಲವು ಗಂಟೆಗಳ ನಂತರ ತೊಂದರೆಯಾಗಬಹುದು.-ಈಗಿನ ಆಫೀಸುಗಳಲ್ಲಿ ಕಂಪ್ಯೂಟರ್ ಮುಂದೆ ಕೂತರೆ ಏಳುವ ಪ್ರಮೇಯವೇ ಇಲ್ಲ. ಓದುವುದು, ಬರೆಯುವುದು, ಫೈಲ್ ಮಾಡುವುದು ಸಂಭಾಷಣೆಗಳು ಎಲ್ಲವೂ ಒಂದೇ ಕಡೆ ನಡೆದುಹೋಗುತ್ತೆ. ಒಂದೇ ದಿಕ್ಕಿನ ನೋಟ, ಅದೇ ಕುರ್ಚಿಯಲ್ಲಿ ಗಂಟೆಗಟ್ಟಲೆ ಕೂರುವುದು, ರೆಪ್ಪೆ ಬಡಿಯದೇ ನೋಡುವುದು ಇವೆಲ್ಲವೂ ಸೇರಿ ದೇಹಕ್ಕೂ, ಕಣ್ಣಿಗೂ ಆಯಾಸವಾಗುತ್ತವೆ.

ಕಣ್ಣಿಗೆ ಹಿತವಾಗುವಂತೆ ಕಂಪ್ಯೂಟರ್ ಬಳಸಿ

-ನೇತ್ರ ತಜ್ಞರಿಂದ ಕಣ್ಣು ಪರೀಕ್ಷಿಸಿಕೊಂಡು, ಕನ್ನಡಕದ ಅವಶ್ಯಕತೆ ಇದ್ದರೆ ಅದನ್ನು ಬಳಸಬೇಕು. `ಆ್ಯಂಟಿ ಗ್ಲೇರ್~ ಕನ್ನಡಕವನ್ನು ಉಪಯೋಗಿಸಿದರೆ ಹೆಚ್ಚು ಉಪಯೋಗ ಆಗುವುದಿಲ್ಲ. ಕನ್ನಡಕವನ್ನು ತಿಳಿಬಣ್ಣದಲ್ಲಿ ಮಾಡಿಸಿಕೊಂಡರೆ ಅತೀ ಬೆಳಕಿನಿಂದ ಆಗುವ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು. 40 ವರ್ಷದ ನಂತರ ಸಮೀಪ ದೃಷ್ಟಿ ಕನ್ನಡಕ ಕಂಪ್ಯೂಟರ್ ಬಳಕೆಗೆ ಸೂಕ್ತವಾಗಿರಬೇಕು.-ಡೆಸ್ಕ್‌ಟಾಪ್ ಕಂಪ್ಯೂಟರ್ ಉಪಯೋಗಿಸುವರು `ಬೈ ಫೋಕಲ್~  ಕನ್ನಡಕ ಬಳಸಿದರೆ ಕತ್ತೆತ್ತಿ ಕೆಳಭಾಗದಿಂದ ನೋಡಬೇಕಾಗುತ್ತದೆ. ಇದರಿಂದ ಕತ್ತು ಮತ್ತು ಬೆನ್ನುನೋವು (ಸ್ಪಾಂಡಿಲಾಸಿಸ್)ಉಲ್ಬಣಗೊಳ್ಳಬಹುದು. `ಪ್ರೋಗ್ರೆಸಿವ್~ ಲೆನ್ಸ್‌ಗಳಿರುವ ಕನ್ನಡಕ ಅಥವಾ ಓದುವ ಪವರ್ ಮಾತ್ರ ಇರುವುದನ್ನು ಮಾಡಿಸಿಕೊಂಡರೆ ಸೂಕ್ತ. -ಕಂಪ್ಯೂಟರ್ ಇರುವ ಜಾಗದಲ್ಲಿ ಬೆಳಕು ಹಿತವಾಗಿರಬೇಕು. ಬೆಳಕು ನೇರವಾಗಿ ಕಂಪ್ಯೂಟರ್ ಮೇಲೆ ಬೀಳಬಾರದು, ಉಪಯೋಗಿಸುವವರ ಕಣ್ಣಿಗೂ ನೇರವಾಗಿ ಕುಕ್ಕಬಾರದು ಇಂತಹ ದೀಪಗಳನ್ನು ಆರಿಸುವುದು ಒಳ್ಳೆಯದು, ಅಥವಾ ಜಾಗವನ್ನು ಬದಲಾಯಿಸಬೇಕು. ಸ್ಕ್ರೀನ್ ಮೇಲೆ ಆ್ಯಂಟಿ ಗ್ಲೇರ್ ಫಿಲ್ಟರ್ ಉಪಯೋಗಿಸಿದರೆ ಅಕ್ಷರಗಳು ಸ್ವಲ್ಪ ಸ್ಪಷ್ಟವಾಗಿ ಕಾಣಿಸುತ್ತವೆ. ಅತೀ ಬೆಳಕು, ನೆರಳುಗಳನ್ನು ತಡೆಯುವುದಿಲ್ಲ.-ಮಾನಿಟರ್ ಅನ್ನು ಕಣ್ಣಿನಿಂದ 50-80ಸೆಂಮೀ ದೂರದಲ್ಲಿ ಹಾಗೂ 10-15ಸೆಂಮೀ ಕೆಳಗಿರುವ ಹಾಗೇ ಇಡಬೇಕು.-ಉತ್ತಮ ಮಟ್ಟದ ಮಾನಿಟರನ್ನು ಬಳಸಿರಿ.