ಭಾನುವಾರ, ಮಾರ್ಚ್ 7, 2021
19 °C

ಕಂಪ್ಯೂಟರ್ ಕೈಗಾರಿಕೆಗೆ ಉಜ್ವಲ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಯೂಟರ್ ಕೈಗಾರಿಕೆಗೆ ಉಜ್ವಲ ಭವಿಷ್ಯ

ಬೆಂಗಳೂರು: `ಸಾಫ್ಟ್‌ವೇರ್ ಕ್ಷೇತ್ರಕ್ಕೆ ಪೂರಕವಾದ ಉದ್ದಿಮೆಗಳ ಅಭಿವೃದ್ಧಿಯಾದರೆ ಕಂಪ್ಯೂಟರ್ ಕೈಗಾರಿಕೆಗೆ ಭಾರತದಲ್ಲಿ ಉಜ್ವಲವಾದ ಭವಿಷ್ಯವಿದೆ~ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸೂಪರ್ ಕಂಪ್ಯೂಟರ್ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಗೌರವ ಪ್ರಾಧ್ಯಾಪಕ ಪ್ರೊ. ವಿ.ರಾಜಾರಾಮನ್ ಹೇಳಿದರು.ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ ನಡೆದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘದ `ಜನಪ್ರಿಯ ವಿಜ್ಞಾನ ಉಪನ್ಯಾಸ ಮಾಲಿಕೆ~ಯಲ್ಲಿ `ಐವತ್ತೈದು ವರ್ಷಗಳ ಭಾರತದ ಕಂಪ್ಯೂಟರ್ ಕ್ಷೇತ್ರದ ಬೆಳವಣಿಗೆ~ ವಿಷಯ ಕುರಿತು ಅವರು ಮಾತನಾಡಿದರು.`ಭಾರತದಲ್ಲಿ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಕಂಪ್ಯೂಟರ್ ಕೈಗಾರಿಕೆಗೆ ಸಂಬಂಧಿಸಿದ ಹಾರ್ಡ್‌ವೇರ್ ಹಾಗೂ ದೇಶೀಯ ಮಾರುಕಟ್ಟೆಯನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ಐವತ್ತೈದು ವರ್ಷಗಳಿಂದ ದೇಶದಲ್ಲಿ ಕಂಪ್ಯೂಟರ್ ಬಗ್ಗೆ ಸಂಶೋಧನೆ ನಡೆಯುತ್ತಿದ್ದರೂ ಇಂದಿಗೂ ಈ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ಯಶಸ್ಸು ಪಡೆಯಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸಾಫ್ಟ್‌ವೇರ್ ಕ್ಷೇತ್ರದ ಜೊತೆಗೆ ಇದಕ್ಕೆ ಪೂರಕವಾದ ಕೈಗಾರಿಕೆಗಳ ಬೆಳವಣಿಗೆಯೂ ಆಗಬೇಕಿದೆ~ ಎಂದು ಅವರು ತಿಳಿಸಿದರು.`ದೇಶದಲ್ಲಿ 1955ರಿಂದ ಕಂಪ್ಯೂಟರ್ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆರಂಭದ ದಿನಗಳಲ್ಲಿ ದೊಡ್ಡ ಯಂತ್ರದಂತಿದ್ದ ಕಂಪ್ಯೂಟರ್‌ನ ಗಾತ್ರ ಇಂದು ಅಂಗೈ ಅಗಲಕ್ಕೆ ಬಂದಿರುವುದು ತಂತ್ರಜ್ಞಾನದಿಂದ ಆದ ಕ್ರಾಂತಿ. ಕಂಪ್ಯೂಟರ್ ಬಳಕೆಯನ್ನು ಜನಪ್ರಿಯಗೊಳಿಸುವಲ್ಲಿ ಮೈಕ್ರೋ ಸಾಫ್ಟ್, ಗೂಗಲ್ ಹಾಗೂ ಆ್ಯಪಲ್ ಕಂಪೆನಿಗಳ ಪಾತ್ರ ದೊಡ್ಡದು~ ಎಂದರು.`ಸಾಫ್ಟ್‌ವೇರ್ ಕ್ಷೇತ್ರದಿಂದ ದೇಶದಲ್ಲಿ 8.2 ದಶಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಭಾರತದಲ್ಲಿ ಉತ್ತಮ ಗುಣಮಟ್ಟದ ಕಂಪ್ಯೂಟರ್ ತರಬೇತಿ ಸಂಸ್ಥೆಗಳಿವೆ. ವಿದೇಶಗಳಿಂದ ಭಾರತಕ್ಕೆ ಬಂದು ಕಂಪ್ಯೂಟರ್ ತರಬೇತಿ ಪಡೆಯುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಆದರೆ, ನಮ್ಮ ದೇಶದ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗಿ ಕಲಿತರೇ ಹೆಚ್ಚು ಮನ್ನಣೆ ಎಂಬ ಮನೋಭಾವ ಬೆಳೆಸಿಕೊಂಡಿದ್ದಾರೆ. ಇದು ದೂರಾಗಬೇಕು~ ಎಂದು ಅವರು ಆಶಿಸಿದರು.`ಭಾರತ 1998ರಲ್ಲಿ ತೆಗೆದುಕೊಂಡ ಉದಾರೀಕರಣ ನೀತಿಯಿಂದಾಗಿ ಕಂಪ್ಯೂಟರ್ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣವಾಯಿತು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸ್ಯಾಮ್ ಪಿಟ್ರೋಡಾ ಅವರು ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನೇತೃತ್ವ ವಹಿಸಿಕೊಂಡರು.ಈ ಸಂದರ್ಭದಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಯಿತು. ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ಈ ಇಬ್ಬರ ಕೊಡುಗೆ ಅನನ್ಯ~ ಎಂದು ಅವರು ನುಡಿದರು.`ಮಾಹಿತಿ ತಂತ್ರಜ್ಞಾನ ಕಾಯ್ದೆ-1998ಕ್ಕೆ ಎನ್‌ಡಿಎ ಸರ್ಕಾರ 2005ರಲ್ಲಿ ತಂದ ತಿದ್ದುಪಡಿಯಿಂದ ದೇಶದಲ್ಲಿ ಕಂಪ್ಯೂಟರ್ ಕ್ಷೇತ್ರದ ಬೆಳವಣಿಗೆಗೆ ಪ್ರೋತ್ಸಾಹ ಹೆಚ್ಚಾಯಿತು. ಈ ವೇಳೆ ಕಂಪ್ಯೂಟರ್ ಸಂಬಂಧಿ ವಸ್ತುಗಳ ವಿದೇಶಿ ಮಾರುಕಟ್ಟೆ ಮುಕ್ತವಾಗಿ, ಸಾಫ್ಟ್‌ವೇರ್ ರಫ್ತಿನ ಮೇಲಿನ ತೆರಿಗೆಯನ್ನು ತೆಗೆಯಲಾಯಿತು. ಅಲ್ಲಿಂದ ಇಲ್ಲಿಯವರೆಗೂ ದೇಶದಲ್ಲಿ ಸಾಫ್ಟ್‌ವೇರ್ ಕ್ಷೇತ್ರ ವೇಗವಾಗಿ ಬೆಳೆಯುತ್ತಲೇ ಇದೆ~ ಎಂದರು.ಭಾರತೀಯ ವಿಜ್ಞಾನ ಸಂಸ್ಥೆಯ ಸೂಪರ್ ಕಂಪ್ಯೂಟರ್ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ.ಆರ್. ಗೋವಿಂದರಾಜನ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.