ಸೋಮವಾರ, ಮೇ 17, 2021
22 °C

ಕಡಿಮೆ ವೆಚ್ಚದಲ್ಲಿ ಅಂದದ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಟು ಲಕ್ಷ ರೂಪಾಯಿಗೆ ಮೂರು ಬೆಡ್‌ರೂಮ್ ಮನೆ! ಮೇಲ್ಮಧ್ಯಮ ವರ್ಗದವರು ಕೊಳ್ಳುವ ಕಾರಿಗಿಂತಲೂ ಕಡಿಮೆ ಬೆಲೆಯಲ್ಲಿ ಮನೆ ನಿರ್ಮಿಸಲು ಸಾಧ್ಯವೇ? ಹಾಸನದ ಎಚ್.ಎನ್. ಪ್ರಕಾಶ್ ಇದು ಸಾಧ್ಯ ಎನ್ನುತ್ತಾರೆ. ಉದಾಹರಣೆಗೆ ಅವರ ಮನೆಯನ್ನೇ ತೋರಿಸುತ್ತಾರೆ. ಅಂದಹಾಗೆ ಅವರ ಮನೆ 21ವರ್ಷ ಹಿಂದೆ ನಿರ್ಮಿಸಿದ್ದು. ಆ ಕಾಲದಲ್ಲಿ ಇಡೀ ಮನೆಗೆ ಅವರು ಮಾಡಿರುವ ವೆಚ್ಚ ರೂ 2.5ಲಕ್ಷ ಮಾತ್ರ.ಕಡಿಮೆ ವೆಚ್ಚದಲ್ಲಿ ಅಂದದ ಮನೆ ನಿರ್ಮಿಸುವುದು ಪ್ರತಿಯೊಬ್ಬರೂ ಕಾಣುವ ಸಾಮಾನ್ಯ ಕನಸು. ಆದರೆ ಮನೆ ನಿರ್ಮಾಣದ ಸಮಯ ಬಂದಾಗ ಹಿಂಜರಿದು, ಸಾಲ ಮಾಡಿಯಾದರೂ ಬಜೆಟ್ ಮೀರಿದ ಮನೆ ನಿರ್ಮಿಸುತ್ತೇವೆ.`ಅತಿಥಿಗಳು ಬಂದರೆ ಇರಲಿ ಎಂದು ಒಂದು ಹೆಚ್ಚು ಕೋಣೆ, ಕಾರು ಕೊಂಡರೆ ಎಂದು ಪಾರ್ಕಿಂಗ್‌ಗೆ ವ್ಯವಸ್ಥೆ, ಹತ್ತು ಜನ ಬಂದರೆ ಕುಳಿತು ಹರಟೆ ಹೊಡೆಯಲು ಇರಲಿ ಎಂದು ದೊಡ್ಡದಾದ ಲಿವಿಂಗ್ ರೂಮ್...ಹೀಗೆ ಆದ್ಯತೆಗಳು ಹೆಚ್ಚುತ್ತಾ ಹೋಗುತ್ತವೆ. ಆದರೆ ಪ್ರಕಾಶ್ ತನ್ನ ಸಣ್ಣ ಕುಟುಂಬಕ್ಕಾಗಿಯೇ ಮನೆ ನಿರ್ಮಿಸಿದ್ದಾರೆ. ಯಾವುದಕ್ಕೂ ಕಡಿಮೆ ಮಾಡಿಲ್ಲ. ನಿರ್ಮಾಣಕ್ಕೂ ಮೊದಲು ಎರಡು ವರ್ಷಗಳ ಕಾಲ ಪೂರ್ವಸಿದ್ಧತೆ ಮಾಡಿದ್ದಾರೆ.ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೂಪರಿಂಟೆಂಡೆಂಟ್ ಆಗಿರುವ ಪ್ರಕಾಶ್, ಕಾಲೇಜಿನ ಆರ್ಕಿಟೆಕ್ಟ್‌ಗಳ ಜತೆಗೆ ಸಮಯ ಸಿಕ್ಕಾಗಲೆಲ್ಲ ತಮ್ಮ ಕನಸಿನ ಮನೆಯ ಬಗ್ಗೆ ಚರ್ಚಿಸಿದ್ದಾರೆ. ಸ್ವತಃ ಕಲಾವಿದರೂ ಆಗಿದ್ದರಿಂದ 200ಕ್ಕೂ ಹೆಚ್ಚು ಸ್ಕೆಚ್‌ಗಳನ್ನು ತಯಾರಿಸಿದ್ದಾರೆ. ಕೊನೆಗೆ ಒಂಬತ್ತು ತಿಂಗಳಲ್ಲಿ, ಕಂಡ ಕನಸಿಗಿಂತ ಒಂದಿಂಚೂ ಹೆಚ್ಚು-ಕಮ್ಮಿ ಇಲ್ಲದಂಥ ಸುಂದರವಾದ ಮನೆ ನಿರ್ಮಿಸಿದ್ದಾರೆ.