ಕಂಬಾರರು ಹಾಡಿದರೆಂದರೆ...

ಮಂಗಳವಾರ, ಮೇ 21, 2019
32 °C

ಕಂಬಾರರು ಹಾಡಿದರೆಂದರೆ...

Published:
Updated:

ಹುಬ್ಬಳ್ಳಿ: ಅವು ಬಳ್ಳಾರಿಯ ಕಡು ಬೇಸಿಗೆಯ ದಿನಗಳು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದ ಕಂಬಾರರ ಧ್ವನಿಗೆ ಬೇಸಿಗೆ ದಣಿವನ್ನು ಕಡಿಮೆಗೊಳಿಸುವ ಶಕ್ತಿ ಇತ್ತು. ಅವರು ಹಾಡಿದರೆಂದರೆ ಹುಕ್ಕೇರಿ ಬಾಳಪ್ಪ ಹಾಡುತ್ತಿದ್ದ `ಎಂಥಾ ಚೆಂದ ಬೆಳದಿಂಗಳ, ಜಗದ ಜನಕ ಮಂಗಳ~ ಹಾಡು ನೆನಪಾಗುತ್ತಿತ್ತು. ಅದು ಕಂಬಾರರ ಧ್ವನಿಗಿದ್ದ ಶಕ್ತಿ.ಕಂಚಿನ ಕಂಠದ ಧ್ವನಿಯಿಂದ ಹಾಡಿದರೆಂದರೆ ನಿದ್ದೆಗಣ್ಣಲ್ಲಿದ್ದವರು ಎಚ್ಚರಾಗಬೇಕು, ನಿದ್ದೆ ಮಾಡುತ್ತಿದ್ದವರು ಎದ್ದು ಕೂಡಬೇಕು. ಅತ್ತಿತ್ತ ಚಿತ್ತವನ್ನು ಹರಿಯಬಿಟ್ಟವರು ಲಕ್ಷ್ಯ ವಹಿಸಬೇಕು. ಯಾವುದೇ ಸಮಾರಂಭದಲ್ಲಿ ಪಾಲ್ಗೊಂಡರೂ ಪದ್ಯಗಳನ್ನು ಹಾಡುವ ಮೂಲಕ ಮಾತನ್ನು ಕೊನೆಗೊಳಿಸುವುದು ಕಂಬಾರರ ವಿಶೇಷ.ಕುಲಪತಿ ಹುದ್ದೆಯನ್ನವರು ಅಲಂಕರಿಸಿದರು ನಿಜ. ಆದರೆ ಹಾಡಲು ಎಂದೂ ಮರೆಯಲಿಲ್ಲ. ಅವರು ಹಾಡುತ್ತಿದ್ದ ಚೀನಾದ ದೊಡ್ಡ ಕಮ್ಯುನಿಸ್ಟ್ ನಾಯಕ ಮಾವೋತ್ಸೆ ತುಂಗನ ಕುರಿತಾದ

ಮರೆತೆನೆಂದರ ಮರೆಯಲಿ ಹ್ಯಾಂಗ

ಮಾವೋತ್ಸೆ ತುಂಗ

ಈ ಹಾಡು ಜನಪ್ರಿಯ. ಜೊತೆಗೆ

ಏ ಕುರುಬರಣ್ಣ ಸತ್ಯುಳ್ಳ ಶರಣ

ಕಾಪಾಡೋ ಕುರಿಗಳನ

ಮಾಡುವೆ ನಮನ

ಅರಿಯಬಾರದ ಅರಸ ಒಳಗೆ ಬಾರದೆ ಕುಳಿತ

ಒಳಹೊರಗ ಆದಾವೋ ಹೊರತ

ಹೊಲಿದ ಹೊಲಿಗೆಯ ಭೇದ ಗೊತ್ತಿಲ್ಲದಾದೇವೋ

ಮರೆತೇವು ದೊಡ್ಡಿಯ ಗುರುತು

ಎನ್ನುವ ಹಾಡು ಕೂಡಾ ಜನಪ್ರಿಯ.

