ಬದುಕಿನ ಅವಿಭಾಜ್ಯ ಅಂಗ ಮಾತು. ಕಣ್ಣಲ್ಲಿ ನೋಡಲಾರದ ಎಷ್ಟೋ ವಿಷಯವನ್ನು ನಾನು ಮಾತಿನ ಮೂಲಕ ಗ್ರಹಿಸಿದ್ದೇನೆ, ಆಸ್ವಾದಿಸಿದ್ದೇನೆ. `ನುಡಿದರೆ ಮುತ್ತಿನ ಹಾರದಂತಿರಬೇಕು~ ಎಂಬ ನುಡಿಮುತ್ತನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗುತ್ತಿದ್ದೇನೆ.

ಕಣ್ಣು ಕಾಣಿಸಲ್ಲ ನನಗೆ. ಆದರೆ ಕನಸು ಕಾಣುವುದು ನಿಂತಿಲ್ಲ. ಬಣ್ಣಬಣ್ಣದ ಕನಸುಗಳು ಮನಸ್ಸಿಗೆ ಮುತ್ತಿಗೆ ಹಾಕಿ ಕಚಗುಳಿ ಇಡುತ್ತದೆ. ಮತ್ತೆ ಏನಾದರೂ ಸಾಧಿಸಬೇಕು ಎಂಬ ಆಸೆ ಮಳೆಹನಿಗೆ ಕಾತುರದಿಂದ ಕಾಯುತ್ತಿರುವ ಗರಿಕೆಯಂತೆ ಚಿಗುರೊಡೆಯುತ್ತದೆ. ನನ್ನ ಬದುಕಿನ ಮಳೆಹನಿ ನನ್ನ ಅಪ್ಪ-ಅಮ್ಮ. ಎಲ್ಲಿಯೂ ನನ್ನ ನ್ಯೂನತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸದೆ ಕೈಹಿಡಿದು ನಡೆಸಿದರು. ಒಂದು ಸುಂದರ ಬದುಕು ಕಟ್ಟಿಕೊಳ್ಳಲು ಅಡಿಪಾಯ ಹಾಕಿಕೊಟ್ಟರು.

ಬಾಲ್ಯದ ಕ್ಷಣಗಳನ್ನು ಉಳಿದ ಮಕ್ಕಳಂತೆ ಸವಿದೆ... ನಲಿದೆ. ವಿಷ್ಣುವರ್ಧನ್ ಸಿನಿಮಾಕ್ಕೆ ಮಾತ್ರ ತಪ್ಪದೇ ಹೋಗುತ್ತಿದ್ದೆ. ಕಣ್ಣು ಚಿತ್ರವನ್ನು ನೋಡಲು ವಿಫಲವಾಗಿರಬಹುದು. ಆದರೆ ಕಿವಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿತ್ತು. ಅವರ ಸಿನಿಮಾದಿಂದ ಪ್ರೇರಿತನಾಗಿ ಸ್ಪಷ್ಟ, ಸ್ಫುಟವಾಗಿ ಕನ್ನಡ ಭಾಷೆ ಕಲಿತೆ. ನಂತರ ಮಾತೇ ನನ್ನ ಬದುಕಿನ ಬಂಡವಾಳವಾಯಿತು. ಮಾತಿನಿಂದಲೇ ಯಶಸ್ಸು ಕಂಡುಕೊಂಡೆ. ಚದುರಿಹೋದ ಕನಸುಗಳ ಚುಕ್ಕಿಯನ್ನು ಸೇರಿಸಿ ಸುಂದರವಾದ ರಂಗೋಲಿ ಇಟ್ಟೆ ಎಂದು ತಣ್ಣಗೆ ನಗುತ್ತಾರೆ.

ಸುಮ್ಮನೆ ಮಾತನಾಡುವುದಕ್ಕಿಂತ ಏನಾದರೂ ವಿಶೇಷವಾಗಿ ಮಾಡಬೇಕು ಎಂಬ ಹಟ ನನ್ನಲ್ಲಿತ್ತು. ಹಾಗಾಗಿ ಇನ್ನೊಬ್ಬರು ಮಾತನಾಡುವಾಗ ಸರಿಯಾಗಿ ಕೇಳಿಸಿಕೊಳ್ಳುವುದನ್ನು ಕಲಿತೆ. ನಂತರ ಅವರ ದನಿಯನ್ನೇ ಅನುಕರಣೆ ಮಾಡಲು ಶುರುಮಾಡಿದೆ.

ಸುಮಧುರವಾಗಿ ಸಂಗೀತದ ಸುಧೆ ಹರಿಸುವತ್ತ ಚಿತ್ತ ಬದಲಿಸಿದೆ. ನಿರೂಪಣೆಯತ್ತ ಹೆಜ್ಜೆ ಹಾಕಿದೆ. ಸಿನಿಮಾಕ್ಕೂ ಡಬ್ ಮಾಡಿದೆ. ಈಗ ನನ್ನದೇ ಎರಡು ಆರ್ಕೇಸ್ಟ್ರಾ ನಡೆಸುತ್ತಾ ಇದ್ದೇನೆ.

ನನ್ನ ಸಮಸ್ಯೆಗಳಿಗೆ ನಾನೇ ಪರಿಹಾರ ಕಂಡುಕೊಳ್ಳಲು, ನನ್ನಷ್ಟಕ್ಕೆ ನಾನೇ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡೆ. ಕೆಲವರು ಇದು ರೋಗ ಎಂದು ನಗುತ್ತಾರೆ. ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿನಂತೆ ನಮ್ಮಲ್ಲಿಯೇ ಇರುವ ಶಕ್ತಿ ನಮಗೆ ಅರ್ಥವಾಗಲ್ಲ.

`ಕಾವೇರಿ ಸ್ವರಾಂಜಲಿ~ ಎಂಬ ಕನ್ನಡ ವಾದ್ಯಗೋಷ್ಠಿ ಮಾಡಿದೆ. ಅದರಲ್ಲಿ ಎಲ್ಲರೂ ಅಂಧ ಕಲಾವಿದರೇ. ಆದರೆ ನಮ್ಮಲ್ಲಿರುವ ಪ್ರತಿಭೆಗೆ ಕುರುಡುತನ ಅಡ್ಡಿಯಾಗಿಲ್ಲ. ಮೂರು ಬಾರಿ ಅಮೆರಿಕಕ್ಕೆ, ಒಂದು ಬಾರಿ ಇಂಗ್ಲೆಂಡ್ಗೆ ಪಯಣ ಬೆಳೆಸಿದ್ದೆ. ಮುಸ್ಸಂಜೆ ಹೊತ್ತು ಸುಮ್ಮನೆ ಕುಳಿತು ನಾನು ನಡೆದು ಬಂದ ದಾರಿಯತ್ತ ಒಂದು ನೋಟ ಬೀರಿದಾಗ ಮನಸ್ಸು ಮುದಗೊಳ್ಳುತ್ತದೆ.

ನಿರೂಪಣೆ ಮಾಡುವಾಗಲೂ ಅಷ್ಟೇ, ನನಗೆ ವ್ಯಕ್ತಿಯ ಮುಖಸ್ತುತಿ ಮಾಡಲು ಬರುವುದಿಲ್ಲ. ಅವರು ಯಾರು? ಏನು ಕೆಲಸ ಮಾಡಿದರು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡ ನಂತರ ಯಾವ ಸಂದರ್ಭ, ಸನ್ನಿವೇಶ ಎಂಬಿತ್ಯಾದಿ ವಿಷಯಗಳನ್ನು ಅರ್ಥ ಮಾಡಿಕೊಂಡು ಮಾತಿನ ಬುಗ್ಗೆ ಹರಿಬಿಡುತ್ತೇನೆ.

ನನಗೆ ತುಂಬಾ ಭಾಷೆ ಕಲಿಯಬೇಕು ಎಂಬ ಆಸೆ ಇದೆ. ಆದರೆ ಎಡವಿಬಿದ್ದಾಗ `ಅಮ್ಮಾ...~ ಎಂದು ಹೇಳುತ್ತೇನೆಯೇ ಹೊರತು ಬೇರೆ ಯಾವುದೇ ಪದ ಹೊರಡುವುದಿಲ್ಲ. ಕನ್ನಡದ ಸೊಗಡೇ ಹಾಗೇ. ಮನದಲ್ಲಿ ಹೆಪ್ಪುಗಟ್ಟಿದ ನೋವನ್ನು ಮಂಜಿನಂತೆ ಕರಗಿಸುವ ಶಕ್ತಿಯಿದೆ. ಮಾತನಾಡಿದಷ್ಟೂ ಮುಗಿಯದ ಶಬ್ದಗಳ ಭಂಡಾರವಿದು. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್ ಬೇಡವೆಂದಲ್ಲ. ಬದುಕಿನ ಬಂಡಿ ಎಳೆಯುವ ಹೆಗಲಿಗೆ ತುತ್ತು ಅನ್ನ ಸಂಪಾದಿಸಲು ಎಲ್ಲಾ ಭಾಷೆಯೂ ಅಗತ್ಯ.

`ಆ ಚಲ್ ಕೆ ತುಜೆ ಮೇ ಲೇಕೆ ಚಲೂಂ...~ ನನ್ನಲ್ಲಿ ವಿಶ್ವಾಸವನ್ನು ತುಂಬಿದ ಹಾಡಿನ ಸಾಲು. ನೋವು ನಲಿವು ಬಾಳಿನಲ್ಲಿ ಬರುವುದು ಸಹಜ. ಸವಿಯಾದ ಮಾತಿಗೆ ಕೇಳುಗರ ಕಿವಿಯನ್ನು ತಂಪಾಗಿಸುವ ಶಕ್ತಿ ಇದೆ.

ಮಹಮ್ಮದ್ ರಫಿ, ಕಿಶೋರ್ ಕುಮಾರ್ ತರಹ ನಾನು ಸತ್ತ ಮೇಲೂ ಜನ ನನ್ನ ದನಿ ಕೇಳಬೇಕು. ಅವರ ಮನಸ್ಸಿನಲ್ಲಿರುವ ನೋವನ್ನು ನನ್ನ ಸಂಗೀತದಿಂದ ಮರೆಯಬೇಕು. ಅದೇ ನನ್ನ ಬಯಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.