ಗುರುವಾರ , ಮಾರ್ಚ್ 4, 2021
30 °C
ಬಿಬಿಎಂಪಿಯಿಂದ ಕಟ್ಟಡ ಅವಶೇಷ ವಿಲೇವಾರಿ ನೀತಿ

ಕಟ್ಟಡ ದುರಸ್ತಿಗೂಳಿಸಲು ಬೇಕು ಅನುಮತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಟ್ಟಡ ದುರಸ್ತಿಗೂಳಿಸಲು ಬೇಕು ಅನುಮತಿ!

ಬೆಂಗಳೂರು: ಹೊಸ ಕಟ್ಟಡ ನಿರ್ಮಾಣ ಮಾಡುವಾಗ ಮಾತ್ರವಲ್ಲ; ಸದ್ಯ ಇರುವ ಕಟ್ಟಡದ ಯಾವುದೇ ಭಾಗವನ್ನು ತೆಗೆದುಹಾಕಲು ಇಲ್ಲವೆ ನವೀಕರಣ ಮಾಡಲು ಕೂಡ ನಗರದ ನಾಗರಿಕರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಮತಿ ಪಡೆಯುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.ಬಿಬಿಎಂಪಿ ಈ ಸಂಬಂಧ ನಿಯಮಾವಳಿ ರೂಪಿಸಿದ್ದು, ಶೀಘ್ರವೇ ಅದನ್ನು ಜಾರಿಗೆ ತರಲು ಉತ್ಸುಕವಾಗಿದೆ. ಇದರಿಂದ ಕಟ್ಟಡ ಅವಶೇಷ ನಗರದ ಎಲ್ಲೆಂದರಲ್ಲಿ ಬೀಳುವುದು ತಪ್ಪಲಿದೆ. ಜತೆಗೆ ನಿರ್ವಹಣೆ ಸುಗಮವಾಗಲಿದೆ ಎಂಬುದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ) ಸುಬೋಧ್‌ ಯಾದವ್‌ ಅವರ ವಿಶ್ವಾಸವಾಗಿದೆ.ಕಟ್ಟಡದ ಭಾಗವನ್ನು ಕೆಡವಿದಾಗ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣ, ವಿಲೇವಾರಿ ಮಾಡುವ ವಿಧಾನದ ಕುರಿತು ಬಿಬಿಎಂಪಿಗೆ ಮೊದಲೇ ಸಮಗ್ರ ವಿವರ ಒದಗಿಸಬೇಕು. ಕಟ್ಟಡದ ಮಾಲೀಕರು  ಕೊಡುವ ವಿಲೇವಾರಿ ಯೋಜನೆಯನ್ನು ಪರಿಶೀಲಿಸಿ ಬಿಬಿಎಂಪಿಯಿಂದ ಅನುಮತಿ ನೀಡಲಾಗುತ್ತದೆ ಎಂದು ವಿವರಿಸುತ್ತದೆ ಕಟ್ಟಡ ಅವಶೇಷ ವಿಲೇವಾರಿ ನೀತಿ.ಈ ಹೊಸ ನೀತಿಯ ಮತ್ತೊಂದು ವಿಶೇಷವೆಂದರೆ ಕಟ್ಟಡದ ಮಾಲೀಕರಿಗೆ ತ್ಯಾಜ್ಯ ವಿಲೇವಾರಿ ಮಾಡುವುದು ಅಸಾಧ್ಯ ಎಂದಾದರೆ ತಕ್ಕ ಶುಲ್ಕ ಆಕರಿಸಿ ಬಿಬಿಎಂಪಿಯೇ ಆ ಹೊಣೆಯನ್ನು ನಿಭಾಯಿಸಲಿದೆ. ಈ ಹಿಂದೆ ಕೆಲವು ಘಟಕಗಳನ್ನು ಗುರುತಿಸಿ, ಅಲ್ಲಿಯೇ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂಬ ಸೂಚನೆ ನೀಡಲಾಗಿತ್ತು. ಆದರೆ, ರಾತ್ರಿ ವೇಳೆಯಲ್ಲಿ ನಗರದ ರಸ್ತೆ ಬದಿಯಲ್ಲೇ ಅವಶೇಷ ಸುರಿದುಹೋಗುವ ಪರಿಪಾಠ ಮುಂದುವರಿದ ಕಾರಣ ಬಿಬಿಎಂಪಿ ಹೊಸ ವ್ಯವಸ್ಥೆಗೆ ಮುಂದಾಗಿದೆ.