ಅವರ ಅನುಭವವನ್ನು ಅವರಮಾತಿನಲ್ಲೇ ಹೇಳುವುದಾದರೆ... `ಕಡಿಮೆ ಬಜೆಟ್‌ನಲ್ಲೇ ಮನೆ ನಿರ್ಮಿಸಬೇಕೆಂಬ ಉದ್ದೇಶ ಇತ್ತು. ಯಾರೂ ಉಪಾಯ ಹೇಳಿಲ್ಲ. ಕೊನೆಗೆ ಲೋಬಜೆಟ್ ಮನೆ ನಿರ್ಮಾಣದಲ್ಲೇ ಹೆಸರು ಮಾಡಿದ್ದ ಖ್ಯಾತ ಆರ್ಕಿಟೆಕ್ಟ್ ಲ್ಯಾರಿ ಬೇಕರ್‌ಗೆ ಪತ್ರ ಬರೆದು ಸಲಹೆ ಕೇಳಿದೆ. ಅವರು ಮೂರು ಪರ್ಯಾಯಗಳನ್ನು ಸೂಚಿಸಿದರು. ಅದರಲ್ಲಿ ಒಂದು ಇಷ್ಟವಾಯಿತು.ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ನನಗೆ ಗ್ರಂಥಾಲಯ ವಿಭಾಗದಲ್ಲಿ ಕೆಲಸ ಮಾಡುವಂತೆ ಸೂಚಿಸಲಾಯಿತು. ಗ್ರಂಥಾಲಯದ ಆರ್ಕಿಟೆಕ್ಚರ್  ವಿಭಾಗದಲ್ಲಿ ರಾಶಿ ರಾಶಿ ಪುಸ್ತಕಗಳಿದ್ದವು. ಬೇಕಾದ್ದನ್ನು ಓದಿಕೊಂಡೆ. ಸಮಯ ಸಿಕ್ಕಾಗ ಕಾಲೇಜಿನ ಎಂಜಿನಿಯರ್‌ಗಳ ಜತೆ ಚರ್ಚಿಸಿದೆ. ಸ್ಕೆಚ್‌ಗಳನ್ನು ತಯಾರಿಸಿದೆ.ಸ್ನೇಹಿತ ಶರತ್ ಚಂದ್ರ ಜತೆ ನನ್ನ ಕನಸನ್ನು ಹಂಚಿಕೊಂಡೆ. ಆಗಷ್ಟೇ ಎಂಜಿನಿಯರಿಂಗ್ ಮುಗಿಸಿ ಬಂದಿದ್ದ ಶರತ್‌ಚಂದ್ರ ಅವರಿಗೂ ಒಂದು ಹೊಸ ಪ್ರಯತ್ನ ಮಾಡಬೇಕು ಎಂಬ ಹುಮ್ಮಸ್ಸಿತ್ತು. ಇಬ್ಬರೂ ಸೇರಿ ಚಿಂತನೆ ಮಾಡಿದೆವು. ಯೊಜನೆ ಸಾಕಾರವಾಗುವ ಮೊದಲು ಮನೆಯ ಪ್ರತಿಯೊಂದು ಸಣ್ಣಪುಟ್ಟ ವಿವರವೂ ಸ್ಕೆಚ್‌ನಲ್ಲಿರಬೇಕು, ನಿರ್ಮಾಣದಲ್ಲಿ ಸ್ಕೆಚ್‌ಗಿಂತ ಒಂದಿಂಚೂ ವ್ಯತ್ಯಾಸವಾಗಬಾರದು ಎಂಬ ನಿಯಮವನ್ನು ನಾವೇ ಹೇರಿಕೊಂಡೆವು. ಹಾಗೆಯೇ ಮನೆ ನಿರ್ಮಿಸಿದೆವು.ಉಳಿತಾಯ ಎಲ್ಲೆಲ್ಲಿ ?


