ಶುಕ್ರವಾರ, ಏಪ್ರಿಲ್ 23, 2021
22 °C

ಕಡ್ಡಾಯ ಶಿಕ್ಷಣ ಹಕ್ಕು ಜಾಗೃತಿಗೆ ಕಾರ್ಯಪಡೆ

ಪ್ರಜಾವಾಣಿ ವಾರ್ತೆ ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಅನುಷ್ಠಾನದಲ್ಲಿ ಉಂಟಾಗುತ್ತಿರುವ ಗೊಂದಲ, ಸಾರ್ವಜನಿಕರಿಗೆ ಇರುವ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ರಾಜ್ಯ ಮಕ್ಕಳ ಹಕ್ಕು ಟ್ರಸ್ಟ್ `ಆರ್‌ಟಿಇ ಕಾರ್ಯಪಡೆ~ಯನ್ನು ಆರಂಭಿಸಿದೆ.`ಕಾರ್ಯಪಡೆಗೆ 10 ದಿನಗಳಲ್ಲೇ 84 ಮಂದಿ ಹೆಸರು ನೋಂದಾಯಿಸಿ ಸದಸ್ಯರಾಗಿ ಕಾರ್ಯನಿರ್ವಹಿಸಲು ಆಸಕ್ತಿ ತೋರಿದ್ದಾರೆ. ಇವರಲ್ಲಿ 33 ಮಂದಿ ಗೃಹಿಣಿಯರು, 14 ಮಂದಿ ಮುಖ್ಯ ಶಿಕ್ಷಕರು ಸೇರಿದ್ದಾರೆ.ಉಳಿದವರು ಉದ್ಯಮ ವಲಯಕ್ಕೆ ಸೇರಿದವರು. ಶಿಕ್ಷಕರು, ಪೋಷಕರು ಹಾಗೂ ಆಸಕ್ತರಿಗೆ ವಿಭಾಗವಾರು ಉಚಿತ ತರಬೇತಿ ನೀಡಲಾಗುವುದು. ತರಬೇತಿ ನೀಡಲು ಬೇಕಾದ ಸಾಮಗ್ರಿಗಳನ್ನು ಟ್ರಸ್ಟ್‌ನಿಂದಲೇ ನೀಡಲಾಗುವುದು~ ಎಂದು ಸಂಘಟನೆಯ ಸಹಾಯಕ ನಿರ್ದೇಶಕ ನಾಗಸಿಂಹ ಜಿ. ರಾವ್ `ಪ್ರಜಾವಾಣಿ~ಗೆ ಬುಧವಾರ ತಿಳಿಸಿದರು.`ಕಾಯ್ದೆ ಕುರಿತು ಶಿಕ್ಷಕರು, ಪೋಷಕರಿಗೆ ಸಮಗ್ರ ಮಾಹಿತಿ ಇಲ್ಲ. ಹಿಂದುಳಿದ ವಿದ್ಯಾರ್ಥಿಗಳಿಗೆ ಶೇ 25 ಸೀಟು ನೀಡುವುದೇ ಶಿಕ್ಷಣ ಹಕ್ಕು ಕಾಯ್ದೆ ಎಂದು ಬಹುತೇಕ ಮಂದಿ ಭಾವಿಸಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಹಿಂಸೆ ನೀಡಬಾರದು, ವಿದ್ಯಾರ್ಥಿಗಳನ್ನು ಅನುತ್ತೀರ್ಣರನ್ನಾಗಿ ಮಾಡುವಂತಿಲ್ಲ ಎಂಬುದೂ ಸೇರಿದಂತೆ ಸಾಕಷ್ಟು ಉತ್ತಮ ಅಂಶಗಳಿವೆ. ಇವುಗಳ ಬಗ್ಗೆ ಬೆಳಕು ಚೆಲ್ಲುವುದು ಕಾರ್ಯಪಡೆಯ ಪ್ರಮುಖ ಗುರಿ~ ಎಂದು ಅವರು ಮಾಹಿತಿ ನೀಡಿದರು.`ರಾಜಧಾನಿಯಲ್ಲೇ ಕಾಯ್ದೆ ಅನುಷ್ಠಾನದಲ್ಲಿ ಅಧಿಕ ಪ್ರಮಾಣದಲ್ಲಿ ಗೊಂದಲ ಹಾಗೂ ತಾರತಮ್ಯ ಪ್ರಕರಣಗಳು ಬೆಳಕಿಗೆ ಬಂದಿವೆ. ಆರಂಭಿಕ ಹಂತದಲ್ಲಿ ರಾಜಧಾನಿಯಲ್ಲಿ ಜಾಗೃತಿ ಮೂಡಿಸಲು ಯೋಜಿಸಲಾಗಿದೆ. ವಲಯವಾರು 15 ಜನರ ತಂಡ ರಚಿಸಿ ಶಾಲೆ, ಅಪಾರ್ಟ್‌ಮೆಂಟ್‌ಗಳಿಗೆ ತೆರಳಿ ತರಬೇತಿ ನೀಡಲಾಗುವುದು. ಶನಿವಾರ ಹಾಗೂ ಭಾನುವಾರ ತರಬೇತಿ ಹಮ್ಮಿಕೊಳ್ಳಲಾಗುವುದು. ಕರ್ನಾಟಕ ಮಕ್ಕಳ ಹಕ್ಕು ಕಲ್ಯಾಣ ಆಯೋಗ, ಮಕ್ಕಳ ಕಲ್ಯಾಣ ಸಮಿತಿ, ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿಗಳಿಗೆ ಪತ್ರ ಬರೆದು ಕಾರ್ಯಪಡೆಯ ಕಾರ್ಯವೈಖರಿ ಕುರಿತು ಮಾಹಿತಿ ಒದಗಿಸಲಾಗಿದೆ~ ಎಂದು ಅವರು ತಿಳಿಸಿದರು.`ಖಾಸಗಿ ಶಾಲೆಗಳಲ್ಲಿ ಶಾಲಾ ಪ್ರವಾಸಕ್ಕಾಗಿ ಪ್ರತಿ ವಿದ್ಯಾರ್ಥಿ ನಾಲ್ಕೈದು ಸಾವಿರ ರೂಪಾಯಿ ನೀಡಬೇಕಾಗುತ್ತದೆ. ಆರ್‌ಟಿಇ ಅಡಿಯಲ್ಲಿ ಸೇರ್ಪಡೆಯಾದ ಬಡ ವಿದ್ಯಾರ್ಥಿಗಳು ಈ ಮೊತ್ತವನ್ನು ಭರಿಸುವುದು ಕಷ್ಟ. ಪ್ರವಾಸಕ್ಕೆ ಕರೆದುಕೊಂಡು ಹೋಗದಿದ್ದರೆ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳ ಜೊತೆಗೆ ಚರ್ಚಿಸಿ ಬಡ ಮಕ್ಕಳಿಂದ ಕಡಿಮೆ ಮೊತ್ತ ಪಡೆದು ಅಥವಾ ಉಚಿತವಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಮನವೊಲಿಸಲಾಗುವುದು~ ಎಂದು ಅವರು ತಿಳಿಸಿದರು.  `ಪ್ರತಿ ಶಾಲೆಯಲ್ಲೂ ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಇರಬೇಕು ಎಂಬ ನಿಯಮ ಇದೆ. ಆದರೆ, ಖಾಸಗಿ ಶಾಲೆಗಳು ಇದನ್ನು ಪಾಲಿಸುತ್ತಿಲ್ಲ. ಎಸ್‌ಡಿಎಂಸಿ ಇಲ್ಲದ ಶಾಲೆಗಳಲ್ಲಿ ಕಾಯ್ದೆ ಅನುಷ್ಠಾನದಲ್ಲಿ ತುಂಬಾ ನಿರೀಕ್ಷೆ ಹೊಂದುವಂತಿಲ್ಲ. ಅಲ್ಲದೆ, ಎಸ್‌ಡಿಎಂಸಿ ಸದಸ್ಯರಿಗೆ ಸರ್ಕಾರ ತರಬೇತಿ ನೀಡುತ್ತಿಲ್ಲ. ಈ ಎಲ್ಲ ವಿಚಾರಗಳ ಕುರಿತು ಗಮನ ಸೆಳೆದು ವ್ಯವಸ್ಥೆ ಸುಧಾರಣೆಗೆ ಒತ್ತಡ ಹೇರಲಾಗುವುದು~ ಎಂದರು.`ಶಿಕ್ಷಣ ಹಕ್ಕು ಕಾಯ್ದೆ ಕ್ರಾಂತಿಕಾರಕವಾದುದು. ಕಾಯ್ದೆಯ ಸಮರ್ಪಕ ಅನುಷ್ಠಾನದ ಮೂಲಕ ಬಾಲಕಾರ್ಮಿಕ ಪದ್ಧತಿ, ಲೈಂಗಿಕ ಕಿರುಕುಳದಂತಹ ಪ್ರಕರಣಗಳನ್ನು ಸಂಪೂರ್ಣ ನಿಯಂತ್ರಣ ಮಾಡಬಹುದು ಹಾಗೂ ಶಾಲೆಯಲ್ಲಿ ಸ್ನೇಹಯುತ ಶೈಕ್ಷಣಿಕ ವಾತಾವರಣ ನಿರ್ಮಿಸಬಹುದು. ರಾಜ್ಯ ಸರ್ಕಾರದ ಜೊತೆಗೆ ಸ್ವಯಂಸೇವಾ ಸಂಘಟನೆಗಳು ಕೈಜೋಡಿಸಿದರೆ ಕಾಯ್ದೆ ಅನುಷ್ಠಾನ ಸುಲಭವಾಗುತ್ತದೆ~ ಎಂದು ಅವರು ತಿಳಿಸಿದರು.ಕಾರ್ಯಪಡೆ ಸದಸ್ಯರಾಗಲು ಇಚ್ಛಿಸುವವರು ಮೊಬೈಲ್ ಸಂಖ್ಯೆ: 9880477198 ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.