ಉತ್ಪಾದನೆ ಆಗಲಿರುವ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಕಟ್ಟಡದ ಮಾಲೀಕರು ಠೇವಣಿ ಇಡಬೇಕು. ಆ ಠೇವಣಿ ಮೊತ್ತವನ್ನೇ ಬಳಸಿಕೊಂಡು ಬಿಬಿಎಂಪಿ ತನ್ನ ಗುತ್ತಿಗೆದಾರರ ಮೂಲಕ ಅವಶೇಷವನ್ನು ತೆಗೆದು ಹಾಕಲಿದೆ. ಈ ಸಂಬಂಧ ಮಾಹಿತಿ ಪಡೆಯಲು ಮತ್ತು ಮನವಿ ಸಲ್ಲಿಸಲು ಟೋಲ್‌ ಫ್ರೀ ದೂರವಾಣಿ ಸಂಪರ್ಕ ಸಂಖ್ಯೆ ಒದಗಿಸಲು ಉದ್ದೇಶಿಸಲಾಗಿದೆ.‘ಉತ್ಪಾದನೆಯಾಗುವ ಕಟ್ಟಡ ಅವಶೇಷದ ಕುರಿತಂತೆ ಹೊಸ ನೀತಿ ಅನುಷ್ಠಾನದಿಂದ ದತ್ತಾಂಶಗಳು ಲಭ್ಯವಾಗಲಿವೆ. ವಿಲೇವಾರಿ ಸಹ ಸುಲಭವಾಗಲಿದೆ’ ಎಂದು ಯಾದವ್‌ ಹೇಳುತ್ತಾರೆ.ನಗರದ ಸುತ್ತಲಿನ ಪ್ರದೇಶಗಳಲ್ಲಿರುವ ಕಲ್ಲಿನ ಕ್ವಾರಿಗಳಲ್ಲಿ ಕಟ್ಟಡದ ಅವಶೇಷ ಹಾಕಲು ನಿರ್ಧರಿಸಲಾಗಿದೆ. ಈ ಸಂಬಂಧ ಹಲವು ಕ್ವಾರಿಗಳನ್ನು 2013ರಲ್ಲೇ ಗುರುತಿಸಲಾಗಿದೆ. ಅವುಗಳ ಪೈಕಿ ಲಕ್ಷ್ಮೀಪುರ ಹಾಗೂ ಎಸ್‌.ಬಿಂಗೀಪುರ ಕ್ವಾರಿಗಳಲ್ಲಿ ಕಸವನ್ನೂ ಸುರಿಯಲಾಗುತ್ತಿತ್ತು. ಗ್ರಾಮಸ್ಥರ ಪ್ರತಿಭಟನೆ ಹೆಚ್ಚಾದ ಮೇಲೆ ಅಲ್ಲೀಗ ತ್ಯಾಜ್ಯ ವಿಲೇವಾರಿಯನ್ನು ಸ್ಥಗಿತಗೊಳಿಸಲಾಗಿದೆ.ಒಂದು ಅಂದಾಜಿನ ಪ್ರಕಾರ, ನಗರದಲ್ಲಿ ನಿತ್ಯ ಸಾವಿರ ಟನ್‌ ಕಟ್ಟಡ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಅಲ್ಲದೆ, ಇದುವರೆಗೆ ವಿಲೇವಾರಿಯಾಗದೆ ಬಿದ್ದಿರುವ ಅವಶೇಷದ ಪ್ರಮಾಣವೂ ಹೆಚ್ಚಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ತಜ್ಞರ ಸಮಿತಿ ಸದಸ್ಯರು ಮಾಹಿತಿ ನೀಡುತ್ತಾರೆ.ಬೃಹತ್‌ ಸಮುಚ್ಚಯಗಳು, ವಾಣಿಜ್ಯ ಕಟ್ಟಡಗಳು ಹಾಗೂ ಮನೆಗಳ ನವೀಕರಣದ ಸಂದರ್ಭದಲ್ಲಿ  ಉತ್ಪತ್ತಿಯಾಗುವ ಅನುಪಯುಕ್ತ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿರುವ ಕಾರಣ ನಗರದ ಅಂದ ಹಾಳಾಗುತ್ತಿದೆ. ಹೀಗೆ ಸುರಿಯಲಾದ ಅವಶೇಷವು ಮಳೆಯಾದ ಸಂದರ್ಭದಲ್ಲಿ ಚರಂಡಿಯಲ್ಲಿ ಸೇರಿಕೊಂಡು ಹೂಳಿನ ಪ್ರಮಾಣ ಹೆಚ್ಚಾಗುತ್ತಿದೆ.ರಸ್ತೆಬದಿ ಸುರಿದ ಕಟ್ಟಡ ತ್ಯಾಜ್ಯವನ್ನು ಕಸದ ಗುತ್ತಿಗೆದಾರರು ವಿಲೇವಾರಿ ಮಾಡುವುದಿಲ್ಲ. ಹೀಗಾಗಿ ಅದನ್ನು ನಿರ್ವಹಣೆ ಮಾಡುವುದು ಕಷ್ಟವಾಗಿ ಪರಿಣಮಿಸಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.