`ಕ್ಯಾವಿಟಿ ವಾಲ್~ ನಿರ್ಮಿಸಿದ್ದರಿಂದ ಮನೆಯ ಗೋಡೆಗಳಲ್ಲಿ ಶೇ 33 ಉಳಿತಾಯವಾಗಿದೆ. ಸಾಮಾನ್ಯವಾಗಿ ಗೋಡೆ ನಿರ್ಮಿಸುವಾಗ ಉದ್ದುದ್ದ ಮೂರು ಇಟ್ಟಿಗೆಗಳನ್ನು ಇಡಲಾಗುತ್ತದೆ. ಆದರೆ ಈ ಮನೆಯಲ್ಲಿ ಮಧ್ಯದ ಇಟ್ಟಿಗೆಯನ್ನು ತೆಗೆದು ಅಲ್ಲಿ ಗಾಳಿಗೆ ಅವಕಾಶ ಕಲ್ಪಿಸಿದೆ.ಅದರ ಮೇಲೆ ಅಡ್ಡಡ್ಡ ಇಟ್ಟಿಗೆಗಳನ್ನಿಟ್ಟರೆ ಭದ್ರತೆಗೇನೂ ಕೊರತೆ ಇಲ್ಲ. ಸಾಮಾನ್ಯ ನಿರ್ಮಾಣಕ್ಕಿಂತ ಕ್ಯಾವಿಟಿ ವಾಲ್‌ಗಳು ಹೆಚ್ಚು ಭದ್ರವಾಗಿರುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇಲ್ಲಿ ಇಟ್ಟಿಗೆಗಳಲ್ಲೇ ಶೇ. 33 ಉಳಿತಾಯವಾಗಿದೆ. ಇದಕ್ಕಿಂತ ಮುಖ್ಯವಾಗಿ ಬಿರು ಬೇಸಿಗೆಯಲ್ಲೂ ಮನೆಯೊಳಗೆ ತಂಪು ವಾತಾವರಣ ಇರುತ್ತದೆ.ಮನೆಯೊಳಗೆ ಹೆಚ್ಚಾಗಿ ಆರ್ಚ್‌ಗಳನ್ನು ಬಳಸಿದ್ದರಿಂದ ಲಿಂಟಲ್‌ಗಳ ಉಳಿತಾಯವಾಗಿದೆ. ಸೌಂದರ್ಯವೂ ಹೆಚ್ಚಿದೆ. ಸಿಮೆಂಟ್ ಮತ್ತು ಇಟ್ಟಿಗೆಗಳಿಂದಲೇ ಆರ್ಚ್‌ಗಳು ನಿರ್ಮಾಣವಾಗಿವೆ. ಮನೆಯ ಸೀಲಿಂಗ್ ಎಷ್ಟು ಅಗತ್ಯವೋ ಅಷ್ಟೇ ಎತ್ತರ ಮಾಡಿದ್ದೇವೆ.`ಫಿಲ್ಲರ್ ಸ್ಲ್ಯಾಬಿಂಗ್~ ತಂತ್ರಜ್ಞಾನ ಅಳವಡಿಸಿ ಸೀಲಿಂಗ್ ಕಬ್ಬಿಣದಲ್ಲಿ ಶೇ 50ರಷ್ಟು ಉಳಿತಾಯ ಮಾಡಿದೆ. 3್ಡ4 ಅಳತೆಯ ಕಬ್ಬಿಣದ ಜಾಲ ನಿರ್ಮಿಸಿ ಸಿಮೆಂಟ್ ಮರಳು ಹಾಗೂ ಜಲ್ಲಿಗಳಿಂದ ಸೀಲಿಂಗ್ ನಿರ್ಮಿಸುವುದು ಸಾಮಾನ್ಯ ಪದ್ಧತಿ. ಆದರೆ ನಾವು 18್ಡ12 ಅಳತೆಯ ಜಾಲ ನಿರ್ಮಿಸಿದ್ದೇವೆ.ಮಧ್ಯದಲ್ಲಿ ಜಲ್ಲಿ, ಸಿಮೆಂಟ್ ಬದಲು ಮಂಗಳೂರು ಹಂಚುಗಳನ್ನು ಬಳಸಿದ್ದೇವೆ. ಒಂದು ಹಂಚು ಸಾಮಾನ್ಯಸ್ಥಿತಿಯಲ್ಲಿ ಮತ್ತು ಅದರ ಮೇಲೆ ಉಲ್ಟಾ ಆಗಿ ಇನ್ನೊಂದು ಹಂಚು ಇಡಲಾಗಿದೆ. ಇದರಿಂದ ಹಂಚಿನ ಮಧ್ಯದಲ್ಲೂ `ಕ್ಯಾವಿಟಿ~ ನಿರ್ಮಾಣವಾಗಿ ಮೇಲಿನಿಂದಲೂ ಮನೆಯೊಳಗೆ ತಾಪ ಬರದಂತಾದೆ. ಒಳಗಿನಿಂದ ಸೀಲಿಂಗ್  ನೋಡಿದರೆ ಪಾರಂಪರಿಕ ಕಟ್ಟಡದ ಲುಕ್ ಬಂದಿದೆ.ಕಬ್ಬಿಣ ಜಾಸ್ತಿ ಹಾಕಿದರೆ ಕಟ್ಟಡ ಗಟ್ಟಿಯಾಗುತ್ತದೆ ಎಂಬುದು ತಪ್ಪು. ಸೀಲಿಂಗ್‌ಗೆ ಹೆಚ್ಚು ಹಬ್ಬಿಣ, ಸಿಮೆಂಟ್ ಜಲ್ಲಿ ಬಳಸಿದರೆ ಗೋಡೆಗಳ ಮೇಲೆ ಹೆಚ್ಚು ಭಾರ ಬೀಳುತ್ತದೆ. ಕ್ರಮೇಣ ಗೋಡೆಗಳು ಬಿರುಕು ಬಿಟ್ಟು ಒಳಗೆ ನೀರು ಸೋರಲಾರಂಭವಾಗುತ್ತದೆ. ನಮ್ಮ ಮನೆಗೆ 21   ವರ್ಷಗಳಾಗಿವೆ ಒಂದೇ ಒಂದು ತೊಟ್ಟು ನೀರು ಈಗಲೂ ಒಳಗೆ ಬರುತ್ತಿಲ್ಲ. ಗೋಡೆಗಳಲ್ಲಿ ಒಂದು ಕಡೆ ಸಣ್ಣದಾದ ಬಿರುಕೂ ಕಾಣಿಸುವುದಿಲ್ಲ. ಹಾಗೆಂದು ಭದ್ರತೆಯಲ್ಲಿ ರಾಜಿ ಮಾಡಿಲ್ಲ ಎಂದು ಪ್ರಕಾಶ್ ಹೆಮ್ಮೆಯಿಂದ ಹೇಳುತ್ತಾರೆ.ಪ್ರಕಾಶ್ ಮನೆಯಲ್ಲಿ ಡ್ರಾಯಿಂಗ್ ರೂಮಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರೆ ಇತರ ಭಾಗದಲ್ಲಿ ಕುಳಿತವರಿಗೆ ಏನೂ ತೊಂದರೆಯಾಗುವುದಿಲ್ಲ. ಒಂದು ಸ್ಟಡಿ ರೂಮ್, ಧ್ಯಾನದ ಕೊಠಡಿ, ಎರಡು ಬೆಡ್‌ರೂಮ್ ಹೀಗೆ ಎಲ್ಲ ವ್ಯವಸ್ಥೆಗಳೂ ಇವೆ. ಒಳಾಂಗಣ ವಿನ್ಯಾಸದಲ್ಲಿ ಪರಿಣತರಾಗಿರುವ ಪತ್ನಿ ಶಾರದಾ ಮನೆಯನ್ನು ಅಂದವಾಗಿಟ್ಟಿದ್ದಾರೆ.`ಇಂಥ ಮನೆ ನಿರ್ಮಿಸಿರುವ ಬಗ್ಗೆ ನನಗೆ ಈಗಲೂ ಹೆಮ್ಮೆ ಇದೆ. ಅಂದು 2.5ಲಕ್ಷದಲ್ಲಿ ನಿರ್ಮಿಸಿದ್ದೆ. ಈಗಲೂ 8 ರಿಂದ 10ಲಕ್ಷ ರೂಪಾಯಿಯಲ್ಲಿ ನಿರ್ಮಿಸಬಹುದು. ಸಾವಿರಕ್ಕೂ ಹೆಚ್ಚು ಜನರು ಬಂದು ನಮ್ಮ ಮನೆ ನೋಡಿಹೋಗಿದ್ದಾರೆ. ಅವರಲ್ಲಿ ಮೂರು-ನಾಲ್ಕು ಮಂದಿ ಮಾತ್ರ ಇಂಥ ಮನೆ ನಿರ್ಮಿಸುವ ಸಾಹಸ ಮಾಡಿದ್ದಾರೆ~ ಎಂದು ಪ್ರಕಾಶ್ ಹೇಳುತ್ತಾರೆ.ಪ್ರಕಾಶ್ ಅವರನ್ನು ಮೊಬೈಲ್ 9964827580 ಮೂಲಕ ಸಂಪರ್ಕಿಸಬಹುದು.

    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.