-ಕಣ್ಣಿನ ತೇವಾಂಶವನ್ನು ಕಾಪಾಡಲು ರೆಪ್ಪೆಗಳನ್ನು ಆಗಾಗ ಬಡಿಯುತ್ತಿರಬೇಕು. ಕಣ್ಣೀರು ಗುಡ್ಡೆಯ ಮೇಲೆ ಸಮನಾಗಿ ಹರಡುತ್ತದೆ. ಫ್ಯಾನ್ ಹಾಗೂ ಹವಾನಿಯಂತ್ರಣದಿಂದ ಕಣ್ಣು ಒಣಗುವುದನ್ನು ತಡೆಯಲು ಗಾಳಿ ನೇರ ಕಣ್ಣಿಗೆ ಬೀಳದ ಹಾಗೆ ಕುರ್ಚಿಯನ್ನು ಜೋಡಿಸಿಕೊಳ್ಳಿ. ತೊಂದರೆ ಅತಿಯಾದರೆ ವೈದ್ಯರ ಸಲಹೆಯಂತೆ ಕಣ್ಣಿಗೆ ಸೂಕ್ತ ಔಷಧಿಯನ್ನು ಉಪಯೋಗಿಸಬಹುದು.-ಒಂದು ಗಂಟೆಗೊಮ್ಮೆ ಕೆಲವು ನಿಮಿಷಗಳ ಕಾಲ ಕಂಪ್ಯೂಟರ್ ಬಿಟ್ಟು ಬೇರೆ ದಿಕ್ಕಿನಲ್ಲಿ ದೃಷ್ಟಿ ಹಾಯಿಸಿ. ಆಗ ನಿಮ್ಮ ಕಣ್ಣಿನ ಮಾಂಸಖಂಡಗಳಿಗೆ ವಿಶ್ರಾಂತಿ ದೊರೆಯುತ್ತದೆ.-ನೀವು ಬಳಸುವ ಕುರ್ಚಿ, ಮೇಜು ಇತರ ಸಲಕರಣೆಗಳು ಕಂಪ್ಯೂಟರ್ ಬಳಕೆಗೆ ಹಾಗೂ ನಿಮ್ಮ ಶರೀರಕ್ಕೆ ಸೂಕ್ತವಾಗಿರಬೇಕು ergonomic design ಎಂದು ಕರೆಯುತ್ತಾರೆ. ಕತ್ತು, ಬೆನ್ನು ಹಾಗೂ ಮೊಣಕೈಗಳಿಗೆ ಆಧಾರವನ್ನು ನೀಡಿ ನಿರಾಯಾಸವಾಗಿ ಕೆಲಸ ಮಾಡುವಂತಿರಬೇಕು.ಯಾವುದೇ ಕೆಲಸವನ್ನು ನಿರಾಯಾಸವಾಗಿ ಮಾಡಲು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಅತಿಮುಖ್ಯ. ಒಂದು ಕಡೆ 8-10 ಗಂಟೆ ಕೂರಬೇಕಾದರೂ ದೈಹಿಕ ಶಕ್ತಿ ಬೇಕು. ಅಲ್ಲದೇ ಈಗಿನ ಕಾಲದಲ್ಲಿ ಕಂಪ್ಯೂಟರ್ ಬಳಕೆ ಆಫೀಸಿಗಷ್ಟೆ ಸೀಮಿತವಾಗಿಲ್ಲ.ಮನೆಯಲ್ಲೂ ನಡೆಯುತ್ತೆ, ಟಿವಿ,  ಸ್ಮಾರ್ಟ್ ಫೋನ್‌ಗಳು, ವಿಡಿಯೋ ಆಟಗಳ ಮೂಲಕ ಅದೇ ರೀತಿಯ ಒತ್ತಡ ದೇಹಕ್ಕೂ, ಕಣ್ಣಿಗೂ ನಡೆಯುತ್ತಲೇ ಇರುತ್ತೆ. ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ, ಆರೋಗ್ಯಕರ ಆಹಾರದಿಂದ ಹಾಗೂ ಬೇರೆ ಹವ್ಯಾಸಗಳಿಂದ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಕಮ್ಮಿ ಮಾಡಿಕೊಳ್ಳಬಹುದು.ಆಗ `ಕಂಪ್ಯೂಟರ್ ವಿಷನ್ ಸಿಂಡ್ರೋಮ್~ನ ಎಲ್ಲಾ ಚಿಹ್ನೆಗಳೂ ಕಮ್ಮಿಯಾಗುತ್ತವೆ. ಕಂಪ್ಯೂಟರ್ ಅನ್ನು  ದೂರುವುದರ ಬದಲು, ಅದನ್ನು ಅರ್ಥಮಾಡಿಕೊಂಡು, ಅದನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿದರೆ, ತೊಂದರೆ ಇಲ್ಲದೆ ನೀವು ಗಂಟೆಗಟ್ಟಲೆ ಕೆಲಸ ಮಾಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.