 

ವಾಸ್ತವದ ಜಗತ್ತನ್ನು ಕಟ್ಟಿಕೊಡುತ್ತಲೇ ಆಧ್ಯಾತ್ಮಿಕತೆ ಹೇಳುವ ಕಲೆಗಾರಿಕೆ ಕಂಬಾರರ ಕಾವ್ಯಕ್ಕಿರುವ ಶಕ್ತಿ. ತಮ್ಮೆಲ್ಲ ಪದ್ಯಗಳನ್ನು ಅವರು ಹಾಡುತ್ತಿದ್ದರು. ಇದರಿಂದ ಕವಿಗೋಷ್ಠಿಗಳಲ್ಲಿ ಅವರ ಕವಿತೆಗಳು ಸಪ್ಪೆಯಾಗುತ್ತಿರಲಿಲ್ಲ. ಉಳಿದವರೆಲ್ಲ ಕವಿತೆಗಳನ್ನು ಓದಿದರೆ, ಇವರು ಹಾಡುತ್ತಿದ್ದರು. ಇದರಿಂದ ಗಮನ ಸೆಳೆಯುತ್ತಿದ್ದರು. ಇಂಥ ಕಂಬಾರರಿಗೆ ಈಗ ಜ್ಞಾನಪೀಠದ ಗರಿ.ಈಮೂಲಕ ಕನ್ನಡಕ್ಕೆ ಎಂಟನೇ ಜ್ಞಾನಪೀಠ ದೊರಕಿದೆ. ಈ ಎಂಟರಲ್ಲಿ ಉತ್ತರ ಕರ್ನಾಟಕದ ವಿ.ಕೃ. ಗೋಕಾಕ, ದ.ರಾ. ಬೇಂದ್ರೆ, ಗಿರೀಶ ಕಾರ್ನಾಡ ನಂತರ ಈಗ ಚಂದ್ರಶೇಖರ ಕಂಬಾರರ ಸರದಿ. ಅವರು ಬೆಂಗಳೂರಲ್ಲಿದ್ದರೂ ಅವರಿಗೆ ಕಾಡುವುದು ಅವರು ಹುಟ್ಟಿದ ಹುಕ್ಕೇರಿ ತಾಲ್ಲೂಕಿನ ಘೋಡಗೇರಿ.ಜೊತೆಗೆ ಸಾವಳಗಿ ಶಿವಲಿಂಗೇಶ್ವರ ಹಾಗೂ ಶಿವಾಪುರ. ಈ ಎಲ್ಲ ಊರುಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುತ್ತವೆ. ಅವು ಕೇವಲ ಊರುಗಳಲ್ಲ. ಅಧ್ಯಾತ್ಮದ ಸಂಕೇತಗಳು. ಜೊತೆಗೆ ನೀವು ಕಂಡಷ್ಟು ಮತ್ತು ನಿಮಗೆ ಕಂಡಷ್ಟು. ಇದು ಕಂಬಾರರ ಕಾವ್ಯದ ಗುಣಾತ್ಮಕತೆ. ಇಂಥ ಗುಣಾತ್ಮಕ ಕವಿತೆಯ ಸಾಲುಗಳು ಅವರ ನಾಟಕದಲ್ಲಿ ಬರುತ್ತವೆ. ಜೊತೆಗೆ ಜಾನಪದದ ಪ್ರಭಾವ ಬೇರೆ.ಅವರ ಜೋಕುಮಾರಸ್ವಾಮಿ, ಸಂಗ್ಯಾ ಬಾಳ್ಯಾ ಮೊದಲಾದ ನಾಟಕಗಳು ಈಗಲೂ ಪ್ರದರ್ಶನ ಕಾಣುತ್ತಿವೆ. ಎಪ್ಪತ್ತರ ದಶಕದ ನಂತರ ಕನ್ನಡ ರಂಗಭೂಮಿಯನ್ನು ಸತ್ವಯುತ ನಾಟಕಗಳನ್ನು ನೀಡುವ ಮೂಲಕ ಕನ್ನಡ ನಾಟಕ ಪರಂಪರೆಯನ್ನು ಬೆಳೆಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry